ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮನ್ನಾಗೆ ಹೃದಯವಂತಿಕೆ ಬೇಕು

Last Updated 2 ಡಿಸೆಂಬರ್ 2017, 7:28 IST
ಅಕ್ಷರ ಗಾತ್ರ

ಬಾಗಲಕೋಟೆ: ‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಲು ಹೃದಯವಂತಿಕೆ ಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ಛೇಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಸಮಾಜದ ಎಲ್ಲಾ ವರ್ಗದ ಜನರಿಗೂ ಸಾಲ ಸವಲತ್ತು ದೊರೆಯುವಂತೆ ಮಾಡಲು ಸಹಕಾರಿ ಕ್ಷೇತ್ರವನ್ನು ಬಲಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ’ ಹೇಳಿದರು.

ಇಲ್ಲಿನ ನವನಗರದ ಬಸವೇಶ್ವರ ಸಹಕಾರಿ ಬ್ಯಾಂಕಿನ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ರೈತರ ಸಾಲ ಮನ್ನಾ ಮಾಡಿದರೆ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಸ್ವತಃ ರಿಸರ್ವ್‌ಬ್ಯಾಂಕ್‌ ಗವರ್ನರ್‌ ಹೇಳಿಕೆ ನೀಡುತ್ತಾರೆ.

ಆದರೆ ಉದ್ಯಮ ವಲಯದ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡುತ್ತಾರೆ. ಕೇಂದ್ರ ಸರ್ಕಾರಕ್ಕೆ ಉದ್ಯಮಿಗಳು ಹಾಗೂ ಬಂಡವಾಳಶಾಹಿಗಳ ಬಗ್ಗೆ ಇರುವ ಪ್ರೀತಿ ರೈತಾಪಿ ವರ್ಗದ ಬಗ್ಗೆ ಇಲ್ಲ. ಹಾಗಾಗಿಯೇ ಸಾಲ ಮನ್ನಾ ಮಾಡಲು ಮನಸು ಮಾಡುತ್ತಿಲ್ಲ. ಇದು ರೈತ ವಿರೋಧಿ ಕ್ರಮ’ ಎಂದು ಟೀಕಿಸಿದರು.

ರಾಜ್ಯ ಸರ್ಕಾರ ರೈತರು ಹಾಗೂ ನೇಕಾರರು ಪಡೆದ ₹ 50 ಸಾವಿರದವರೆಗಿನ ಸಾಲ ಮನ್ನಾ ಮಾಡಿದೆ. ಮನ್ನಾ ಮಾಡಿದ ಸಾಲದ ಮೊತ್ತದಲ್ಲಿನ ಮೊದಲ ಕಂತನ್ನು ಈಗಾಗಲೇ ಸಹಕಾರಿ ಸಂಸ್ಥೆಗಳಿಗೆ ಪಾವತಿ ಮಾಡಲಾಗಿದೆ ಎಂದು ತಿಳಿಸಿದರು.

‘ಪ್ರತೀ ಹಳ್ಳಿಯಲ್ಲೂ ಸಹಕಾರಿ ಸಂಘ, ಶಾಲೆ ಹಾಗೂ ಗ್ರಾಮ ಪಂಚಾಯ್ತಿ ಇರಬೇಕು ಎಂಬುದು ಮಹಾತ್ಮಾಗಾಂಧೀಜಿ ಅವರ ಕನಸಾಗಿತ್ತು. ಅದನ್ನು ನನಸು ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಸಮಾಜದ ಎಲ್ಲಾ ವರ್ಗದ ಜನರು ಸಹಕಾರಿ ಸಂಘಗಳ ಸದಸ್ಯರು ಆಗಬೇಕು. ಅವರು ಸವಲತ್ತುಗಳನ್ನು ಪಡೆಯಬೇಕು. ಹಾಗಾಗಿ ಎಲ್ಲರ ಷೇರು ಹಣವನ್ನು ಸರ್ಕಾರವೇ ಸಹಕಾರ ಇಲಾಖೆ ಮೂಲಕ ತುಂಬಲು ನಿರ್ಧರಿಸಿದೆ’ ಎಂದು ಹೇಳಿದರು.

‘ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿಗೆ ₹ 5 ಸಬ್ಸಿಡಿ ನೀಡುತ್ತಿರುವ ಕಾರಣ ರಾಜ್ಯದಲ್ಲಿ ಈ ಮೊದಲು ದಿನಕ್ಕೆ 50 ಲಕ್ಷ ಲೀಟರ್ ಇದ್ದ ಹಾಲು ಉತ್ಪಾದನೆ ಪ್ರಮಾಣ ಈಗ 75 ಲಕ್ಷ ಲೀಟರ್‌ಗೆ ಹೆಚ್ಚಳಗೊಂಡಿದೆ. ಮಹಿಳೆಯರಿಗೆ ಶೇ 4ರ ಬಡ್ಡಿದರದಲ್ಲಿ ಇಲ್ಲಿಯವರೆಗೂ ಸಾಲ ನೀಡಲಾಗುತ್ತಿತ್ತು. ಇನ್ನು ಮುಂದೆ ಬಡ್ಡಿ ರಹಿತ ಸಾಲ ನೀಡಲಾಗುವುದು. ರಾಜ್ಯದಲ್ಲಿ ಯಾರೂ ಸಾಲಬಾಧೆಯಿಂದ ನರಳಬಾರದು. ಎಲ್ಲರೂ ಸಾಲಮುಕ್ತರಾಗಲಿ ಎಂಬುದು ಸರ್ಕಾರದ ಕಳಕಳಿಯಾಗಿದೆ’ ಎಂದರು.

ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ‘ಶತಮಾನೋತ್ಸವದ ಸಂಭ್ರಮಕ್ಕೆ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹಾಗೂ ಆಡಳಿತ ಮಂಡಳಿ ಸದಸ್ಯರ ಶ್ರಮ ಅತ್ಯಮೂಲ್ಯವಾಗಿದೆ. ವಿಜಯಪುರ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳಲ್ಲಿ ಹೆಚ್ಚಿನ ರೈತರ ಸೇವೆಗೆ ಬ್ಯಾಂಕ್‌ ಶ್ರಮಿಸುತ್ತಿರುವುದು ಶ್ಲಾಘನೀಯ’ ಎಂದರು.
‘ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಶಾಖೆಗಳನ್ನು ಹೊಂದುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಬ್ಯಾಂಕ್‌ ಬೆಳವಣಿಗೆ ಹೊಂದಲಿ’ ಎಂದರು.

ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ, ‘ತಾನು ಎಲ್ಲರಿಗಾಗಿ ಎಲ್ಲರೂ ತನಗಾಗಿ ಎಂಬ ಸಹಕಾರಿ ತತ್ವದಡಿ ಬಸವೇಶ್ವರ ಸಹಕಾರಿ ಬ್ಯಾಂಕ್ ಕಾರ್ಯನಿರ್ವಹಿಸಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಗ್ರಗಣ್ಯ ಸಹಕಾರಿ ಬ್ಯಾಂಕ್‌ ಆಗಿ ಹೊರಹೊಮ್ಮಿದೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ‘ಸಹಕಾರಿ ಕ್ಷೇತ್ರದಲ್ಲಿ ಬ್ಯಾಂಕ್ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದೆ. ಸಾಲಗಾರರು ಹಾಗೂ ಸದಸ್ಯರ ಹಿತ ಕಾಪಾಡುವ ಮೂಲಕ ಬ್ಯಾಂಕ್ ಉತ್ತಮ ಕಾರ್ಯ ನಿರ್ವಹಿಸುತ್ತಿದೆ’ ಎಂದರು.

ಸಮಾರಂಭದಲ್ಲಿ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ, ಶಾಸಕರಾದ ಎಚ್.ವೈ.ಮೇಟಿ, ಸಿದ್ದು ನ್ಯಾಮಗೌಡ, ಬಿ.ಬಿ.ಚಿಮ್ಮನಕಟ್ಟಿ, ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಜಯಕುಮಾರ ಸರನಾಯಕ, ಮಾಜಿ ಶಾಸಕರಾದ ಎಸ್.ನಂಜಯ್ಯನಮಠ, ಗೌರಮ್ಮ ಕಾಶಪ್ಪನವರ, ಬಾಬುರಡ್ಡಿ ತುಂಗಳ, ಜಿ.ವಿ.ಮಂಟೂರ, ಬಿ.ಜಿ.ಜಮಖಂಡಿ, ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ಪಿ.ಕಲಬುರ್ಗಿ, ನಜೀರ್ ಕಂಗನೊಳ್ಳಿ, ಮಹಾಂತೇಶ ಕೌಜಲಗಿ, ಬಿಟಿಡಿಎ ಅಧ್ಯಕ್ಷ ಎ.ಡಿ.ಮೊಕಾಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT