ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ ಕ್ರೀಡಾ ರಾಜಧಾನಿ ಆಶಯ ಸಾಕಾರ

Last Updated 1 ಡಿಸೆಂಬರ್ 2017, 4:54 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಎಲ್ಲಾ ರೀತಿಯ ಕ್ರೀಡೆಯನ್ನು ನಡೆಸಲು ಅಗತ್ಯವಿರುವ ಸೌಲಭ್ಯ ಕಲ್ಪಿಸುವ ಮೂಲಕ ಉಡುಪಿಯನ್ನು ಕ್ರೀಡಾ ರಾಜಧಾನಿಯನ್ನಾಗಿಸುವ ಗುರಿಯನ್ನು ಸಾಧಿಸಲಾಗಿದೆ’ ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್‌ ತಿಳಿಸಿದರು.

ಜಿಲ್ಲಾಡಳಿತ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾಪಂಚಾಯಿತಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಈಜುಕೊಳದ ಮೇಲ್ಚಾವಣಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಬ್ರಹ್ಮಾವರದಲ್ಲಿ 5.5 ಎಕರೆ ಪ್ರದೇಶದಲ್ಲಿ ₹1.20 ಕೋಟ್ಟಿ ವೆಚ್ಚದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಸಚಿವನಾಗಿ ಅಧಿಕಾರ ಸ್ವೀಕರಿಸಿದ ನಂತರ ಉಡುಪಿಯಲ್ಲಿ ಕ್ರೀಡಾಭಿವೃದ್ದಿಗಾಗಿ ₹20ಕೋಟಿಗೂ ಅಧಿಕ ಅನುದಾನ ಬಿಡುಗಡೆ ಮಾಡಲಾಗಿದೆ. ಎಲ್ಲಾ ರೀತಿಯ ಕ್ರೀಡೆಗಳನ್ನು ನೆಡೆಸಲು ಅಗತ್ಯ ಮೂಲಭೂತ ಸೌಕರ್ಯ ಒದಗಿಸಲಾಗಿದೆ ಎಂದು ಹೇಳಿದರು.

ಮಲ್ಪೆ ಮತ್ತು ಪಡುಕರೆಯಲ್ಲಿ ಸಾಹಸ ಕ್ರೀಡೆ ನಡೆಸಲು 2ಎಕರೆ ಜಾಗ ಗುರುತಿಸಲಾಗಿದೆ. ಮಲ್ಪೆ ಬೀಚ್‌ನಲ್ಲಿ ಬೀಚ್ ಸಾಕರ್‌ ಕ್ರೀಡೆ ನಡೆಸಲು ಅನುಕೂಲವಾಗುವಂತೆ ಸೌಕರ್ಯ ಕಲ್ಪಿಸಲು ₹9ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಜಿಲ್ಲೆಯ ಒಳಾಂಗಣ ಕ್ರೀಡಾಂಗಣಕ್ಕೆ ಹವಾನಿಯಂತ್ರಿತ ವ್ಯವಸ್ಥೆ ಅಳವಡಿಸಲು ಹಣ ಬಿಡುಗಡೆಯಾಗಿದೆ, ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದರು.

ಮಹಿಳಾ ಕ್ರೀಡಾ ವಸತಿ ನಿಲಯ ನಿರ್ಮಾಣ ಮಾಡಲು ಟೆಂಡರ್‌ ಆಗಿದೆ. ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೂ ಇಲ್ಲಿ ಅವಕಾಶ ಸಿಗಲಿದೆ. ಮುಂದಿನ ದಿನದಲ್ಲಿ ಅದನ್ನು ಪದವಿ ವರೆಗೆ ವಿಸ್ತರಿಸಲಾಗುವುದು ಎಂದರು.

ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಅಭಿಜಿನ್, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಪುತ್ರನ್, ಜಿಲ್ಲಾ ಈಜುಕೊಳದ ಉಸ್ತುವಾರಿ ಯತೀಶ್, ರಾಜ್ಯ ಯುವ ಒಕ್ಕೂಟಗಳ ಅಧ್ಯಕ್ಷ ಡಾ. ಬಾಲಾಜಿ ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು

ಅಂತರರಾಷ್ಟ್ರೀಯ ಗುಣಮಟ್ಟದ ಜಿಮ್‌
ಜಿಲ್ಲೆಯಲ್ಲಿ ₹2ಕೋಟಿ ವೆಚ್ಚದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಜಿಮ್‌ ಪ್ರಾರಂಭಿಸಲು ಈಗಾಗಲೇ ಟೆಂಡರ್‌ ನೀಡಲಾಗಿದೆ. ₹3.75 ಕೋಟಿ ವೆಚ್ಚದಲ್ಲಿ ಒಳಾಂಗಣ ಲಾನ್ ಟೆನ್ನಿಸ್ ಕ್ರೀಡಾಂಗಣ, ಕಬಡ್ಡಿ ಕ್ರೀಡಾಂಗಣ ಹಾಗೂ ಕುಸ್ತಿ ಕ್ರೀಡಾಂಗಣ ನಿರ್ಮಾಣ ಮಾಡಲು ಹಣಕಾಸು ಇಲಾಖೆಯ ಅನುಮೋದನೆ ದೊರೆತಿದ್ದು, ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT