ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೇ ಕಾರ್ತೀಕೋತ್ಸವ, ಲಕ್ಷ ದೀಪೋತ್ಸವ 3ರಂದು

Last Updated 1 ಡಿಸೆಂಬರ್ 2017, 8:52 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಸಮೀಪದ ಕಡೂರು ಗ್ರಾಮದ ಬೆಟ್ಟದಲ್ಲಿನ ವೀರಭದ್ರಸ್ವಾಮಿಯ ಕಡೇ ಕಾರ್ತಿಕೋತ್ಸವ ಮತ್ತು ಲಕ್ಷ ದೀಪೋತ್ಸವ ಡಿ. 3ರಂದು ನಡೆಯಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ. ಚಿಕ್ಕಜಾಜೂರಿನಿಂದ 5 ಕಿ.ಮೀ. ದೂರದಲ್ಲಿರುವ ಕಡೂರು ಬೆಟ್ಟದ ಮೇಲೆ ಇರುವ ವೀರಭದ್ರಸ್ವಾಮಿ ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಾನೆಂಬುದು ಪ್ರತೀತಿ.

ಭಾನುವಾರ ಬೆಳಿಗ್ಗೆಯಿಂದಲೇ ಸ್ವಾಮಿಗೆ ರುದ್ರಾಭಿಷೇಕ ಮತ್ತಿತರ ಪೂಜೆಗಳನ್ನು ನಡೆಸಲಾಗುವುದು. ರಾತ್ರಿ 8 ಗಂಟೆಗೆ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ವೀರಗಾಸೆ, ಡೊಳ್ಳು ಕುಣಿತಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗುವುದು. ನಂತರ, ಪಲ್ಲಕ್ಕಿಯನ್ನು ಬೆಟ್ಟದ ಮೇಲಿನ ದೇವಾಲಯಕ್ಕೆ ಕರೆತರಲಾಗುವುದು.

ಉತ್ಸವ ಮೂರ್ತಿಯನ್ನು ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಿದ ಕದಳಿ ಮಂಟಪದಲ್ಲಿ ಕೂರಿಸಲಾಗುವದು. ಉದ್ಭವ ಮೂರ್ತಿ ಹಾಗೂ ಉತ್ಸವ ಮೂರ್ತಿಗಳ ಮುಂದೆ ಮಂಡಕ್ಕಿ ರಾಶಿ ಹಾಕುವರು. ಇದರ ಮೇಲೆ ಭಕ್ತರು ಬೆಲ್ಲ, ಬಾಳೆಹಣ್ಣು, ಕೊಬ್ಬರಿ, ಕಾಯಿಯ ಚೂರುಗಳನ್ನು ಹಾಕುವರು. ನಂತರ ಅರ್ಚಕರು ಸ್ವಾಮಿಗೆ ಮಹಾ ಮಂಗಳಾರತಿ ಮಾಡುವರು.

ಸ್ವಾಮಿಯ ಮುಂದೆ ದೊಡ್ಡ ಮಣ್ಣಿನ ದೀಪವನ್ನು ಹಚ್ಚಿ, ಅದನ್ನು ವಾದ್ಯಗಳೊಂದಿಗೆ ಮೆರವಣಿಗೆ ಮಾಡಿ, ದೇವಸ್ಥಾನದ ಮುಂಭಾಗದಲ್ಲಿನ ದೀಪದ ಕಂಬಂದ ಮೇಲೆ ಇಡಲಾಗುವುದು. ನಂತರ, ಭಕ್ತರು ದೇವಸ್ಥಾನದ ಆವರಣದಲ್ಲಿರುವ ಅಗ್ನಿಕುಂಡದ ಸುತ್ತಲಿನ ಭಾಗದಿಂದ ಬೆಟ್ಟದ ಕೆಳಗಿನವರೆಗೆ ಮೆಟ್ಟಿಲುಗಳ ಪಕ್ಕದಲ್ಲಿರುವ ಅಡ್ಡ ಗೋಡೆಯ ಮೇಲೆ ಇಡಲಾದ ಎಣ್ಣೆ ಬತ್ತಿಗಳನ್ನು ಹಾಕಿದ ಮಣ್ಣಿನ ಲಕ್ಷ ದೀಪಗಳನ್ನು ಹಚ್ಚುವುದು ಸಂಭ್ರಮ ಎನ್ನುತ್ತಾರೆ ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಚ್‌.ಎಂ. ದಯಾನಂದ.

ಭಕ್ತರ ಉದಾರ ಸಹಕಾರ: ದೇವಸ್ಥಾನ ಈಗ ಚಿತ್ರದುರ್ಗದ ಮುರುಘಾ ಮಠದ ಆಶ್ರಯದಲ್ಲಿದೆ. ಭಕ್ತರ ಸಹಕಾರದಿಂದ ಬೆಟ್ಟದಲ್ಲಿ ಹಲವು ಕಟ್ಟಡಗಳು ತಲೆ ಎತ್ತಿವೆ. ದೇವಸ್ಥಾನದ ಕೆಳ ಭಾಗದಲ್ಲಿ ₹ 1 ಕೋಟಿಗೂ ಅಧಿಕ ವೆಚ್ಚದಲ್ಲಿ ಸುಂದರವಾದ ವೀರಭದ್ರಸ್ವಾಮಿ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ನೆಲೆಸಿರುವ ಸ್ವಾಮಿಯ ಭಕ್ತರು ತಮ್ಮ ಮಕ್ಕಳ ವಿವಾಹವನ್ನು ಇಲ್ಲಿ ನಡೆಸುತ್ತಾ ಬಂದಿದ್ದಾರೆ. ಬಡವ, ಶ್ರೀಮಂತರೆಂಬ ಭೇದ–ಭಾವವಿಲ್ಲದೆ, ಎಲ್ಲಾ ವರ್ಗ, ಸಮುದಾಯದವರೂ ಇಲ್ಲಿ ವಿವಾಹಗಳನ್ನು ನಡೆಸುತ್ತಿರುವುದು ಇದಕ್ಕೆ ಸಾಕ್ಷಿ.

ವಸತಿ ಸಮುಚ್ಚಯ ನಿರ್ಮಾಣ: ದೇವಸ್ಥಾನದ ಕೆಳಭಾಗದಲ್ಲಿ ಎರಡು ಅಂತಸ್ತಿನ 20 ಕೊಠಡಿಗಳ ವಸತಿ ಸಮುಚ್ಚಯ ನಿರ್ಮಾಣ ಹಂತದಲ್ಲಿದೆ. ₹ 1000ರಿಂದ ₹ 5 ಲಕ್ಷದವರೆಗೂ ಭಕ್ತರು ದೇಣಿಗೆ ನೀಡುತ್ತಿದ್ದಾರೆ. ಕೆಲವು ಭಕ್ತರು ಸ್ವಂತ ಖರ್ಚಿನಲ್ಲಿ ಕೊಠಡಿಗಳನ್ನು ನಿರ್ಮಿಸಿಕೊಡುವುದಾಗಿ ವಚನ ನೀಡಿದ್ದಾರೆ ಎನ್ನುತ್ತಾರೆ ದೇವಸ್ಥಾನದ ಲೆಕ್ಕಪತ್ರ ವಿಭಾಗದ ನಿರ್ವಾಹಕರಾದ ನಿವೃತ್ತ ಶಿಕ್ಷಕ ಎಚ್‌.ಸಿ. ರೇವಣಸಿದ್ದಪ್ಪ.

ದಾಸೋಹ: ದೇವಸ್ಥಾನಕ್ಕೆ ಭಕ್ತರು ಸ್ವಯಂ ಪ್ರೇರಿತರಾಗಿ ಅಕ್ಕಿ, ಬೇಳೆ, ಬೆಲ್ಲ, ಎಣ್ಣೆ, ಕಾಯಿ ಮತ್ತಿತರ ದಾಸೋಹಕ್ಕೆ ಬೇಕಾಗುವ ಸಾಮಗ್ರಿಗಳನ್ನು ನೀಡುತ್ತಿದ್ದಾರೆ. ಭಕ್ತರ ಸಹಕಾರದಿಂದ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ನಿತ್ಯ ದಾಸೋಹ ನಡೆಸಲಾಗುವುದು ಎನ್ನುತ್ತಾರೆ ದೇವಸ್ಥಾನದ ದಾಸೋಹ ನಿರ್ವಾಹಕ ಸಿ.ವಿ. ಶರಣಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT