ಮಿಶ್ರ ಬೆಳೆಯತ್ತ ರೈತರ ಚಿತ್ತ

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆ ವಿಳಂಬವಾಗಿ ಬಂತು. ನಂತರ ಕೆಲವು ದಿನ ಸತತವಾಗಿ ಸುರಿಯಿತು. ಇದು ಹತ್ತಿ ಇಳುವರಿ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟಾಯಿತು

ಹಿರೇಕೆರೂರ ತಾಲ್ಲೂಕಿನ ಬಸರೀಹಳ್ಳಿ ಗ್ರಾಮದಲ್ಲಿ ಹತ್ತಿ ಬೆಳೆ ಮಧ್ಯೆ ಮಿಶ್ರಬೆಳೆಯಾಗಿ ತೊಗರಿ ಬೆಳೆದಿರುವುದು

ಕೆ.ಎಚ್. ನಾಯಕ

ಹಿರೇಕೆರೂರ: ತಾಲ್ಲೂಕಿನಲ್ಲಿ ಬಿ.ಟಿ ಹತ್ತಿಯ ಜೊತೆಗೆ ತೊಗರಿಯನ್ನು ಮಿಶ್ರಬೆಳೆಯಾಗಿ ಬೆಳೆಯುವ ವಿಧಾನ ಹೆಚ್ಚುತ್ತಿದೆ. ಹತ್ತಿ ಬೆಳೆ ವಿಫಲವಾದರೂ ತೊಗರಿ ಬೆಳೆ ರೈತರ ಕೈಹಿಡಿಯುತ್ತಿದೆ. ಹಾಗಾಗಿ, ರೈತರು, ಮಿಶ್ರಬೆಳೆಯತ್ತ ತಮ್ಮ ಚಿತ್ತ ಹರಿಸಿದ್ದಾರೆ.

ಹತ್ತಿ ಬಿತ್ತನೆ ಮಾಡಿದ ಸಂದರ್ಭದಲ್ಲಿ ಎಲ್ಲ ಬೀಜಗಳು ಮೊಳಕೆಯೊಡೆದು ಹೊರ ಬರುವುದಿಲ್ಲ. ಕೆಲವು ಬೀಜಗಳು ಮಣ್ಣಿನಲ್ಲೇ ಹುದುಗಿ ಹೋಗುತ್ತವೆ. ಆಗ ರೈತರು, ಮತ್ತೆ ಬೀಜ ಬಿತ್ತುವ ಬದಲು ಆ ಸ್ಥಳದಲ್ಲಿ ಹೈಬ್ರಿಡ್ ತೊಗರಿ ಬೀಜ ಹಾಕುತ್ತಾರೆ. ಇದರಿಂದಾಗಿ ಹತ್ತಿ ಫಸಲು ಹಿಡಿಯುವ ಹೊತ್ತಿಗೆ, ತೊಗರಿ ಕಾಯಿ ಕಟ್ಟುತ್ತದೆ. ಉತ್ತಮ ಇಳುವರಿ ಸಿಗುತ್ತಿದೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆ ವಿಳಂಬವಾಗಿ ಬಂತು. ನಂತರ ಕೆಲವು ದಿನ ಸತತವಾಗಿ ಸುರಿಯಿತು. ಇದು ಹತ್ತಿ ಇಳುವರಿ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟಾಯಿತು. ಆದರೆ, ಹತ್ತಿ ಮಧ್ಯದಲ್ಲಿ ಹಾಕಿರುವ ತೊಗರಿ ಬೆಳೆ ಹೂವು ಮತ್ತು ಮೋಪುಗಳಿಂದ ಕಂಗೊಳಿಸುತ್ತಿವೆ. ರೈತರಿಗೆ ಒಂದಿಷ್ಟು ಕಾಸು ಕಾಣುವ ಭರವಸೆ ಮೂಡಿಸಿದೆ.

‘ತೊಗರಿ ಕಾಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಹತ್ತಿ ಬೆಳೆಯ ಮಧ್ಯದಲ್ಲಿ ತೊಗರಿ ಹಾಕುವುದರಿಂದ ಹತ್ತಿಯನ್ನು ಬಿಡಿಸುವ ಅವಧಿ ಮುಗಿಯುತ್ತಿದ್ದಂತೆ, ತೊಗರಿ ಬೆಳೆ ಕಾಯಿ ಕಟ್ಟಲು ಆರಂಭಿಸಿ, ಉತ್ತಮ ಇಳುವರಿ ನೀಡುತ್ತದೆ’ ಎಂದು ಹುಲ್ಲತ್ತಿ ಗ್ರಾಮದ ರೈತ ತಿಮ್ಮಣ್ಣ ಹಾದ್ರೀಹಳ್ಳಿ ಹೇಳಿದರು. ಕೈ ಹಿಡಿಯುತ್ತದೆ:

‘ಒಂದೇ ಬೆಳೆ ನಂಬಿಕೊಂಡು ಸಾಲ ಮಾಡಿ ಬಿತ್ತನೆ ಮಾಡುತ್ತೇವೆ. ಆದರೆ, ಮಳೆ ಕೈ ಕೊಟ್ಟರೆ ಬೆಳೆ ಹಾಳು. ಹೆಚ್ಚಾಗಿ ಸುರಿದರೆ, ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ. ಹಾಗಾಗಿ, ಮಿಶ್ರ ಬೆಳೆ ಕೃಷಿಯನ್ನು  ಅಳವಡಿಸಿಕೊಳ್ಳುವುದು ಒಳ್ಳೆಯದು. ಒಂದು ಬೆಳೆ ಹೋದರೆ, ಮತ್ತೊಂದು ಕೈ ಹಿಡಿಯುತ್ತದೆ. ಆಗ ನಾವೂ ಬದುಕಬಹುದು’ ಎಂದು ಗ್ರಾಮದ ಮತ್ತೊಬ್ಬ ರೈತ ಮಾರಪ್ಪ ಅನುಭವ ಹಂಚಿಕೊಂಡರು.

‘ಪ್ರಗತಿಪರ ಕೃಷಿಕರು ಎಂದಿಗೂ ಒಂದೇ ಬೆಳೆಯ ಮೇಲೆ ಅವಲಂಬಿತರಾಗುವುದಿಲ್ಲ. ಸ್ವಲ್ಪವೇ ಜಮೀನಿನಲ್ಲಿ ನಾಲ್ಕೈದು ಮಿಶ್ರ ಬೆಳೆಗಳನ್ನು ಬೆಳೆಯುತ್ತಾರೆ. ಹಾಗಾಗಿ, ಅವರು ಕೃಷಿಯಿಂದ ಎಂದೂ ಕೈ ಸುಟ್ಟುಕೊಳ್ಳುವುದಿಲ್ಲ. ನಮ್ಮಂತೆ ಸಾಲ ಮಾಡಿ ಕೊರಗುವುದಿಲ್ಲ. ಮಿಶ್ರ ಬೆಳೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕೃಷಿ ಅಧಿಕಾರಿಗಳು ಮಾಡಬೇಕು’ ಎಂದು ಅವರು ಮನವಿ ಮಾಡಿದರು.

14,792 ಹೆಕ್ಟೇರ್‌ನಲ್ಲಿ ಬಿತ್ತನೆ: ಮುಂಗಾರು ಹಂಗಾಮಿನಲ್ಲಿ ಬಿ.ಟಿ ಹತ್ತಿ ಬಿತ್ತನೆ ಗುರಿ 14250 ಸಾವಿರ ಹೆಕ್ಟೇರ್ ಇದೆ. ಈಗಾಗಲೇ 14792 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಮಾಡುವ ಮೂಲಕ, ಗುರಿ ಮೀರಿದ ಸಾಧನೆ ಮಾಡಲಾಗಿದೆ ಎಂದು ತಾಲ್ಲೂಕಿನ ಕೃಷಿ ಅಧಿಕಾರಿಗಳು ಹೇಳಿದರು.

ತೊಗರಿ ಬಿತ್ತನೆ ಗುರಿ 755 ಹೆಕ್ಟೇರ್ ಇದೆ. 638 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದ್ದು, ನೂರರಷ್ಟು ಗುರಿ ಸಾಧಿಸಿಲ್ಲ. ಆದರೆ ಹತ್ತಿಯ ಮಧ್ಯದಲ್ಲಿ ಮಿಶ್ರ ಬೆಳೆಯಾಗಿ ಅಲ್ಲಲ್ಲಿ ಹಾಕಲಾಗಿರುವ ತೊಗರಿ ಬೆಳೆ ಈ ಲೆಕ್ಕದಲ್ಲಿ ಸೇರಿಲ್ಲ ಎಂದು ಅವರು ತಿಳಿಸಿದರು.

ಉದುರುವಿಕೆ ತಡೆಗೆ ನ್ಯಾಫ್ತಾಲಿನ್: ‘ತೊಗರಿ ಬೆಳೆಯಲ್ಲಿ ಮೊಗ್ಗು ಮತ್ತು ಹೂವು ಉದುರುವಿಕೆ ಕಂಡುಬರುತ್ತದೆ. ಇದನ್ನು ತಡೆಗಟ್ಟಲು ನ್ಯಾಫ್ತಾಲಿನ್ ಅಸಿಟಿಕ್ ಆಸಿಡ್ ಶೇ 4.5 ಎಸ್ಎಲ್ ಸಸ್ಯ ಪ್ರಚೋದಕವನ್ನು ಹೂವು ಬಿಟ್ಟಾಗ 10–15 ದಿನಗಳ ಅಂತರದಲ್ಲಿ 2 ಬಾರಿ ಸಿಂಪರಣೆ ಮಾಡಬೇಕು’ ಎಂದು ಕೃಷಿ ಅಧಿಕಾರಿ ಮಾರುತಿ ಅಂಗರಗಟ್ಟಿ ರೈತರಿಗೆ ಸಲಹೆ ನೀಡಿದರು.

 

Comments
ಈ ವಿಭಾಗದಿಂದ ಇನ್ನಷ್ಟು
ಸಮಾಜದಲ್ಲಿ ಸಾಮರಸ್ಯ ಬೆಳೆಸಿ: ಸಿದ್ದಣ್ಣ

ಹಾವೇರಿ
ಸಮಾಜದಲ್ಲಿ ಸಾಮರಸ್ಯ ಬೆಳೆಸಿ: ಸಿದ್ದಣ್ಣ

19 Mar, 2018
ಪತ್ರಿಕೋದ್ಯಮಕ್ಕೆ ಪ್ರತ್ಯೇಕ ವಿ.ವಿ. ಅವಶ್ಯ

ಹಾವೇರಿ
ಪತ್ರಿಕೋದ್ಯಮಕ್ಕೆ ಪ್ರತ್ಯೇಕ ವಿ.ವಿ. ಅವಶ್ಯ

17 Mar, 2018
‘ದೇಶಕ್ಕಿದೆ ಆಕ್ರಮಣ ತಡೆವ ಶಕ್ತಿ’

ಅಕ್ಕಿಆಲೂರ
‘ದೇಶಕ್ಕಿದೆ ಆಕ್ರಮಣ ತಡೆವ ಶಕ್ತಿ’

17 Mar, 2018

ಹಿರೇಕೆರೂರ
ವಿವಿಧ ಕಾಮಗಾರಿಗಳಿಗೆ ಶಾಸಕ ಬಣಕಾರ ಚಾಲನೆ

ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ನಗರೋತ್ಥಾನ ಹಂತ- ೩ರ ಅಡಿಯಲ್ಲಿ ರಸ್ತೆ ಕಾಮಗಾರಿಗೆ 16ನೇ ವಾರ್ಡ್‌ ಮುಗಳೀಹಳ್ಳಿ ಪ್ಲಾಟ್‌ನಲ್ಲಿ ಶಾಸಕ ಯು.ಬಿ.ಬಣಕಾರ ಶುಕ್ರವಾರ ಭೂಮಿ ಪೂಜೆ...

17 Mar, 2018

ರಾಣೆಬೆನ್ನೂರು
₹ 2.57 ಕೋಟಿ ಉಳಿತಾಯ ಬಜೆಟ್

ಇಲ್ಲಿನ ನಗರಸಭೆ ಡಾ. ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಆಶಾ ಗುಂಡೇರ ಅವರು 2018–19ನೇ ಸಾಲಿನ ಒಟ್ಟು ₹...

17 Mar, 2018