ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳುಕಟ್ಟದ ಭತ್ತ: ರೈತರು ಕಂಗಾಲು

Last Updated 30 ನವೆಂಬರ್ 2017, 6:10 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ಕಸಬ ಹೋಬಳಿ ಸೇರಿದಂತೆ ಇತರೆ ಭಾಗಗಳಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಕೃಷಿ ಇಲಾಖೆ ಸೂಚನೆ ಮೇರೆಗೆ ಬೆಳೆದ ಭತ್ತದ ಬೆಳೆ ಕೈಗೆ ಬಂದಿದ್ದರೂ ಕಾಳುಕಟ್ಟದ ಕಾರಣ, ಮಂಗಳವಾರ ಸ್ಥಳ ಪರಿಶೀಲನೆಗೆ ಬಂದ ಕೃಷಿ ಅಧಿಕಾರಿಗಳ ತಂಡವನ್ನು ರೈತರು ತರಾಟೆಗೆ ತೆಗೆದುಕೊಂಡರು.

ತಾಲ್ಲೂಕಿನ ಕಸಬ ಹೋಬಳಿಯ ಕದರಪುರ, ನಂಜೇಗೌಡನಪಾಳ್ಯ, ಅರೇಪಾಳ್ಯ, ಮೋದುರು, ಹೊಸಹಳ್ಳಿ, ಹೆಗ್ಗಡತಿಹಳ್ಳಿ, ಕೊಡವತ್ತಿ ಗ್ರಾಮದ ರೈತರು ನೂರಾರು ಎಕರೆ ಪ್ರದೇಶದಲ್ಲಿ ರೈತ ಸಂಪರ್ಕ ಕೇಂದ್ರಗಳಿಂದ ಕೃಷಿ ಇಲಾಖೆ ಸಲಹೆ ಮೇರೆಗೆ ಸೋನಾ ಬಿ.ಬಿ.ಟಿ. ತಳಿಯ ಭತ್ತದ ಬೀಜಗಳನ್ನು ಖರೀದಿಸಿ ತಮ್ಮ ಜಮೀನಿನಲ್ಲಿ ಬೆಳೆ ಇಟ್ಟಿದ್ದರು. ಮೂರು ತಿಂಗಳ ಸಮಯದಲ್ಲಿ ಸೊಂಪಾಗಿ ಬೆಳೆದು ನಿಂತ ಪೈರಿನಲ್ಲಿ ಭತ್ತದ ಕಾಳು ಕಟ್ಟದೆ ಸೊರಗಿ ಹೋದ ಕಾರಣ ಆತಂಕಗೊಂಡಿದ್ದಾರೆ.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಇಂದೂಧರಮೂರ್ತಿ, ಜಿಕೆವಿಕೆ ಕೀಟ ಶಾಸ್ತ್ರಜ್ಞ ಡಾ.ಪ್ರಭು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ರೈತರಾದ ಶಾಂತರಾಜು, ಪಾಪಣ್ಣ, ಚಂದ್ರಶೇಕರ್ ಮಾತನಾಡಿ, ‘ತಾಲ್ಲೂಕಿನಲ್ಲಿ ರೈತರ ಬೇಡಿಕೆ ಸಲ್ಲಿಸದಿದ್ದರೂ, ಕೃಷಿ ಇಲಾಖೆ ಅಧಿಕಾರಿಗಳು ಬೀಜ ಕಂಪೆನಿಯೊಂದಿಗೆ ಮೈತ್ರಿ ಮಾಡಿಕೊಂಡು ಸೋನಾ ಬಿ.ಬಿ.ಟಿ. ಬೀಜ ವಿತರಿಸಿದ್ದಾರೆ ಎಂದರು.

ಸೋನಾ ತಳಿ
ಬೆಳೆಯಲು ಕನಿಷ್ಠ 30 ಡಿಗ್ರಿಕ್ಕಿಂತ ಕಡಿಮೆ ಉಷ್ಣತೆಯಿರಬೇಕು. ತಾಲ್ಲೂಕಿನಲ್ಲಿ 34 ಡಿಗ್ರಿಗೂ ಹೆಚ್ಚು ಇದೆ. ಹಿಂದೆ ಹಾಸನದಲ್ಲಿ ಜೆಡಿಎಸ್‌ ರಾಷ್ಟ್ರೀಯ ಘಟಕದ ಅಧ್ಯಕ್ಷ ದೇವೇಗೌಡ ಸೋನಾ ತಳಿ ನಮ್ಮ ಭಾಗದಲ್ಲಿ ಬೆಳೆಯಲು ತಕ್ಕ ಪರಿಸರವಿಲ್ಲ ಎಂದು ತಿರಸ್ಕರಿಸಿದ್ದ ತಳಿಯನ್ನು
ಕುಣಿಗಲ್ ತಾಲ್ಲೂಕು ಕೃಷಿ ಅಧಿಕಾರಿಗಳು ವಿತರಿಸಿ ಸಕಾಲದಲ್ಲಿ ಸೂಕ್ತ ಮಾಹಿತಿ ನೀಡದೆ ರೈತರ ಬೆಳೆ, ಶ್ರಮ ಮತ್ತು ಹಣ ವ್ಯರ್ಥವಾಗಲು ಕಾರಣ ಕರ್ತರಾಗಿದ್ದಾರೆ’ ಎಂದು ಆರೋಪಿಸಿದರು.

ಡಾ.ಪ್ರಭು ಮಾತನಾಡಿ, ‘ಅಕಾಲಿಕವಾಗಿ ಹೆಚ್ಚಿನ ಮಳೆ, ತೇವಾಂಶದಿಂದ ಭತ್ತದ ಬೆಳೆಗೆ ಕಂದು ತಲೆ ಹುಳು ಮತ್ತು ಸೈನಿಕ ಹುಳುಗಳು ಬಾಧಿಸಿ ಬೆಳೆ ಕಾಳುಕಟ್ಟದ ಸ್ಥಿತಿಗೆ ತಲುಪಿದೆ. ಸಕಾಲದಲ್ಲಿ ಹುಳುಗಳ ನಾಶಕ್ಕೆ ಔಷಧ ಸಿಂಪಡಿಸಬೇಕಿತ್ತು. ಅಥವಾ ಧೂಮೀಕರಣ ಮಾಡಬೇಕಿತ್ತು. ರೈತರು ಅಧಿಕಾರಿಗಳ ಗಮನಕ್ಕೆ ತರಲು ವಿಳಂಬ ಮಾಡಿದ ಕಾರಣ ಪರಿಸ್ಥಿತಿ ಕೈಮೀರಿದೆ’ ಎಂದು ತಿಳಿಸಿದರು.

ಇಂದೂಧದರಮೂರ್ತಿ ಮಾತನಾಡಿ, ‘ತಾಲ್ಲೂಕಿನಲ್ಲಿ 1,112 ಹೆಕ್ಟೇರ್ ಭತ್ತದ ಬೆಳೆ ಬಿತ್ತನೆಯಾಗಿದೆ. 40 ಕ್ವಿಂಟಲ್‌ ಸೋನಾ ಬಿ.ಬಿ.ಟಿ ಬಿತ್ತನೆ ಬೀಜ ವಿತರಿಸಿದ್ದೇವೆ. ಕಸಬ ಹೋಬಳಿಯಲ್ಲಿ 15 ಕ್ವಿಂಟಲ್ ವಿತರಿಸಲಾಗಿದೆ. ರೈತರಿಂದ ಸಕಾಲದಲ್ಲಿ ಮಾಹಿತಿ ದೊರೆಯದ ಕಾರಣ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಬೆಳೆ ನಷ್ಟವಾಗಿರುವ ಬಗ್ಗೆ ದಾಖಲೆಗಳೊಂದಿಗೆ ಮನವಿ ಸಲ್ಲಿಸಿದರೆ ಪರಿಹಾರಕ್ಕೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT