ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರೀಂ ಗರ್ಲ್‌: ಹೀಗೊಂದು ಕೆಟ್ಟ ಕನಸು

Last Updated 1 ಡಿಸೆಂಬರ್ 2017, 11:39 IST
ಅಕ್ಷರ ಗಾತ್ರ

ಸಿನಿಮಾ: ಡ್ರೀಂ ಗರ್ಲ್‌

ನಿರ್ಮಾಪಕ: ಲಕ್ಷ್ಮಣ್‌ ನಾಯಕ್‌

ನಿರ್ದೇಶಕ: ಸೂರ್ಯ ಸತೀಶ್‌

ತಾರಾಗಣ: ಅಜಿತ್‌, ಅಮೃತಾ ರಾವ್‌, ದೀಪಿಕಾ ದಾಸ್‌, ರಘು ಭಟ್‌, ಅವಿನಾಶ್‌

**

ನಾಯಕ ದುಃಖದಲ್ಲಿ ಮುಳುಗಿ ಮಳೆಯಲ್ಲಿ ನೆನೆಯುತ್ತ ಕುಳಿತಿರುತ್ತಾನೆ. ಅಲ್ಲಿಗೆ ಎಲ್ಲಿಂದಲೋ ಬರುವ ಒಬ್ಬ ಹುಡುಗ ಅವನಿಗೆ ಕೊಡೆ ಹಿಡಿದು ಕರೆದೊಯ್ದು ಬಿಸಿಬಿಸಿ ಚಹಾ ಕುಡಿಸುತ್ತಾನೆ. ಅಷ್ಟೇ ಅಲ್ಲ, ಕೈಯಲ್ಲಿ ಐನೂರರ ಹಲವು ನೋಟುಗಳನ್ನೂ ಇರಿಸುತ್ತಾನೆ. ಆದರೆ, ಅವು ಈಗಾಗಲೇ ರದ್ದುಗೊಂಡಿರುವ ಹಳೆ ನೋಟುಗಳು!

ಈ ಹಳೆಯ ನೋಟುಗಳಿಗೂ ‘ಡ್ರೀಂ ಗರ್ಲ್‌’ ಸಿನಿಮಾ ಹೂರಣಕ್ಕೂ ಮೌಲ್ಯರಾಹಿತ್ಯ ಸ್ಥಿತಿಯಲ್ಲಿ ಸಾಮ್ಯತೆ ಇದೆ. ಎಷ್ಟು ಕೊಟ್ಟರೂ ಯಾವ ಬಳಕೆಗೂ ಬಾರದ ಹಳೆಯ ನೋಟುಗಳ ಹಾಗೆಯೇ ಈ ಸಿನಿಮಾ ಪೂರ್ತಿ ನೋಡಿದ ಮೇಲೆ ಮನಸ್ಸಿಗೆ ಯಾವ ದೃಶ್ಯವೂ ತಟ್ಟುವುದಿಲ್ಲ. ನಾಯಕನ ಸ್ವಪ್ನ ಸುಂದರಿಯ ಹಂಬಲ ನೋಡುವವರಿಗೆ ಬಹುಬೇಗ ದುಸ್ವಪ್ನವಾಗಿ ಕಾಡಲು ಶುರುವಾಗುತ್ತದೆ.

ನಾಯಕ ಮೋಹನ್‌ ಅನಾಥ. ಅವನು ಮತ್ತು ದೀಪಾ ಬಾಲ್ಯಪ್ರೇಮಿಗಳು. ಆದರೆ, ಬಡತನವೇ ಅವರ ಪ್ರೇಮಕ್ಕೆ ಅಡ್ಡಗೋಡೆ. ದೀಪಾಗೆ ತನ್ನ ಪ್ರಿಯಕರ ಒಳ್ಳೆಯ ಕೆಲಸಕ್ಕೆ ಸೇರಿ ವೈಭೋಗದ ಜೀವನ ನಡೆಸಬೇಕು ಎಂಬ ಆಸೆ. ನಾಯಕನೋ ಒಳ್ಳೆಯತನದ ಪ್ರತಿರೂಪ. ಕಷ್ಟದಲ್ಲಿರುವ ಅಪರಿಚಿತನಿಗಾಗಿ ತನ್ನ ಕೆಲಸವನ್ನೇ ತ್ಯಾಗ ಮಾಡುತ್ತಾನೆ. ನಂತರ ತನ್ನ ಗೆಳತಿಯ ಆಸೆಗಳನ್ನು ಪೂರೈಸುತ್ತಾನೆಯೇ? ಅದಕ್ಕೆ ಯಾವ ರೀತಿಯ ಅಡೆತಡೆಗಳು ಬರುತ್ತವೆ ಎಂಬುದನ್ನೆ ಇಟ್ಟುಕೊಂಡು ಸಿನಿಮಾ ಕಟ್ಟಿದ್ದಾರೆ ನಿರ್ದೇಶಕ ಸೂರ್ಯ ಸತೀಶ್‌. ಆದರೆ, ಅವ್ಯಾವ ಅಂಶಗಳನ್ನೂ ಬಿಗಿ ಬಂಧದಲ್ಲಿ ಹೆಣೆಯುವಲ್ಲಿ ಅವರು ಸಫಲರಾಗಿಲ್ಲ.

ಕಥೆಯಲ್ಲಷ್ಟೇ ಅಲ್ಲ, ನಿರೂಪಣೆ, ತಾಂತ್ರಿಕತೆ, ಸಂಗೀತ, ಹಿನ್ನೆಲೆ ಸಂಗೀತ ಎಲ್ಲ ವಿಭಾಗಗಳಲ್ಲಿಯೂ ಹಳಸಲುತನ ಎದ್ದು ಕಾಣುತ್ತದೆ. ಅಸಹಜ ಎನ್ನಿಸುವಷ್ಟು ಒಳ್ಳೆಯತನ, ಅದಕ್ಕೆ ವಿರುದ್ಧವಾಗಿ ಕೃತ್ರಿಮತೆಯೇ ಮೈವೆತ್ತಂಥ ಖಳತನದ ಪಾತ್ರಗಳು, ಮಧ್ಯ ಒಂದಿಷ್ಟು ತಪ್ಪು ತಿಳಿವಳಿಕೆಗಳು, ಅದೇ ವೃತ್ತದಲ್ಲಿ ಮತ್ತೆ ಮತ್ತೆ ಸುತ್ತುವ ಫ್ಲಾಶ್‌ಬ್ಯಾಕ್‌... ಹೀಗೆ ಯಾವ ಹಂತದಲ್ಲಿಯೂ ಕಥೆ ಕನಸಿನ ರಮ್ಯತೆ ಅಥವಾ ವಾಸ್ತವದ ರೋಚಕತೆಯ ಮಟ್ಟಕ್ಕೆ ಏರುವುದರಲ್ಲಿ ವಿಫಲವಾಗುತ್ತದೆ. ಒತ್ತಾಯಪಟ್ಟು ತುರುಕಿದ ಎರಡು ಫೈಟ್‌ಗಳು, ರಪ್ಪನೇ ಬಂದುಹೋಗುವ ಐಟಂ ಸಾಂಗ್‌ ಕೂಡ ಚಿತ್ರದ ಭಾರವನ್ನು ಹೊರಲು ಸಾಧ್ಯವಾಗಿಲ್ಲ.

ವಿ. ಮನೋಹರ್‌ ಅವರ ಸಂಗೀತ ಸಂಯೋಜನೆ ಯಾವ ಹಾಡೂ ನೆನಪಿನಲ್ಲುಳಿಯುವುದಿಲ್ಲ. ಗಂಧರ್ವ ರಾಯ್‌ ರಾವುತ್‌ ಅವರ ಹಿನ್ನೆಲೆ ಸಂಗೀತ ಹಲವು ಹಳೆ ಹಾಡುಗಳನ್ನು ಸ್ಪಷ್ಟವಾಗಿಯೇ ನೆನಪಿಸುತ್ತದೆ. ದುರ್ಬಲ ಸಂಕಲನ ಮತ್ತು ಅತಿ ಎನಿಸುವ ಅಭಿನಯ ಹಲವು ಕಡೆಗಳಲ್ಲಿ ಧಾರಾವಾಹಿಯನ್ನು ನೋಡುತ್ತಿರುವ ಅನುಭವ ನೀಡುತ್ತದೆ. ಒಟ್ಟಾರೆ ಸಿನಿಮಾವನ್ನು ಹದಗೆಡಿಸುವಲ್ಲಿ ಛಾಯಾಗ್ರಹಣದ ಪಾತ್ರವೂ ಹಿರಿದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT