ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಕಾಮಗಾರಿ: ಎಂಜಿನಿಯರ್‌ ತಂಡ ಪರಿಶೀಲನೆ

ಯಡವನಾಡು–ಕಾಜೂರು ಸಂಪರ್ಕಿಸುವ 6 ಕಿ.ಮೀ ಉದ್ದದ ರಸ್ತೆ ಮರು ಡಾಂಬರೀಕರಣ
Last Updated 30 ನವೆಂಬರ್ 2017, 8:58 IST
ಅಕ್ಷರ ಗಾತ್ರ

ಸೋಮವಾರಪೇಟೆ: ತಾಲ್ಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯ ಅಡಿ ₹5.99 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಯಡವನಾಡು ಮುಖ್ಯ ರಸ್ತೆಯಿಂದ ಕಾಜೂರು ಗ್ರಾಮದವರೆಗಿನ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ರಾಜ್ಯ ಗುಣಮಟ್ಟ ನಿಯಂತ್ರಣಾಧಿಕಾರಿ ವೆಂಟಕೇಶ್‌ ನೇತೃತ್ವದ ತಂಡವು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿತು.

ಯಡವನಾಡು–ಕಾಜೂರು ಸಂಪರ್ಕಿಸುವ 6 ಕಿ.ಮೀ ಉದ್ದದ ರಸ್ತೆ ಮರು ಡಾಂಬರೀಕರಣಕ್ಕೆ ಹಣ ಬಿಡುಗಡೆಯಾಗಿತ್ತು. ಕುಶಾಲನಗರದ ದಿನೇಶ್ ಎಂಬುವವರು ಗುತ್ತಿಗೆಯನ್ನು ಪಡೆದು ರಸ್ತೆ ನಿರ್ಮಿಸಿದ್ದರು.

ಈ ಕಾಮಗಾರಿಯು ಕಳಪೆಯಾಗಿದೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ಅನಿಲ್‌ಕುಮಾರ್ ಅವರು, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೆ.8ರಂದು ದೂರು ಸಲ್ಲಿಸಿದ್ದರು.

ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಮಡಿಕೇರಿಯ ಪಿಎಂಜಿಎಸ್‌ವೈ ಕಚೇರಿ ಎದುರು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಆದರೂ, ಅಧಿಕಾರಿಗಳು ಯಾವುದೇ ಸೂಕ್ತ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ರಾಜ್ಯ ಗುಣಮಟ್ಟ ನಿಯಂತ್ರಣಾಧಿಕಾರಿ ಕಚೇರಿಗೆ ದೂರು ನೀಡಲಾಗಿತ್ತು.

ಕಾಮಗಾರಿಗೆ ಬಳಸಿದ ಕಲ್ಲು, ಮರಳು, ಡಾಂಬರಿನ ಗುಣಮಟ್ಟ ಹಾಗೂ ಸಾಮಾಗ್ರಿಗಳನ್ನು ಬಳಸಿದ ಪ್ರಮಾಣವನ್ನು ಪರಿಶೀಲಿಸಿದರು.

ಎಂಜಿನಿಯರ್‌ ವೆಂಕಟೇಶ್ ಮಾತನಾಡಿ, ಮೇಲ್ನೋಟಕ್ಕೆ ಕಾಮಗಾರಿ ಸಮರ್ಪಕವಾಗಿಲ್ಲ. ಕಾಮಗಾರಿಯ ಕುರಿತು ಸಂಪೂರ್ಣ ವರದಿಯನ್ನು ಮುಖ್ಯ ಅಧೀಕ್ಷಕ ಎಂಜಿನಿಯರ್‌ಗೆ ನೀಡಲಾಗುವುದು. ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಸ್. ಚಂಗಪ್ಪ, ಆರ್‌ಟಿಐ ಕಾರ್ಯಕರ್ತ ಬಗ್ಗನ ಅನಿಲ್, ಬಗ್ಗನ ಹರೀಶ್, ಐಗೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಪಿ. ರಾಯ್ ಹಾಗೂ ಸದಸ್ಯರು, ಗ್ರಾಮಸ್ಥರಾದ ಮಚ್ಚಂಡ ಅಶೋಕ್, ರಾಮಪ್ಪ, ಮಚ್ಚಂಡ ಪ್ರಕಾಶ್, ಪ್ರಮೋದ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT