ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕ ಸಾವು: ನಾಗರಿಕರ ಆಕ್ರೋಶ

Last Updated 30 ನವೆಂಬರ್ 2017, 7:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೀದಿನಾಯಿ ಕಚ್ಚಿ ಗಾಯಗೊಂಡಿದ್ದ ಅಫ್ರಿದಿ ಹಮೀದ್‌ ಬೇಪಾರಿ (7) ಬುಧವಾರ ರಾತ್ರಿ 8.30ಕ್ಕೆ ಸಾವಿಗೀಡಾಗಿದ್ದಾನೆ. ಬಾಲಕನ ಸಾವಿಗೆ ಪಾಲಿಕೆಯ ಅಧಿಕಾರಿಗಳು ಹಾಗೂ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಮಂಟೂರ ರಸ್ತೆ ಹರಿಶ್ಚಂದ್ರ ಕಾಲೊನಿ ನಿವಾಸಿಗಳು ಪ್ರತಿಭಟನೆ ನಡೆಸಿದರು.

‘ವಲ್ಲಭಭಾಯ್‌ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿದ್ದ ಅಫ್ರಿದಿ ನ. 9ರಂದು ಶಾಲೆಗೆ ಹೋಗುತ್ತಿದ್ದಾಗ ನಾಯಿ ಕಚ್ಚಿತ್ತು. ಚಿಟಗುಪ್ಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 15 ಹೊಲಿಗೆ ಹಾಕಿದ್ದ ವೈದ್ಯರು, ಐದು ಇಂಜೆಕ್ಷನ್‌ ಬರೆದುಕೊಟ್ಟಿದ್ದರು. ಆದರೆ, ನಂತರ, ಬಾಲಕನಿಗೆ ಸರಿಯಾದ ಚಿಕಿತ್ಸೆ ನೀಡಲಿಲ್ಲ. ವೈದ್ಯರ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ’ ಎಂದು ಕಾಲೊನಿಯ ಮುಖಂಡ ದಾವಲ್‌ಸಾಬ್‌ ನದಾಫ ಅಸಮಾಧಾನ ವ್ಯಕ್ತಪಡಿಸಿದರು.

‘ಚಿಟಗುಪ್ಪಿ ಆಸ್ಪತ್ರೆಯ ವೈದ್ಯರು ಸರಿಯಾದ ಚಿಕಿತ್ಸೆ ನೀಡಲಿಲ್ಲ. ನಂತರ, ಶಾಸಕರಿಗೆ ಕರೆ ಮಾಡಿದ ನಂತರ ಸ್ವಲ್ಪ ಗಮನಹರಿಸಿದರು. ನಂತರ ಕಿಮ್ಸ್‌ಗೆ ದಾಖಲಿಸಲಾಗಿತ್ತು. ನಾಲ್ಕು ಇಂಜೆಕ್ಷನ್‌ ಕೊಡಿಸಲಾಗಿತ್ತು. ಐದನೇ ಇಂಜೆಕ್ಷನ್‌ ನೀಡುವ ಮೊದಲೇ ನಂಜು ನೆತ್ತಿಗೆ ಏರಿದ್ದರಿಂದ ಅಫ್ರಿದಿ ಸಾವಿಗೀಡಾಗಿದ್ದಾನೆ. ಚಿಟಗುಪ್ಪಿ ವೈದ್ಯರು ಮೊದಲೇ ಕಿಮ್ಸ್‌ಗೆ ಕರೆದುಕೊಂಡು ಹೋಗುವಂತೆ ಹೇಳಿದ್ದರೆ ಬಾಲಕ ಬದುಕುಳಿಯುವ ಸಾಧ್ಯತೆ ಇತ್ತು’ ಎಂದು ನಾಗರಾಜ ರಾಣೆಬೆನ್ನೂರು ಹೇಳಿದರು.

‘ಅಫ್ರಿದಿ ತಂದೆ ಹಮೀದ್‌ ಬೀದಿ–ಬೀದಿಯಲ್ಲಿ ಬಲೂನು ಮಾರಿ ಜೀವನ ನಡೆಸುತ್ತಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಅವರಿಗೆ ಆಗುವುದಿಲ್ಲ. ಪಾಲಿಕೆಯ ನಿರ್ಲಕ್ಷ್ಯದಿಂದ ಬಾಲಕ ಸಾವಿಗೀಡಾಗಿದ್ದು, ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಬೇಕು’ ಎಂದು ವಾಜಿದ್‌ ಚಾಂದ್‌ಸಾಬ್‌ ಪುನೆವಾಲೆ ಹೇಳಿದರು.

‘ಈ ಪ್ರದೇಶದಲ್ಲಿ 150ರಿಂದ 200 ಬೀದಿನಾಯಿಗಳು ಇವೆ. ಅವುಗಳನ್ನು ನಿಯಂತ್ರಿಸುವಂತೆ ಮನವಿ ಮಾಡಿದರೂ ಯಾರೂ ಸ್ಪಂದಿಸಲಿಲ್ಲ. ಈ ಭಾಗದ ಪಾಲಿಕೆ ಸದಸ್ಯೆ ಲಕ್ಷ್ಮಿ ಬಿಜವಾಡ, ಬಾಲಕ ಸತ್ತಿದ್ದ ಸುದ್ದಿ ತಿಳಿದರೂ ಸ್ಥಳಕ್ಕೆ ಬಾರದೆ, ದೂರದಿಂದ ನೋಡಿ ಹಾಗೇ ಹೋದರು’ ಎಂದು ದೂರಿದರು.

ಅಪಘಾತ: ನಾಲ್ವರಿಗೆ ಗಾಯ
ಹುಬ್ಬಳ್ಳಿ:
ತಾಲ್ಲೂಕಿನ ಹೊರವಲಯದ ನೂಲ್ವಿ ಕ್ರಾಸ್‌ ಬಳಿ ಬುಧವಾರ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದಿದ್ದರಿಂದ ನಾಲ್ವರು ಗಾಯಗೊಂಡಿದ್ದಾರೆ.

ತಡಸ ಕಡೆಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ಕಾರಿನಲ್ಲಿ ಬರುತ್ತಿದ್ದ ಪರಮೇಶ ಮೆಣಸಿನಕಾಯಿ, ಹೇಮಾ ಪಾಟೀಲ, ಸುವರ್ಣ, ಸುಧಾ ಶಿರಕೋಳ ಗಾಯಗೊಂಡವರು.

ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜಾಟ:
ದೂರು ದಾಖಲು: ಪರಶುರಾಮ ಕ್ಷತ್ರಿಯ ಎಂಬುವರು ಇತರ ಐವರೊಂದಿಗೆ ಸೇರಿ ದೇವಾಂಗಪೇಟೆ ಸ್ಮಶಾನದಲ್ಲಿ ಜೂಜು ಆಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು, ಇವರಿಂದ ₹2,210 ನಗದು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಂಡ ವಸೂಲಿ: ಸಂಚಾರ ನಿಯಮ ಉಲ್ಲಂಘಿಸಿದ ವಿರುದ್ಧ ಮಂಗಳವಾರ 133 ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ₹48,700 ದಂಡ ವಸೂಲಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT