ಮುಕ್ತ ಅಂತರ್ಜಾಲ

ತಾರತಮ್ಯರಹಿತ ಸೇವೆಯ ಸಾಧಕ–ಬಾಧಕ

ಒಂದೊಮ್ಮೆ ಮುಕ್ತ ಅಂತರ್ಜಾಲ ಜಾರಿಯಾಗದಿದ್ದಲ್ಲಿ ಸೇವಾದಾತರು ತಮ್ಮ ಇಷ್ಟದ ವಿಷಯಗಳನ್ನಷ್ಟೇ ಜನರಿಗೆ ತಲುಪಿಸುವ, ಕೆಲವನ್ನು ಉದ್ದೇಶ ಪೂರ್ವಕವಾಗಿ ಮರೆಮಾಚುವ ಸಾಧ್ಯತೆ ಇದೆ. ಇದರಲ್ಲಿ ಕೆಲ ರಾಜಕೀಯ ಪಕ್ಷಗಳಿಗೆ ಹೆಚ್ಚಿನ ಪ್ರಚಾರ, ಕೆಲವುಗಳ ಕಡೆಗಣನೆ ಸಾಧ್ಯತೆ ಹೆಚ್ಚು...

ತಾರತಮ್ಯರಹಿತ ಸೇವೆಯ ಸಾಧಕ–ಬಾಧಕ

ಅಂತರ್ಜಾಲ ಬಳಕೆಗೆ ಒಮ್ಮೆ ಹಣ ನೀಡಿದರೆ ಸಾಲದೇ? ಎಲ್ಲಾ ಸೇವೆಗಳು ಉಚಿತವಾಗಿ ಲಭ್ಯವಾಗುವುದೇ ಆದರೆ, ಒಂದೊಂದಕ್ಕೂ ಬೇರೆ ಬೇರೆ ದರ ನಿಗದಿಪಡಿಸುವುದು ಏಕೆ? ಈ ವಿಷಯ ಈಗ ಅಮೆರಿಕ ಸೇರಿದಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಚರ್ಚೆಯಾಗುತ್ತಿದೆ. ಹಾಗೆಯೇ ಭಾರತದಲ್ಲೂ ಈ ‘ಮುಕ್ತ ಅಂತರ್ಜಾಲ ಅಭಿಯಾನ’ ಈಗ ಆರಂಭವಾಗಿದೆ. ಇಂಥ ಸಂದರ್ಭದಲ್ಲಿ ಇಂಟರ್‌ನೆಟ್‌ ಬಳಕೆದಾರರು ಗೊಂದಲಕ್ಕೆ ಒಳಗಾಗಿದ್ದಾರೆ. ಮುಕ್ತ ಅಂತರ್ಜಾಲದ ಲಾಭ– ನಷ್ಟ ಕುರಿತು ಚರ್ಚೆಗಳು ನಡೆಯುತ್ತಿವೆ. ಬಳಕೆದಾರರು ಅಂತರ್ಜಾಲ ಸೇವೆ ನೀಡುವವರ ಹಿಡಿತಕ್ಕೆ ಸಿಲುಕಬೇಕೇ ಅಥವಾ ಟ್ರಾಯ್‌ ಪ್ರಸ್ತಾವದ ವ್ಯಾಪ್ತಿಗೆ ಸೇವಾದಾತರು ಸೇರಬೇಕೇ ಎಂಬ ಚರ್ಚೆಗಳು ಈಗ ಕಾವು ಪಡೆದಿವೆ.

ಮುಕ್ತ ಅಂತರ್ಜಾಲ ಎಂದರೇನು?
ಮುಕ್ತ ಅಂತರ್ಜಾಲ ಎಂಬುದು ಒಂದು ತತ್ವ. ಅಂತರ್ಜಾಲ ಬಳಕೆದಾರರನ್ನು ಸೇವಾದಾತರು ಹಾಗೂ ಸರ್ಕಾರ ಸಮಾನವಾಗಿ ನೋಡುವುದೇ ಇದರ ಹಿಂದಿನ ಮುಖ್ಯ ಉದ್ದೇಶ. ಬಳೆಕದಾರ, ವಿಷಯ, ಅಂತರ್ಜಾಲ ತಾಣ, ಆ್ಯಪ್‌ಗಳು, ಯಾವ ಬಗೆಯ ಅಟ್ಯಾಚ್‌ಮೆಂಟ್‌ ಒಳಗೊಂಡಿದೆ ಅಥವಾ ಯಾವ ಬಗೆಯ ಸಂಪರ್ಕ ಸಾಧನ ಅಳವಡಿಸಿಕೊಂಡಿದ್ದಾರೆ ಎಂಬ ಯಾವುದೇ ಸಂಗತಿ ಇದಕ್ಕೆ ಅಡ್ಡಿಯಾಗದು.

ಮುಕ್ತ ಅಂತರ್ಜಾಲ ವ್ಯವಸ್ಥೆ ಜಾರಿಯಾಗದಿದ್ದರೆ ಏನಾದೀತು?
ಗ್ರಾಹಕರ ಬಳಕೆ ಹಾಗೂ ಅವರು ಪಡೆಯುತ್ತಿರುವ ಸೇವೆಗಳಿಗೆ ಅನುಗುಣವಾಗಿ ಅಂತರ್ಜಾಲ ಸೇವಾದಾತರು ಶುಲ್ಕ ನಿಗದಿಪಡಿಸಬಹುದು. ಕೆಲವೊಂದು ಸೇವೆಗಳನ್ನು ಹೆಚ್ಚಿನ ದರದಲ್ಲಿ, ಇನ್ನು ಕೆಲವೊಂದನ್ನು ಕಡಿಮೆ ದರದಲ್ಲಿ ನೀಡಲು ಆರಂಭಿಸಬಹುದು. ಉದಾಹರಣೆಗೆ ಟಿ.ವಿ.ಯಲ್ಲಿ ವಿವಿಧ ಚಾನೆಲ್‌ಗಳಿಗೆ ವಿವಿಧ ದರಗಳು ಇರುವಂತೆ, ಇಲ್ಲಿಯೂ ಆ ವ್ಯವಸ್ಥೆ ಜಾರಿ ಆಗುವ ಸಾಧ್ಯತೆ ಇದೆ. ಗ್ರಾಹಕ ಹಾಗೂ ಸೇವಾದಾತರ ನಡುವೆ ಕಾವಲುಗಾರನೊಬ್ಬ ನೇಮಕಗೊಳ್ಳುತ್ತಾನೆ. ಆತ ಗ್ರಾಹಕರ ಪ್ರತಿಯೊಂದು ಬಳಕೆಯನ್ನೂ ಸೂಕ್ಷ್ಮವಾಗಿ ಗಮನಿಸಿ, ಅತಿಹೆಚ್ಚು ಬೇಡಿಕೆಯ ತಾಣಗಳನ್ನು ಪಟ್ಟಿ ಮಾಡಿ ಸೇವಾದಾತರಿಗೆ ನೀಡುತ್ತಾನೆ. ನಂತರ ಅದಕ್ಕೆ ತಕ್ಕಂತೆ ದರ ನಿಗದಿಯಾಗುವ ಸಾಧ್ಯತೆಗಳು ಹೆಚ್ಚು. ಮುಕ್ತ ಅಂತರ್ಜಾಲ ನೀತಿ ಇರದೇ ಹೋದರೆ ಸೇವಾದಾತರಿಗೆ ಇಷ್ಟವಾಗದ ವಿಷಯ ವಸ್ತುಗಳನ್ನು ಬಂದ್‌ ಮಾಡಬಹುದು. ತಮ್ಮ ಅಸ್ತಿತ್ವಕ್ಕೆ ಧಕ್ಕೆ ತರಬಲ್ಲ ಆ್ಯಪ್‌ಗಳನ್ನು ರದ್ದುಗೊಳಿಸಬಹುದು. ಹೆಚ್ಚು ಬಿಡ್ ಮಾಡುವವರ ತಾಣಗಳು ವೇಗವಾಗಿ ಡೌನ್‌ಲೋಡ್‌ ಹಾಗೂ ಅಪ್‌ಲೋಡ್‌ ಆಗುವಂತೆ ಮಾಡಬಹುದು. ಉಳಿದವರದನ್ನು ಕಡಿಮೆ ವೇಗದಲ್ಲೇ ಮುಂದುವರಿಸಬಹುದಾದ ಅಪಾಯವೂ ಇದೆ.

ದರ ನಿಗದಿಗೆ ಆಧಾರ ಏನು?
ದರ ನಿಗದಿ ಅಧಿಕಾರ ಅಂತರ್ಜಾಲ ಸೇವಾದಾತರಿಗೇ ಸಿಕ್ಕಿಬಿಟ್ಟರೆ ಇ–ಮೇಲ್‌ ಮತ್ತು ಕ್ಲೌಡ್‌, ಚಾಟ್‌, ಸಾಮಾಜಿಕ ಜಾಲತಾಣ, ವಿಡಿಯೊ ಮತ್ತು ಸಂಗೀತ, ಆ್ಯಪ್‌ಗಳು, ಕ್ರೀಡೆ ಹೀಗೆ ಹಲವು ಕ್ಷೇತ್ರಗಳನ್ನಾಗಿ ವಿಂಗಡಿಸಿ ದರ ನಿಗದಿಪಡಿಸುವ ಸಾಧ್ಯತೆ ಹೆಚ್ಚು. ಈ ತಂತ್ರಗಾರಿಕೆ 2015ಕ್ಕೂ ಮೊದಲು ಅಮೆರಿಕದಲ್ಲಿ ಬಳಕೆಯಲ್ಲಿತ್ತು.

ಜಗತ್ತಿನ ಎಲ್ಲೆಲ್ಲಿ ಮುಕ್ತ ಅಂತರ್ಜಾಲ ವ್ಯವಸ್ಥೆ ಇದೆ?
ಅಮೆರಿಕ, ಚಿಲಿ, ನೆದರ್‌ಲ್ಯಾಂಡ್ಸ್‌, ಬ್ರೆಜಿಲ್, ಇಸ್ರೇಲ್‌, ರಷ್ಯಾ, ಜಪಾನ್ ಮುಂತಾದ ರಾಷ್ಟ್ರಗಳು ಮುಕ್ತ ಅಂತರ್ಜಾಲ ವ್ಯವಸ್ಥೆಯನ್ನು ಜಾರಿಗೆ ತಂದಿವೆ. ಭಾರತದಲ್ಲೂ ಈ ವ್ಯವಸ್ಥೆ ಜಾರಿಗೆ ತರಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಎ.ಕೆ.ಭಾರ್ಗವ, ಎ.ಕೆ.ಮಿತ್ತಲ್‌ ಮತ್ತು ಇತರ ಪ್ರಮುಖರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಅದರ ಶಿಫಾರಸು ಮಂಗಳವಾರ ಹೊರಬಿದ್ದಿದೆ.

ಭಾರತದಲ್ಲಿ ಈ ಆಂದೋಲನ ಆರಂಭವಾಗಿದ್ದು ಹೇಗೆ?
ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಸಂಸ್ಥೆಯು ಫ್ರೀ ಬೇಸಿಕ್ಸ್‌ (internet.org) ಎಂಬ ಸೇವೆಯನ್ನು 2015ರ ಡಿಸೆಂಬರ್‌ ನಲ್ಲಿ ಜಾರಿಗೆ ತಂದಿತು. ಇದಾದ ಕೆಲವೇ ತಿಂಗಳಲ್ಲಿ ಭಾರ್ತಿ ಏರ್‌ ಟೆಲ್‌ ಕಂಪೆನಿಯು ‘ಏರ್‌ಟೆಲ್‌ ಝೀರೊ’ ಎಂಬ ಸೇವೆಯನ್ನು ಆರಂಭಿಸಿತು. 2016ರ ಫೆಬ್ರುವರಿಯಲ್ಲಿ ಈ ಎರಡೂ ಸೇವೆಗಳನ್ನು ಟ್ರಾಯ್ ನಿಷೇಧಿಸಿತು. ಫ್ರೀ ಬೇಸಿಕ್ಸ್‌ ಮತ್ತು ಏರ್‌ಟೆಲ್ ಝೀರೊ ಎರಡರಲ್ಲೂ ಸೇವಾದಾತರು ಸಿದ್ಧಪಡಿಸಿದ ಕೆಲವೊಂದು ಅಂತರ್ಜಾಲ ತಾಣಗಳು ಹಾಗೂ ಆ್ಯಪ್‌ಗಳು ಉಚಿತವಾಗಿ ಲಭ್ಯವಾಗುವಂತೆ ಮಾಡಲಾಗಿತ್ತು. ಈ ಸೇವೆಗಳನ್ನು ಪಡೆಯ ಬಯಸುವವರು ಕಂಪೆನಿಗಳ ನಿಬಂಧನೆಗಳಿಗೆ ಒಳಪಡಬೇಕಾಗಿತ್ತು. ಇದರಲ್ಲಿ ಕೆಲವರ ಪರ ಹಾಗೂ ಕೆಲವರ ವಿರುದ್ಧದ ಪಟ್ಟಿಗಳು ಇದ್ದವು. ಇದನ್ನು ಸಮರ್ಥಿಸಿಕೊಂಡಿದ್ದ ಫೇಸ್‌ಬುಕ್‌, ಪ್ರತಿಯೊಬ್ಬರಿಗೂ ಅಂತರ್ಜಾಲ ಸೇವೆ ದೊರೆಯಬೇಕು ಎಂಬುವ ಸಲುವಾಗಿ ಈ ಸೇವೆಯನ್ನು ಜಾರಿಗೆ ತರಲಾಗಿದೆ ಎಂದಿತ್ತು.

ಹೋರಾಟಗಾರರ ಆತಂಕಗಳೇನು?
ಒಂದೊಮ್ಮೆ ಮುಕ್ತ ಅಂತರ್ಜಾಲ ಜಾರಿಯಾಗದಿದ್ದಲ್ಲಿ ಸೇವಾದಾತರು ತಮ್ಮ ಇಷ್ಟದ ವಿಷಯಗಳನ್ನಷ್ಟೇ ಜನರಿಗೆ ತಲುಪಿಸುವ, ಕೆಲವನ್ನು ಉದ್ದೇಶ ಪೂರ್ವಕವಾಗಿ ಮರೆಮಾಚುವ ಸಾಧ್ಯತೆ ಇದೆ. ಇದರಲ್ಲಿ ಕೆಲ ರಾಜಕೀಯ ಪಕ್ಷಗಳಿಗೆ ಹೆಚ್ಚಿನ ಪ್ರಚಾರ, ಕೆಲವುಗಳ ಕಡೆಗಣನೆ ಸಾಧ್ಯತೆ ಹೆಚ್ಚು.
ಗ್ರಾಹಕರಿಗೆ ಇಷ್ಟವಾಗುವ, ನಾವೀನ್ಯತೆಯಿಂದ ಕೂಡಿರುವ ಆ್ಯಪ್‌ಗಳನ್ನು ಬಂದ್‌ ಮಾಡಬಹುದು ಅಥವಾ ಇಷ್ಟವಾಗುವ ತಾಣಗಳನ್ನು ರದ್ದುಪಡಿಸಬಹುದು. ಇದು ಗ್ರಾಹಕರ ಹಕ್ಕುಗಳಿಗೆ ಧಕ್ಕೆಯನ್ನುಂಟು ಮಾಡಲಿದೆ. ದರ ನಿಗದಿಯಲ್ಲಿ ತಾರತಮ್ಯವಾಗಲಿದೆ. ಇದರಿಂದ ಸೇವಾದಾತರ ವಲಯದಲ್ಲಿ ಸ್ಪರ್ಧಾತ್ಮಕ ಬೆಲೆ ನಿಗದಿ ಇಲ್ಲದೇ ಹೋಗಬಹುದು. ಸಾಂಪ್ರದಾಯಿಕ ಅಂತರ್ಜಾಲ ಬಳಕೆದಾರರು ಹಾಗೂ ಶ್ರೀಮಂತ ಬಳಕೆದಾರರು ಎಂದು ಎರಡು ಶ್ರೇಣಿಯನ್ನು ಈ ವ್ಯವಸ್ಥೆ ಹುಟ್ಟುಹಾಕಲಿದೆ ಎಂಬ ಅನುಮಾನ ಇದೆ.

ಮುಕ್ತ ಅಂತರ್ಜಾಲ ಬೇಕೆ, ಬೇಡವೇ ಎಂಬ ಚರ್ಚೆ ಅಮೆರಿಕದಲ್ಲಿ ನಡೆಯುತ್ತಿರುವಾಗ ಭಾರತದಲ್ಲಿ ಜಾರಿಯ ಮಾತೇಕೆ?
ಭಾರತದಲ್ಲಿ ಮೊಬೈಲ್‌ ಬಳಕೆ ಈಗ ನಿತ್ಯಬದುಕಿನಲ್ಲಿ ಹಾಸುಹೊಕ್ಕಾಗುತ್ತಿದೆ. ಅಕ್ಷರ ಹಾಗೂ ಧ್ವನಿಗಷ್ಟೇ ಬಳಕೆಯಾಗುತ್ತಿದ್ದ ಮೊಬೈಲ್‌ಗಳು ಈಗ ವಾಟ್ಸ್‌ ಆ್ಯಪ್‌, ವೈಬರ್‌, ಸ್ಕೈಪ್‌ ಸೇವೆಗಳನ್ನು ನೀಡುವಷ್ಟು ವ್ಯಾಪಕವಾಗಿವೆ. ಇಂಥ ಕಾಲಘಟ್ಟದಲ್ಲಿ ಏರ್‌ಟೆಲ್‌, ವೊಡಾಫೋನ್‌ ಹಾಗೂ ರಿಲಯನ್ಸ್‌ ಕಂಪೆನಿಗಳು ಓವರ್‌ ದ ಟಾಪ್‌ (ಒಟಿಟಿ) ಸೇವೆಗಳಾದ ಸ್ಕೈಪ್‌, ವಾಟ್ಸ್‌ಆ್ಯಪ್‌ ಇತ್ಯಾದಿಗಳಿಗೆ ಶುಲ್ಕ ವಿಧಿಸುವ ಅಥವಾ ಉಚಿತವಾಗಿ ನೀಡುವ ಸ್ವಾತಂತ್ರ್ಯ ತಮಗೆ ಬೇಕು ಎಂಬ ಬೇಡಿಕೆ ಇಟ್ಟಿವೆ. ಉದಾಹರಣೆಗೆ ಯೂಟ್ಯೂಬ್‌ ಸೇವೆಯ ಬದಲು ಏರ್‌ಟೆಲ್‌ ತನ್ನದೇ ಆದ ವಿಂಕ್‌ ಎಂಬ ಸಂಗೀತದ ಆ್ಯಪ್‌ ಬಳಸುವಂತೆ ಜನರಿಗೆ ಉಚಿತವಾಗಿ ನೀಡುವುದು, ಮೂರನೇ ವ್ಯಕ್ತಿಯ ಇಂಥದ್ದೇ ಆ್ಯಪ್‌ಗಳಿಗೆ ಶುಲ್ಕ ವಿಧಿಸುವುದು ಇತ್ಯಾದಿ.

ಇದು ಗ್ರಾಹಕರ ಮೇಲೆ ಹೇಗೆ ಪರಿಣಾಮ ಬೀರಲಿದೆ?
ಒಂದೊಮ್ಮೆ ಮುಕ್ತ ಅಂತರ್ಜಾಲ ಇಲ್ಲ ಎಂದಾದರೆ ಸೇವಾದಾತರು ತಮಗೆ ಬೇಕಾದಂತೆ ದರ ಹಾಗೂ ಬ್ಯಾಂಡ್‌ವಿಡ್ತ್‌ ಏರಿಳಿತ ಮಾಡಬಹುದು. ಒಟಿಟಿ ಸೇವೆಗಳಾದ ಸ್ಕೈಪ್‌ ಹಾಗೂ ವಾಟ್ಸ್‌ಆ್ಯಪ್‌ಗಳು ಇಂಥ ಸೇವಾದಾತರಿಗೆ ಹಣ ನೀಡಬೇಕು. ಇಲ್ಲವೇ ಅಂಥ ಸೇವೆಗಳಲ್ಲಿ ವ್ಯತ್ಯಯ ಆಗಬಹುದು. ಕಳುಹಿಸಿದ ಸಂದೇಶ ಬಹಳ ತಡವಾಗಿ ಸೇರಬಹುದು. ಹೆಚ್ಚು ಬ್ಯಾಂಡ್‌ವಿಡ್ತ್ ಬೇಡುವ ಯೂಟ್ಯೂಬ್‌ ಸೇವೆಗೆ ಹೆಚ್ಚಿನ ಶುಲ್ಕ ಭರಿಸಬೇಕಾಗಬಹುದು. ಈ ಎಲ್ಲಾ ಹೊರೆ ಗ್ರಾಹಕನ ಮೇಲೆಯೇ ಬೀಳಲಿದೆ. ಜತೆಗೆ ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಗೂ ಇದು ಹೊಡೆತ ಕೊಡಲಿದೆ.
ಉದಾಹರಣೆಗೆ, ನೆಟ್‌ ಪ್ಯಾಕ್‌ ₹300ರಷ್ಟು ಹಾಕಿಸಿಕೊಂಡರೆ ಭಾರತೀಯ ಅಂತರ್ಜಾಲ ತಾಣಗಳನ್ನಷ್ಟೇ ನೋಡಬಹುದು. ಅಂತರರಾಷ್ಟ್ರೀಯ ತಾಣಗಳು ಬೇಕಾದಲ್ಲಿ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ. ಇಲ್ಲವೇ ಆಯಾ ವಿಷಯ ವಸ್ತುವಿಗೆ ಬೇರೆ ಬೇರೆ ಪ್ಯಾಕೇಜ್‌ ಬರಬಹುದು. ಹೀಗಾಗಿ ಗ್ರಾಹಕರು ತಮ್ಮ ಅಗತ್ಯಗಳಿಗೆ ತಕ್ಕಂತೆ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಇದನ್ನು ನಿಯಂತ್ರಿಸಲು ಕಾನೂನುಗಳಿವೆಯೇ?
ಮುಕ್ತ ಅಂತರ್ಜಾಲ ಎಂಬುದು ಒಂದು ಪರಿಕಲ್ಪನೆಯೇ ಹೊರತು ಅದೊಂದು ಕಾಯ್ದೆ ಅಲ್ಲ. ಈ ಹಿಂದೆ ಇದ್ದ ತಂತ್ರಜ್ಞಾನ ಈಗ ಬದಲಾಗಿರುವುದರಿಂದ ಇಂಥದ್ದೊಂದು ಈಗ ಚರ್ಚೆಯಲ್ಲಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ– 2000 ಅಡಿಯಲ್ಲಿ ಸೇವಾದಾತರಿಗೆ ಅಂಥ ಯಾವುದೇ ನಿರ್ಬಂಧಗಳಿಲ್ಲ.

ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಏನು ಮಾಡಲಿದೆ?
ಟ್ರಾಯ್‌ 17 ಪುಟಗಳ ವರದಿಯನ್ನು ನೀಡಿದೆ. ದೂರಸಂಪರ್ಕ ಸೇವಾದಾತರ ವಲಯದಿಂದ ಇದಕ್ಕೆ ಟೀಕೆಗಳೂ ವ್ಯಕ್ತವಾಗುತ್ತಿವೆ. ಮತ್ತೊಂದೆಡೆ ಗ್ರಾಹಕ ವಲಯದಿಂದ ಬೆಂಬಲವೂ ವ್ಯಕ್ತವಾಗುತ್ತಿದೆ. ಬಹಳಷ್ಟು ಆ್ಯಪ್‌ಗಳು ಬಳಕೆದಾರರು ಇರುವ ಸ್ಥಳದ ನಿಖರ ಮಾಹಿತಿಯನ್ನು ಜಿಪಿಎಸ್‌ ಮೂಲಕ ಸಂಗ್ರಹಿಸಿ ನೀಡಲಿವೆ. ಆದರೆ ಇದೇ ಮಾಹಿತಿ ಅಪರಾಧ ಕೃತ್ಯಗಳಿಗೂ ಬಳಕೆಯಾಗುವುದನ್ನು ತಳ್ಳಿ ಹಾಕುವಂತಿಲ್ಲ. ಜತೆಗೆ ಇಂಥ ಒಟಿಟಿ ಸೇವೆಗಳು ಸರ್ಕರದ ಬೊಕ್ಕಸಕ್ಕೆ ದೊಡ್ಡ ನಷ್ಟವನ್ನುಂಟು ಮಾಡುತ್ತಿವೆ ಎಂಬ ಮಾತೂ ಕೇಳಿಬರುತ್ತಿದೆ.

ಮುಂದೇನು?
ಅಂತರ್ಜಾಲ ಬಳಕೆದಾರರು ಈಗಾಗಲೇ ಅಭಿಯಾನ ಆರಂಭಿಸಿದ್ದಾರೆ. ಸೇವಾದಾತರು ಮುಕ್ತ ಅಂತರ್ಜಾಲ ಸೇವೆಯನ್ನು ತಮ್ಮಿಂದ ಕಸಿಯುತ್ತಿದ್ದಾರೆ ಎಂಬ ತಮ್ಮ ಅಳಲನ್ನು ಟ್ರಾಯ್‌ಗೆ ಕಳುಹಿಸುತ್ತಿದ್ದಾರೆ. ಈಗಾಗಲೇ ಮೂರು ಲಕ್ಷಕ್ಕೂ ಅಧಿಕ ದೂರುಗಳು ಇ–ಮೇಲ್ (www.savetheinternet.in) ಮೂಲಕ ಟ್ರಾಯ್ ತಲುಪಿವೆ. ಅಭಿಯಾನಕ್ಕೆ ಹೆಚ್ಚು ಜನರನ್ನು ಸೆಳೆಯುವ ಸಲುವಾಗಿ ಕೆಲವೊಂದು ಗುಂಪುಗಳು ಸೇವಾದಾತರ ದ್ವಂದ್ವ ನೀತಿಯನ್ನು ವಿರೋಧಿಸಿ ಲೇವಡಿ ಮಾಡುವ ವಿಡಿಯೊಗಳನ್ನು ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದಾರೆ. ಇವುಗಳು ಈಗಾಗಲೇ ಲಕ್ಷಗಟ್ಟಲೆ ವೀಕ್ಷಣೆಗೆ ಒಳಪಟ್ಟಿವೆ. ರಾಜಕೀಯ ಪಕ್ಷಗಳೂ ಈಗ ಇದಕ್ಕೆ ಧನಿಗೂಡಿಸಲು ಆರಂಭಿಸಿವೆ.

Comments
ಈ ವಿಭಾಗದಿಂದ ಇನ್ನಷ್ಟು
ಎಂಜಿನ್‌ ದೋಷ; ವಿಮಾನ ಹಾರಾಟ ಸ್ಥಗಿತ

ಏನು–ಎತ್ತ
ಎಂಜಿನ್‌ ದೋಷ; ವಿಮಾನ ಹಾರಾಟ ಸ್ಥಗಿತ

17 Mar, 2018

ಏನು–ಎತ್ತ
ವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಗೆ ಮರಣ ಇಚ್ಛೆಯ ಉಯಿಲು

ಜೀವಿಸುವ ಸ್ವಾತಂತ್ರ್ಯದ ಅಡಿಯಲ್ಲಿ ಘನತೆಯಿಂದ ಸಾಯುವ ಸ್ವಾತಂತ್ರ್ಯ ಕೂಡ ಇದೆ ಎಂದು ಕೋರ್ಟ್‌ ಹೇಳಿರುವುದು ಐತಿಹಾಸಿಕ. ಇದರ ವಿವರಣೆ ಇಲ್ಲಿದೆ

14 Mar, 2018
ಕನ್ನಡಧ್ವಜ: ಮೂರು ರಂಗು, ನೂರಾರು ಗುಂಗು

ಏನು–ಎತ್ತ?
ಕನ್ನಡಧ್ವಜ: ಮೂರು ರಂಗು, ನೂರಾರು ಗುಂಗು

10 Mar, 2018
ವಿದ್ಯುತ್‌ಚಾಲಿತ ವಾಹನಗಳ ಭವಿಷ್ಯ

ಏನು– ಎತ್ತ?
ವಿದ್ಯುತ್‌ಚಾಲಿತ ವಾಹನಗಳ ಭವಿಷ್ಯ

3 Mar, 2018
ಜೀವರಕ್ಷಕ ಲಸಿಕೆಯಿಂದ ಕಂಟಕವೇ?

ಏನು–ಎತ್ತ
ಜೀವರಕ್ಷಕ ಲಸಿಕೆಯಿಂದ ಕಂಟಕವೇ?

24 Feb, 2018