ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟಾವಿಗೆ ಅಡ್ಡಿಯಾದ ಸೋನೆ ಮಳೆ

Last Updated 1 ಡಿಸೆಂಬರ್ 2017, 6:13 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಗುರುವಾರ ಸುರಿದ ಸೋನೆ ಮಳೆಯಿಂದಾಗಿ ರಾಗಿ ತೆನೆ ಕಟಾವಿಗೆ ಹಿನ್ನಡೆ ಉಂಟಾಗಿದೆ. ಅನಿರೀಕ್ಷಿತ ಮಳೆಯಿಂದಾಗಿ ಹೊಲಗಳಲ್ಲಿ ಕೊಯ್ಲು ಮಾಡಿದ್ದ ರಾಗಿ ಕಾಳು ನೆನೆದುಹೋಗಿವೆ.

ಬುಧವಾರ ಬೆಳಿಗ್ಗೆ ದಟ್ಟವಾದ ಮಂಜು ಕವಿದಿತ್ತು. ಬೆಳಿಗ್ಗೆ 8 ಗಂಟೆಯಾದರೂ, ವಾಹನ ಚಾಲಕರು ಹೆಡ್‌ಲೈಟ್ ಉರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿತ್ತು. ಮರಗಳಿಂದ ತೊಟ್ಟಿಡುತ್ತಿದ್ದ ನೀರನ್ನು ಕಂಡ ರೈತರು ಮಳೆ ಬರುವುದಿಲ್ಲ ಎಂದು ನಂಬಿದ್ದರು. ಹಾಗಾಗಿ ಕೊಯ್ದ ರಾಗಿ ಕಾಳನ್ನು ಕಟ್ಟುವ, ಒಣಗಿದ ಕಟ್ಟುಗಳನ್ನು ಗಾಳಿ ಉಡ್ಡೆಗೆ ಇಡುವ ಗೋಜಿಗೆ ಹೋಗಿರಲಿಲ್ಲ.

ಮಳೆ ಹೀಗೆಯೇ ಮುಂದುವರಿದರೆ ಕಟಾವಿಗೆ ಬಂದಿರುವ ರಾಗಿ ತೆನೆ ಮೊಳಕೆಯೊಡೆಯುವ ಸಂಭವ ಇದೆ. ಈ ಬಾರಿ ಹೊಲಗಳಲ್ಲಿ ರಾಗಿ ತೆನೆಗಳು ಎತ್ತರಕ್ಕೆ ಬೆಳೆದು ಬಿದ್ದುಹೋಗಿವೆ. ಅಂತಹ ಹೊಲಗಳಲ್ಲಿ ತೆನೆ ಬೇಗ ಮೊಳಕೆಯೊಡೆಯುತ್ತದೆ. ಅದರಿಂದ ರೈತರಿಗೆ ನಷ್ಟ ಉಂಟಾಗುತ್ತದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗುತ್ತದೆ.

ಬೆಲೆ ಕುಸಿತ: ಈ ಬಾರಿ ರಾಗಿ ಬಂಪರ್‌ ಬೆಳೆ ಬಂದಿರುವುದರಿಂದ ಮಾರುಕಟ್ಟೆಯಲ್ಲಿ ರಾಗಿ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಈ ಹಿಂದೆ ಉತ್ತಮ ಗುಣಮಟ್ಟದ ರಾಗಿ ಕ್ವಿಂಟಲ್‌ ಒಂದಕ್ಕೆ ₹ 3,700 ರಿಂದ ₹ 4,000ವರೆಗೆ ಮಾರಾಟವಾಗುತ್ತಿತ್ತು. ಆದರೆ ಇದೀಗ ₹ 2,000 ದಿಂದ ₹ 2,700ವರೆಗೆ ಮಾರಾಟವಾಗುತ್ತಿದೆ. ಇದರಿಂದ ರಾಗಿ ಬೆಳೆದ ರೈತರಿಗೆ ನಷ್ಟ ಉಂಟಾಗುತ್ತಿದೆ.

ಈ ಬಾರಿಯೂ ಮಳೆ ಕೈಕೊಡಬಹುದು ಎಂದು ತಿಳಿದ ರೈತರು ಹಿಂದಿನ ವರ್ಷ ಬೆಳೆದ ರಾಗಿಯನ್ನು ದಾಸ್ತಾನು ಮಾಡಿದ್ದರು. ರಾಗಿ ವ್ಯಾಪಾರಿಗಳೂ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ದಾಸ್ತಾನು ಮಾಡಿದ್ದರು. ಆದರೆ ಈ ಬಾರಿ ಮಳೆರಾಯ ಮೋಸ ಮಾಡಲಿಲ್ಲ. ಎಲ್ಲ ಕಡೆ ರಾಗಿ ಬೆಳೆ ಹುಲುಸಾಗಿ ಬಂದಿದೆ. ಸುಗ್ಗಿ ಆರಂಭವಾಗಿದೆ. ಇದನ್ನು ಗಮನಿಸಿದ ರೈತರು ಹಾಗೂ ವ್ಯಾಪಾರಿಗಳು ಬೆಲೆ ಕುಸಿತದ ಭಯದಿಂದ ಒಂದೇ ಸಲ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಇದು ಬೆಲೆ ಇಳಿಕೆಗೆ ಕಾರಣವಾಗಿದೆ.

ರಾಗಿ ಸುಗ್ಗಿ ಮುಗಿಯುವ ವೇಳೆಗೆ ಬೆಲೆಯಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂಬುದು ವ್ಯಾಪಾರಿಗಳ ಅಭಿಪ್ರಾಯ. ಇದರಿಂದಾಗಿ ಹಳೆ ರಾಗಿಯನ್ನು ಸಾಗಿಸುವ ಪ್ರಯತ್ನ ಎಲ್ಲ ಕಡೆ ನಡೆಯುತ್ತಿದೆ.

‘ರಾಗಿ ಉತ್ಪಾದನಾ ವೆಚ್ಚ ಗಗನಕ್ಕೇರಿದೆ. ಈಗಿನ ಬೆಲೆಯಲ್ಲಿ ಮಾರಾಟ ಮಾಡಿದರೆ ಹೆಚ್ಚು ನಷ್ಟವಾಗುತ್ತದೆ. ಬಂಪರ್‌ ಬೆಳೆಯಾದರೂ, ಅಧಿಕ ನಿರ್ವಹಣಾ ವೆಚ್ಚದ ಪರಿಣಾಮವಾಗಿ ನಷ್ಟ ಸಾಮಾನ್ಯವಾಗಿದೆ’ ಎಂದು ಕೃಷಿಕ ನಾರಾಯಣಸ್ವಾಮಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT