ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಚ್‍ಐವಿ ಸೋಂಕಿತರನ್ನು ಕೀಳಾಗಿ ಕಾಣಬೇಡಿ’

Last Updated 2 ಡಿಸೆಂಬರ್ 2017, 6:49 IST
ಅಕ್ಷರ ಗಾತ್ರ

ಕಾರವಾರ: ‘ಎಚ್‍ಐವಿ ಸೋಂಕು ಪೀಡಿತರೂ ಕೂಡ ಸಾಮಾಜಿಕವಾಗಿ ಬದುಕುವ ಹಾಗೂ ಆರೋಗ್ಯ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೊವಿಂದಯ್ಯ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಏಡ್ಸ್‌ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಎಚ್ಐವಿ ಸೋಂಕಿತರನ್ನು ಸಮಾಜ ಕೀಳಾಗಿ ಕಾಣಬಾರದು. ಅವರಿಗೆ ಕಾನೂನು ಸಮಸ್ಯೆಗಳಿದ್ದರೆ ರಾಜ್ಯದ ಎಲ್ಲ ಜಿಲ್ಲೆಗಳ ಎ.ಆರ್.ಟಿ ಕೇಂದ್ರಗಳಲ್ಲಿ ಉಚಿತ ಕಾನೂನು ಸಲಹೆ ಸೂಚನೆ, ಸೇವೆ ನೀಡಲು ವಕೀಲರನ್ನು ನೇಮಿಸಲಾಗಿರುತ್ತದೆ’ ಎಂದು ಮಾಹಿತಿ ನೀಡಿದರು.

ವಕೀಲ ಕೆ.ಬಿ.ನಾಯ್ಕ ಮಾತನಾಡಿ, ‘ಎಚ್‍ಐವಿ ಸೋಂಕು ವಿವಿಧ ರೀತಿಯಲ್ಲಿ ಹರಡುತ್ತದೆ. ಸ್ವಯಂ ನಿಯಂತ್ರಣ, ಸಾಮಾಜಿಕ ಮೌಲ್ಯಗಳು ಮತ್ತು ನೈತಿಕತೆಯ ಪ್ರತಿಪಾದನೆಯಿಂದ ಆರೋಗ್ಯಕರ ಜೀವನ ನಡೆಸಲು ಸಾಧ್ಯವಿದೆ. ಎಚ್‌ಐವಿ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ. ಏಡ್ಸ್‌ ನಿರ್ಮೂಲನೆಗೆ ಎಲ್ಲರೂ ಪಣತೊಡಬೇಕು. ತಾಲ್ಲೂಕು ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಕಾನೂನು ಸೇವಾ ಪ್ರಾಧಿಕಾರಗಳಿವೆ. ಅಲ್ಲಿ ಎಚ್.ಐ.ವಿ/ ಏಡ್ಸ್ ಸೊಂಕು ಪೀಡಿತರು ಉಚಿತವಾಗಿ ಕಾನೂನು ಸಲಹೆ ಸೂಚನೆ ಪಡೆಯಬಹುದಾಗಿದೆ’ ಎಂದು ಹೇಳಿದರು.

ಕಾರವಾರ ವೈದ್ಯಕೀಯ ಕಾಲೇಜಿನ ಸಮುದಾಯ ಔಷಧ ವಿಭಾಗದ ಪ್ರಾಧ್ಯಾಪಕ ಡಾ.ಹೇಮಗಿರಿ ವಿಶೇಷ ಉಪನ್ಯಾಸ ನೀಡಿ, ‘ಎಚ್‍ಐವಿ/ ಏಡ್ಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಸೋಂಕು ಪೀಡಿತರ ಪ್ರಮಾಣ ಕಡಿಮೆ ಆಗುತ್ತಿರುವುದು ಆಶಾದಾಯಕವಾಗಿದೆ. ದೇಶದಲ್ಲಿ ಮಿಜೋರಾಮ ರಾಜ್ಯದಲ್ಲಿ ಎಚ್ಐವಿ ಪೀಡಿತರ ಸಂಖ್ಯೆ ಅಧಿಕವಾಗಿದ್ದು, ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಜಿಲ್ಲೆಯಲ್ಲಿ ಎಚ್‍ಐವಿ ಪೀಡಿತರ ಪ್ರಮಾಣ ಶೇ 0.25 ಇದ್ದು, ರಾಜ್ಯದಲ್ಲಿ 28ನೇ ಸ್ಥಾನ ಪಡೆದಿದೆ’ ಎಂದರು.

ಜಾಗೃತಿ ಜಾಥಾ: ಏಡ್ಸ್‌ ನಿರ್ಮೂಲನೆ ಕುರಿತ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಲಾಯಿತು. ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ವಿವಿಧ ಕಲಾ ತಂಡಗಳು ಜಾಥಾಕ್ಕೆ ಮೆರುಗು ನೀಡಿದವು.

* * 

‘ನನ್ನ ಆರೋಗ್ಯ, ನನ್ನ ಹಕ್ಕು’ ಎಂಬುದನ್ನು ಯುವ ಜನತೆ ಅರಿತಾಗ ಎಚ್.ಐ.ವಿ/ ಏಡ್ಸ್ ತಡೆಗಟ್ಟಲು ಸಹಕಾರಿಯಾಗುತ್ತದೆ
ಡಾ.ಜಿ.ಎನ್‍.ಅಶೋಕಕುಮಾ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT