ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ಅಂತರ್ಜಾಲಕ್ಕೆ ಟ್ರಾಯ್ ಮುನ್ನುಡಿ

Last Updated 29 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಅಂತರ್ಜಾಲದಲ್ಲಿ ಹರಿಯುವ ದತ್ತಾಂಶವನ್ನು ಸಮಾನ ದೃಷ್ಟಿಯಿಂದ ನೋಡುವ ನೀತಿಯೊಂದನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಶಿಫಾರಸು ಮಾಡಿದೆ. ದತ್ತಾಂಶದ ಸ್ವರೂಪ ಮತ್ತು ಅದನ್ನು ಸೃಷ್ಟಿಸುವ ಮತ್ತು ವಿತರಿಸುವ ವೇದಿಕೆಗಳಿಗೆ ಅನುಗುಣವಾಗಿ ಇಂಟರ್ನೆಟ್ ಸೇವಾದಾತರು ತಾರತಮ್ಯ ಮಾಡುವ ಅವಕಾಶ ಇರಬಾರದು ಎಂಬುದನ್ನು ಟ್ರಾಯ್ ತನ್ನ ಶಿಫಾರಸುಗಳಲ್ಲಿ ಸ್ಪಷ್ಟಪಡಿಸಿದೆ. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳ ಸಾಧ್ಯತೆಗಳು ಹೆಚ್ಚಿರುವ ಈ ಸಂದರ್ಭದಲ್ಲಿ ಹೊರಬಿದ್ದಿರುವ ಈ ಶಿಫಾರಸುಗಳನ್ನು ಸ್ವಾಗತಿಸಬೇಕಾಗಿದೆ. ಹಾಗೆಯೇ ಟ್ರಾಯ್ ನೀಡಿರುವುದು ಕೇವಲ ಶಿಫಾರಸುಗಳನ್ನು ಮಾತ್ರ ಎಂಬುದನ್ನು ನೆನಪಿನಲ್ಲಿಟ್ಟುಕೊಂಡೇ ಸಾಧಕ ಬಾಧಕಗಳನ್ನು ಚರ್ಚಿಸಬೇಕು.

ಟ್ರಾಯ್ ಕೇವಲ ಶಿಫಾರಸುಗಳನ್ನು ನೀಡುವ ಸಾಂವಿಧಾನಿಕ ಸಂಸ್ಥೆಯಲ್ಲ. ಇದಕ್ಕೆ ನಿಯಂತ್ರಣಾಧಿಕಾರವೂ ಇದೆ. ಅದನ್ನು ಬಳಸಿಕೊಂಡು ಮುಕ್ತ ಅಂತರ್ಜಾಲವನ್ನು ಖಾತರಿ ಪಡಿಸುವ ನಿಯಮಾವಳಿಗಳನ್ನೇ ಅದು ರೂಪಿಸಬಹುದಿತ್ತು. ಈಗಾಗಲೇ ಇಂಟರ್ನೆಟ್ ಮತ್ತು ದೂರವಾಣಿ ಸೇವೆಗಳನ್ನು ನೀಡುವ ಸಂಸ್ಥೆಗಳು ಸರ್ಕಾರದ ಜೊತೆಗೆ ಮಾಡಿಕೊಂಡಿರುವ ಒಪ್ಪಂದಗಳ ಸ್ವರೂಪ. ದೂರಸಂಪರ್ಕ ಉದ್ಯಮದ ರಾಚನಿಕ ಸ್ವರೂಪದಲ್ಲಿರುವ ಸಂಕೀರ್ಣತೆ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಟ್ರಾಯ್ ಮಧ್ಯಮ ಮಾರ್ಗವನ್ನು ತುಳಿದಿರುವಂತಿದೆ. ಎಲ್ಲದಕ್ಕೂ ಮಿಗಿಲಾಗಿ ದೂರ ಸಂಪರ್ಕ ಇಲಾಖೆ ಮುಕ್ತ ಅಂತರ್ಜಾಲ ವ್ಯವಸ್ಥೆಯನ್ನು ಖಾತರಿ ಪಡಿಸುವುದಕ್ಕೆ ಸಂಬಂಧಿಸಿದ ಶಿಫಾರಸುಗಳನ್ನು ನೀಡುವಂತೆ ಟ್ರಾಯ್ ಅನ್ನು ಕೋರಿತ್ತು ಎಂಬ ಅಂಶವೂ ಇಲ್ಲಿ ಮುಖ್ಯ ಪಾತ್ರವಹಿಸಿರುವಂತಿದೆ. ಈ ಶಿಫಾರಸುಗಳನ್ನು ಜಾರಿಗೆ ತರುವ ಮಾರ್ಗ ಯಾವುದು ಎಂಬ ಪ್ರಶ್ನೆಯೂ ಇಲ್ಲಿದೆ. ದೂರ ಸಂಪರ್ಕ ಇಲಾಖೆಯೊಂದಿಗೆ ಖಾಸಗಿ ಸೇವಾದಾತರು ಮಾಡಿಕೊಂಡಿರುವ ಕರಾರುಗಳಿಗೆ ಹೊಸ ಷರತ್ತುಗಳನ್ನು ಸೇರಿಸಲಾಗುತ್ತದೆಯೇ ಅಥವಾ ಭಾರತ ಸರ್ಕಾರ ಮುಕ್ತ ಅಂತರ್ಜಾಲಕ್ಕೆ ಸಂಬಂಧಿಸಿದ ಹೊಸ ಕಾನೂನೊಂದನ್ನು ರೂಪಿಸಿ ಈ ಶಿಫಾರಸುಗಳನ್ನು ಜಾರಿಗೆ ತರುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಷ್ಟೇ ಸ್ಪಷ್ಟವಾಗಲಿದೆ.

ಸ್ಥೂಲವಾಗಿ ಎಲ್ಲಾ ಶಿಫಾರಸುಗಳೂ ಪ್ರಗತಿಪರವಾಗಿವೆ. ಮಾಹಿತಿ ಮತ್ತು ಸಂವಹನಾಧಾರಿತ ಉದ್ಯಮ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ಅನುವು ಮಾಡಿಕೊಡುವಂತೆಯೇ ಅವುಗಳ ಬಳಕೆದಾರರ ಹಕ್ಕುಗಳನ್ನು ಕಾಪಾಡುವತ್ತ ಗಮನಹರಿಸಿವೆ. ಆದರೆ ಈ ಶಿಫಾರಸುಗಳನ್ನು ಕಾಲಮಿತಿಯೊಳಗೆ ಜಾರಿಗೆ ತರಬೇಕಾದ ಅನಿವಾರ್ಯತೆಯನ್ನು ಟ್ರಾಯ್ ಸೃಷ್ಟಿಸಿಲ್ಲ. ಇದು ಟ್ರಾಯ್‌ನ ಸಾಂಸ್ಥಿಕ ಮಿತಿ. ಈ ಬಗೆಯ ಕಾಲಮಿತಿಯನ್ನು ನಿರ್ಧರಿಸುವ ಅಧಿಕಾರ ಅದಕ್ಕಿಲ್ಲ. ಒಮ್ಮೆ ಸರ್ಕಾರ ಈ ಶಿಫಾರಸುಗಳನ್ನು ಒಪ್ಪಿ ಜಾರಿಗೆ ತಂದರೆ ದೂರ ಸಂಪರ್ಕ ಕ್ಷೇತ್ರದಲ್ಲಿರುವ ಸೇವಾದಾತ ಕಂಪೆನಿಗಳು ತಮ್ಮ ಸೇವೆಗಳಲ್ಲಿ ಹೆಚ್ಚು ಪಾರದರ್ಶಕತೆಯನ್ನು ಪಾಲಿಸುವುದು ಅನಿವಾರ್ಯವಾಗುತ್ತದೆ. ಇದು ಸೇವೆಯ ಗುಣಮಟ್ಟವನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಎಲ್ಲಾ ಬಗೆಯ ಬಳಕೆದಾರರನ್ನು ಹೆಚ್ಚು ಸಬಲಗೊಳಿಸುತ್ತದೆ.

ಮುಕ್ತ ಅಂತರ್ಜಾಲ ಚರ್ಚೆಯ ಸಂದರ್ಭದಲ್ಲಿ ಬಹಳ ಚರ್ಚೆಗೆ ಒಳಗಾಗಿದ್ದ ‘ವಿಶೇಷ ಸೇವೆ’ಗಳ ಕ್ಷೇತ್ರದಲ್ಲಿ ಟ್ರಾಯ್‌ನ ಶಿಫಾರಸುಗಳಲ್ಲಿ ಕೆಲವು ಸಮಸ್ಯೆಗಳಿವೆ. ನಿರ್ದಿಷ್ಟ ಇಂಟರ್ನೆಟ್ ಆಧಾರಿತ ಸೇವೆಯನ್ನು ಇಂಟರ್ನೆಟ್ ಸೇವೆಗೆ ಪರ್ಯಾಯವಾಗಿ ನೀಡುವ ಅವಕಾಶವಿಲ್ಲ ಎಂದು ಶಿಫಾರಸು ಸ್ಪಷ್ಟವಾಗಿ ಹೇಳುತ್ತದೆ. ಆದರೆ ‘ವಿಶೇಷ ಸೇವೆ’ಗಳ ವ್ಯಾಖ್ಯಾನದಲ್ಲಿ ಇಂಟರ್ನೆಟ್ ಆಧಾರಿತ ದೂರವಾಣಿ ಕರೆಗಳು ಮತ್ತು ಐಪಿಟಿವಿ ಒಳಗೊಳ್ಳುತ್ತವೆ. ಆದರೆ ಇಲ್ಲೊಂದು ವೈರುಧ್ಯವಿದೆ. ಇಂಟರ್ನೆಟ್ ಸೇವೆಗೆ ಪರ್ಯಾಯವಾಗಿ ನಿರ್ದಿಷ್ಟ ಇಂಟರ್ನೆಟ್ ಆಧಾರಿತ ಸೇವೆಯನ್ನು ಒದಗಿಸುವಂತಿಲ್ಲ ಎಂದು ಹೇಳುತ್ತಲೇ ಇಂಟರ್ನೆಟ್ ಆಧಾರಿತ ದೂರವಾಣಿ ಕರೆಯನ್ನು ‘ವಿಶೇಷ ಸೇವೆ’ ಎಂದು ಪರಿಗಣಿಸುವುದು ಹೇಗೆ ಎಂಬ ಪ್ರಶ್ನೆ ಇಲ್ಲಿದೆ. ಈಗಾಗಲೇ ಟೆಲಿಕಾಂ ಉದ್ಯಮಿಗಳು ಶಿಫಾರಸುಗಳನ್ನು ಸ್ವಾಗತಿಸಿದ್ದಾರೆ.

ಪ್ರತಿಯೊಬ್ಬರೂ ಇದು ಹೆಚ್ಚು ಅವಕಾಶಗಳನ್ನು ಸೃಷ್ಟಿಸಲಿದೆ ಎಂಬಂಥ ಮಾತುಗಳನ್ನು ಆಡುತ್ತಿದ್ದಾರೆ. ಈ ಹಿಂದೆ ರಿಲಯನ್ಸ್, ಏರ್‌ಟೆಲ್‌ನಂಥ ಸಂಸ್ಥೆಗಳು ಇಡೀ ಮುಕ್ತ ಅಂತರ್ಜಾಲ ನೀತಿಯನ್ನು ಖಂಡತುಂಡವಾಗಿ ವಿರೋಧಿಸಿದ್ದವು ಎಂಬುದನ್ನೂ ನಾವು ಮರೆಯುವಂತಿಲ್ಲ. ಶಿಫಾರಸುಗಳು ನಿಯಮಗಳಾಗಿ ರೂಪುಗೊಳ್ಳುವ ಸಂದರ್ಭದಲ್ಲಿ ಹೆಚ್ಚು ಎಚ್ಚರವಹಿಸುವ ಅಗತ್ಯವಿದೆ ಎಂಬುದನ್ನು ಈ ತನಕದ ಪಾಠಗಳು ಹೇಳುತ್ತಿವೆ. ಅಂದರೆ ಮುಕ್ತ ಅಂತರ್ಜಾಲ ಆಂದೋಲನದ ಕೆಲಸ ಇನ್ನೂ ಪೂರ್ಣಗೊಂಡಿಲ್ಲ ಎಂದರ್ಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT