ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ಬೆಲೆ ದಿಢೀರ್ ಕುಸಿತ: ರೈತರ ಆಕ್ರೋಶ

Last Updated 1 ಡಿಸೆಂಬರ್ 2017, 7:12 IST
ಅಕ್ಷರ ಗಾತ್ರ

ಗದಗ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರ ಈರುಳ್ಳಿ ಬೆಲೆ ದಿಢೀರ್‌ ಕುಸಿತ ಕಂಡಿದ್ದರಿಂದ ಆಕ್ರೋಶಗೊಂಡ ರೈತರು ಪ್ರತಿಭಟನೆ ನಡೆಸಿದರು. ಬೆಳಿಗ್ಗೆ ದಲ್ಲಾಳಿ ಅಂಗಡಿಗಳಲ್ಲಿ ಕ್ವಿಂಟಲ್‌ಗೆ ₹ 2,000ದಿಂದ ₹ 3,000ವರೆಗೆ ಈರುಳ್ಳಿ ಖರೀದಿಸಲಾಗುತ್ತಿತ್ತು. ಬುಧವಾರ ಕ್ವಿಂಟಲ್‌ಗೆ ಗರಿಷ್ಠ ಧಾರಣೆ ₹ 4,000 ಇತ್ತು. ಒಂದೇ ದಿನದಲ್ಲಿ ಬೆಲೆ ₹ 1 ಸಾವಿರ ಕುಸಿತವಾಗಿರುವುದನ್ನು ಕಂಡ ರೈತರು, ಖರೀದಿದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ರೈತರು ಮತ್ತು ಖರೀದಿದಾರರ ನಡುವೆ ಮಾತಿನ ಚಕಮಕಿ ನಡೆಯಿತು. ಸೂಕ್ತ ಬೆಲೆ ನೀಡದ ಖರೀದಿದಾರರನ್ನು ರೈತರು ತರಾಟೆಗೆ ತೆಗೆದುಕೊಂಡರು. ನಂತರ ಎ.ಪಿ.ಎಂ.ಸಿ ಸಿಬ್ಬಂದಿಪರಿಸ್ಥಿತಿ ತಿಳಿಗೊಳಿಸಿದರು.

ಸ್ಥಳಕ್ಕೆ ಬಂದ ಎ.ಪಿ.ಎಂ.ಸಿ ಕಾರ್ಯದರ್ಶಿ ಮಂಜುನಾಥ ಮತ್ತು ಉಪಾಧ್ಯಕ್ಷ ನಿಂಗನಗೌಡ ಹಿರೇಮನಿ ಪಾಟೀಲ ರೈತರ ಮನವೋಲಿಸಿ, ಖರೀದಿದಾರರ ಜತೆ ಚರ್ಚಿಸಿ, ಉತ್ತಮ ದರ ನೀಡುವಂತೆ ಸೂಚಿಸಿದರು. ನಂತರ ಈರುಳ್ಳಿ ಖರೀದಿ ಪ್ರಕ್ರಿಯೆ ಪ್ರಾರಂಭಗೊಂಡಿತು.

ಬುಧವಾರ ಗದಗ ಎ.ಪಿ.ಎಂ.ಸಿ.ಗೆ 1,400 ಕ್ವಿಂಟಲ್‌ ಈರುಳ್ಳಿ ಆವಕ ಆಗಿತ್ತು. ಅತಿ ಸಣ್ಣ ಗಾತ್ರದ ಗಡ್ಡೆಗಳಿಗೆ ಕ್ವಿಂಟಲ್‌ಗೆ ಕನಿಷ್ಠ ₹ 600ರಿಂದ ಉತ್ತಮ ಗುಣಮಟ್ಟದ ಗಡ್ಡೆಗಳಿಗೆ ಗರಿಷ್ಠ ₹ 4,000ವರೆಗೆ ಮಾರಾಟವಾಗಿತ್ತು. ನ. 24ರಂದು ಕ್ವಿಂಟಲ್‌ಗೆ ದಾಖಲೆಯ ₹ 4,300 ದರ ಇತ್ತು.

‘ತರಕಾರಿ ಮಾರುಕಟ್ಟೆಯಲ್ಲೂ ಈರುಳ್ಳಿ ಕೆ.ಜಿಗೆ ಸದ್ಯ ₹ 55ಕ್ಕೆ ಮಾರಾಟವಾಗುತ್ತಿದೆ. ರೈತರಿಗೆ ನ್ಯಾಯ ದೊರೆಯ ಬೇಕಾದರೆ ಗರಿಷ್ಠ ₹ 4,000ದಿಂದ ಕನಿಷ್ಠ ₹ 2,500 ದರ ನಿಗದಿಪಡಿಸಬೇಕು’ ಎಂದು ರೋಣ ತಾಲ್ಲೂಕಿನ ತೊಂಡಿಹಾಳದ ರೈತ ಮುತ್ತಪ್ಪ ಹೆಡೆಯಪ್ಪಗೌಡರ ಒತ್ತಾಯಿಸಿದರು.

‘ಹೊಲದಿಂದ ಮಾರುಕಟ್ಟೆಗೆ ಈರುಳ್ಳಿ ತರಲು ಒಂದು ಚೀಲಕ್ಕೆ ₹ 200 ವೆಚ್ಚ­ವಾಗುತ್ತದೆ. ಈ ಬಾರಿ ಉತ್ತಮ ಬೆಲೆ ಇದೆ ಎಂದು ಮಾರಾಟಕ್ಕೆ ತಂದರೆ, ದಿಢೀರ್ ಬೆಲೆ ಇಳಿಸಿದ್ದಾರೆ. ಇದರ ಹಿಂದೆ ದಲ್ಲಾಳಿಗಳ ಕೈವಾಡ ಇದೆ. ಇಲ್ಲಿ ಉತ್ತಮ ಬೆಲೆ ಸಿಗದಿದ್ದರೆ ಬೆಂಗಳೂರು ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕು ಎಂದುಕೊಂಡಿದ್ದೇವೆ’ ಎಂದು ಬೆಳೆಗಾರರಾದ ಮಲ್ಲಯ್ಯ ಹಿರೇಮಠ ಮತ್ತು ಎಸ್‌.ಕೆ.ಹಿರೇಮಠ ತೀವ್ರ ಬೇಸರ ವ್ಯಕ್ತಪಡಿಸಿದರು.

ಆವಕದ ಪ್ರಮಾಣದಲ್ಲಿ ಕುಸಿತ
ರಾಜ್ಯದಲ್ಲೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆ ಗದಗ. ಆದರೆ, ಈ ಬಾರಿ ಮಳೆ ಹಾನಿಯಿಂದ ಮಾರುಕಟ್ಟೆಗೆ ಆವಕ ಪ್ರಮಾಣ ಗಣನೀಯವಾಗಿ ಕುಸಿದಿದೆ. ಇದರಿಂದ ಗರಿಷ್ಠ ₹ 4,000ವರೆಗೆ ಬೆಲೆ ಇದ್ದರೂ ಬೆಳೆಗಾರರಿಗೆ ಹೆಚ್ಚಿನ ಲಾಭ ಸಿಗುತ್ತಿಲ್ಲ.

ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆ.ಜಿಗೆ 55ಕ್ಕೆ ಏರಿದ್ದು, ಗ್ರಾಹಕರ ಕಣ್ಣಲ್ಲೂ ಕಣ್ಣೀರು ತರಿಸಿದೆ. ಅಕ್ಟೋಬರ್‌ ಮೊದಲ ವಾರದಲ್ಲಿ ಆರಂಭವಾಗುತ್ತಿದ್ದ ಈರುಳ್ಳಿ ಹಂಗಾಮು ಈ ಬಾರಿ ಒಂದು ತಿಂಗಳು ತಡವಾಗಿ ಪ್ರಾರಂಭವಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಗದಗ ಕೃಷಿ ಉತ್ಪನ್ನ ಮಾರುಕಟ್ಟೆಗೆ 1,27,147 ಕ್ವಿಂಟಲ್ ಈರುಳ್ಳಿ ಆವಕವಾಗಿತ್ತು. ಈ ಬಾರಿ ನ. 3ರಿಂದ ನ. 29ರವರೆಗೆ 32,225 ಕ್ವಿಂಟಲ್‌ನಷ್ಟು ಮಾತ್ರ ಈರುಳ್ಳಿ ಬಂದಿದೆ.

* * 

ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿದೆ. ಹೀಗಾಗಿ, ಬೆಲೆಯಲ್ಲಿ ದಿಢೀರ್ ಕುಸಿತವಾಗಿದೆ. ಈ ಕುರಿತು<br/>ವರ್ತಕರ ಜತೆ ಚರ್ಚಿಸಲಾಗಿದೆ
ಎಂ. ಮಂಜುನಾಥ್‌
ಎ.ಪಿ.ಎಂ.ಸಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT