ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಕಕಥೆ

ವೈಖಾಖದ ಹುಣ್ಣಿಮೆ 4
Last Updated 1 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬುದ್ಧಭಗವಂತನ ಜೀವನ–ಉಪದೇಶಗಳನ್ನು ಒಳಗೊಂಡ ಒಟ್ಟು ವಾಙ್ಮಯವನ್ನು ‘ತ್ರಿ–ಪಿಟಕ’ಗಳು ಎನ್ನುತ್ತಾರೆ. ‘ಮೂರು ಬುಟ್ಟಿಗಳು’ ಎಂದು ಇದರ ಅರ್ಥ. 1. ವಿನಯ–ಪಿಟಕ, 2. ಸುತ್ತ–ಪಿಟಕ ಮತ್ತು 3. ಅಭಿಧಮ್ಮ–ಪಿಟಕ – ಇವೇ ಆ ಮೂರು ಪಿಟಕಗಳು; ಇವು ಪಾಳೀಭಾಷೆಯಲ್ಲಿವೆ. ಈ ಒಂದೊಂದು ಪಿಟಕದಲ್ಲೂ ಮತ್ತೆ ಹಲವು ಕವಲುಗಳಿವೆ. ವಿಚಾರದ ದೃಷ್ಟಿಯಿಂದ ಮಾತ್ರವಲ್ಲದೆ, ಶೈಲಿಯ ದೃಷ್ಟಿಯಿಂದಲೂ ತುಂಬ ವಿಶಿಷ್ಟವೂ ಮಹತ್ವವೂ ಆದಂಥವು ಇವು; ಸಾಹಿತ್ಯಿಕವಾಗಿಯೂ ತುಂಬ ಸೊಗಸಾದ ಭಾಗಗಳಿವೆ.

ಸುತ್ತ–ಪಿಟಕದಲ್ಲಿ ಐದು ನಿಕಾಯಗಳಿವೆ: 1. ದೀಘನಿಕಾಯ, 2. ಮಜ್ಝಿಮನಿಕಾಯ, 3. ಸಂಯುತ್ತನಿಕಾಯ, 4. ಅಂಗುತ್ತರನಿಕಾಯ 5. ಖುದ್ದಕನಿಕಾಯ. ಕೊನೆಯದಾದ ಖುದ್ದಕನಿಕಾಯದಲ್ಲಿ ಹದಿನೈದು (ಕೆಲವು ಸಂಪ್ರದಾಯಗಳಲ್ಲಿ ಹದಿನೆಂಟು) ಕೃತಿಗಳನ್ನು ಸೇರಿಸಲಾಗಿದೆ; ಇವುಗಳಲ್ಲಿ ಒಂದು ‘ಜಾತಕ’ ಅಥವಾ ‘ಜಾತಕಕಥೆಗಳು’.

‘ಜಾತಕ’ ಎಂದರೆ ಜನ್ಮಕ್ಕೆ ಸಂಬಂಧಪಟ್ಟದ್ದು ಎಂದರ್ಥ. ಜಾತಕಕಥೆಗಳು ಗೌತಮಬುದ್ಧನ ಪೂರ್ವಜನ್ಮಕ್ಕೆ ಸಂಬಂಧಿಸಿದ ಕಥೆಗಳು. ಬೌದ್ಧಸಾಹಿತ್ಯದಲ್ಲಿ ಇವು ವಿಶಿಷ್ಟ ಸ್ಥಾನ ಪಡೆದಿವೆ. ಗೌತಮ/ಸಿದ್ಧಾರ್ಥನು ಬುದ್ಧನಾಗುವ ಮೊದಲು ಹಲವು ಜನ್ಮಗಳನ್ನೆತ್ತಿ ಪಾರಮಿತಗಳನ್ನು ಪೂರೈಸಿ ಲೋಕಸಂಗ್ರಹ ಮಾಡಿದನೆಂಬ ಕಲ್ಪನೆ ಈ ಕಥೆಗಳ ಮೂಲ. ನಿರ್ವಾಣ ಪಡೆಯುವ ಮೊದಲು, ನಿರ್ವಾಣದ ಹೊಸ್ತಿಲಲ್ಲಿರುವ ಸಿದ್ಧಾರ್ಥನೇ ‘ಬೋಧಿಸತ್ತ್ವ’ ಎನಿಸಿಕೊಳ್ಳುತ್ತಾನೆ.

ಜಾತಕದಲ್ಲಿ ಒಟ್ಟು 547 ಕಥೆಗಳಿವೆ. ಕಥನಗಳು, ಪ್ರಸಂಗಗಳು, ನೀತಿಕಥೆಗಳು – ಹೀಗೆ ಇವು ವೈವಿಧ್ಯಮಯವಾಗಿವೆ. ಇಲ್ಲಿಯ ನಿರೂಪಣೆಗಳಲ್ಲಿ ಬರುವ ಪಾತ್ರಗಳು ಎಂದರೆ ದೇವತೆಗಳು, ಯಕ್ಷರು, ನಾಗರು, ಕಿನ್ನರರು, ಪಿಶಾಚಿಗಳು, ಮನುಷ್ಯರು, ಪ್ರಾಣಿಗಳು, ಪಕ್ಷಿಗಳು. ಈ ಕಥೆಗಳ ಶೈಲಿ ಗದ್ಯ, ಗಾಹೆ, ಸಂವಾದ, ಕಥನಗಳ ರೂಪದಲ್ಲಿವೆ.

ನಿದರ್ಶನಕ್ಕೆ ಒಂದು ಜಾತಕಕಥೆಯ ಸಂಗ್ರಹವನ್ನು ಇಲ್ಲಿ ನೋಡಬಹುದು. ವಾರಾಣಸಿಯನ್ನು ಆಗ ಬ್ರಹ್ಮದತ್ತನು ಆಳುತ್ತಿದ್ದ. ಬೋಧಿಸತ್ತ್ವನು ವ್ಯಾಪಾರಿಗಳ ಮನೆಯಲ್ಲಿ ಹುಟ್ಟಿದ್ದ. ವಾರಾಣಸಿಯ ಬೀದಿಯಲ್ಲಿ ಪರಿವ್ರಾಜಕನೊಬ್ಬ ಭಿಕ್ಷಾಟನೆಯನ್ನು ಮಾಡುತ್ತಿದ್ದ. ಹೀಗೆ ಸುತ್ತುತ್ತ ಟಗರುಗಳ ಕಾಳಗ ನಡೆಯುವ ಜಾಗಕ್ಕೆ ಅವನು ಬಂದ. ಗುಂಪಿನಲ್ಲಿದ್ದ ಟಗರೊಂದು ಈ ಪರಿವ್ರಾಜಕನನ್ನು ನೋಡಿ ಹಿಂದುಹಿಂದಕ್ಕೆ ಹೋಗತೊಡಗಿತು. ಅದನ್ನು ನೋಡಿದ ಅವನು, ಆ ಟಗರು ತನಗೆ ಮರ್ಯಾದೆಯನ್ನು ತೋರಿಸುತ್ತಿದೆಯೆಂದು ತಿಳಿದುಕೊಂಡು ಸಂಭ್ರಮಿಸಿದ. ‘ಇಷ್ಟು ಜನರಲ್ಲಿ ಆ ಒಂದು ಟಗರಿಗೆ ನನ್ನ ಗುಣ ಗೊತ್ತಾಗಿದೆ’ ಎಂದು ಅದಕ್ಕೆ ಕೈಮುಗಿದು ನಿಂತ. ಅಲ್ಲಿಯೇ ಅಂಗಡಿಯಲ್ಲಿ ಕುಳಿತಿದ್ದ ವ್ಯಾಪಾರಿ ಈ ದೃಶ್ಯವನ್ನು ನೋಡಿದ. ಅವನು ಆ ಪರಿವ್ರಾಜಕನನ್ನು ಎಚ್ಚರಿಸಿದ. ಆ ಟಗರು ಅವನ ಮೇಲೆ ದಾಳಿ ಮಾಡಲು ಹೊಂಚು ಹಾಕುತ್ತಿದೆ ಎಂದು ಕೂಗಿದ.

ಅಷ್ಟರಲ್ಲಿ ಆ ಟಗರು ವೇಗವಾಗಿ ಬಂದು ಆ ಪರಿವ್ರಾಜಕನ ತೊಡೆಗೆ ಡಿಕ್ಕಿ ಹೊಡೆಯಿತು. ಅವನು ನೆಲಕ್ಕೆ ಉರುಳಿದ; ನೋವಿನಿಂದ ನರಳಿದ. ‘ಪೂಜಿಸಬಾರದವನನ್ನು ಪೂಜಿಸಿದರೆ, ಬುದ್ಧಿಯಿಲ್ಲದ ನಾನು ಇಂದು ಟಗರಿನಿಂದ ಅಪಾಯಕ್ಕೆ ಒಳಗಾದಂತೆ, ಅವರೂ ಕೇಡಿಗೆ ತುತ್ತಾಗುತ್ತಾರೆ’ ಎಂದು ಗಾಹೆಯನ್ನು ಹೇಳಿ, ಅಲ್ಲಿಯೇ ಮರಣವನ್ನು ಹೊಂದಿದ.

– ಅವಲೋಕಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT