ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಗಂಬರ್ ಪವಿತ್ರ ಕೇಶ ದರ್ಶನಕ್ಕೆ ಕ್ಷಣಗಣನೆ

Last Updated 1 ಡಿಸೆಂಬರ್ 2017, 5:34 IST
ಅಕ್ಷರ ಗಾತ್ರ

ವಿಜಯಪುರ: ಚಾರಿತ್ರಿಕ ಐತಿಹ್ಯ ಹೊಂದಿರುವ ಗುಮ್ಮಟ ನಗರಿ ಪ್ರವಾದಿ ಮಹಮ್ಮದ್‌ ಪೈಗಂಬರರ ‘ಮುಯೆ ಮುಬಾರಕ’ (ಪೈಗಂಬರರ ಕೇಶ) ದರ್ಶನಕ್ಕೆ ಶೃಂಗಾರಗೊಂಡಿದೆ.

ಪವಿತ್ರ ಕೇಶಗಳಿರುವ ಆಸಾರ್‌ ಮಹಲ್‌ ವಿದ್ಯುತ್‌ ದೀಪಗಳ ಬೆಳಕಿನಿಂದ ಕಂಗೊಳಿಸುತ್ತಿದೆ. ಹೊರ ರಾಜ್ಯಗಳ ಭಕ್ತರು ಸಹ ಪೈಗಂಬರರ ಕೇಶ ದರ್ಶನಕ್ಕೆ ನಗರಕ್ಕೆ ಬಂದಿದ್ದು, ಬಾಗಿಲು ತೆಗೆಯುವುದನ್ನೇ ಕಾತರದಿಂದ ಕಾದಿದ್ದಾರೆ. ಮಹಮದ್‌ ಪೈಗಂಬರರ ಪವಿತ್ರ ಕೇಶಗಳು ಇರುವುದು ಭಾರತದಲ್ಲಿ ಎರಡು ಕಡೆ ಮಾತ್ರ. ಕಾಶ್ಮೀರದ ಹಜರತ್ ಬಾಲ್ ಮಸೀದಿ ಹಾಗೂ ನಗರದ ಆಸಾರ್ ಮಹಲ್‌ನಲ್ಲಿ.

‘ಈದ್ ಮಿಲಾದುನ್ನಬಿ’ ಅಂಗವಾಗಿ ಆಸಾರ್ ಮಹಲ್‌ ಉರುಸು ಶುಕ್ರವಾರ ಮುಸ್ಸಂಜೆ ಆರಂಭಗೊಳ್ಳಲಿದ್ದು, ಪವಿತ್ರ ಸಂದಲ್ (ಗಂಧದ ಕಾರ್ಯಕ್ರಮ) ಶ್ರದ್ಧಾ-ಭಕ್ತಿಯಿಂದ ನೆರವೇರಲಿದೆ.

ಆಸಾರ್‌ ಮಹಲ್‌ನಲ್ಲಿ ವರ್ಷಕ್ಕೊಮ್ಮೆ ಜರುಗುವ ಉರುಸ್‌ ಸಂದರ್ಭ ಪೈಗಂಬರರ ‘ಪವಿತ್ರ ಕೇಶ’ಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರವಾದಿಯ ಕೇಶ ದರ್ಶನ ಪಡೆದು, ಧನ್ಯತಾಭಾವ ಹೊಂದಲು ನಗರ, ಜಿಲ್ಲೆ ಸೇರಿದಂತೆ ಆಸುಪಾಸಿನ ಜಿಲ್ಲೆಗಳ ಮುಸ್ಲಿಮರು ವಿಜಯಪುರಕ್ಕೆ ಈಗಾಗಲೇ ಬಂದಿದ್ದಾರೆ.

ಶುಕ್ರವಾರ ಮುಸ್ಸಂಜೆಯಿಂದ ಆರಂಭವಾಗುವ ‘ಕೇಶ ದರ್ಶನ’ ಶನಿವಾರ ನಸುಕಿನವರೆಗೂ ನಡೆಯಲಿದೆ. ಪವಿತ್ರ ಕೇಶಗಳಿರುವ ಪೆಟ್ಟಿಗೆ ದರ್ಶನಕ್ಕೆ ಮುಸ್ಲಿಮರು ಮೈ ಕೊರೆವ ಚಳಿಯನ್ನು ಲೆಕ್ಕಿಸದೆ ರಾತ್ರಿಯಿಡಿ ಪಾಳಿಯಲ್ಲಿ ಕಾಯುವುದು ಇಲ್ಲಿನ ವಿಶೇಷ.

ಸಂಜೆ 6ಕ್ಕೆ ಆರಂಭ: ಪ್ರತಿ ವರ್ಷ ಆಸಾರ್ ಮಹಲ್‌ನಲ್ಲಿ ಉರುಸ್ ವಿಜೃಂಭಣೆಯಿಂದ ಜರುಗುತ್ತದೆ. ರಾಜ್ಯದ ಹಲ ಜಿಲ್ಲೆಗಳು ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್‌ನಿಂದಲೂ ಸಹ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡಿ ಕೇಶಗಳ ದರ್ಶನ ಪಡೆಯುತ್ತಾರೆ.

ಶುಕ್ರವಾರ ಮುಸ್ಸಂಜೆ 6ಕ್ಕೆ ಗಂಧದ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಆಸಾರ್ ಮಹಲ್‌ನಲ್ಲಿರುವ ಪ್ರವಾದಿ ಮೊಹ್ಮದ್ ಪೈಗಂಬರರ ಪವಿತ್ರ ಕೇಶಗಳನ್ನು ಇರಿಸಿದ ಪೆಟ್ಟಿಗೆಗಳಿರುವ ಕೋಣೆಗಳ ಬಾಗಿಲು ತೆರೆಯಲಾಗುತ್ತದೆ. ಅಸದಳ ಭಕ್ತರು ಈ ಪವಿತ್ರ ಕೇಶಗಳ ದರ್ಶನ ಪಡೆಯಲಿದ್ದಾರೆ.

ಶನಿವಾರ ಉರುಸ್‌ ನಡೆಯಲಿದೆ. ಮುಸ್ಸಂಜೆ ಸಮಯ ಆಸಾರ್ ಮಹಲ್‌ನಲ್ಲಿರುವ ಸುಂದರ ನೀರಿನ ಕೊಳದಲ್ಲಿ ಸಣ್ಣ ಸಣ್ಣ ಜಹಾಜ್ (ಹಡಗುಗಳು) ಬಿಡುವ ಮೂಲಕ ಭಕ್ತರು ಹರಕೆ ತೀರಿಸುತ್ತಾರೆ. ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ ಎಂದು ಮುತವಲ್ಲಿ ಇಸಾಕ ಖಾದ್ರಿ ಮಾಹಿತಿ ನೀಡಿದರು.

‘ಅಲ್ಲಾಹುನ ಕೃಪೆಗೆ ಪಾತ್ರರಾಗಿದ್ದ ಮೀರ್ ಮೊಹ್ಮದ್ ಸ್ವಾಲೆಹ ಹಮ್ದಾನಿ 1596ರ ಆಗಸ್ಟ್ 15ರಂದು ವಿಜಯಪುರ ನಗರಕ್ಕೆ ಭೇಟಿ ನೀಡಿದ್ದರು. ಇದಕ್ಕೂ ಮುನ್ನವೇ ಆದಿಲ್‌ಶಾಹಿ ಅರಸ ಇಬ್ರಾಹಿಂ ಆದಿಲ್‌ಶಾಹಿಗೆ ಸ್ವಪ್ನದಲ್ಲಿ ಅವರ ಬರುವಿಕೆಯ ಸೂಚನೆ ಸಿಕ್ಕಿರುತ್ತದೆ.

ಹಮ್ದಾನಿ ಸಂಗಡ ಕಸ್ತೂರಿಯಂತೆ ಸುವಾಸನೆ ಬೀರುವ ಪ್ರವಾದಿಯ ಕೇಶಗಳಿವೆ ಎಂಬುದು ತಿಳಿಯುತ್ತದೆ. ಈ ಸ್ವಪ್ನ ಘಟನೆ ನಡೆದ ತಕ್ಷಣವೇ ಇಬ್ರಾಹಿಂ ಆದಿಲ್‌ಶಾಹಿ, ಆ ಪುಣ್ಯ ಪುರುಷನನ್ನು ಭೇಟಿಯಾಗಿ ತನ್ನ ರಾಜ್ಯಕ್ಕೆ ಸ್ವಾಗತಿಸಿ, ಪೈಗಂಬರರ ಕೇಶಗಳ ದರ್ಶನ ಪಡೆದನು’ ಎಂಬ ಮಾಹಿತಿ ಇತಿಹಾಸದ ಪುಟಗಳಲ್ಲಿ ಲಭ್ಯವಿದೆ.

ಅರಬ್‌ನಿಂದ ಬಂದ ಎರಡು ಕೇಶಗಳನ್ನು ಪಡೆದ ಆದಿಲ್‌ಶಾಹಿ ಅರಸರು, ಒಂದನ್ನು ಕಾಶ್ಮೀರಕ್ಕೆ ಕಳುಹಿಸಿಕೊಟ್ಟು, ಇನ್ನೊಂದನ್ನು ತಮ್ಮಲ್ಲೇ ಇಟ್ಟುಕೊಂಡರು. ಧರ್ಮ ಗುರುಗಳಾದ ಹಜರತ್ ಖ್ವಾಜಾ ಅಂಬರ ಮನೆತನದವರಿಗೆ ‘ಮುಯೆ ಮುಬಾರಕದ’ ತಹವೀಲ್ದಾರಿ ಕೊಟ್ಟರು ಎಂಬ ಐತಿಹ್ಯವಿದೆ.

‘17ನೇ ಶತಮಾನದಲ್ಲಿ ತಹವೀಲ್ದಾರ, ಮುಶ್ರೀಫ, ಮುತ್ತವಲ್ಲಿ ಕುಟುಂಬಗಳಿಗೆ ಈ ಸಂದಲ್‌ ಕಾರ್ಯಕ್ರಮ ಆಚರಿಸಲು ಅಂದಿನ ಆದಿಲ್‌ಶಾಹಿ ಸಾಮ್ರಾಜ್ಯದ ದಿವಾನ ಮೊಹಮ್ಮದ ಶಾ ಬಾಷಾ–ಯೇ–ಘಾಜಿ ಫಿದ್ವಿ, ಜಾಫರ ಯಾರಖಾನ ಆದೇಶ ನೀಡಿದ್ದು, ಇದನ್ನು ಇನಾಂ ಕಮೀಷನ್ ಪುಣೆ ಅರ್ಚ್ಯು ರೆಕಾರ್ಡ್‌ ಇಲಾಖೆಯಲ್ಲಿ ನೋಂದಣಿ ಮಾಡಿಸಲಾಗಿದೆ. ಆಗಿನಿಂದಲೂ ಈ ಮೂರು ಮನೆತನದವರು ಒಟ್ಟಾಗಿ ಸಂದಲ್ ಆಚರಿಸುತ್ತಿದ್ದಾರೆ ಎಂದು ಮೊಹ್ಮದ್ ಯೂಸುಫ್‌ ಎಸ್‌.ತಹವೀಲದಾರ ತಿಳಿಸಿದರು.

* * 

ಸಂಪ್ರದಾಯದಂತೆ ಆಸಾರ್ ಮಹಲ್‌ನಲ್ಲಿ ಉರುಸ್‌ ಆಚರಿಸಲಾಗುತ್ತಿದೆ. ಪ್ರವಾದಿ ಅನುಯಾಯಿಗಳು ಅಸದಳ ಸಂಖ್ಯೆಯಲ್ಲಿ ಭಾಗಿಯಾಗುತ್ತಾರೆ
ಇಸಾಕ ಖಾದ್ರಿ ಮುತವಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT