ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲುಗಿನಲ್ಲಿ ‘ಇ ಈ’ ಬರೆದ ನೀರಜ್‌ ಶ್ಯಾಮ್‌

Last Updated 30 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಚಂದನವನದಲ್ಲಿ ಅರಳಲಾಗದ ಒಂದು ಹೂವು ತೆಲುಗು ಚಿತ್ರರಂಗದಲ್ಲಿ ಘಮ ಬೀರುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಹಿತ್ತಲ ಗಿಡ ಮದ್ದಲ್ಲ ಎಂಬ ಅನುಭವವಾದಾಗ ಮುಂಬೈಗೆ, ಅಲ್ಲಿಂದ ಹೈದರಾಬಾದ್‌ಗೆ ವಲಸೆ ಹೋದ ನೀರಜ್‌ ಶ್ಯಾಮ್‌ ಎಂಬ ಪ್ರತಿಭಾವಂತ ನಟ ಈಗ ತೆಲುಗಿನಲ್ಲಿ ಬೆಳಗುವ ಎಲ್ಲಾ ಲಕ್ಷಣ ಕಾಣುತ್ತಿದೆ.

ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿಸಿ ಹಾಡುಗಳು ಬಿಡುಗಡೆಯಾಗಿರುವ ‘ಇ ಈ’ ಚಿತ್ರದಲ್ಲಿ ನೀರಜ್‌ ನಾಯಕ. ಡಿಸೆಂಬರ್‌ ಎಂಟರಂದು ಚಿತ್ರ ತೆರೆ ಕಾಣಲಿದ್ದು, ಇನ್ನೂ ಎರಡು ಸಿನಿಮಾಗಳಿಗೆ ಈಗಾಗಲೇ ಆಫರ್‌ ಬಂದಿದೆ. ಕೆಲವು ನಿರ್ದೇಶಕರು, ನಿರ್ಮಾಪಕರು ನೀರಜ್‌ ಅವರ ನಟನೆಯ ಸಾಮರ್ಥ್ಯ ಮತ್ತು ಹಮ್ಮುಬಿಮ್ಮು ಇಲ್ಲದೆ ಎಲ್ಲಾ ವಿಭಾಗದಲ್ಲಿಯೂ ತೊಡಗಿಸಿಕೊಳ್ಳುವ ಉಮೇದನ್ನು ಮೆಚ್ಚಿಕೊಂಡಿದ್ದಾರೆ.

‘ಕನ್ನಡದ ಕಂದ ನಾನು. ಕನ್ನಡದ ನೆಲದಲ್ಲಿ ಬೆಳಗಬೇಕು ಎಂಬುದು ನನ್ನ ಬಹಳ ದಿನದ ಕನಸಾಗಿತ್ತು. ‘ಆಪ್ತ’ ಮತ್ತು ಪೂಜಾ ಗಾಂಧಿ ಅವರೊಂದಿಗೆ ‘ದಂಡು’ ಸಿನಿಮಾದಲ್ಲಿ ನಾಯಕನಟನಾಗಿ ನಟಿಸಿದ್ದೆ. ಆಮೇಲೆ ಕೆಲವು ಸಿನಿಮಾಗಳ ಕತೆ ಮೆಚ್ಚುಗೆಯಾಗಿದ್ದರೂ ಆ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿರಲಿಲ್ಲ. ಚಿತ್ರಕತೆ ಚೆನ್ನಾಗಿದ್ದರೂ ಸಿನಿಮಾದ ಗೆಲುವಿಗೆ ಅದರ ಮಾರ್ಕೆಟಿಂಗ್‌ ಯೋಜನೆ ಕೂಡಾ ಮುಖ್ಯವಾಗುತ್ತದೆ. ಯೋಜನೆಯಲ್ಲಿ ಎಡವಿದರೆ ಕಲಾವಿದರ ಭವಿಷ್ಯಕ್ಕೂ ಏಟು ಬಿದ್ದಂತೆಯೇ. ಹೀಗೆ ಬೇರೆ ಬೇರೆ ಕಾರಣದಿಂದ 4–5 ಕನ್ನಡದ ಸಿನಿಮಾಗಳನ್ನು ಕೈಬಿಟ್ಟಿದ್ದೆ. ನಂತರ ಮುಂಬೈಗೆ ಹೋಗಿ ಜಾಹೀರಾತು ಕಂಪೆನಿಯಲ್ಲಿ ಉಪಾಧ್ಯಕ್ಷನಾಗಿ ಕೆಲಸ ಮಾಡಿದೆ. ಆ ಸಂದರ್ಭದಲ್ಲಿ ಹೈದರಾಬಾದ್‌ನಲ್ಲಿ ತೆಲುಗು ಚಿತ್ರರಂಗದ ದಿಗ್ಗಜರೊಂದಿಗೆ ಹತ್ತಿರದ ನಂಟು ಬೆಳೆಯಿತು. ತೆಲುಗು ಚಿತ್ರಗಳಲ್ಲಿ ಅವಕಾಶ ಸಿಗಲು ಇದೇ ಕಾರಣವಾಯಿತು. ಐದಾರು ಸಿನಿಮಾಗಳಲ್ಲಿ ನಟಿಸಿದ್ದರೂ ಪೂರ್ಣಪ್ರಮಾಣದ ನಾಯಕನಾಗಿರುವುದು ಇದೇ ಮೊದಲು’ ಎಂದು ಸಿನಿಯಾನದ ಸಿಂಹಾವಲೋಕನ ಮಾಡುತ್ತಾರೆ ನೀರಜ್‌.

‘ಇ ಈ’ ಸಿನಿಮಾದ ಬಗ್ಗೆ ನೀರಜ್‌ಗೆ ಸಹಜವಾಗಿಯೇ ಬಹಳ ನಿರೀಕ್ಷೆ ಇದೆ. ಚಿತ್ರದ ಮೇಕಿಂಗ್‌, ಮಾರ್ಕೆಟಿಂಗ್‌, ಪ್ರಚಾರ ಕಾರ್ಯ ಯೋಜಿತವಾಗಿ ನಡೆಯುತ್ತಿರುವುದು ಮತ್ತು ಚಿತ್ರದ ಹಾಡುಗಳು ಬಿಡುಗಡೆಯಾಗುತ್ತಿದ್ದಂತೆ 13.5 ಲಕ್ಷ ಮಂದಿ ವೀಕ್ಷಣೆ ಮಾಡಿರುವುದು ಅವರ ಲೆಕ್ಕಾಚಾರಕ್ಕೆ ಪುಷ್ಟಿ ಕೊಟ್ಟಿದೆ. ತೆಲುಗು ಚಿತ್ರರಂಗದ ಮುಂಚೂಣಿ ವಿತರಕ ಸಂಸ್ಥೆ ಸುರೇಶ್‌ ಪ್ರೊಡಕ್ಷನ್ಸ್‌ ನಿರ್ಮಾಣದ ‘ಇ ಈ’ ಚಿತ್ರದ ಪ್ರಚಾರಕ್ಕೇ ₹1 ಕೋಟಿ ಖರ್ಚಾಗಿದೆ.

ಫ್ರಾನ್ಸ್‌ನಲ್ಲಿ 300ಕ್ಕೂ ಹೆಚ್ಚು ಅನಿಮೇಷನ್‌ ಸರಣಿಗಳನ್ನು ನಿರ್ದೇಶಿಸಿದ್ದ ರಾಮ್‌ ಗಣಪತಿ ರಾವ್‌ ‘ಇ ಈ’ ನಿರ್ದೇಶಕರು. ಚಿತ್ರದ ಹೆಸರು ವಿಚಿತ್ರವಾಗಿದೆಯಲ್ಲ ಎಂದರೆ,  ‘ಕನ್ನಡದಲ್ಲಿ ‘ಇವನು, ಇವಳು’ ಎಂದು ಅರ್ಥ ಮಾಡಿಕೊಳ್ಳಿ’ ಎಂದು ನೀರಜ್‌ ನಗುತ್ತಾರೆ.

ನೀರಜ್‌ ಶ್ಯಾಮ್‌, ದಂತ ವೈದ್ಯಕೀಯ ಪದವಿ ಮುಗಿಸಿದ್ದರೂ ವೈದ್ಯರಾಗುವ ಉಮೇದೇ ಇರಲಿಲ್ಲವಂತೆ. ಒಬ್ಬನೇ ಮಗ ಬಯಸಿದ ಕ್ಷೇತ್ರದಲ್ಲಿ ಮುಂದುವರಿಯಲಿ ಎಂದು ತಂದೆ ತಾಯಿ ಮಗನ ಕನಸಿಗೆ ನೀರೆರೆದರು. ಬೆಂಗಳೂರಿನ ಜಯನಗರ ಮೂರನೇ ಬ್ಲಾಕ್‌ನಲ್ಲಿ ಮನೆ ಮಾಡಿದ್ದೂ ಇದೇ ಉದ್ದೇಶದಿಂದ. ನೀರಜ್‌, ಗಾಂಧಿನಗರದತ್ತ ನಡೆದರು. ಆದರೆ ಮಹತ್ವಾಕಾಂಕ್ಷೆಯಂತೆ ಗಾಂಧಿನಗರದಲ್ಲಿ ಅದೃಷ್ಟ ಕೈಕೊಟ್ಟಿತು. ಆದರೆ ಈಗ ತಾನೇ ಹೊಸಬೆಳಕು ಮೂಡುತ್ತಿದ್ದರೂ ನೀರಜ್‌ಗೆ ತಮ್ಮ ತವರಿನಲ್ಲೇ ಬೆಳಗುವಾಸೆ.

ಕಟ್ಟುಮಸ್ತು ಕಾಯದ ನೀರಜ್‌ ಹಠಕ್ಕೆ ಬಿದ್ದು ವ್ಯಾಯಾಮ ಮಾಡಿ ದೇಹಕ್ಕೆ ಆಕಾರ ಕೊಟ್ಟವರಲ್ಲ. ಶಿಸ್ತಿನ ಜೀವನಕ್ರಮ ಮತ್ತು ಆಹಾರ ಸೇವನೆಯಲ್ಲಿನ ನಿಯಂತ್ರಣವೇ ಅವರ ಫಿಟ್‌ನೆಸ್‌ನ ರಹಸ್ಯ.

‘ಜಿಮ್‌ನಲ್ಲಿ ಇಂತಿಷ್ಟೇ ಸಮಯದಲ್ಲಿ ಅಷ್ಟು ಪ್ಯಾಕ್‌ ಇಷ್ಟು ಪ್ಯಾಕ್‌ ಎಂಬ ಲೆಕ್ಕಾಚಾರ ದೇಹಕ್ಕೆ ಆಕಾರ ಕೊಡುವುದಕ್ಕಿಂತ ನಮ್ಮ ಮೇಲೆ ನಾವು ನಿಯಂತ್ರಣ ಇಟ್ಟುಕೊಂಡರೆ ಯಾವಾಗಲೂ ಫಿಟ್‌ ಆಗಿರುತ್ತೇವೆ. ನಾನು ಫಿಟ್‌ನೆಸ್‌ನ ಕಾರಣಕ್ಕೆ ಬಾಯಿಗೆ ಇಷ್ಟದ ಯಾವುದೇ ಆಹಾರವನ್ನೂ ಕೈಬಿಟ್ಟಿಲ್ಲ. ಬದಲಾಗಿ, ಸಣ್ಣ ವಯಸ್ಸಿನಿಂದಲೂ ಊಟೋಪಹಾರದ ವಿಚಾರದಲ್ಲಿ ಕಟ್ಟುನಿಟ್ಟು ಇದ್ದುದರಿಂದ ಈಗಲೂ ಅದನ್ನೇ ಪಾಲಿಸುತ್ತಿದ್ದೇನೆ. ಐಸ್‌ಕ್ರೀಂ ಮತ್ತು ಸಿಹಿತಿಂಡಿ ನನಗೆ ತುಂಬಾ ಇಷ್ಟ. ಹಾಗಾಗಿ ವಿಶೇಷ ಊಟ ಮಾಡಬೇಕಾದ ಸಂದರ್ಭದಲ್ಲಿ ಮೇನ್‌ ಕೋರ್ಸ್‌ ಮುಟ್ಟೋದೇ ಇಲ್ಲ. ಅದರ ಬದಲು ಡೆಸರ್ಟ್‌ ತಿನ್ನುತ್ತೇನೆ. ದೇಹಕ್ಕೆ ಎಷ್ಟು ಬೇಕೋ ಅಷ್ಟು ಪ್ರೊಟೀನ್‌, ಕಾರ್ಬೊಹೈಡ್ರೇಟ್‌ ಪೂರೈಸಿದರೆ ಮರುದಿನ ಅತಿಯಾಗಿ ದೇಹ ದಂಡಿಸಬೇಕಾದ ಪ್ರಮೇಯವೇ ಇರುವುದಿಲ್ಲ’ ಎಂದು ವಿವರಿಸುತ್ತಾರೆ.

ನಮ್ಮ ‘ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ’ಯ ತಮಿಳು ರಿಮೇಕ್‌ನಲ್ಲಿ ನೀರಜ್‌ ಶ್ಯಾಮ್‌ ನಾಯಕನಾಗಿ ಅಭಿನಯಿಸಲಿದ್ದಾರೆ. 2010ರ ‘ಮಿಸ್‌ ಇಂಡಿಯಾ’ ನೇಹಾ, ಚಿತ್ರದ ನಾಯಕಿ. ಮಹೇಶ್‌ ಜಾನಕಿರಾಮನ್‌ ನಿರ್ದೇಶನದ ಈ ಚಿತ್ರವೂ ಅದ್ದೂರಿಯಾಗಿ ಮೂಡಿಬರಲಿದೆಯಂತೆ. ‘ತೆಲುಗಿನಲ್ಲಿ ಮತ್ತೊಂದಿಷ್ಟು ಅವಕಾಶಗಳು ಬಂದಿದ್ದು, ಚರ್ಚೆಯ ಹಂತದಲ್ಲಿವೆ. ನಾನು ನಟನಷ್ಟೇ ಅಲ್ಲ. ನಿರ್ದೇಶನ, ನಿರ್ಮಾಣ, ಮೇಕಿಂಗ್‌, ಕ್ಯಾಮೆರಾ ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ತೊಡಗಿಸಿಕೊಳ್ಳುವ ಕನಸು ಇದೆ. ಪ್ರಯತ್ನಕ್ಕೆ ತಕ್ಕ ಫಲ ಕೊಡುವ ದೇವರ ನಿರ್ಣಯ ಏನಿದೆಯೋ ನೋಡೋಣ’ ಎಂದು ವೇದಾಂತಿಯಾಗುತ್ತಾರೆ ಡಾ.ನೀರಜ್‌ ಶ್ಯಾಮ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT