ನುಡಿಸಿರಿಗೆ ಮುನ್ನುಡಿಯಾದ ಸಾಂಸ್ಕೃತಿಕ ಮೆರವಣಿಗೆ

ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಶುಕ್ರವಾರದಿಂದ ಮೂರು ದಿನ ನಡೆಯು ಆಳ್ವಾಸ್ ನುಡಿಸಿರಿ ರಾಷ್ಟ್ರೀಯ ಸಮ್ಮೇಳನಕ್ಕೆ ಮೊದಲು ಸುಂದರಿ ಆನಂದ ಆಳ್ವ ಆವರಣದಲ್ಲಿ ವೈಭವದ ಸಾಂಸ್ಕೃತಿಕ ಮೆರವಣಿಗೆ ನಡೆಯಿತು

ನುಡಿಸಿರಿ ಮೆರವಣಿಗೆಯ ಒಂದು ಸುಂದರ ನೋಟ.

ವಿದ್ಯಾಗಿರಿ (ಮೂಡುಬಿದಿರೆ): ಮಂಜು ಮುಸುಕಿದ ವಾತಾವರಣದಲ್ಲಿ ಅತ್ತ ಸೂರ್ಯನ ಕಿರಣಗಳು ವಿದ್ಯಾಗಿರಿಯಲ್ಲಿ ಭೂಮಿಯನ್ನು ಸ್ಪರ್ಶಿಸುತ್ತಿರುವ ಹೊತ್ತಿನಲ್ಲಿ ಕನ್ನಡ ಹಬ್ಬದ ತೇರು ಎಳೆಯುವ ಆಳ್ವಾಸ್ ನುಡಿಸಿರಿ 2017ಕ್ಕೆ ಕಲಾ ತಂಡಗಳ ವರ್ಣರಂಜಿತ ಮೆರವಣಿಗೆಯೊಂದಿಗೆ ಚಾಲನೆ ದೊರೆಯಿತು.

ಬೆಳಿಗ್ಗೆ 8-30ಕ್ಕೆ ಸರಿಯಾಗಿ ಮೂಲ್ಕಿ ಚರ್ಚ್‌ನ ಧರ್ಮಗುರು ಎಫ್.ಎಕ್ಸ್.ಗೋಮ್ಸ್ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಸಾಂಸ್ಕೃತಿಕ ಮೆರವಣಿಗೆಯನ್ನು ಉದ್ಘಾಟಿಸುತ್ತಿದ್ದಂತೆ ಸಿಡಿಮದ್ದಿನ (ಗರ್ನಾಲ್‌) ಸದ್ದು ಮಾರ್ದನಿಸಿತು.

ಪೂತನಿಯ ವೇಷಧಾರಿ ಕಾರ್ಕಳದ ರಂಜಿತ್ ಅವರು ಬಾಯಿಯಿಂದ ಬೆಂಕಿಯನ್ನು ಉಗುಳುತ್ತಾ ಮೆರವಣಿಗೆಯ ಮುಂದೆ ಹೊರಟರು. ಶಂಖದ ನಾದ, ಕೊಂಬಿನ ಮೈನವಿರೇಳಿಸುವ ಧ್ವನಿ, ಹರೀಶ್ ಮೂಡುಬಿದಿರೆ ತಂಡದ ಡೋಲಿನ ಪಾರಮ್ಯ, ಚೆಂಡೆ ವಾದನದ ಸೊಗಸು, ಬಂಟ್ವಾಳದ ಚಿಲಿಪಿಲಿ ಬೊಂಬೆಗಳು, ಚಾಮರಾಜನಗರದ ಗೊರವರ ಕುಣಿತ, ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗ, ಹೀಗೆ ಒಂದನ್ನೊಂದು ಮೀರಿಸುವ ಕಲಾ ತಂಡಗಳು ಮೆರವಣಿಗೆಯ ಉದ್ದಕ್ಕೂ ಪ್ರದರ್ಶನಗಳನ್ನು ನೀಡುತ್ತಾ ಸಾಗಿ ಬಂದಾಗ ಇಕ್ಕಡೆಗಳಲ್ಲಿ ನಿಂತ ಸಹಸ್ರಾರು ಸಾಹಿತ್ಯಾಭಿಮಾನಿಗಳ ಕಣ್ಮನ ತಣಿಸಿದವು.

ಇನ್ನೊಂದೆಡೆ ಕರಾವಳಿಯ ಗಂಡುಕಲೆ ಯಕ್ಷಗಾನ, ಡೊಳ್ಳುಕುಣಿತ, ದೇವರಾಜ್ ಮಂಡ್ಯ ಅವರ ಪೂಜಾ ಕುಣಿತ, ವೀರಭದ್ರನ ಕುಣಿತ, ಆಟಿಕಳಂಜ, ಮಂಗಳೂರು ಡೋಲು, ಕೋಳಿಗಳು, ಕೃಷಿ ಪರಂಪರೆಯನ್ನು ಬಿಂಬಿಸಿದ ತರಕಾರಿ ಹೊತ್ತ ಮಹಿಳೆಯರು, ಹುಲಿವೇಷಧಾರಿಗಳ ನರ್ತನ, ತುಳುನಾಡಿನ ವಾದ್ಯ ಕರಾವಳಿ ಜಿಲ್ಲೆಗಳ ಸಹಿತ ಇತರ ಜಿಲ್ಲೆಗಳ ಜನಪದ ಪರಂಪರೆಯೊಂದಿಗೆ ಕರ್ನಾಟಕದ ಸಂಸ್ಕೃತಿಯನ್ನು ಪ್ರತಿಬಿಂಬಿಸಿದವು. ರೋಚಕತೆಯ ಸಂಚಲನ ಮೂಡಿಸಿದ ಪಂಜಾಬಿ ಬ್ಯಾಂಡ್ ತಂಡ, ಕೇರಳದ ಚೆಂಡೆ, ರಾಜಸ್ಥಾನದ ಜಾನಪದ ಕಲಾವಿದರ ಸೊಬಗಿನೊಂದಿಗೆ ವಿವಿಧತೆಯಲ್ಲಿ ಏಕತೆಯನ್ನು ಸಾರುವ ರೀತಿಯಲ್ಲಿ ಸಾಂಸ್ಕೃತಿಕ ತಂಡದ ವೈವಿಧ್ಯತೆ ಗಮನಸೆಳೆದವು. ಇವರೊಂದಿಗೆ ಬಿದಿರೆ ಆರ್ಟ್ಸ್‌ನ ಬೊಂಬೆ ಕುಣಿತ, ಎನ್ಸಿಸಿ ವಿದ್ಯಾರ್ಥಿಗಳ ಶಿಸ್ತಿನ ನಡಿಗೆ, ಕೇರಳದ ಪುಲಿಕಲ್... ಹೀಗೆ ರಾಜ್ಯದ ಗಡಿ ದಾಟಿ ದೇಶದ ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ನುಡಿಸಿರಿ ಮೆರವಣಿಗೆಯಲ್ಲಿ ಪರಿಚಯಿಸಲಾಯಿತು.

80ಕ್ಕೂ ಹೆಚ್ಚು ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡವು.ಆಳ್ವಾಸ್ ವಿದ್ಯಾರ್ಥಿಗಳ ಡೋಲು ಕುಣಿತ, ಕೇರಳ ಮಾದರಿಯ ಚೆಂಡೆ ಮೆರವಣಿಗೆಯಲ್ಲಿ ಗಮನಸೆಳೆದವು. ಮೆರವಣಿಗೆಯ ಕೊನೆಯಲ್ಲಿ ಕನ್ನಡದ ತೇರು ಸಾಗಿಬಂದರೆ ಅದರ ಹಿಂದೆ ಸಮ್ಮೇಳನದ ಅಧ್ಯಕ್ಷ  ನಾಗತಿಹಳ್ಳಿ ಚಂದ್ರಶೇಖರ್, ಉದ್ಘಾಟಕರಾದ ಡಾ.ಸಿ.ಎನ್ ರಾಮಚಂದ್ರನ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್, ಡಾ.ಎಂ. ಮೋಹನ ಆಳ್ವ ಹಾಗೂ ಅತಿಥಿಗಳು ಹೆಜ್ಜೆ ಹಾಕಿದರು.

ಬೆಳಿಗ್ಗೆ 8-30ಕ್ಕೆ ಆರಂಭಗೊಂಡ ಮೆರವಣಿಗೆ ಸುಮಾರು 1 ಗಂಟೆ ವಿದ್ಯಾಗಿರಿ ಆವರಣದಲ್ಲಿ ಸಾಂಸ್ಕೃತಿಕ ಲೋಕದ ದರ್ಶನ ಮಾಡಿಸಿತು. ಸಮ್ಮೇಳನದ ರೂವಾರಿ ಡಾ.ಎಂ. ಮೋಹನ ಆಳ್ವ ಅವರ ಶಿಸ್ತು, ಸಮಯಪ್ರಜ್ಞೆಯಿಂದಾಗಿ ಮೆರವಣಿ ಸಾಂಗವಾಗಿ ನಡೆದು ಕ್ಲಪ್ತ ಸಮಯದಲ್ಲಿ ಸಂಪನ್ನಗೊಂಡಿತು.

 

Comments
ಈ ವಿಭಾಗದಿಂದ ಇನ್ನಷ್ಟು

ಸುಳ್ಯ
ಮಂತ್ರಾಲಯದ ಮೂಲ ಮೃತಿಕೆ ಶ್ರೇಷ್ಠ:

‘ಮಂತ್ರಾಲಯದ ಮೂಲ ಮೃತ್ತಿಕೆ ಬಹಳ ಶ್ರೇಷ್ಠವಾಗಿದ್ದು, ಇದರಲ್ಲಿ ವಿಜ್ಞಾನಿಗಳಿಂದಲೂ ಕಂಡುಹಿಡಿಯಲಾಗದ ಶಕ್ತಿ ಅದರಲ್ಲಿದೆ. ಮೃತಿಕೆ ಅತೀಂದ್ರಿಯ ಶಕ್ತಿಯನ್ನು ಹೊಂದಿದೆ ’ಎಂದು ಶ್ರೀಕ್ಷೇತ್ರ ರಾಘವೇಂದ್ರ ಸ್ವಾಮಿ...

25 Apr, 2018
ಇಂದಿನಿಂದ ಖಾಸಗಿ ಬಸ್‌ ದರ ಹೆಚ್ಚಳ

ಮಂಗಳೂರು
ಇಂದಿನಿಂದ ಖಾಸಗಿ ಬಸ್‌ ದರ ಹೆಚ್ಚಳ

25 Apr, 2018
‘ಸಂವಿಧಾನ ಬದಲಿಸಲು ಅವಕಾಶ ನೀಡದಿರಿ’

ಮಂಗಳೂರು
‘ಸಂವಿಧಾನ ಬದಲಿಸಲು ಅವಕಾಶ ನೀಡದಿರಿ’

24 Apr, 2018
ಕೇಂದ್ರ ಮಾರುಕಟ್ಟೆಯಲ್ಲಿ ಸ್ವಯಂಪ್ರೇರಿತ ಬಂದ್‌

ಮಂಗಳೂರು
ಕೇಂದ್ರ ಮಾರುಕಟ್ಟೆಯಲ್ಲಿ ಸ್ವಯಂಪ್ರೇರಿತ ಬಂದ್‌

24 Apr, 2018

ಮಂಗಳೂರು
ಒಂದೇ ದಿನ 26 ಮಂದಿ ನಾಮಪತ್ರ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿಧಾನಸಭಾ ಚುನಾವಣೆಯ ಕಾವು ಏರಿದ್ದು, ಸಚಿವ ಯು.ಟಿ.ಖಾದರ್‌, ಶಾಸಕರಾದ ಶಕುಂತಳಾ ಶೆಟ್ಟಿ, ಜೆ.ಆರ್‌.ಲೋಬೊ, ಬಿ.ಎ.ಮೊಹಿಯುದ್ದೀನ್ ಬಾವಾ ಸೇರಿದಂತೆ 26 ಅಭ್ಯರ್ಥಿಗಳು...

24 Apr, 2018