ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿಕುಂಡ ತುಳಿದು ಭಕ್ತ ಸಮೂಹ

Last Updated 1 ಡಿಸೆಂಬರ್ 2017, 6:54 IST
ಅಕ್ಷರ ಗಾತ್ರ

ಸಿರುಗುಪ್ಪ: ತಾಲ್ಲೂಕಿನ ಹಳೇಕೋಟೆ ಗ್ರಾಮದ ವೀರಭದ್ರಸ್ವಾಮಿಯ ರಥೋತ್ಸವದ ಅಂಗವಾಗಿ ಗುರುವಾರ ಬೆಳಗಿನ ಜಾವ 4.30ಕ್ಕೆ ಭಕ್ತರು ದೇವಸ್ಥಾನದ ಮುಂಭಾಗದ ಅಗ್ನಿಕೆಂಡವನ್ನು ತುಳಿದು ಭಕ್ತಿ ಸಮರ್ಪಿಸಿದರು.

ವೀರಗಾಸೆಯ ಪುರವಂತರು, ಅರ್ಚಕರು ಗರ್ಭಗುಡಿಯೊಳಗಿನ ಸ್ವಾಮಿಯ ಮುಂದೆ ಪ್ರಾರ್ಥಿಸಿ ಅಗ್ನಿಕುಂಡ ಪ್ರವೇಶಕ್ಕೆ ಅಪ್ಪಣೆ ಕೇಳುತ್ತಾರೆ. ಅಲ್ಲಿಂದ ವೀರಗಾಸೆ ಪುರವಂತರು ವೀರಭದ್ರ ನಾಮವನ್ನು ಜಪಿಸುತ್ತಾ ಅಗ್ನಿಕುಂಡವನ್ನು ಪ್ರದಕ್ಷಿಣೆ ಹಾಕಿದರು. ಬಳಿಕ ಸ್ವಾಮಿಯ ಉತ್ಸವ ಮೂರ್ತಿಯೊಂದಿಗೆ ಅರ್ಚಕರು ಕೆಂಡವನ್ನು ತುಳಿದರು. ಬಳಿಕ ಭಕ್ತರು ಸ್ನಾನ ಮಾಡಿ ಮಕ್ಕಳನ್ನು ಎತ್ತಿಕೊಂಡು ಕೆಂಡವನ್ನು ತುಳಿದು ಭಕ್ತಿ ಸಮರ್ಪಿಸಿದರು.

ಸುಮಾರು ನಾಲ್ಕು ಸಾವಿರ ಭಕ್ತರು ಕೆಂಡವನ್ನು ತುಳಿದರು. ರಥೋತ್ಸವ ಅಂಗವಾಗಿ ಸ್ವಾಮಿಗೆ ಅರ್ಚಕರು ಮಹಾರುದ್ರಾಭಿಷೇಕ, ವಿಶೇಷ ಪೂಜೆ, ಮಹಾಮಂಗಳರಾತಿ ಮಾಡಿದರು. ನಂತರ ಅಗ್ನಿ ಪುಟಾರಾಧನೆ ನಡೆಯಿತು. ಹರಕೆಯನ್ನು ತೀರಿಸಲು ಮಧ್ಯ ರಾತ್ರಿಯಿಂದ ಭಕ್ತರು ಜಮಾಯಿಸಿದ್ದರು. ದೇವಸ್ಥಾನದ ಸಮಿತಿಯು ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಿತ್ತು.

ರಥೋತ್ಸವ: ವೀರಭದ್ರ ಸ್ವಾಮಿಯ ಮಹಾರಥೋತ್ಸವವು ಬೆಳಿಗ್ಗೆ ವಿಜೃಂಭಣೆಯಿಂದ ಜರುಗಿತು. ಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಪಾದಗಟ್ಟೆ ವರೆಗೆ ಎಳೆಯಲಾಯಿತು. ರಥಕ್ಕೆ ಭಕ್ತರು ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ದೇವರಿಗೆ ಭಕ್ತರು ಉರುಳುಸೇವೆ, ದೀಡ್‌ನಮಸ್ಕಾರ, ಕೇಶಮುಂಡನೆ, ದವಸಧಾನ್ಯ ಕೊಟ್ಟು ಹರಕೆಯನ್ನು ಸಲ್ಲಿಸಿದರು.

ಆಂಧ್ರದ ಅನಂತಪುರ, ಕರ್ನೂಲು, ಬಳ್ಳಾರಿ, ಕೊಪ್ಪಳ, ರಾಯಚೂರು, ಕಲಬುರ್ಗಿ, ಯಾದಗಿರಿ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು. ರಥೋತ್ಸವದ ಬಳಿಕ ಭಕ್ತರು ಮರಿಸ್ವಾಮಿಮಠದ ಆವರಣ ಮತ್ತು ದೇವಸ್ಥಾನದ ಸುತ್ತಮುತ್ತ ಜನರಿಗೆ ಅನ್ನಸಂತರ್ಪಣೆ ನಡೆಸಿದರು. ಜಾತ್ರೆಗೆ ಆಗಮಿಸಿದ ಜನರು ಮಿಠಾಯಿ, ಬಳೆ, ಮಕ್ಕಳ ಆಟಿಕೆ ಸಾಮಾನುಗಳ ಖರೀದಿಯ ಭರಾಟೆಯಲ್ಲಿ ತೊಡಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT