ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಕೊಯ್ಲಿಗೆ ಅಡ್ಡಿಯಾದ ವರುಣ

Last Updated 2 ಡಿಸೆಂಬರ್ 2017, 5:30 IST
ಅಕ್ಷರ ಗಾತ್ರ

ರಾಮನಗರ: ‘ಒಖಿ’ ಚಂಡಮಾರುತದ ಪ್ರಭಾವದಿಂದಾಗಿ ಜಿಲ್ಲೆಯಾದ್ಯಂತ ಶುಕ್ರವಾರ ದಿನವಿಡೀ ಜಿಟಿಜಿಟಿ ಮಳೆ ಯಾಯಿತು. ರೈತರು ರಾಗಿ ಕೊಯ್ಲಿಗೆ ಮುಂದಾಗಿದ್ದು, ತೆನೆಗಳು ನೀರಿನಲ್ಲಿ ತೊಯ್ದವು.

ಜಿಲ್ಲೆಯ ಶೇ 67ರಷ್ಟು ಕೃಷಿ ಭೂಮಿಯಲ್ಲಿ ಸದ್ಯ ರಾಗಿ ಬೆಳೆದುನಿಂತಿದೆ. ಕೆಲವು ರೈತರು ಕಟಾವು ಮಾಡಿ ತೆನೆಗಳನ್ನು ಹೊಲದಲ್ಲಿ ಗುಡ್ಡೆ ಹಾಕಿದ್ದು, ದಿಢೀರನೆ ಬಂದ ಮಳೆಯಿಂದಾಗಿ ಆತಂಕಕ್ಕೆ ಈಡಾಗಿದ್ದಾರೆ. ಮಳೆ ಹೀಗೆಯೇ ಮುಂದುವರಿದಲ್ಲಿ ಬೆಳೆ ನಷ್ಟವಾಗುವ ಭೀತಿ ಎದುರಾಗಿದೆ. ಕೊಯ್ಲು ನಡೆದಿರುವ ಕಡೆ ತೆನೆಗಳನ್ನು ರಕ್ಷಿಸಿಕೊಳ್ಳಲು ರೈತರು ಪ್ರಯಾಸ ಪಡುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡುಬಂದಿತು.

ನವೆಂಬರ್‌–ಡಿಸೆಂಬರ್‌ನಲ್ಲಿ ಆಗಾಗ್ಗೆ ಚಂಡಮಾರುತ ಸಾಮಾನ್ಯ ಎಂಬಂತೆ ಆಗಿದ್ದು, ಬೆಳೆ ಕೈಸೇರುವ ಹಂತದಲ್ಲಿ ರೈತರನ್ನು ಕಾಡುತ್ತಲೇ ಬಂದಿದೆ. ಈ ಬಾರಿಯ ಹಿಂಗಾರು ಫಲಪ್ರದವಾಗದಿದ್ದರೂ ಇದೀಗ ಚಂಡಮಾರುತ ಹೊತ್ತು ತಂದಿರುವ ಮಳೆಯು ಕೃಷಿಕರ ನಿದ್ದೆಗೆಡಿಸಿದೆ.

ಭತ್ತಕ್ಕೂ ಕುತ್ತು: ಜಿಲ್ಲೆಯಲ್ಲಿ ಸುಮಾರು 6 ಸಾವಿರ ಎಕರೆಯಷ್ಟು ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಕಟಾವಿನ ಹಂತದಲ್ಲಿ ಇರುವ ಬೆಳೆಗೂ ಚಂಡಮಾರುತ ಸಮಸ್ಯೆ ತಂದೊಡ್ಡಿದೆ. ಈಗಾಗಲೇ ಸೈನಿಕ ಹುಳುವಿನ ಬಾಧೆಯಿಂದ ತತ್ತರಿಸಿರುವ ಕೃಷಿಕರು ಈ ಮಳೆಯು ಸೃಷ್ಟಿಸಬಹುದಾದ ಅವಾಂತರದಿಂದ ಕಂಗಾಲಾಗಿದ್ದಾರೆ. ಕೊಯ್ಲು ನಡೆದಿರುವ ಕಡೆ ಬೆಳೆ ಕೊಳೆಯುವ ಭೀತಿ ಇದೆ. ಕೊಯ್ಲು ಮುಗಿದು ಹುಲ್ಲಿನ ಬಣವೆ ಹಾಕಲು ರೈತರು ಸಿದ್ಧತೆ ನಡೆಸಿದ್ದು, ಹುಲ್ಲು ಕೊಳೆಯುವ ಸಾಧ್ಯತೆ ಇದೆ.

ದಿನವಿಡೀ ಮಳೆ: ಶುಕ್ರವಾರ ರಾಮನಗರದಲ್ಲಿ ದಿನವಿಡೀ ಮಳೆ ಸುರಿಯಿತು. ಗುರುವಾರ ಸಂಜೆಯಿಂದಲೇ ಚಂಡಮಾರುತದ ಪ್ರಭಾವ ಕಾಣತೊಡಗಿತ್ತು. ಶುಕ್ರವಾರ ಮುಂಜಾನೆಯಿಂದ ಮಳೆಯು ಚುರುಕು ಪಡೆಯಿತು. ಹನುಮ ಜಯಂತಿಯ ಸಂಭ್ರಮಕ್ಕೆ ಮಳೆ ಅಡ್ಡಿಯಾಯಿತು. ಮೈ ಕೊರೆಯುವ ಚಳಿಯ ವಾತಾವರಣ ಇದ್ದು, ಜನರು ಓಡಾಟಕ್ಕೆ ಪ್ರಯಾಸ ಪಡಬೇಕಾಯಿತು.

* * 

ಮಳೆ ಹೀಗೆಯೇ ಮುಂದುವರಿದಲ್ಲಿ ತೆನೆ ಕಪ್ಪಾಗಲಿದೆ. ರಾಗಿಯೂ ಮುಪ್ಪಾಗಲಿದೆ. ಇದರಿಂದ ಅಲ್ಪ ಪ್ರಮಾಣದ ನಷ್ಟವಂತೂ ಖಂಡಿತ
ಶಿವಣ್ಣ , ಪಾಲಬೋವಿದೊಡ್ಡಿಯ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT