ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲಾಭಿವೃದ್ಧಿ ಕಾರ್ಯಕ್ರಮಕ್ಕೆ ₹15 ಕೋಟಿ ಬಿಡುಗಡೆ

Last Updated 1 ಡಿಸೆಂಬರ್ 2017, 4:57 IST
ಅಕ್ಷರ ಗಾತ್ರ

ಉಡುಪಿ: ವಾಟ್ಸಆ್ಯಪ್, ಫೇಸ್‌ಬುಕ್‌ಗೆ ಹೊಂದಿಕೊಂಡಿರುವ ಯುವ ಮನಸ್ಸುಗಳನ್ನು ಹತೋಟಿಗೆ ತರದಿದ್ದರೆ ಯುವ ಜನೋತ್ಸವದಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಕಣ್ಮರೆಯಾಗಲಿವೆ ಎಂದು ಕ್ರೀಡೆ ಮತ್ತು ಯುವಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ರಾಜ್ಯ ಯುವಜನ ಸಂಘಗಳ ಒಕ್ಕೂಟ, ಜಿಲ್ಲಾಡಳಿತ,ಜಿಲ್ಲಾ ಪಂಚಾಯಿತಿ ಹಾಗೂ ಬೆಂಗಳೂರು ಜಿಲ್ಲಾ ಯುವ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಗುರುವಾರ ನಗರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಯುವಜನತೆಗೆ ಯುವಜನೋತ್ಸವ ಕಾರ್ಯಕ್ರಮಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. 30–40 ವರ್ಷಗಳ ಹಿಂದೆ ಇಂತಹ ಕಾರ್ಯಕ್ರಮ ಆಯೋಜಿಸಿದರೆ ಸಾವಿರಾರು ಜನ ಭಾಗವಹಿಸುತ್ತಿದ್ದರು ಹಾಗೂ ನೋಡುತ್ತಿದ್ದರು. ಯುವಕರು ತಮ್ಮ ಪ್ರತಿಭೆಯನ್ನು ಫೇಸ್‌ಬುಕ್, ವಾಟ್ಸಪ್‌ಗಳಿಗೆ ಸೀಮಿತಿಗೊಳಿಸಿದ್ದಾರೆ. ದೊಡ್ಡ ವೇದಿಕೆಯಲ್ಲಿ ಪ್ರದರ್ಶಿಸಲು ಉತ್ಸಾಹ ತೋರುತ್ತಿಲ್ಲ ಎಂದರು.

ಮುಖ್ಯಮಂತ್ರಿ ಅವರ ಮಹತ್ವಾಕಾಂಕ್ಷೆಯ ಯುವಜನರ ಕೌಶಲಾಭಿವೃದ್ಧಿ ಕಾರ್ಯಕ್ರಮಕ್ಕೆ ಯುವ ಸಬಲೀಕರಣ ಇಲಾಖೆಗೆ ₹15 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಕೌಶಲ ಅಭಿವೃದ್ಧಿ, ತರಬೇತಿ ನೀಡಿ ಅವರನ್ನು ಅಣಿಗೊಳಿಸಲಾಗುವುದು. ಯುವಜನರ ಮುಂದಿನ ಭವಿಷ್ಯಕ್ಕೆ ಅದು ಅನುಕೂಲವಾಗಲಿದೆ ಎಂದು ಹೇಳಿದರು.

ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಮೂರು ದಿನಗಳ ಕಾಲ ವಿವಿಧ ಸಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಜನಪದ ಹಾಡು, ಏಕಾಂ ನಾಟಕ, ಆಶುಭಾಷಣ, ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ಗಾಯನ, ಶಾಸ್ತ್ರೀಯ ವಾದನ, ಹಾರ್ಮೋನಿಯಂ ಮತ್ತು ಗಿಟಾರ್‌ ವಾದನ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗುತ್ತದೆ. ರಾಜ್ಯದ 30 ಜಿಲ್ಲೆಗಳ ನೂರಾರು ಸ್ಪರ್ಧಿಗಳು ಭಾಗವಹಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್, ನಗರಾಭಿವೃದ್ಧಿ ಪ್ರಾಧಿಕಾರದ ಆಧ್ಯಕ್ಷ ಬಿ. ನರಸಿಂಹಮೂರ್ತಿ ,, ಎಸ್ಪಿ ಡಾ. ಸಂಜೀವ್ ಎಂ ಪಾಟೀಲ್, ರಾಜ್ಯ ಯುವಜನ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಾಜಿ, ಉಡುಪಿ ಅಧ್ಯಕ್ಷ ಮನೋಹರ್, ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಅಭಿಜಿತ್, ಡಾ. ಜಿ. ಶಂಕರ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಿ. ಜಗದೀಶ್ ಇದ್ದರು. ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಕ್ರಮಧಾರಿ ವಂದಿಸಿದರು.

ಎಲ್ಲ ಜಾತಿ, ಸಮಾಜ ಸೇರಿದಾಗ ಭ್ರಾತೃತ್ವ 
 
ಕೆಲವೇ ಕೆಲವು ಸಮಯದಾಯ ಮತ್ತು ಜಾತಿಯವರು ಸೇರಿ ನಡೆಸುವ ಕಾರ್ಯಕ್ರಮವನ್ನು ಭ್ರಾತೃತ್ವ ಬೆಸೆಯುವ ಕಾರ್ಯಕ್ರಮ ಎನ್ನಲಾಗದು. ಹಾಗೆ ಮಾಡಿದರೆ ಅದು ಒಡೆಯುವ ಕೆಲಸ ಆಗುತ್ತದೆ. ಭ್ರಾತೃತ್ವ ಎಂದರೆ ಎಲ್ಲ ಸಮಾಜ, ಎಲ್ಲ ಜಾತಿ, ಧರ್ಮದವರು ಸೇರಿ ಎಲ್ಲರ ಒಳಿತಿಗಾಗಿ ಮಾಡುವ ಕಾರ್ಯಕ್ರಮ.
ಪ್ರಮೋದ್ ಮಧ್ವರಾಜ್, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT