ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ದಾಳಿ: ಜೋಳದ ಫಸಲು ನಾಶ

Last Updated 30 ನವೆಂಬರ್ 2017, 10:32 IST
ಅಕ್ಷರ ಗಾತ್ರ

ಹನೂರು: ಮಲೆಮಹದೇಶ್ವರ ವನ್ಯಜೀವಿಧಾಮದ ಹನೂರು ಬಫರ್ ವಲಯ ವ್ಯಾಪ್ತಿಯಲ್ಲಿರುವ ಕಾಡಂಚಿನ ಜಮೀನುಗಳಿಗೆ ಪ್ರತಿ ರಾತ್ರಿ ಕಾಡಾನೆಗಳ ಹಿಂಡು ದಾಳಿ ಮಾಡಿ ಫಸಲನ್ನು ನಾಶ ಗೊಳಿಸುತ್ತಿದ್ದು, ಕಾಡಾನೆಗಳ ಹಾವಳಿ ತಪ್ಪಿಸುವಂತೆ ರೈತರು ಒತ್ತಾಯಿಸಿದ್ದಾರೆ.

ಹನೂರು ಬಫರ್ ವಲಯದ ಒಂಟಿಮಾಲಾಪುರ ಕೆರೆಯ ಕಾಡಂಚಿನ ವೆಂಕಟೇಗೌಡ, ಚೆನ್ನಿಯಮ್ಮ, ವೀರಪ್ಪ, ರಾಮೇಗೌಡ ಮುಂತಾದ ರೈತರ ಜಮೀನುಗಳಿಗೆ 15 ದಿನಗಳಿಂದ ನಿರಂತರವಾಗಿ ಕಾಡಾನೆಗಳು ನುಗ್ಗುತ್ತಿವೆ.

ಜಮೀನಿನಲ್ಲಿ ಬೆಳೆದಿರುವ ಮುಸುಕಿನ ಜೋಳ, ರಾಗಿ, ತೊಗರಿ, ಅರಿಸಿನ ಫಸಲು ಕಾಡಾನೆಗಳ ಪಾಲಾಗುತ್ತಿದೆ. ಅರಣ್ಯದ ಸುತ್ತಲೂ ಮುಚ್ಚಿ ಹೋಗಿರುವ ಆನೆಕಂದಕ ಹಾಗೂ ನಾಶಗೊಂಡಿರುವ ಸೋಲಾರ್ ಇದಕ್ಕೆ ಪ್ರಮುಖ ಕಾರಣ ಎಂದು ರೈತರು ಆರೋಪಿಸಿದ್ದಾರೆ.

‘ಬ್ಯಾಂಕಿನಿಂದ ₹ 2.50ಲಕ್ಷ ಸಾಲ ಪಡೆದು ಕೃಷಿ ಮಾಡಿದ್ದೆ. ಫಸಲು ಸಹ ಹುಲುಸಾಗಿ ಬೆಳೆದು ಕಟಾವಿಗೆ ಬಂದಿತ್ತು. ಆದರೆ, 15 ದಿನಗಳಿಂದ ನಿರಂತರ ಕಾಡಾನೆಗಳ ದಾಳಿಯಿಂದಾಗಿ ಅರ್ಧ ಭಾಗ ಫಸಲು ನಾಶವಾಗಿದೆ. ಬ್ಯಾಂಕಿನ ಸಾಲ ಹೇಗೆ ಕಟ್ಟುವುದೋ ಎಂಬುದೇ ಚಿಂತೆಯಾಗಿದೆ’ ಎಂದು ರೈತ ವೆಂಕಟೇಗೌಡ ಸಂಕಷ್ಟ ಹೇಳಿಕೊಂಡರು.

‘ಜಮೀನಿಗೆ ಕಾಡಾನೆಗಳು ಬರುತ್ತಿ ರುವ ಬಗ್ಗೆ ಅರಣ್ಯಾಧಿಕಾರಿಗಳಿಗೆ ತಿಳಿಸಿ ದ್ದರೂ, ಅವರು ಇತ್ತ ಗಮನಹರಿಸುತ್ತಿಲ್ಲ. ವರ್ಷದಿಂದ ಕಾಪಾಡಿದ ಫಸಲು ಇಂದು ಕಾಡಾನೆಗಳ ಪಾಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಾಡು ಪ್ರಾಣಿಗಳು ಜಮೀನಿಗೆ ನುಗ್ಗುವುದನ್ನು ತಡೆಗಟ್ಟಲು ಅರಣ್ಯದ ಸುತ್ತಲೂ ಅಳವಡಿಸಿದ್ದ ಸೋಲಾರ್ ಬೇಲಿಯ ರೆಗ್ಯುಲೇಟರ್‌ಗಳ ಕಳ್ಳತನವಾ ಗಿದೆ. ಈ ಬಗ್ಗೆ ಹನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ರೆಗ್ಯುಲೇಟರ್ ಇಲ್ಲದಿರುವುದರಿಂದ ಸೋಲಾರ್ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಇದರಿಂದ ವನ್ಯಪ್ರಾಣಿಗಳು ಜಮೀನಿಗೆ ನುಗ್ಗುತ್ತಿವೆ’ ಎಂದು ಹನೂರು ಬಫರ್ ವಲಯ ಅರಣ್ಯಾಧಿಕಾರಿ ಜಯವರ್ಧನ್ ತಳ್ವಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಆನೆಕಂದಕವೂ ಮುಚ್ಚಿಹೋಗಿದೆ. ಪುನಃ ಕಂದಕ ನಿರ್ಮಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ನಷ್ಟಗೊಳಗಾಗಿರುವ ರೈತರು ಸಂಬಂಧಿಸಿದ ದಾಖಲಾತಿಗಳೊಡನೆ ಕಚೇರಿಗೆ ಅರ್ಜಿ ಸಲ್ಲಿಸಿದರೆ ಸೂಕ್ತ ಪರಿಹಾರ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT