ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ಸ್ವಾತಂತ್ರ್ಯದ ಅತಿಕ್ರಮಣ ಸಲ್ಲದು

Last Updated 1 ಡಿಸೆಂಬರ್ 2017, 4:55 IST
ಅಕ್ಷರ ಗಾತ್ರ

ಕೇರಳದ 25 ವರ್ಷದ ಯುವತಿ ಹಾದಿಯಾ ಅವರಿಗೆ ಶಿಕ್ಷಣ ಮುಂದುವರಿಸುವುದಕ್ಕಾಗಿ ಆಕೆಯ ತಂದೆ ತಾಯಿಯ ವಶದಿಂದ ಆಕೆಯನ್ನು ಬಿಡುಗಡೆ ಮಾಡಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನ ಮಹತ್ವದ್ದು. ಆ ಮೂಲಕ ವ್ಯಕ್ತಿ ಸ್ವಾತಂತ್ರ್ಯವನ್ನು ಸುಪ್ರೀಂ ಕೊರ್ಟ್ ಎತ್ತಿ ಹಿಡಿದಿದೆ. ಈ ನಿರ್ದೇಶನ ಬಹಳ ಕಾಲದಿಂದ ಬಾಕಿ ಇತ್ತು. ಏಕೆಂದರೆ 11 ತಿಂಗಳುಗಳಿಂದ ತನ್ನ ಇಚ್ಛೆಗೆ ವಿರುದ್ಧವಾಗಿ ಕೇರಳದಲ್ಲಿ ತಂದೆತಾಯಿ ಜೊತೆ ಹಾದಿಯಾ ಇದ್ದರು. ವಯಸ್ಕ ಮಹಿಳೆಯಾಗಿ ತನ್ನ ಸ್ವಾಯತ್ತೆ ಪ್ರತಿಪಾದಿಸುವ ಹಕ್ಕನ್ನು ಹಾದಿಯಾಗೆ ನಿರಾಕರಿಸಲಾಗಿತ್ತು. ಈಗ ಕೋರ್ಟ್ ನಿರ್ದೇಶನದಂತೆ, ಹೋಮಿಯೋಪಥಿ ವೈದ್ಯಕೀಯ ಶಿಕ್ಷಣ ಮುಂದುವರಿಸಲು ಹಾದಿಯಾ ತಮಿಳುನಾಡಿನ ಸೇಲಂನಲ್ಲಿದ್ದಾರೆ. ಹಾದಿಯಾ ಮೂಲ ಹೆಸರು ಅಖಿಲಾ.

ಇಸ್ಲಾಂಗೆ ಸ್ವ ಇಚ್ಛೆಯಿಂದ ಮತಾಂತರಗೊಂಡ ಅನೇಕ ತಿಂಗಳ ನಂತರ ಅವರು ಮುಸ್ಲಿಂ ವ್ಯಕ್ತಿಯನ್ನು ವಿವಾಹವಾಗಿದ್ದರು. ಆದರೆ ಈ ಮತಾಂತರ ಸ್ವ ಇಚ್ಛೆಯದಲ್ಲ ಎಂಬುದು ಆಕೆಯ ತಂದೆಯ ಆರೋಪವಾಗಿತ್ತು. ಉಗ್ರ ಸಿದ್ಧಾಂತಗಳನ್ನು ಬೋಧಿಸಿ ಸಿರಿಯಾದ ಐಎಸ್ ಗುಂಪಿಗೆ ಸೇರ್ಪಡೆ ಮಾಡುವ ಗುರಿಯೊಂದಿಗೆ ಯುವಜನರ ಮೇಲೆ ಪ್ರಭಾವ ಬೀರುವ ಕೋಮುವಾದಿ ಗುಂಪಿನ ಹಿಡಿತಕ್ಕೆ ತಮ್ಮ ಪುತ್ರಿ ಸಿಲುಕಿದ್ದಾಳೆ ಎಂಬುದು ಆಕೆಯ ತಂದೆಯ ಆರೋಪವಾಗಿತ್ತು. ಯಾವುದೇ ಕಾನೂನನ್ನು ಹಾದಿಯಾ ಉಲ್ಲಂಘಿಸಿರದೇ ಇದ್ದರೂ ಆಕೆಯ ಮದುವೆಯನ್ನು ಕೇರಳ ಹೈಕೋರ್ಟ್ ಅನೂರ್ಜಿತಗೊಳಿಸಿದ್ದು ವಿವಾದಾತ್ಮಕವಾಗಿತ್ತು. ಆ ನಂತರ, ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದಂತೂ ಮತ್ತಷ್ಟು ವಾದವಿವಾದಗಳಿಗೆ ಕಾರಣವಾಗಿತ್ತು.

ಹೆಣ್ಣುಮಗಳು ವಯಸ್ಕಳಾಗಿದ್ದರೂ ಆಕೆಯ ವಿವಾಹದಲ್ಲಿ ತಂದೆತಾಯಿ ಭಾಗಿಯಾಗಿರಬೇಕು ಎಂಬರ್ಥದಲ್ಲಿ ಹಾದಿಯಾ ವಿವಾಹ ಅನೂರ್ಜಿತಗೊಳಿಸುವ ಸಂದರ್ಭದಲ್ಲಿ ಕೇರಳ ಹೈಕೋರ್ಟ್ ಆಡಿದ ಮಾತುಗಳು ಅಚ್ಚರಿಯದಾಗಿತ್ತು. ತನ್ನ ಬದುಕಿನ ಬಗ್ಗೆ ತಾನೇ ನಿರ್ಧಾರ ಕೈಗೊಳ್ಳುವ ವಯಸ್ಕ ಹೆಣ್ಣುಮಗಳ ಆಯ್ಕೆ ಸ್ವಾತಂತ್ರ್ಯಕ್ಕೆ ಕೋರ್ಟ್ ಹಾಕಿದ ಕಡಿವಾಣ ಆತಂಕಕಾರಿಯದಾಗಿತ್ತು. ಇದು ಸಂವಿಧಾನದತ್ತ ವ್ಯಕ್ತಿ ಸ್ವಾತಂತ್ರ್ಯದ ಅತಿಕ್ರಮಣವಾಗುವುದಿಲ್ಲವೇ ಎಂಬಂತಹ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಜೊತೆಗೆ, ಮತಾಂತರಗೊಂಡವರು ಪುರುಷನಾಗಿದ್ದಲ್ಲಿ ಇದೇ ರೀತಿಯಲ್ಲಿ ನಿಯಂತ್ರಣ ಮಾಡಲಾಗುತ್ತಿತ್ತೇ ಎಂಬುದು ಮತ್ತೊಂದು ಪ್ರಶ್ನೆಯಾಗಿತ್ತು. ಯಾವುದೇ ಕಾನೂನು ಉಲ್ಲಂಘಿಸದ ಮಹಿಳೆಯ ವೈಯಕ್ತಿಕ ಸ್ವಾತಂತ್ರ್ಯವನ್ನು ನ್ಯಾಯಾಲಯ ಅತಿಕ್ರಮಿಸುವುದು ಸರಿಯಲ್ಲ.

ಕುಟುಂಬ, ಪ್ರಭುತ್ವ, ಧಾರ್ಮಿಕ ಸಮುದಾಯಗಳ ಹಿಡಿತದಲ್ಲಿ ಸಿಲುಕಿ ವ್ಯಕ್ತಿ ಸ್ವಾತಂತ್ರ್ಯವನ್ನು ಹಿಸುಕುವ ಶಕ್ತಿಗಳಿಗೆ ಅನೇಕ ಸಂದರ್ಭಗಳಲ್ಲಿ ತಡೆಗೋಡೆಯಾಗಿ ನ್ಯಾಯಾಂಗ ಕಾರ್ಯನಿರ್ವಹಿಸಿದೆ ಎಂಬುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬೇಕು. ಹೀಗಾಗಿ, ಈ ಪ್ರಕರಣದಲ್ಲಿ ಈಗ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನ ಸಮಾಧಾನ ತರುವ ಸಂಗತಿ. ಆದರೆ ಷಫೀನ್ ಜೆಹಾನ್ ಜೊತೆಗಿನ ಹಾದಿಯಾ ವಿವಾಹದ ನ್ಯಾಯಬದ್ಧತೆಯ ವಿಚಾರವನ್ನು ಸುಪ್ರೀಂ ಕೋರ್ಟ್ ಮುಂದಿನ ತಿಂಗಳು (ಜನವರಿ) ಕೈಗೆತ್ತಿಕೊಳ್ಳಲಿದೆ. ಪರಸ್ಪರ ಸಮ್ಮತಿಯೊಂದಿಗೆ ಮಾಡಿಕೊಂಡ ವಿವಾಹವನ್ನು ಕಾನೂನಿನ ಪ್ರಕಾರ ರದ್ದುಪಡಿಸುವುದು ಸಾಧ್ಯವಿಲ್ಲ. ವಿದೇಶಗಳಲ್ಲಿ ಉಗ್ರ ಕಾರ್ಯಾಚರಣೆಗಳಿಗಾಗಿ ಯುವಜನರನ್ನು ನೇಮಕ ಮಾಡುವುದಕ್ಕಾಗಿ ಯುವಜನರ ಮೇಲೆ ಪ್ರಭಾವ ಬೀರುವಂತಹ ಸಂಘಟಿತ ಕಾರ್ಯಾಚರಣೆ ಚಾಲ್ತಿಯಲ್ಲಿದ್ದರೆ ಅದರ ಬಗ್ಗೆ ಎನ್‌ಐಎ ತನಿಖೆ ಆಗಲಿ. ಆದರೆ ಈ ತನಿಖಾ ಪ್ರಕ್ರಿಯೆಯ ಭಾಗವಾಗಿ ಯುವಜನರ ವ್ಯಕ್ತಿ ಸ್ವಾತಂತ್ರ್ಯ ಹರಣವಾಗಬಾರದು. ಸಾಮಾಜಿಕ ಒತ್ತಡಗಳ ಮಧ್ಯೆಯೂ ಹಾದಿಯಾ ತನ್ನ ನಿಲುವನ್ನು ದಿಟ್ಟವಾಗಿ ಕೋರ್ಟ್‌ನಲ್ಲಿ ಪ್ರತಿಪಾದಿಸಿದ್ದೂ ಈ ಪ್ರಕರಣದಲ್ಲಿ ವಿಶೇಷವಾದ ಅಂಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT