ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ ಬೆಳೆಗೆ ಹೆಚ್ಚಿದ ನಂಜಾಣು ರೋಗ

Last Updated 1 ಡಿಸೆಂಬರ್ 2017, 5:25 IST
ಅಕ್ಷರ ಗಾತ್ರ

ನಿಡಗುಂದಿ: ತೊಗರಿ ಬೆಳೆಗೆ ಸೀಡಿ ರೋಗ ನಿಡಗುಂದಿ ಭಾಗದಲ್ಲಿ ಹೆಚ್ಚಾಗಿದ್ದು, ಕಾಳು ಬಿಡುವ ಸಮಯದಲ್ಲಿ ತೊಗರಿ ಬೆಳೆ ಒಣಗಿ ನಿಂತ ಹಲವು ದೃಶ್ಯಗಳು ಈ ಭಾಗದಲ್ಲಿ ಕಾಣಸಿಗುತ್ತಿವೆ.

ಸಮೀಪದ ಹೆಬ್ಬಾಳ, ಕಿರಿಶ್ಯಾಳ, ನಿಡಗುಂದಿ, ವಂದಾಲ, ಚಿಮ್ಮಲಗಿ, ಮನಗೂಳಿ ಭಾಗದಲ್ಲಿ ತೊಗರಿ ಬೆಳೆಗೆ ಈ ನಂಜಾಣು ರೋಗ (ಸೀಡಿ) ಕಂಡು ಬಂದಿದ್ದು, ಬೆಳೆದ ತೊಗರಿ ಸಂಪೂರ್ಣ ಹಾಳಾಗಿದೆ.

ಹೆಬ್ಬಾಳ ಗ್ರಾಮದಲ್ಲಿ ರೈತ ಶಿವಪ್ಪ ಇಂಗಳೇಶ್ವರ ಅವರಿಗೆ ಸೇರಿದ ಮೂರು ಎಕರೆ, ಕಿರಿಶ್ಯಾಳ ಗ್ರಾಮದ ಪವಾಡೆಪ್ಪ ಕೋಲಂಗಿ ಅವರಿಗೆ ಸೇರಿದ ನಾಲ್ಕು ಎಕರೆ, ಆರೇಶಂಕರ ಗ್ರಾಮದ ನಿಂಗಪ್ಪ ತಳವಾರ ಅವರಿಗೆ ಸೇರಿದ 9 ಎಕರೆ, ಹೆಬ್ಬಾಳ ಗ್ರಾಮದ ಎಂ.ಎಸ್. ಕುಂಬಾರ ಅವರ ಹೊಲದಲ್ಲಿಯ ತೊಗರಿಗೆ ಸೀಡಿ ರೋಗ ಬಂದಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

‘ಗುಳ್ಯಾಳ ತಳಿಯ ತೊಗರಿ ಬೇಳೆ ಬಿತ್ತನೆ ಮಾಡಿದ್ದೇವು, ಮಳೆಯೂ ಚೆನ್ನಾಗಿ ಆಗಿತ್ತು, ತುಟ್ಟಿ ಎಣ್ಣಿ (ರಾಸಾಯನಿಕ ಸಿಂಪಡಣೆ) ತಂದು ತೊಗರಿಗೆ ಹೊಡೆದಿದ್ದೇವು, ಆದರೆ ಏನ ಮಾಡೋದ್ರೀ...ಕಾಳು ಆಗುವ ಸಮಯದಾಗ ಸೀಡಿ ರೋಗ ಬಂದ ಬಿಟ್ಟ್ರೈತ್ರೀ..ಇಡೀ ತೊಗರಿ ಬೆಳೆನೆ ಒಣಗಿ ಕೊಳೆತು ಹೋಗೈತ್ರೀ’ ಎಂದು ಹೆಬ್ಬಾಳದ ರೈತ ಶಿವಪ್ಪ ಇಂಗಳೇಶ್ವರ ಗೋಳು ತೋಡಿಕೊಂಡರು.

ತೊಗರಿಯೇ ಹೆಚ್ಚು ಬಿತ್ತನೆ: ‘ಬಸವನಬಾಗೇವಾಡಿ ತಾಲ್ಲೂಕಿನಾ ದ್ಯಂತ ಖುಷ್ಕಿ ಜಮೀನಿನಲ್ಲಿ 30,205 ಹೆಕ್ಟೇರ್ ಹಾಗೂ ನೀರಾವರಿ ಜಮೀನಿನಲ್ಲಿ 1404 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ಬೆಳೆಯಲಾಗಿದೆ. ತಾಲ್ಲೂಕಿನಲ್ಲಿ ತೊಗರಿ ಬೆಳೆಯೇ ಹೆಚ್ಚು ಬಿತ್ತನೆ ಮಾಡಲಾಗಿದ್ದು, ನಾನಾ ಕಡೆ ತೊಗರಿ ಬೆಳೆಗೆ ಸೀಡಿ ರೋಗ ಬಂದಿದೆ’ ಎಂದು ಬಸವನಬಾಗೇವಾಡಿ ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಎಚ್‌. ಯಡಹಳ್ಳಿ ಮಾಹಿತಿ ನೀಡಿದರು.

‘ ಈ ಬಗ್ಗೆ ಸರ್ವೆ ಕಾರ್ಯ ನಡೆದಿದ್ದು, ಇಷ್ಟೇ ಪ್ರಮಾಣದಲ್ಲಿ ಸೀಡಿ ರೋಗ ಬಂದು ತೊಗರಿ ಹಾಳಾಗಿದೆ ಎಂಬ ಬಗ್ಗೆ ನಿಖರ ಮಾಹಿತಿಯಿಲ್ಲ, ಅಂದಾಜಿನ ಪ್ರಕಾರ ಶೇ 15 ರಿಂದ ಶೇ 20 ರಷ್ಟು ತೊಗರಿ ಬೆಳೆಗೆ ನಂಜಾಣು ರೋಗ ಬಂದಿದೆ’ ಎಂದು ಹೇಳಿದರು.

‘ಖುಷ್ಕಿ ಜಮೀನಿನಲ್ಲಿ ಹೆಚ್ಚು ಹಣ ನೀಡುವ ಬೆಳೆಯಾಗಿರುವ ತೊಗರಿ ಬೆಳೆಯನ್ನು ತಾಲ್ಲೂಕಿನಾದ್ಯಂತ ಹೆಚ್ಚಾಗಿ ಬೆಳೆಯಲಾಗುತ್ತಿದೆ. ನಂಜಾಣು ರೋಗಕ್ಕೆ ಯಾವುದೇ ಔಷಧಿಯಿಲ್ಲ, ಬೆಳೆ ಬದಲಾವಣೆಯೇ ಇದಕ್ಕಿರುವ ಏಕೈಕ ಮದ್ದು, ಇದು ಮಣ್ಣಿನಿಂದ ಬರುವ ರೋಗವಾಗಿದೆ. ಒಂದೇ ಹೊಲದಲ್ಲಿ ತೊಗರಿಯನ್ನೇ ಪುನಃ ಪುನಃ ಬೆಳೆಯಬಾರದು. ಮಳೆ ನೀರು ಹೊಲದಲ್ಲಿ ನಿಲ್ಲದಂತೆ ಕ್ರಮ ಕೈಗೊಳ್ಳಬೇಕು’ ಎಂದರು.

‘ಟಿ.ಎಸ್.ಆರ್.-3 ತಳಿಯ ತೊಗರಿಗೆ ಸೀಡಿ ರೋಗ ಕಡಿಮೆಯಿದೆ, ನಿಡಗುಂದಿ ಭಾಗದಲ್ಲಿ ಈ ಬಾರಿ ಸ್ವಲ್ಪ ಹೆಚ್ಚಾಗಿ ತೊಗರಿಗೆ ಸೀಡಿ ರೋಗ ಕಾಣಿಸಿಕೊಂಡಿದೆ’ ಎಂದು ಸಹಾಯಕ ಕೃಷಿ ಅಧಿಕಾರಿ ಎನ್‌.ಟಿ. ಗೌಡರ ಹೇಳಿದರು. ತೊಗರಿಗೆ ಕಡ್ಡಾಯವಾಗಿ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು ಎಂದು ಅವರು ಹೇಳಿದರು.

ಪರಿಹಾರಕ್ಕೆ ಒತ್ತಾಯ: ಬಸವನ ಬಾಗೇವಾಡಿ ತಾಲ್ಲೂಕು ತೊಗರಿ ಬೆಳೆಯ ಕಣಜವಾಗಿದೆ, ಈ ಭಾಗದಲ್ಲಿ ತೊಗರಿಗೆ ಬಂದಿರುವ ನಂಜಾಣು ರೋಗದಿಂದ ರೈತರಿಗೆ ಅಪಾರ ಹಾನಿಯಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಬೆಳೆ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಆಲೂರ ತಿಳಿಸಿದರು.

* * 

ರೈತರು ಹೆಚ್ಚಾಗಿ ಸ್ಥಳೀಯವಾಗಿ ಸಿಗುವ ಗುಳ್ಯಾಳ ತಳಿಯ ತೊಗರಿ ಬಿತ್ತನೆ ಮಾಡುತ್ತಾರೆ, ಗುಳ್ಯಾಳ ತಳಿಗೆ ಸೀಡಿ ರೋಗ ಬೇಗನೆ ಹಬ್ಬುತ್ತದೆ
ಎನ್‌.ಟಿ. ಗೌಡರ ಸಹಾಯಕ ಕೃಷಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT