ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಕಚ್ಚಿದ ರಾಗಿ: ರೈತರಲ್ಲಿ ಆತಂಕ

Last Updated 1 ಡಿಸೆಂಬರ್ 2017, 5:18 IST
ಅಕ್ಷರ ಗಾತ್ರ

ಪಾಂಡುರಂಗಯ್ಯ ಎ.ಹೊಸಹಳ್ಳಿ

ತುರುವೇಕೆರೆ: ಅಕಾಲಿಕ ಮಳೆ ಮತ್ತು ಹವಾಮಾನದ ವೈಪರಿತ್ಯದಿಂದಾಗಿ ತಾಲ್ಲೂಕಿನ ಬಹುತೇಕ ಭಾಗದ ಫಸಲಿಗೆ ಬಂದ ರಾಗಿ ಪೈರು ನೆಲಕಚ್ಚಿ ಕೈಗೆ ಬಂದ ತುತ್ತು ಬಾಯಿಗೆ ಸಿಗದಂತಾಗಿ ರೈತರು ಆತಂಕಕ್ಕೀಡಾಗಿದ್ದಾರೆ.

ಕಳೆದ ಎರಡು ವರ್ಷಗಳಿಂದ ಸರಿಯಾಗಿ ಮಳೆ ಬೆಳೆಯಾಗದೆ ರಾಗಿ ಮತ್ತು ಹುಲ್ಲಿಗೆ ವಿಪರೀತ ಬೇಡಿಕೆ ಹೆಚ್ಚಿದ್ದರಿಂದ ಜನರು ರಾಗಿ ಬೆಳೆಯಲು ಹೆಚ್ಚಿನ ಉತ್ಸುಕತೆ ತೋರಿದರು. ಆದರೆ ಕಾಕತಾಳೀಯವೊ ಎಂಬಂತೆ ಈ ಬಾರಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾದ್ದರಿಂದ ಹೆಚ್ಚಿನ ಸಂಖ್ಯೆಯ ರೈತರು ರಾಗಿ ಬಿತ್ತನೆ ಮಾಡಿದ್ದರು. ಅದಕ್ಕೆ ಒಳ್ಳೆಯ ಮಳೆ ಬಿದ್ದು ಉತ್ತಮ ಫಸಲು ಸಿಗುವ ಸೂಚನೆಯೂ ದೊರೆತಂತ್ತಿತ್ತು.

ಈ ವೇಳೆಗೆ ಅಕ್ಟೋಬರ್ ಅಂತ್ಯದಲ್ಲಿ ಅಕಾಲಿಕ ಮಳೆ ಸುರಿದರೆ ಅದೇ ನವೆಂಬರ್ ತಿಂಗಳ ಆರಂಭದಲ್ಲಿ ಸೈಕ್ಲೋನ್ ಹಿಡಿದು ಚೆನ್ನಾಗಿ ಕಾಳುಕಟ್ಟಿ ಪುಷ್ಕಳವಾಗಿ ಬೆಳೆದಿದ್ದ ರಾಗಿ ತೆನೆಯ ಭಾರಕ್ಕೆ ನೆಲಕಚ್ಚಿ ರೈತರನ್ನು ಮತ್ತೂ ಚಿಂತೆಗೀಡು ಮಾಡಿತು. ಎಂಆರ್ ರಾಗಿಯನ್ನು ಜೂನ್-ಜುಲೈನಲ್ಲಿ ಬಿತ್ತನೆ ಮಾಡುತ್ತಾರೆ. ಇದು 125 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಆಗೆಯೇ ಜಿಪಿಯು28 ಮತ್ತು ಜಿಪಿಯು48ನ್ನು ಜುಲೈ ಮತ್ತು ಆಗಸ್ಟ್ ಆರಂಭದಲ್ಲಿ ಬಿತ್ತನೆಯಾಗಿ 110 ದಿನಗಳಲ್ಲಿ ಕಟಾವು ಮಾಡಬಹುದು. ಇವೇ ತಾಲ್ಲೂಕಿನ ಪ್ರಮುಖ ಆಹಾರ ಬೆಳೆಯೂ ಆಗಿವೆ.

ಈ ಬಾರಿ ಜೂನ್‌ನಿಂದಲೇ ಮಳೆ ಪ್ರಾರಂಭವಾದ್ದರಿಂದ ಎಂಆರ್, ಜಿಪಿಯು28 ಮತ್ತು ಜಿಪಿಯು48 ರಾಗಿ ಬೆಳೆಯನ್ನು ಹೆಚ್ಚು ಅಂತರವಾಗಿ ರೈತರು ಪೈರು ನಾಟಿ ಮಾಡಿದ್ದರಿಂದ ರಾಗಿ ಆಳೆತ್ತರಕ್ಕೆ ಬೆಳೆದು ನಿಂತು. ಒಳ್ಳೆಯ ಇಳುವರಿ ಸಿಗುವ ಭರವಸೆ ಮೂಡಿಸಿದ್ದು, ಇನ್ನೇನು ರಾಗಿ ತೆನೆ ಬಲಿಯುವ ಮುನ್ನವೇ ತೆನೆಯ ಬಾರಕ್ಕೆ ಪೈರು ನಡಮುರಿು ಬಿದ್ದಿದೆ. ಇನ್ನೂ ಕೆಲವು ಭಾಗಗಳಲ್ಲಿ ಚೆನ್ನಾಗಿ ಬಲಿತ ಪೈರಿನ ಹೊಲವೂ ನೆಲಕ್ಕಚ್ಚಿದೆ. ಜತೆಗೆ ಹೊಲದ ಮಧ್ಯೆ ಅಕ್ಕಡಿ ಸಾಲುಗಳಲ್ಲಿ ಬೆಳೆದ ಅವರೆ ಬಳ್ಳಿ ರಾಗಿ ಪೈರಿಗೆ ಹಬ್ಬಿ ಹೊಲಮಲಗಿದೆ.

ಗದ್ದೆ ಬಯಲಲ್ಲೂ ಬಿತ್ತನೆ: ಇದೆ ಮೊದಲ ಬಾರಿಗೆ ತಾಲ್ಲೂಕಿನ ಮುನಿಯೂರು, ತಾಳ್ಕೆರೆ, ಮಾಯಸಂದ್ರ, ಕೊಂಡಜ್ಜಿ, ಸಾರಿಗೇಹಳ್ಳಿ, ನಾಗಲಾಪುರ, ಮಲ್ಲಾಘಟ್ಟ ಅಮಾನೀಕೆರೆ, ಮಾವಿನಕೆರೆ, ಸಂಪಿಗೆ, ತುರುವೇಕೆರೆ ಗದ್ದೆ ಬಯಗಳಲ್ಲಿ ಸಂಪೂರ್ಣ ರಾಗಿಯನ್ನೇ ಬಿತ್ತಿದ್ದಾರೆ. ಈ ಬಾರಿ ಹೇಮಾವತಿ ನೀರನ್ನು ಕೆರೆಗಳಿಗೆ ಬಿಡುವುದಿಲ್ಲವೆಂಬ ಸುದ್ದಿ ಎಲ್ಲೆಡೆ ಹಬ್ಬಿ ರೈತರು ರಾಗಿ ಬೆಲೆ ಸಿಗದಿದ್ದರೂ ಚಿಂತೆಯಿಲ್ಲ ದನ–ಕರುಗಳಿಗೆ ಹುಲ್ಲಾದರೂ ಆಗಲೆಂದು ರಾಗಿ ಬಿತ್ತನೆಗೆ ಮುಂದಾದರು. ಆಗಾಗಿ 1000 ಹೆಕ್ಟೇರ್‌ಗೂ ಹೆಚ್ಚಿನ ಗದ್ದೆ ಬಯಲಲ್ಲಿ ರಾಗಿ ದಾಖಲೆ ಬಿತ್ತನೆಯಾಗಿದೆ.

ತಾಲ್ಲೂಕಿನ ದಬ್ಬೇಘಟ್ಟ, ಅರೆಮಲ್ಲೆನಹಳ‍್ಳಿ, ಕಣತೂರು, ಮೇಲಿನವಳಗೇರಹಳ್ಳಿ, ಬೆನಕಿನಕೆರೆ, ಲಕ್ಷ್ಮೀದೇವರಹಳ‍್ಳಿ, ಬೆಂಡೆಕೆರೆ, ಮಾಯಸಂದ್ರ ಮತ್ತು ಅದೇ ಹೋಬಳಿಯ ಜಡೆಯ, ಭೈರತಹೊಸಹಳ‍್ಳಿ, ವಿಠಲಾಪುರ, ಮಲ್ಲೇಹಳ್ಳಿ, ಅಂಚಿನಹಳ‍್ಳಿ, ದೊಡ್ಡಶೆಟ್ಟಿಕೆರೆ, ನಾಗಲಾಪುರ, ಶೆಟ್ಟಗೊಂಡನಹಳ‍್ಳಿ, ಸೀಗೇಹಳ‍್ಳಿ ದಂಡಿನಶಿವರ ಹೋಬಳಿ ಅರಕೆರೆ, ಕಲ್ಕೆರೆ, ಸಿದ್ದಾಪುರ, ಬಳ್ಳೆಕಟ್ಟೆ, ಅರಿಗೊಂಡನಹಳ‍್ಳಿ, ಹುಲ್ಲೇಕೆರೆ, ಯಲದಬಾಗಿ, ಜಕ್ಕನಹಳ‍್ಳಿ, ಸಂಪಿಗೆ ಹೊಸಹಳ‍್ಳಿ ,ಅರೆಕುರುಬರಹಳ್ಳಿ, ತಾಳಕೆರೆ, ದುಂಡ, ಕಸಬಾದ ಬಾಣಸಂದ್ರ, ಲೋಕಮ್ಮನಹಳ‍್ಳಿ, ಎ.ಹೊಸಹಳ‍್ಳಿ, ಮುನಿಯೂರು, ಕಲ್ಲಬೋರನಹಳ‍್ಳಿ, ಸುಂಕಲಾಪುರ, ಮದಾಪಟ್ಟಣ, ಅರಳೀಕೆರೆ, ಮಲ್ಲಾಘಟ್ಟ, ಗಂಗನಹಳ‍್ಳಿ, ತಾವರೆಕೆರೆಗಳಲ್ಲಿ ಸೇರಿದಂತೆ ತಾಲ್ಲೂಕಿನ ಎಲ್ಲ ಭಾಗಗಳಲ್ಲಿಯೂ ರಾಗಿ ನೆಕ್ಕೆ ಮಲಗಿದೆ.

ಇಲಿ, ಹೆಗ್ಗಣ ಪಾಲಾದ ತೆನೆ: ಚೆನ್ನಾಗಿ ಬಲಿತ ರಾಗಿ ನೆಲ ಕಚ್ಚಿದ್ದರಿಂದ ಇಲಿ, ಹೆಗ್ಗಣಗಳು ಹೊಲದ ತುಂಬೆಲ್ಲಾ ಬೊನುಗಳನ್ನು ಮಾಡಿಕೊಂಡು ರಾಗಿ ತೆನೆಯನ್ನು ಕತ್ತರಿಸಿ ಅಲ್ಲಲ್ಲಿ ಅರ್ಧಂಬರ್ದ ರಾಗಿ ಇಲುಕುಗಳನ್ನು ತಿಂದು ಹಾಕಿರುವ ಕುರುಹುಗಳು ಕಾಣಸಿಗುತ್ತವೆ.

ನವಿಲು, ಅಳಿಲುಗಳ ಸಾಲು ಹಿಂಡು: ತೆನೆಯ ಬಾರಕ್ಕೆ ಮಲಗಿರುವ ಯಾವುದೇ ರಾಗಿ ಹೊಲಕ್ಕೂ ಹೋದರೂ ಗಿಳಿ, ನವಿಲು ಸೇರಿದಂತೆ ಅನೇಕ ಪಕ್ಷಿಗಳು ರಾಗಿ ತೆನೆಯ ಕಾಳುಗಳನ್ನು ಹೆಕ್ಕಿತಿನ್ನುವುದನ್ನು ಕಾಣಬಹುದಾಗಿದೆ. ಅಲ್ಲದೆ ಅಳಿಲು ಮತ್ತು ಇರುವೆಗಳು ಸಹ ನೆಲಕ್ಕೆ ಬಿದ್ದಿರುವ ರಾಗಿ ಪೈರನ್ನು ವಡಚಿ ಬರಲು ಮಾಡಿವೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಾರೆ.

ಹೊಲ ಕೊಯ್ಲಿಗೆ ಹಿಂದೇಟಾಕುವ ಆಳು: ಆಳೆತ್ತರಕ್ಕೆ ಬೆಳೆದು ನೆಲ ಕಚ್ಚಿರುವ ರಾಗಿ ಪೈರನ್ನು ದಿನಗಟ್ಟಲೆ ಬಗ್ಗಿ ಕಟಾವು ಮಾಡುವುದು ಕಷ್ಟವಾಗುವುದೆಂದು ಯಾವ ಕೆಲಸದ ಆಳುಗಳು ಹೆಚ್ಚಿನ ಕೂಲಿ ಕೊಡುತ್ತೇನೆಂದು ಹೇಳಿದರೂ ಹೊಲ ಕೊಯ್ಲಿಗೆ ಬರುತ್ತಿಲ್ಲ. ಆಗೆಯೇ ಯಂತ್ರದಲ್ಲಿ ಹೊಲ ಕಟಾವು ಮಾಡಿಸೋಣವೆಂದರೆ ಇಡಿ ಹೊಲವೆಲ್ಲಾ ಮಲಗಿದೆ. ಓಣಗಿದ ಹೊಲವನ್ನು ಹಾಗೆಯೇ ಬಿಟ್ಟರೆ ಪೈರು ಗೆದ್ದಲಿಡು ರಾಗಿ, ಹುಲ್ಲು ಎರಡೂ ಕೈಗೆ ಸಿಗದಂತಾಗುತ್ತದೆಂಬ ಕೊರಗು ರೈತರಲ್ಲಿ ಕಾಡುತ್ತಿದೆ.

ಇನ್ನೂ ಬಲಿಯದ ರಾಗಿ: ತಡವಾಗಿ ಬಿತ್ತನೆಯಾದ ಪೈರುಗಳು ಕಾಳುಕಟ್ಟುವ ಸಮಯಕ್ಕೆ ಸರಿಯಾಗಿ ಮಳೆ ಕೈಕೊಟ್ಟದ್ದರಿಂದ ರಾಗಿ ಪೈರು ಬಾಡಲಾರಂಭಿಸಿವೆ. ಹೆಚ್ಚಿನ ಫಸಲು ನಿರೀಕ್ಷೆಯಲ್ಲಿದ್ದ ರೈತರಿಗೆ ತಣ‍್ಣೀರೆರಚಿದೆ. 20 ದಿನಗಳ ಹಿಂದೆ ಸೊನೆ ಮಳೆಯಾಗಿದ್ದರು ಕೂಡ ತಕ್ಕಮಟ್ಟಿನ ಫಸಲಾದರೂ ಕೈಗೆ ಸಿಗುತಿತ್ತು ಎನ್ನುವ ರೈತರ ಲೆಕ್ಕಾಚಾರ ಹುಸಿಯಾಗಿದೆ. ತಾಲ್ಲೂಕಿನ ಕೊಳಘಟ್ಟ ಮತ್ತು ಆನೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಾಗಗಳಲ್ಲಿನ ರಾಗಿ ತೆನೆ ಬಲಿಯದೆ ಬಾಡಿದೆ.

* * 

ತಾಲ್ಲೂಕಿನ 4 ಹೋಬಳಿಗಳಲ್ಲೂ ಶೇ 100 ರಷ್ಟು ರಾಗಿ ಬಿತ್ತನೆಯಾಗಿದೆ. ಉತ್ತಮ ಫಸಲು ಕೈ ಸೇರುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ.
ಡಿ.ಹನುಮಂತರಾಯಪ್ಪ, ಕೃಷಿ ಸಹಾಯಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT