ಮಂಡ್ಯ

ನಾಲೆಗಳ ಸುಸ್ಥಿತಿಯಿಂದ ನೀರಿನ ಸದ್ಬಳಕೆ

‘ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಸದ್ಬಳಕೆ ಆಗಬೇಕು. ನಾಲೆಗಳ ದುಸ್ಥಿತಿಯಿಂದ ನೀರು ಪೋಲಾಗುವ ಅಪಾಯ ಇರುತ್ತದೆ. ಇದರಿಂದ ಅಮೂಲ್ಯ ನೀರು ರೈತರಿಗೆ ಸಿಗದೆ ವ್ಯರ್ಥವಾಗುತ್ತದೆ.

ವಿ.ಸಿ.ಫಾರಂನಲ್ಲಿ ಗುರುವಾರ ನಡೆದ ಕೃಷಿ ಮೇಳದಲ್ಲಿ ರೈತರು ಭತ್ತದ ತಳಿಗಳ ಬಗ್ಗೆ ಮಾಹಿತಿ ಪಡೆದರು

ಮಂಡ್ಯ: ‘ಹವಾಮಾನ್ಯ ವೈಪರೀತ್ಯದಿಂದ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ನೀರಿನ ಸದ್ಬಳಕೆಗಾಗಿ ನಾಲೆಗಳ ಸುಸ್ಥಿತಿ ಕಾಪಾಡಿಕೊಳ್ಳಬೇಕು. ನೀರು ಪೋಲಾಗದಂತೆ ನಿರ್ವಹಣೆ ಮಾಡಬೇಕು’ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಮುಕುಂದ್‌ ಜೋಶಿ ಹೇಳಿದರು.

ಸಮೀಪದ ವಿ.ಸಿ.ಫಾರಂ ಆವರಣದಲ್ಲಿ ಕೃಷಿ ಮೇಳದ ಅಂಗವಾಗಿ ಗುರುವಾರ ‘ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಸದ್ಬಳಕೆ’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

‘ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಸದ್ಬಳಕೆ ಆಗಬೇಕು. ನಾಲೆಗಳ ದುಸ್ಥಿತಿಯಿಂದ ನೀರು ಪೋಲಾಗುವ ಅಪಾಯ ಇರುತ್ತದೆ. ಇದರಿಂದ ಅಮೂಲ್ಯ ನೀರು ರೈತರಿಗೆ ಸಿಗದೆ ವ್ಯರ್ಥವಾಗುತ್ತದೆ. ಅಧಿಕಾರಿಗಳು ನಾಲೆಗಳನ್ನು ದುರಸ್ತಿ ಮಾಡಿಸಿ ನಿರ್ವಹಣೆ ಮಾಡಬೇಕು. ನೀರಿನ ಕೊರತೆ ಎದುರಾಗಿರುವ ಇಂದಿನ ದಿನದಲ್ಲಿ ನೀರಿನ ನಿರ್ವಹಣೆ ಪ್ರಮುಖವಾದುದು. ಅಂತರ್ಜಲ ಹೆಚ್ಚಳಕ್ಕೂ ನೀರಿನ ನಿರ್ವಹಣೆಯೇ ಮುಖ್ಯವಾದುದು. ಇದರಲ್ಲಿ ರೈತರು, ನೀರಾವರಿ ಇಲಾಖೆ ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ನೀರನ್ನು ನಿರ್ವಹಣೆ ಮಾಡಬೇಕು’ ಎಂದು ಹೇಳಿದರು.

‘ಬೆಳೆಯ ಸಂದಿಗ್ಧ ಹಂತದಲ್ಲಿ ನೀರು ಅವಶ್ಯವಾಗಿರುತ್ತದೆ. ಬೆಳೆ ಕಾಯಿ ಕಟ್ಟುವ ಹಂತದಲ್ಲಿ ನೀರು ಕೊಡಬೇಕು. ಈ ಹಂತದಲ್ಲಿ ನೀರು ನೀಡದಿದ್ದರೆ ಬೆಳೆ ಜೊಳ್ಳಾಗುವ ಅಪಾಯ ಇರುತ್ತದೆ. ಸರಿಯಾಗಿ ನೀರು ಕೊಡಲು ಕಾಲುವೆ ವ್ಯವಸ್ಥೆಯನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು. ಕಬ್ಬಿನ ಬೆಳೆಗೆ 200–250 ಸೆಂ.ಮೀ. ನೀರನ್ನು ಏಳು ದಿನಕ್ಕೊಮ್ಮೆ ಕೊಡಬೇಕು. ಏಳು ದಿನಕ್ಕೆ ಮೊದಲೇ ನೀರು ನೀಡಿದರೆ ಬೆಳೆಗೆ ಯಾವುದೇ ಪ್ರಯೋಜನ ಆಗುವುದಿಲ್ಲ ನೀರು ವ್ಯರ್ಥವಾಗುತ್ತದೆ’ ಎಂದು ಹೇಳಿದರು.

ಅಗಲ ಸಾಲು ನಾಟಿ ಪದ್ಧತಿ: ‘ಕಬ್ಬು ಬೆಳೆಯುವ ರೈತರು ಅಗಲ ಸಾಲು ನಾಟಿ ಪದ್ಧತಿಗೆ ಹೆಚ್ಚು ಆದ್ಯತೆ ಕೊಡಬೇಕು. ಇದರಿಂದ ನೀರನ್ನು ಉಳಿಸಬಹುದು. 5–6 ಅಡಿ ಅಂತರದಲ್ಲಿ ಕಬ್ಬನ್ನು ನಾಟಿ ಮಾಡಿದರೆ ಸಾಲು ಬಿಟ್ಟು ಸಾಲಿನಲ್ಲಿ ನೀರು ಹಾಯಿಸಲು ಸಹಾಯವಾಗುತ್ತದೆ. ಜೊತೆಗೆ ಕಬ್ಬಿನ ತರಗಿನ ಹೊದಿಕೆಯನ್ನು ಹೊದಿಸಿದರೆ ಭೂಮಿ ತೇವಾಂಶ ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ. ಕಬ್ಬಿನ ಬೆಳೆಗೆ ಒಳಮೈ ಹನಿ ನೀರಾವರಿ ಉತ್ತಮವಾಗಿದ್ದು ರೈತರು ಈ ಬಗ್ಗೆ ಅರಿವು ಹೊಂದಬೇಕು. ಒಳಮೈನಲ್ಲಿ ಹನಿ ನೀರಾವರಿ ಒದಗಿಸುವುದರಿಂದ ನೀರು ಪೋಲಾಗುವುದನ್ನು ತಡೆಯಬಹುದು. ಈ ವ್ಯವಸ್ಥೆ 5–6ವರ್ಷಗಳವರೆಗೆ ಬಾಳಿಕೆ ಬರುತ್ತದೆ. ಇದರಿಂದ ಶೇ 50ರಷ್ಟು ಇಳುವರಿ ಹೆಚ್ಚ ಳ ಮಾಡಬಹುದು. ಜೊತೆಗೆ ಶೇ 50 ವಿದ್ಯುತ್‌ ಉಳಿಸಬಹುದು’ ಎಂದರು.

ವಿ.ಸಿ.ಫಾರಂ ನಿವೃತ್ತ ಶಿಕ್ಷಣ ನಿರ್ದೇಶಕ ಡಾ.ರಾಜಗೋಪಾಲ್‌ ‘ಬೆಳೆಗಳ ಕೀಟ ನಿರ್ವಹಣೆ’ ಕುರಿತು ಮಾತನಾಡಿ ‘ತಡವಾಗಿ ಭತ್ತದ ಬೇಸಾಯ ಮಾಡಿರುವ ಕಾರಣ ಭತ್ತಕ್ಕೆ ಈಗ ಸೈನಿಕ ಹುಳುವಿನ ಬಾಧೆ ಕಾಣಿಸಿಕೊಂಡಿದೆ. ಹುಳುಗಳು ಗುಂಪುಗುಂಪಾಗಿ ಬೆಳೆಯ ಮೇಲೆ ದಾಳಿ ನಡೆಸುವ ಕಾರಣದಿಂದ ಈ ಹುಳುಗಳಿಗೆ ಸೈನಿಕ ಹುಳುಗಳು ಎಂದು ವಿಜ್ಞಾನಿಗಳು ಹೆಸರಿಟ್ಟಿದ್ದಾರೆ. ರೈತರು ಸೈನಿಕ ಹುಳುಗಳನ್ನು ಕೃಷಿ ಇಲಾಖೆಯ ಅಧಿಕಾರಿಗಳ ಮಾಹಿತಿ ಪಡೆದು ನಿರ್ವಹಣೆ ಮಾಡಬೇಕು. ಸೂಕ್ತ ಸಮಯದಲ್ಲಿ ಕೀಟ ನಾಶಕ ಸಿಂಪಡಣೆ ಮಾಡಿದರೆ ಹುಳುಗಳನ್ನು ನಿಯಂತ್ರಣ ಮಾಡಬಹುದು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ಮಹಾವಿದ್ಯಾಲಯದ ಡೀನ್‌ ಡಾ.ಶಿವಶಂಕರ್‌, ಸಹ ಸಂಶೋಧನಾ ನಿರ್ದೇಶಕ ಡಾ.ಸಿ.ಆರ್‌.ರವಿಶಂಕರ್‌, ಸಂಶೋಧಕ ಡಾ.ವೈ.ಜಿ.ಷಡಕ್ಷರಿ ಹಾಜರಿದ್ದರು.

ಕಬ್ಬಿನ ಆಕರ್ಷಣೆ: ಕೃಷಿ ಮೇಳದ ಎರಡನೇ ದಿನವೂ ವಿಸಿಎಫ್‌–517 ಕಬ್ಬಿನ ತಳಿ ರೈತರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಈ ಕಬ್ಬು ಅತೀ ಹೆಚ್ಚು ಉದ್ದವಿದ್ದ ಕಾರಣ  ರೈತರಿಗೆ ಇಷ್ಟವಾಯಿತು. ಮೇಳಕ್ಕೆ ಬಂದು ಬಹುತೇಕ ರೈತರು ಈ ಕಬ್ಬಿನ ತಳಿಯ ಮಾಹಿತಿ ಪಡೆದರು. ಬಿತ್ತನೆಯ ಬಗ್ಗೆ ಅಧಿಕಾರಿಗಳ ಬಳಿ ವಿಚಾರಣೆ ನಡೆಸಿದರು. ಜೊತೆಗೆ ಸಿರಿಧಾನ್ಯ ಬೇಸಾಯ ಕ್ರಮಗಳ ಮಳಿಗೆ ಹೆಚ್ಚು ಜನರನ್ನು ಆಕರ್ಷಣೆ ಮಾಡಿತು. ಎರಡು ದಿನಗಳ ಆಚರಣೆ ಮೂಲಕ ಕೃಷಿ ಮೇಳ ಸಮಾಪನೆಗೊಂಡಿತು.

ಮಳಿಗೆಗಳಿಗೆ ಬಹುಮಾನ ವಿತರಣೆ
ಕೃಷಿಮೇಳ ಸಮಾರೋಪ ಸಮಾರಂಭದಲ್ಲಿ ಉತ್ತಮ ಮಳಿಗೆಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿ.ಸಿ.ಫಾರಂ ಸಂಶೋಧನಾ ಸಂಸ್ಥೆ ವಿಭಾಗದಲ್ಲಿ ಸಾವಯವ ಕೃಷಿ ಸಂಶೋಧನಾ ಸಂಸ್ಥೆ ಪ್ರಥಮ, ಅಖಿಲ ಭಾರತ ರಾಗಿ ಕಿರುಧಾನ್ಯ ಸಂಸ್ಥೆ ದ್ವಿತೀಯ, ಪಶುಸಂಗೋಪನಾ ಸಂಸ್ಥೆ ತೃತೀಯ ಬಹುಮಾನ ಗಳಿಸಿದವು.

ಸಾರ್ವಜನಿಕ ವಿಭಾಗದಲ್ಲಿ ಕೃಷಿ ಇಲಾಖೆ ಪ್ರಥಮ, ತೋಟಗಾರಿಕೆ ಇಲಾಖೆ ದ್ವಿತೀಯ, ಸ್ಪಿಕ್‌ ಫರ್ಟಿಲೈಸರ್‌ ತೃತೀಯ ಬಹುಮಾನ ಪಡೆದವು. ಖಾಸಗಿ ವಿಭಾಗದಲ್ಲಿ ಮಂಜುನಾಥ ಆಗ್ರೊ ಏಜೆನ್ಸಿ ಪ್ರಥಮ, ಜೈನ್‌ ಇರಿಗೇಷನ್‌ ದ್ವಿತೀಯ, ಸಿಪಿಸಿ ಆಗ್ರೊ ಏಜೆನ್ಸಿ ತೃತೀಯ ಬಹುಮಾನ ಪಡೆದವರು.

Comments
ಈ ವಿಭಾಗದಿಂದ ಇನ್ನಷ್ಟು
ನೀರಾವರಿಗೆ ₹ 1,500 ಕೋಟಿ ಮೀಸಲು

ಮಂಡ್ಯ
ನೀರಾವರಿಗೆ ₹ 1,500 ಕೋಟಿ ಮೀಸಲು

20 Jan, 2018

ಮಂಡ್ಯ
ನರೇಂದ್ರ ಮೋದಿ ಪ್ರತಿಬಿಂಬ ರಾಜ್ಯದಲ್ಲೂ ಮೂಡಲಿ

‘ಪಾರದರ್ಶಕ, ನಿಷ್ಕಳಂಕ ಆಡಳಿತ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಬಿಂಬ ರಾಜ್ಯದಲ್ಲೂ ಮೂಡಬೇಕು. ಇದಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು’

20 Jan, 2018

ಕೆ.ಆರ್.ಪೇಟೆ
‘ಬಿಜೆಪಿ ಟಿಕೆಟ್‌ ಸಿಕ್ಕರೆ ಸ್ಪರ್ಧೆ

ತಾಲ್ಲುಕಿನಲ್ಲಿ ಬಿಜೆಪಿ ಸದೃಢಗೊಳಿಸಲು ತಾವೂ ಒತ್ತು ನೀಡಿದ್ದು, ಪಕ್ಷ ಬಯಸಿ ಟಿಕೆಟ್‌ ನೀಡಿದರೆ ಚುನಾವಣೆಗೆ ಸ್ಪಧಿರ್ಸಲು ಸಿದ್ಧ ಎಂದು ಬಿಜೆಪಿ ಹಿರಿಯ ಮುಖಂಡ ಬೂಕನಕೆರೆ...

20 Jan, 2018
ಇಂದಿನಿಂದ ಪರಿವರ್ತನಾ ಯಾತ್ರೆ ಶುರು

ಮಂಡ್ಯ
ಇಂದಿನಿಂದ ಪರಿವರ್ತನಾ ಯಾತ್ರೆ ಶುರು

19 Jan, 2018

ಶ್ರೀರಂಗಪಟ್ಟಣ
ಮೀನು ಶಿಕಾರಿ ಹಿನ್ನೆಲೆ: ರಂಗನತಿಟ್ಟಿನಲ್ಲಿ ಭದ್ರತೆ ಹೆಚ್ಚಳ

ಹಗಲು ಹೊತ್ತಿನಲ್ಲಿ 26 ಸಿಬ್ಬಂದಿ ಪಕ್ಷಿಧಾಮದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಶಂಕಾಸ್ಪದ ವ್ಯಕ್ತಿಗಳ ಚಲನವಲನದ ಬಗ್ಗೆ ನಿಗಾ ವಹಿಸುತ್ತಿದ್ದಾರೆ ಎಂದು ಪಕ್ಷಿಧಾಮದ ಅಧಿಕಾರಿಗಳು ತಿಳಿಸಿದ್ದಾರೆ. ...

19 Jan, 2018