ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಆಸ್ಟ್ರೇಲಿಯಾ ಸವಾಲು

ಇಂದಿನಿಂದ ಹಾಕಿ ವಿಶ್ವ ಲೀಗ್‌ ಫೈನಲ್‌; ‘ಬಿ’ ಗುಂಪಿನಲ್ಲಿರುವ ಆತಿಥೇಯ ತಂಡ
Last Updated 30 ನವೆಂಬರ್ 2017, 19:54 IST
ಅಕ್ಷರ ಗಾತ್ರ

ಭುವನೇಶ್ವರ: ಭಾರತ ಹಾಕಿ ತಂಡಕ್ಕೆ ವಿಶ್ವ ಲೀಗ್‌ ಫೈನಲ್‌ನಲ್ಲಿ ಶುಕ್ರ ವಾರ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಎದುರಾಗಲಿದೆ.

ಮೂರನೇ ಆವೃತ್ತಿಯ ಲೀಗ್‌ನಲ್ಲಿ ಭಾರತದ ಹಾದಿ ಕಠಿಣವಾಗಿದೆ. ಮೊದಲ ಪಂದ್ಯದಲ್ಲಿಯೇ ಬಲಿಷ್ಠ ಆಸ್ಟ್ರೇಲಿಯಾದ ಸವಾಲು ಎದುರಿಸಬೇಕಿದೆ. ಬಳಿಕ ‘ಬಿ’ ಗುಂಪಿನಲ್ಲಿ  ಇಂಗ್ಲೆಂಡ್‌, ಜರ್ಮನಿ, ಅರ್ಜೆಂಟೀನಾ, ನೆದರ್ಲೆಂಡ್ಸ್‌, ಬೆಲ್ಜಿಯಂ ಹಾಗೂ ಸ್ಪೇನ್‌ ತಂಡಗಳು ಕೂಡ ಪ್ರಬಲ ಎದುರಾಳಿ ಆಗಿವೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಎದುರು ಭಾರತದ ಸಾಧನೆ ಅಷ್ಟಕಷ್ಟೇ. ಹಿಂದಿನ ಕೆಲವು ವರ್ಷಗಳಲ್ಲಿ ಚಾಂಪಿಯನ್ಸ್‌ ಟ್ರೋಫಿ, ಸುಲ್ತಾನ್‌ ಅಜ್ಲನ್ ಷಾ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟ ಗಳಲ್ಲಿ ಆಸ್ಟ್ರೇಲಿಯಾ ಎದುರು ಗೆಲುವು ದಾಖ ಲಿಸಲು ಭಾರತ ತಂಡಕ್ಕೆ ಸಾಧ್ಯವಾಗಿಲ್ಲ.

ಏಷ್ಯಾಕಪ್‌ನಲ್ಲಿ ಭಾರತ ತಂಡಕ್ಕೆ ಮಾರ್ಗದರ್ಶನ ನೀಡಿದ್ದ ಹೊಸ ಕೋಚ್ ಶೊರ್ಡ್‌ ಮ್ಯಾರಿಜ್ ಅವರಿಗೆ ಈ ಟೂರ್ನಿ ಅಗ್ನಿಪರೀಕ್ಷೆ ಆಗಿದೆ. ಎರಡು ತಿಂಗಳ ಹಿಂದೆಯಷ್ಟೇ ರೋಲಂಟ್ ಓಲ್ಟಮನ್ಸ್ ಅವರ ನಿರ್ಗಮದ ಬಳಿಕ ಮ್ಯಾರಿಜ್‌ ಕೋಚ್ ಆಗಿದ್ದರು.

ಮಹಿಳೆಯರ ತಂಡದ ಕೋಚ್ ಆಗಿದ್ದ ಮ್ಯಾರಿಜ್ ಅವರ ನೇಮಕಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದ್ದರಿಂದ ಅವರಿಗೂ ಈ ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ಸಾಬೀತು ಮಾಡುವುದು ಪ್ರತಿಷ್ಠೆಯ ಪ್ರಶ್ನೆ ಎನಿಸಿದೆ.

ಈ ಹಿಂದೆ ನಡೆದ ಟೂರ್ನಿಗಳಲ್ಲಿ ಭಾರತ ಏಷ್ಯಾದ ಪ್ರಮುಖ ರಾಷ್ಟ್ರಗಳ ಜೊತೆ ಆಡಿದೆ. ಆದರೆ ಹೊಸ ಕೋಚ್‌

ಮಾರ್ಗದರ್ಶನದಲ್ಲಿ ಮೊದಲ ಬಾರಿಗೆ ಪ್ರಬಲ ತಂಡಗಳೊಂದಿಗೆ ತನ್ನ ಸಾಮರ್ಥ್ಯ ಪರೀಕ್ಷೆ ಮಾಡಿಕೊಳ್ಳಲಿದೆ.

ಮ್ಯಾರಿಜ್ ತಂಡದ ಕೋಚ್ ಆಗಿ ಆಯ್ಕೆಯಾದ ಬಳಿಕ ಯಾವುದೇ ಪ್ರಮುಖ ಬದಲಾವಣೆ ಮಾಡಿಲ್ಲ. ಆಟದ ಶೈಲಿ ಹಾಗೂ ತಂತ್ರಗಳಲ್ಲಿಯೂ ಅವರು ಹಳೆಯ ಮಾದರಿಗಳನ್ನೇ ಉಳಿಸಿಕೊಂಡಿದ್ದಾರೆ. ಇದು ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ಎದುರು ಎಷ್ಟರ ಮಟ್ಟಿಗೆ ಪ್ರಯೋಜನ ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

‘ಆಟಗಾರರೇ ಆಟದ ಶೈಲಿಯನ್ನು ನಿರ್ಧರಿಸಬೇಕು’ ಎಂದು ಹೇಳಿರುವ ಅವರು ತಂಡದ ಬಹುತೇಕ ಜವಾಬ್ದಾರಿಯನ್ನು ಆಟಗಾರರ ಹೆಗಲಿಗೆ ಹಾಕಿದ್ದಾರೆ.

ಏಷ್ಯಾಕಪ್‌ ಫೈನಲ್‌ನಲ್ಲಿ ಭಾರತ ತಂಡ 2–1 ಗೋಲುಗಳಲ್ಲಿ ಮಲೇಷ್ಯಾ ತಂಡವನ್ನು ಮಣಿಸಿತ್ತು. ಮುಂದಿನ ದಿನಗಳಲ್ಲಿ ಭಾರತ ಕಾಮನ್‌ವೆಲ್ತ್ ಕ್ರೀಡಾಕೂಟ, ವಿಶ್ವಕಪ್‌ಗಳಲ್ಲಿ ಆಡಲಿದೆ.

2015ರಲ್ಲಿ ರಾಯಪುರದಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಕಂಚು ಗೆದ್ದಿತ್ತು. ಆಸ್ಟ್ರೇಲಿಯಾ ಚಿನ್ನ ಜಯಿಸಿತ್ತು. ಬೆಲ್ಜಿಯಂ ರನ್ನರ್ಸ್ ಅಪ್ ಆಗಿತ್ತು.

ಪಂದ್ಯ ಆರಂಭ: ಸಂಜೆ 7.30

ನೇರಪ್ರಸಾರ: ಸ್ಟಾರ್‌ಸ್ಟೋರ್ಟ್ಸ್‌.

***

ತಂಡಗಳ ಬಲಾಬಲ

ಯುವ ಆಟಗಾರರ ತಂಡ: ಭಾರತ ತಂಡದಲ್ಲಿ ಯುವ ಆಟಗಾರರಿದ್ದಾರೆ. ಮನ್‌ಪ್ರೀತ್ ಸಿಂಗ್‌ ಹಿಂದಿನ ಟೂರ್ನಿಗಳಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.

ಹರ್ಮನ್‌ಪ್ರೀತ್ ಸಿಂಗ್‌, ಸುಮಿತ್, ದಿಪ್ಸನ್ ಟರ್ಕಿ, ಗುರ್ಜಂತ್ ಸಿಂಗ್‌, ವರುಣ್ ಕುಮಾರ್‌ ಜೂನಿಯರ್ ವಿಶ್ವಕಪ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಅನುಭವಿ ಆಟಗಾರರಾದ ರೂಪಿಂದರ್ ಪಾಲ್‌ ಸಿಂಗ್‌, ಬೀರೇಂದ್ರ ಲಾಕ್ರಾ ತಂಡಕ್ಕೆ ಮರಳಿರುವುದು ಬಲ ಹೆಚ್ಚಿಸಿದೆ. 2017ರ ಹಾಕಿ ಇಂಡಿಯಾ ಲೀಗ್‌ನಲ್ಲಿ ಮಿಂಚಿದ್ದ ಅಮಿತ್ ರೋಹಿದಾಸ್ ಕೂಡ ತಂಡದಲ್ಲಿ ಇದ್ದಾರೆ.

ಆಸ್ಟ್ರೇಲಿಯಾ ಕೂಡ ಹೊಸ ಕೋಚ್‌ ಕೊಲಿನ್ ಬಾಚ್ ಅವರಿಂದ ಮಾರ್ಗದರ್ಶನ ಪಡೆದುಕೊಂಡು ಸಜ್ಜುಗೊಂಡಿದೆ. ಪ್ರಶಸ್ತಿ ಉಳಿಸಿಕೊಳ್ಳುವ ಉದ್ದೇಶದಿಂದ ಈ ತಂಡ ಯುವ ಆಟಗಾರರೊಂದಿಗೆ ಕಣಕ್ಕಿಳಿಯಲಿದೆ.

2016ರ ಒಲಿಂಪಿಕ್ಸ್‌ನಲ್ಲಿ ಆರನೇ ಸ್ಥಾನ ಪಡೆದ ಬಳಿಕ ಈ ತಂಡ ಮಂಕಾಗಿದೆ. 1960ರ ನಂತರ ಈ ತಂಡದ ಅತ್ಯಂತ ಕಳಪೆ ಆಟ ಇದಾಗಿತ್ತು. ಆ ಬಳಿಕ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ ಗಳಿಸಲು ಸಾಕಷ್ಟು ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ. ಮೊದಲ ದಿನದ ಇನ್ನೊಂದು ಪಂದ್ಯದಲ್ಲಿ ಜರ್ಮನಿ ತಂಡ ಇಂಗ್ಲೆಂಡ್‌ ವಿರುದ್ಧ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT