ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಮನಿತ ಸೋಂಕಿತರಿಗೆಲ್ಲಿದೆ ಬೆಳಕು?

Last Updated 30 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಇಂದು ವಿಶ್ವ ಏಡ್ಸ್ ನಿಯಂತ್ರಣ ದಿನ. ಎಚ್‍ಐವಿ ಸೋಂಕು ಮತ್ತು ಏಡ್ಸ್‌ನಂತಹ ಕಾಯಿಲೆ ತಡೆಗಟ್ಟಲು ಎಲ್ಲಾ ರೀತಿಯಲ್ಲೂ ಸಮರ್ಪಕ ಮತ್ತು ವಿಸ್ತೃತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ ಪ್ರತಿವರ್ಷ ಎಚ್‍ಐವಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು 2016ರ ಜಾಗತಿಕ ಏಡ್ಸ್ ಅಧ್ಯಯನ ವರದಿ ತಿಳಿಸಿದೆ.

ಕರ್ನಾಟಕವೊಂದರಲ್ಲೇ ಸದ್ಯ ಎರಡೂವರೆ ಲಕ್ಷಕ್ಕೂ ಹೆಚ್ಚಿನ ಸೋಂಕಿತರಿದ್ದು ರಾಷ್ಟ್ರದ ಎಲ್ಲ ರಾಜ್ಯಗಳ ಲೆಕ್ಕದಲ್ಲಿ 8ನೇ ಸ್ಥಾನದಲ್ಲಿದೆ. ಕಳೆದ ಹತ್ತು ವರ್ಷಗಳಲ್ಲಿ 80,173 ಮಂದಿ ಇದರಿಂದ ಮೃತಪಟ್ಟಿರುವುದು ಅಪಾಯದ ಕರೆಗಂಟೆ. ಸೋಂಕು ತಡೆಗಟ್ಟಲು ನಾವು ಇನ್ನಷ್ಟು ತೀವ್ರವಾಗಿ ಕಾರ್ಯತತ್ಪರರಾಗಬೇಕಿರುವ ಅವಶ್ಯಕತೆಯನ್ನೂ ಇದು ಸೂಚಿಸುತ್ತದೆ.

ಭಾರತದಲ್ಲಿ ಎಚ್‍ಐವಿ ಸೋಂಕು ಮೊದಲ ಬಾರಿ ಕಾಣಿಸಿಕೊಂಡದ್ದು 1982ರಲ್ಲಿ ಎಂದು ದಾಖಲಾಗಿದೆ. ಆನಂತರ ಅದು ದೇಶದಾದ್ಯಂತ ವ್ಯಾ‍ಪಿಸಿದೆ. ಈ ಸೋಂಕನ್ನು ನಿಯಂತ್ರಿಸಲು 1992ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯು ಆರೋಗ್ಯ ಇಲಾಖೆಯ ಒಂದು ಘಟಕವಾಗಿ ಕೆಲಸ ಮಾಡುತ್ತಿದೆ. ಭಾರತದಲ್ಲಿ ಸದ್ಯ 28.81 ಲಕ್ಷ ಎಚ್‍ಐವಿ ಸೋಂಕಿತರಿದ್ದಾರೆ. ಸೋಂಕಿತರ ಸಂಖ್ಯೆಯಲ್ಲಿ ನಮ್ಮದು ವಿಶ್ವದಲ್ಲೇ 3ನೆಯ ಸ್ಥಾನ. 2016ರಲ್ಲಿಯೇ ಹೊಸದಾಗಿ 1.96 ಲಕ್ಷ ಎಚ್‍ಐವಿ ಸೋಂಕಿತರು ಪತ್ತೆಯಾಗಿದ್ದಾರೆ. ಹಾಗೇ ಅದೇ ವರ್ಷ 62 ಸಾವಿರ ಜನ ಸೋಂಕಿತರು ಈ ಸಂಬಂಧಿತ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ ಎಂಬುದು ಕಹಿಯಾದ ಸಂಗತಿ.

ಎಚ್‍ಐವಿ ಒಂದು ರೋಗವಲ್ಲ. ಅದು ಮನುಷ್ಯನಲ್ಲಿರುವ ರೋಗನಿರೋಧಕ ಶಕ್ತಿಯನ್ನು ನಾಶ ಮಾಡುವ ಒಂದು ವೈರಸ್ ಸೋಂಕು ಎಂಬುದನ್ನೇ ಇನ್ನೂ ಜನರಿಗೆ ಸಮರ್ಪಕವಾಗಿ ಅರ್ಥ ಮಾಡಿಸಲು ನಮಗೆ ಸಾಧ್ಯವಾಗಿಲ್ಲ. ಇದು ಮುಟ್ಟುವುದರಿಂದ, ಕೈಕುಲುಕುವುದರಿಂದ, ಸೊಳ್ಳೆಗಳಿಂದ ಹರಡುವುದಿಲ್ಲ ಎಂದು ಗೊತ್ತಿರುವ ಜನ ಸಹ ಎಚ್‍ಐವಿ ಪೀಡಿತರೊಂದಿಗೆ ಮುಕ್ತವಾಗಿ ಒಡನಾಡಲು ಇಂದಿಗೂ ಹೆದರುತ್ತಾರೆ. ಅಸುರಕ್ಷಿತ ಲೈಂಗಿಕ ಸಂಪರ್ಕದ ಮೂಲಕ ಈ ಸೋಂಕು ಶೇ 90 ರಷ್ಟು ಹರಡುತ್ತಿದೆ. ಸೋಂಕಿರುವವರಿಂದ ರಕ್ತದಾನ ಪಡೆದಾಗ ಕೂಡ ಅದು ಹರಡುತ್ತದೆ. ಕಳೆದ ಐದು ವರ್ಷದಲ್ಲಿ ಭಾರತದಲ್ಲಿ 9 ಸಾವಿರಕ್ಕೂ ಹೆಚ್ಚು ಜನರು ಈ ಮೂಲಕ ಸೋಂಕಿಗೆ ತುತ್ತಾಗಿದ್ದಾರೆ. ಎಚ್‌ಐವಿ ಇರುವ ಮಕ್ಕಳ ಪೈಕಿ ಮೂರನೇ ಒಂದರಷ್ಟು ಮಕ್ಕಳಿಗೆ ಸೋಂಕಿತ ತಾಯಿಯಿಂದ  ಹರಡುತ್ತಿದೆ. ಸಂಸ್ಕರಿಸದೇ ಇರುವ ಸಿರಿಂಜ್ ಬಳಸುವ ಮಾದಕದ್ರವ್ಯ ವ್ಯಸನಿಗಳಲ್ಲಿಯೂ ಸೋಂಕು ಹರಡುತ್ತಿದೆ. ಹೀಗಾಗಿ ಈ ಎಲ್ಲ ವಿಧಾನಗಳಿಂದ ಸೋಂಕು ಹರಡದಂತೆ ತಡೆಗಟ್ಟಲು ಅನೇಕ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ.

ಎಲ್ಲಕ್ಕಿಂತ ಮುಖ್ಯವಾಗಿ ವೇಶ್ಯಾವಾಟಿಕೆಯ ಜಾಲಕ್ಕೆ ಬಿದ್ದಿರುವ ಲೈಂಗಿಕ ದಮನಿತರನ್ನು ಸಂಘಟಿಸಿ, ಅವರನ್ನು ಪ್ರತಿ ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ, ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವ ಸಂಸ್ಥೆಯ ಘಟಕದಡಿ ನೋಂದಾಯಿಸಿ, ಉಚಿತವಾಗಿ ಮತ್ತು ವ್ಯವಸ್ಥಿತವಾಗಿ ಕಾಂಡೋಂ ಒದಗಿಸುವ ಮೂಲಕ ಸೋಂಕನ್ನು ತಡೆಗಟ್ಟುವ ಕೆಲಸದಲ್ಲಿ 10-15 ವರ್ಷಗಳಿಂದಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೊಡಗಿಸಿಕೊಂಡಿವೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ವ್ಯಯಿಸಲಾಗುತ್ತಿದೆ.

ಕರ್ನಾಟಕದಲ್ಲಿ ಈ ಸಂಸ್ಥೆಯಡಿ ನೋಂದಾಯಿಸಿದ ಸುಮಾರು 97 ಸಾವಿರ ಲೈಂಗಿಕ ದಮನಿತರು ಇದ್ದಾರೆ. ಇವರನ್ನು ‘ಈ ಸೋಂಕು ಹರಡುವ ಹೆಚ್ಚಿನ ಅಪಾಯದ ಗುಂಪು’ ಎಂದೇ ಪರಿಗಣಿಸಲಾಗಿದೆ. ಇವರಲ್ಲಿ 8 ಸಾವಿರದಷ್ಟು ಮಂದಿ ಎಚ್‍ಐವಿ ಸೋಂಕಿತರು ಎಂಬುದು ಆತಂಕದ ಸಂಗತಿ. ಇವರು, ಸೋಂಕನ್ನು ತೀವ್ರ ಗತಿಯಲ್ಲಿ ಹರಡುವ ಇನ್ನಷ್ಟು ಹೆಚ್ಚಿನ ಅಪಾಯದ ಗುಂಪು. ರಾಜ್ಯದಾದ್ಯಂತ ಇರುವ ಇವರ ಕಥೆ ಒಬ್ಬರಿಗಿಂತ ಒಬ್ಬರದು ತೀವ್ರ ಸಂಕಷ್ಟದ್ದು. ಅತ್ಯಾಚಾರಕ್ಕೊಳಗಾಗಿ, ಮಾರಾಟಕ್ಕೆ ಒಳಗಾಗಿ, ಅನಿರೀಕ್ಷಿತವಾಗಿ... ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕಿದ ಬಹಳಷ್ಟು ಹೆಣ್ಣುಮಕ್ಕಳು ತಮಗೆ ಅರಿವೇ ಇಲ್ಲದೆ ಈ ಸೋಂಕಿಗೆ ತುತ್ತಾಗಿರುತ್ತಾರೆ. ಅವರಲ್ಲಿ ಹೆಚ್ಚಿನವರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು ಯುವತಿಯರು ಎಂಬುದು ಕಹಿಸತ್ಯ. ಅವರಿಗೆ ಸಾಮಾಜಿಕ ಮನ್ನಣೆ, ಸೂಕ್ತ ಕೆಲಸ, ಆರ್ಥಿಕ ಮತ್ತು ನೈತಿಕ ಬೆಂಬಲ ಯಾವುದೂ ಇಲ್ಲ. ಅನಿವಾರ್ಯವಾಗಿ ಈ ದಂಧೆಯಲ್ಲೇ ಮುಂದುವರೆಯಬೇಕಾಗಿ ಬಂದಿದೆ. ಅವರಲ್ಲಿ ಹೆಚ್ಚಿನವರು ಸೋಂಕಿನ ಕಾರಣಕ್ಕಾಗಿ ಅತ್ಯಂತ ಜರ್ಜರಿತರಾಗಿದ್ದಾರೆ. ಆದರೆ ಬದುಕಿಗೆ ಪರ್ಯಾಯ ದಾರಿಯೇ ಇಲ್ಲದೆ ಈ ದಂಧೆಯಲ್ಲೇ ಮುಂದುವರೆದಿದ್ದಾರೆ. ಬಹಳಷ್ಟು ಸಲ ಅಸುರಕ್ಷಿತ ಲೈಂಗಿಕ ಸಂಪರ್ಕಕ್ಕೆ ಒಳಗಾಗುವ ಈ ಗುಂಪಿನ ಮಹಿಳೆಯರಿಂದ ಸೋಂಕು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ.

ಲೈಂಗಿಕ ದಮನಿತರ ಸ್ಥಿತಿಗತಿ ಅಧ್ಯಯನ ಮಾಡಿರುವ ಸಮಿತಿಯು ಈ ವರ್ಷದ ಫೆಬ್ರುವರಿಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದರಲ್ಲಿ ಈ 8 ಸಾವಿರದಷ್ಟಿರುವ ಎಚ್‍ಐವಿ ಸೋಂಕಿತರನ್ನು ವಿಶೇಷ ವರ್ಗವೆಂದು ಪರಿಗಣಿಸಲಾಗಿದೆ. ಇವರನ್ನು ಈ ದಂಧೆಯಿಂದ ಹೊರಗೆ ತರುವ ಕೆಲಸವನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳುವಂತೆ ಸೂಚಿಸಿದೆ. ಇದು ಅತ್ಯಂತ ತುರ್ತಾಗಿ ಆಗಬೇಕಿರುವ ಕೆಲಸವೂ ಹೌದು. ತಕ್ಷಣಕ್ಕೆ ಅವರಿಗೆ ತಿಂಗಳಿಗೆ ₹ 5000 ಸಹಾಯಧನ ನೀಡುವ ಜೊತೆಗೆ ಉಚಿತ ಆರೋಗ್ಯ ಸೌಲಭ್ಯ ಮತ್ತು ಪೌಷ್ಟಿಕ ಆಹಾರ ವಿತರಣೆಯಾಗಬೇಕು, ಅಂತ್ಯೋದಯ ಕಾರ್ಡುಗಳನ್ನು ಕಡ್ಡಾಯವಾಗಿ ವಿತರಿಸಬೇಕು ಎಂಬುದು ವರದಿಯ ಪ್ರಮುಖ ಶಿಫಾರಸು.

ಈ ಸೋಂಕಿತರ ಪುನರ್ವಸತಿಗಾಗಿ ಮಹಿಳಾ ಅಭಿವೃದ್ಧಿ ನಿಗಮವು ಎರಡು ವರ್ಷಗಳಿಂದ ‘ಧನಶ್ರೀ’ ಎಂಬ ಯೋಜನೆ ಪ್ರಾರಂಭಿಸಿದೆ. ಅದರಲ್ಲಿ ಈ ವರ್ಷದಿಂದ ತಲಾ ₹ 25 ಸಾವಿರ ಸಹಾಯಧನ ಮತ್ತು ಅಷ್ಟೇ ಮೊತ್ತದ ಸಾಲ ನೀಡಲಾಗುತ್ತಿದೆ. ಕಳೆದ ವರ್ಷ 991 ಸೋಂಕಿತರಿಗೆ ಈ ಯೋಜನೆಯ ಪ್ರಯೋಜನ ತಲುಪಿಸುವ ಗುರಿ ಹೊಂದಲಾಗಿತ್ತು. ಈ ಸಲ ಅದನ್ನು 792ಕ್ಕೆ ಇಳಿಸಿದೆ. ಇದು, ಸರ್ಕಾರಕ್ಕೆ ಈ ಸೋಂಕಿತರ ಬಗೆಗಿರುವ ಕಾಳಜಿಯನ್ನು ಸೂಚಿಸುತ್ತದೆ!

ನಿಜವಾಗಿ ನೋಡಿದರೆ ತೀರಾ ಅಪಾಯದಲ್ಲಿರುವ ಈ ಸೋಂಕಿತರಿಗೆ ಏಕಕಾಲಕ್ಕೆ ಸ್ವಾವಲಂಬನೆಯ ಬದುಕಿನ ಮಾರ್ಗಗಳನ್ನು ಕಲಿಸಿ, ಪುನರ್ವಸತಿ ಕಲ್ಪಿಸಬೇಕು. ಆಗಮಾತ್ರ ಈ ಸೋಂಕು ತೀವ್ರಗತಿಯಲ್ಲಿ ಹರಡುವುದನ್ನು ನಿಯಂತ್ರಿಸಲು ಖಂಡಿತವಾಗಿಯೂ ಸಾಧ್ಯವಾಗುತ್ತದೆ. ವಿಶ್ವ ಏಡ್ಸ್ ನಿಯಂತ್ರಣ ದಿನದ ಸಂದರ್ಭದಲ್ಲಾದರೂ ಸರ್ಕಾರ ಈ ಕುರಿತು ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು. ಅಂದರಷ್ಟೇ ಆ ಹೆಂಗಳೆಯರ ಬದುಕಿನಲ್ಲಿ ಬೆಳಕು ಮೂಡುತ್ತದೆ. ಜೊತೆಗೆ ರಾಜ್ಯದ ಜನರ ಆರೋಗ್ಯ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕೆ ಈ ಮೂಲಕ ಬಹು ದೊಡ್ಡ ಕೊಡುಗೆಯನ್ನೂ ಕೊಟ್ಟಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT