ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರನ್ನು ನಂಬಿ, ಆದರೆ, ಮೌಢ್ಯವನ್ನು ವಿರೋಧಿಸಿ

Last Updated 29 ನವೆಂಬರ್ 2017, 8:49 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಾಜಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆಯ ಮೌಢ್ಯ ವಿರೋಧಿ ಜನ ಜಾಗೃತಿ ಜಾಥಾ ಮಂಗಳವಾರ ನಗರಕ್ಕೆ ತಲುಪಿತು. ಕೋಲಾರ ಭಾಗದಿಂದ ನಗರ ಪ್ರವೇಶಿಸಿದ ಜಾಥಾವನ್ನು ಒನಕೆ ಓಬವ್ವ ವೃತ್ತದಲ್ಲಿ ವಾಲ್ಮೀಕಿ ಸಮುದಾಯದ ಬ್ರಹ್ಮಾನಂದ ಸ್ವಾಮೀಜಿ ನೇತೃತ್ವದ ತಂಡ ಸ್ವಾಗತಿಸಿತು.

ಜಾಥಾ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಎಂ.ಎಸ್.ಮಹಾಲಿಂಗಯ್ಯ, ‘ಮಾನವ ಬಂಧುತ್ವ ವೇದಿಕೆಯಿಂದ ನಾಲ್ಕು ವರ್ಷಗಳಿಂದ ವೈಚಾರಿಕತೆ ಕುರಿತು ಜನ ಜಾಗೃತಿ ಮೂಡಿಸಲಾಗುತ್ತಿದೆ. ಅದೇ ರೀತಿ ಈ ವರ್ಷವೂ ರಾಜ್ಯದ ಆರು ಭಾಗಗಳಿಂದ ಜಾಗೃತಿ ಜಾಥಾ ಆಯೋಜಿಸಲಾಗಿದೆ.

ವಿವಿಧ ಭಾಗಗಳಿಂದ ಬರುವಂತಹ ಜಾಥಾ ಡಿ.4ರಂದು ಬೆಳಗಾವಿಯಲ್ಲಿ ಸಮಾವೇಶಗೊಳ್ಳಲಿವೆ. 5ರಂದು ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುತ್ತದೆ. ಡಿ.6ರಂದು ಡಾ.ಬಿ.ಆರ್.ಅಂಬೇಡ್ಕರ್ ಮಹಾಪರಿನಿರ್ವಾಣ ದಿನದ ಅಂಗವಾಗಿ ಬೆಳಗಾವಿಯ ಸದಾಶಿವನಗರದ ಶಾಂತಿಧಾಮದಲ್ಲಿ (ಸ್ಮಶಾನ) ಮೌಢ್ಯ ವಿರೋಧಿ ಸಂಕಲ್ಪ ದಿನ ಆಯೋಜಿಸಲಾಗಿದೆ’ ಎಂದು ವಿವರಿಸಿದರು.

ವಾಲ್ಮೀಕಿ ಸಮುದಾಯದ ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿ, ‘ಜನರನ್ನು ಮೌಢ್ಯದತ್ತ ಕರೆದೊಯ್ಯುವಂಥ ವಿದ್ಯಮಾನಗಳು ಸಮಾಜದಲ್ಲಿ ನಡೆಯುತ್ತಿವೆ. ಮಾನವ ಬಂಧುತ್ವ ವೇದಿಕೆ ಜನರನ್ನು ಮೌಢ್ಯದಿಂದ ವೈಚಾರಿಕತೆಯತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿದೆ. ಜನರು ದೇವರನ್ನು ನಂಬಲಿ. ಆದರೆ, ಮೌಢ್ಯವನ್ನು ವಿರೋಧಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್‍ನ ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾಧ್ಯಕ್ಷ ಅಂಜಿನಪ್ಪ ಸ್ವಾಗತಿಸಿದರು. ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಫಾತ್ಯರಾಜನ್ ಜಾಥಾಕ್ಕೆ ಶುಭ ಹಾರೈಸಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ್ ಬಾಬು, ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯದ ಮುಖಂಡರು ಇದ್ದರು. ಕೋಲಾರದ ಕಲಾವಿದರು ಜಾಗೃತಿ ಗೀತೆಗಳನ್ನು ಹಾಡಿದರು.

ಡಿ. 6 ರಂದು ‘ಮೌಢ್ಯ ವಿರೋಧಿ ಸಂಕಲ್ಪ’
ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಡಿ.6ರಂದು ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಮೌಡ್ಯ ವಿರೋಧಿ ಸಂಕಲ್ಪ ದಿನ ಆಚರಿಸಲಿದೆ. ಬೆಳಗಾವಿಯ ಸದಾಶಿವ ನಗರದಲ್ಲಿರುವ ಸ್ಮಶಾನದಲ್ಲಿ ಬೆಳಿಗ್ಗೆ 7ರಿಂದಲೇ ಕಾರ್ಯಕ್ರಮ ಆರಂಭವಾಗಲಿದೆ. ವೈಚಾರಿಕತೆ ಕುರಿತು ಸತತ 24 ಗಂಟೆಗಳ ಕಾಲ ವಿವಿಧಗೋಷ್ಠಿಗಳು ನಡೆಯಲಿವೆ. ನಾಡಿನ ಪ್ರಗತಿಪರ ಚಿಂತಕರು, ಸಾಹಿತಿಗಳು, ವಿಚಾರವಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

* * 

ರಾಮನಗರ, ಚಾಮರಾಜನಗರ, ಕೊಡಗು, ಬೀದರ್‌ನಿಂದ ಜಾಥಾ ಹೊರಟಿವೆ. ಬೆಳಗಾವಿ ಜಿಲ್ಲೆಯಲ್ಲಿ ಎರಡು ತಂಡಗಳು ಜಾಥಾ ಮೂಲಕ ಜನ ಜಾಗೃತಿ ಮೂಡಿಸುತ್ತಿವೆ
ಎಂ.ಎಸ್. ಮಹಾಲಿಂಗಪ್ಪ
ಜಿಲ್ಲಾ ಸಂಚಾಲಕ, ಮಾನವ ಬಂಧುತ್ವ ವೇದಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT