ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆ ಪ್ಲಾಸ್ಟಿಕ್ ಮುಕ್ತವಾಗಿಸಲು ಪಣ

Last Updated 2 ಡಿಸೆಂಬರ್ 2017, 7:03 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಪಣ ತೊಟ್ಟಿದ್ದು, ಈ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ತಾಲ್ಲೂಕಿನಲ್ಲಿ 6 ತಿಂಗಳೊಳಗೆ ಪ್ಲಾಸ್ಟಿಕ್‌ ಚೀಲಗಳ ಬಳಕೆಗೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ’ ಎಂದು ಜಿಲ್ಲಾ ಪರಿಸರ ಅಧಿಕಾರಿ ಸಿ.ಆರ್.ಮಂಜುನಾಥ್‌ ಹೇಳಿದರು.

ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ವರ್ತಕರಿಗೆ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕುರಿತ ಕಾರ್ಯಾಗಾರದಲ್ಲಿ
ಮಾತನಾಡಿದರು.

ಪ್ಲಾಸ್ಟಿಕ್‌ ಉತ್ಪನ್ನಗಳ ಬಳಕೆಯಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ಕಾರಣದಿಂದಾಗಿ ಅರಣ್ಯ ಪರಿಸರ ಸಚಿವಾಲಯದ ಆದೇಶದನ್ವಯ ಈಗಾಗಲೇ 2016ರ ಮಾ.11ರಿಂದ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.

ಪ್ಲಾಸ್ಟಿಕ್ ಕೈಚೀಲ, ತೋರಣ, ಬಾವುಟ, ತಟ್ಟೆ, ಲೋಟ ಸೇರಿದಂತೆ ಪ್ಲಾಸ್ಟಿಕ್‌ನಿಂದ ತಯಾರಿಸಿದ ಉತ್ಪನ್ನಗಳನ್ನು ಬಳಕೆ ಮಾಡುವಂತಿಲ್ಲ. ರಾಜ್ಯದ ಎಲ್ಲೆಡೆ ಈ ವಸ್ತುಗಳ ಸರಬರಾಜು, ಮಾರಾಟ ಮತ್ತು ವಿತರಣೆ ನಿಷೇಧಿಸಲಾಗಿದೆ. ಆದರೂ ಸಚಿವಾಲಯದ ಆದೇಶ ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು
ತಿಳಿಸಿದರು.

ತೋಟಗಾರಿಕಾ ನರ್ಸರಿ ಮತ್ತು ಹಾಲು ಪ್ಯಾಕಿಂಗ್‌ಗೆ ಬೇಕಾದ ಪ್ಲಾಸ್ಟಿಕ್‌ ಕವರ್‌ಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಉಳಿದಂತೆ ಎಲ್ಲ ಬಗೆಯ ಪ್ಲಾಸ್ಟಿಕ್‌ ವಸ್ತುಗಳ ನಿಷೇಧಕ್ಕೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಅಧಿಕಾರಿಗಳು ಸಹಕಾರ ನೀಡಿದರೆ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬಹುದು ಎಂದು ಅಭಿಪ್ರಾಯಪಟ್ಟರು.

ಪ್ಲಾಸ್ಟಿಕ್‌ ಇಲ್ಲದೆ ಜೀವನವೇ ಇಲ್ಲ: ‘ರಾಜ್ಯದಲ್ಲಿ ಪ್ಲಾಸ್ಟಿಕ್ ನಿರ್ಬಂಧಿಸಿ 2 ವರ್ಷವಾಗಿದೆ. ಆದರೂ ಎಲ್ಲೆಡೆ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸಲಾಗುತ್ತಿದೆ. ಪೂರ್ವಿಕರು ಪ್ಲಾಸ್ಟಿಕ್ ಇಲ್ಲದೆಯೇ ಜೀವನ ನಡೆಸಿದ್ದರು. ಈಗಿನ ಕಾಲದ ಜನರಲ್ಲಿ ಪ್ಲಾಸ್ಟಿಕ್ ಇಲ್ಲದೆ ಜೀವನವೇ ಇಲ್ಲ ಎಂಬ ಭಾವನೆ ಇದ್ದು, ಕುಳಿತಲ್ಲಿ ನಿಂತಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಲಾಗುತ್ತಿದೆ’ ಎಂದು ಬೆಂಗಳೂರಿನ ಉಸಿರು ಸಂಸ್ಥೆಯ ಪ್ರತಿನಿಧಿ ಶೋಭಾಭಟ್ ವಿಷಾದ ವ್ಯಕ್ತಪಡಿಸಿದರು.

ಎಲ್ಲ ಬಗೆಯ ಪ್ಲಾಸ್ಟಿಕ್‌ ವಸ್ತುಗಳಿಂದ ಸಮಸ್ಯೆ ಆಗುವುದಿಲ್ಲ. ಉಪಯೋಗಿಸಿ ಎಸೆಯುವ ಪ್ಲಾಸ್ಟಿಕ್‌ ಉತ್ಪನ್ನಗಳಿಂದ ಸಮಸ್ಯೆ ಹೆಚ್ಚುತ್ತಿದ್ದು, ಎಲ್ಲೆಡೆ ಕಸ ರಾಶಿಯಾಗಿ ಬೆಳೆಯುತ್ತಿದೆ. ಇದನ್ನು ವಿಲೇವಾರಿ ಮಾಡಲು ಆಗುತ್ತಿಲ್ಲ. ಸರ್ಕಾರ ಪ್ಲಾಸ್ಟಿಕ್ ನಿಷೇಧಿಸುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದು, ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

‘ಗ್ರಾಹಕರು ಬಟ್ಟೆ ಬ್ಯಾಗ್‌ಗಳನ್ನು ತಂದರೆ ಮಾತ್ರ ಅಂಗಡಿಗಳಲ್ಲಿ ಸರಕು ಸೇವೆಗಳನ್ನು ನೀಡಬೇಕು. ಇಲ್ಲದಿದ್ದರೆ ವಾಪಸ್‌ ಕಳುಹಿಸಬೇಕು. ಮುಂದಿನ ಪೀಳಿಗೆಯ ಉಳಿವಿಗಾಗಿ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಲೇಬೇಕು’ ಎಂದು ಬೆಂಗಳೂರಿನ ಎಕೋ ಟೀಮ್‌ ಸದಸ್ಯೆ ಸ್ಮಿತಾ ಕುಲಕರ್ಣಿ ಸಲಹೆ ನೀಡಿದರು.

ಉತ್ಪಾದನೆಗೆ ಕಡಿವಾಣ: ‘ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿರ್ಬಂಧಿಸಿರುವುದು ಸ್ವಾಗತಾರ್ಹ. ಆದರೆ, ಕಂಪೆನಿಯವರಿಗೆ ಉತ್ಪಾದನೆ ಮಾಡಲು ಬಿಟ್ಟು ಮಾರಾಟ ಸ್ಥಳಗಳಲ್ಲಿ ನಿಷೇಧ ಮಾಡಲು ಹೊರಟಿರುವುದು ಸರಿಯಲ್ಲ. ಮೊದಲು ಉತ್ಪಾದನೆಗೆ ಕಡಿವಾಣ ಹಾಕಬೇಕು’ ಎಂದು ವರ್ತಕರು ಒತ್ತಾಯಿಸಿದರು. ಎಕೋ ಟೀಮ್‌ ಸದಸ್ಯ ಮೋಹನ್‌ ಗೋವಿಂದ್‌, ಯೋಜನಾಧಿಕಾರಿ ರಾಮಮೂರ್ತಿ, ವರ್ತಕರ ಸಂಘದ ಸದಸ್ಯ ಮನೋಹರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT