ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆತಿಪ್ಪೂರು ‘ಸವಣಪ್ಪ’ನಿಗೆ ಮಹಾಮಜ್ಜನ ಭಾಗ್ಯ

Last Updated 2 ಡಿಸೆಂಬರ್ 2017, 5:13 IST
ಅಕ್ಷರ ಗಾತ್ರ

ಭಾರತೀನಗರ: ‘ಪ್ರಾಚೀನ ಜೈನ ಕಾಶಿ’ ಎಂದೇ ಕರೆಯಲ್ಪಡುವ ಸಮೀಪದ ಅರೆತಿಪ್ಪೂರು ಗ್ರಾಮದ ದೊಡ್ಡ ಬೆಟ್ಟ (ಕನಕಗಿರಿ)ದಲ್ಲಿರುವ ‘ಸವಣಪ್ಪ’ ಎಂದೇ ಪ್ರಸಿದ್ಧಿಯಾಗಿರುವ ಐತಿಹಾಸಿಕ ಬಾಹುಬಲಿ ಮೂರ್ತಿಗೆ ಇದೇ ಮೊದಲ ಬಾರಿಗೆ ಮಹಾಮಜ್ಜನದ ಭಾಗ್ಯ ಒದಗಿಬಂದಿದೆ.

ಬಾಹುಬಲಿ ಮೂರ್ತಿಗೆ ಡಿ.3ರ ಭಾನುವಾರ ಮಹಾಮಜ್ಜನ ನೆರವೇರಿ ಸಲು ಬಾಹುಬಲಿ ದಿಗಂಬರ ತೀರ್ಥ ಕ್ಷೇತ್ರ ಟ್ರಸ್ಟ್‌ ಸದಸ್ಯರು ಹಾಗೂ ಜೈನ ಮುನಿಗಳು ಸಕಲ ಸಿದ್ಧತೆ ಮಾಡಿ ಕೊಂಡಿದ್ದಾರೆ. ಮೂರು ದಿನ 14 ಅಡಿ ಎತ್ತರದ ಏಕಶಿಲಾ ಮೂರ್ತಿ ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗ ದರ್ಶನದಲ್ಲಿ 13 ಮಂದಿ ನಿರ್ವಾಣ ಮುನಿಗಳು ಮಜ್ಜನ ನೆರವೇರಿಸಲಿದ್ದಾರೆ.

ಇದರ ಅಂಗವಾಗಿ ಬೆಟ್ಟದ ತಪ್ಪಲಿನಲ್ಲಿ ನೂತನವಾಗಿ ಸ್ಥಾಪಿತ ವಾಗಿರುವ ಆದಿನಾಥ ತೀರ್ಥಂಕರ ಜೈನ ಬಸದಿಯಲ್ಲಿ ಶುಕ್ರವಾರ ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ನವ ಕಳಶದ ಬೃಹತ್‌ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಆರತಿಪುರದ ಬಾಹುಬಲಿ ದಿಗಂಬರ ಜೈನ ಸಿದ್ದ ಕ್ಷೇತ್ರ ಟ್ರಸ್ಟ್‌ ಅಧ್ಯಕ್ಷ ಸಿದ್ದಾಂತ ಕೀರ್ತಿ ಸ್ವಾಮೀಜಿ ಪೂಜಾ ಕೈಂಕರ್ಯಗಳ ನೇತೃತ್ವ ವಹಿಸಿದ್ದರು. ಈ ಸಂದರ್ಭ ನಿರ್ವಾಣ ಮುನಿಗಳು ಹಾಜರಿದ್ದರು.

ಶುಕ್ರವಾರ ಬೆಳಿಗ್ಗೆ 8ರಿಂದ ಆರಂಭಗೊಂಡ ಪೂಜಾ ಕೈಂಕರ್ಯಗಳ ಭಾಗವಾಗಿ ಸಮೀಪದ ಶಿಂಷಾ ನದಿಯ ನೀರು, ಜೊತೆಗೆ ಸುತ್ತಮುತ್ತಲ ಗ್ರಾಮಗಳ ಬಾಯಿಯ ನೀರು ತಂದು ಕಳಶ ಆರಾಧನೆ ನಡೆಸಲಾಯಿತು. ಭಾನುವಾರ ನಡೆಯುವ ಮಹಾಮಸ್ತಕಾಭಿಷೇಕ ಉತ್ಸವಕ್ಕೆ ವಿವಿಧೆಡೆಯಿಂದ ಸಾವಿರಾರು ಪ್ರವಾಸಿಗರು, ವಿವಿಧ ರಾಜ್ಯಗಳಿಂದ ಜೈನ ನಿರ್ವಾಣ ಮುನಿಗಳು ಆಗಮಿಸುವ ನಿರೀಕ್ಷೆ ಇದೆ.

ಸವಣಪ್ಪನ ವೈಶಿಷ್ಟ್ಯ: ಇಲ್ಲಿ ಶ್ರವಣ ಬೆಳಗೊಳಕ್ಕಿಂತಲೂ 30 ವರ್ಷ ಮೊದಲೇ ಬಾಹುಬಲಿ ಮೂರ್ತಿ ಸ್ಥಾಪಿಸಲಾಗಿದೆ. ಗಂಗರಸ ಚಾವುಂಡರಾಯನಿಗೆ ಇಲ್ಲಿಂದಲೇ ಶ್ರವಣಬೆಳಗೊಳ ನಿರ್ಮಾಣಕ್ಕೆ ಸ್ಫೂರ್ತಿ ಸಿಕ್ಕಿತೆಂದು ಹೇಳಲಾಗಿದೆ.

ಕ್ರಿ.ಶ 9ನೇ ಶತಮಾನಕ್ಕೆ ಸೇರಿದ ಬೆಟ್ಟದ ಮೇಲಣ ಬೋಳು ಬಂಡೆಯ ಮೇಲೆ 14.5 ಅಡಿ ಎತ್ತರದ ಕಪ್ಪುಶಿಲೆಯಿಂದ ಕೂಡಿದ ಏಕಶಿಲಾ ಬಾಹುಬಲಿ ಮೂರ್ತಿ ಇದೆ ಪಾದದ ಎಡ–ಬಲ ಬದಿಯಲ್ಲಿ ಆತನ ತಂಗಿಯರಾದ ಬ್ರಾಹ್ಮಿಳಿ ಮತ್ತು ಸುಂದರಿಯರ ಶಿಲ್ಪಗಳಿವೆ. ಪಾದದ ಬಳಿಯಿಂದ ತೋಳಿನವರೆಗೆ ಬಳ್ಳಿ ಸುತ್ತುವರೆದಿದೆ. ಸಂತಾನ ಭಾಗ್ಯ ಹಾಗೂ ಉತ್ತಮ ಮಳೆ ಬೆಳೆಗಾಗಿ ಹರಕೆ ಹೊತ್ತು ಹಲವರು ಬಾಹುಬಲಿಗೆ ಈಗಲೂ ಪೂಜೆ ಸಲ್ಲಿಸುತ್ತಾರೆ

ಭಾರತೀನಗರ: ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಆಚಾರ್ಯ ವರ್ಧಮಾನ ಸಾಗರ್‌ ಜೀ ಮಹಾರಾಜರು, ಆಚಾರ್ಯ ವಾಸು ಪೂಜ್ಯ ಸಾಗರ್‌ ಜೀ ಮಹಾರಾಜ್, ಆಚಾರ್ಯ ಪುಷ್ಪದಂತ ಸಾಗರ್‌ ಜೀ ಮಹಾರಾಜ್, ಪಂಚಕಲ್ಯಾಣ ಸಾಗರ್ ಜೀ ಮಹಾರಾಜ್, ಆಚಾರ್ಯ ಶ್ರೀ ಚಂದ್ರಪ್ರಭಾಸಾಗರ್ ಮುನಿಮಹಾರಾಜ್ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತ್ಯಾಗಿಗಳು ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ಆದಿನಾಥ ತೀರ್ಥಂಕರ ಮೂರ್ತಿಗೆ ವಿವಿಧ ಪ್ರಕಾರಗಳ ಪೂಜೆ ಸಲ್ಲಿಸಿ, ಪಂಚಪರಮೇಷ್ಟಿ ಆರಾಧನೆ ನಡೆಸಿದರು. ಜತೆಗೆ ನವಕಳಶ ಪೂಜೆ ಮತ್ತು ದಿವ್ಯಾರಾಧನೆ ಜರುಗಿದವು. ಮಧ್ಯಾಹ್ನ 3 ಗಂಟೆಗೆ ಬೆಟ್ಟದ ಮೇಲಿರುವ ಮೂರ್ತಿಗೆ ಅಷ್ಠ ಕಳಸಗಳ ಮಂಗಳ ದ್ರವ್ಯ ಕೊಂಡೊಯ್ದು ಮಜ್ಜನ ನಡೆಸುವ ಮೂಲಕ ಕಾರ್ಯಕ್ರಮ ಮೊದಲ ಮಜ್ಜನ ಕಾರ್ಯ ನಡೆಯಿತು. ಜೈನ ಸಮಾಜದ ಮುಖಂಡರು, ರಾಜ್ಯದ ವಿವಿಧೆಡೆಯ ಭಕ್ತರು ಹಾಜರಿದ್ದರು.

ಕಾರ್ಯಕ್ರಮಗಳ ವಿವರ: ಡಿ.2ರಂದು ಧಾರ್ಮಿಕ ವಿಧಿ ಸಹಿತ 24 ಕಳಶಗಳ ಅಭಿಷೇಕ ಪೂಜೆ ಮತ್ತು ಆರಾಧನೆ, 3ರಂದು 1,008 ಕಳಶ ಸಹಿತ ಮಸ್ತಕಾಭಿಷೇಕ, ಜಲಾಭಿಷೇಕ, ಎಳನೀರು, ಕಬ್ಬಿನ ಹಾಲು, ಹಾಲು, ಅರಿಶಿಣ, ಅಷ್ಠ ಗಂಧ, ಸರ್ಪೌಷಧಿ, ಶ್ರೀಗಂಧ, ಮಲಿಯಾಗಿರಿ ಚಂದನ ಹಾಗೂ ಕೇಸರಿ ಅಭಿಷೇಕ, ಪುಷ್ಪವೃಷ್ಟಿ, ಶಾಂತಿಧಾರೆ, ಮಹಾ ಮಂಗಳಾರತಿ ನೆರವೇರಲಿವೆ.

* * 

ನಿರ್ಲಕ್ಷಕ್ಕೆ ಒಳಗಾಗಿದ್ದ ಅರೆತಿಪ್ಪೂರು ಜೈನ ಕ್ಷೇತ್ರಕ್ಕೆ ‘ಮಹಾಮಜ್ಜನ’ ಉತ್ಸವದಿಂದ ಜೀವಕಳೆ ಬಂದಂತಾಗಿದೆ. ಜೈನ ಆಶ್ರಮ ಸ್ಥಾಪಿತವಾಗಿದೆ
ನೆಟ್ಕಲ್‌ ನಾಗರಾಜು, ಶಿಕ್ಷಕ, ಕೂಳಗೆರೆ ಗೇಟ್‌ ಸರ್ಕಾರಿ ಪ್ರೌಢಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT