ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ನೆಲಕಚ್ಚಿದ ರಾಗಿ, ಆತಂಕ

Last Updated 2 ಡಿಸೆಂಬರ್ 2017, 7:39 IST
ಅಕ್ಷರ ಗಾತ್ರ

ದೇವನಹಳ್ಳಿ: ರಾಗಿ ಸಂಪೂರ್ಣ ಕೊಯ್ಲಿಗೆ ಬಂದಿದ್ದು, ಮಳೆಗೆ ರಾಗಿ ನೆಲ ಕಚ್ಚಿದೆ. ಕೆಲ ರೈತರು ಕೊಯ್ಲು ಮಾಡಿದ್ದು, ತೆನೆ ಮಳೆಯಲ್ಲಿ ನೆನೆದು ಮೊಳಕೆ ಬರುವ ಸ್ಥಿತಿಯಲ್ಲಿ ಬೆಳೆ ಇರುವುದು ತಾಲ್ಲೂಕಿನಾದ್ಯಂತ ಕಂಡು ಬರುತ್ತಿದೆ.

ಸತತ ನಾಲ್ಕು ವರ್ಷಗಳ ಬರಗಾಲದ ನಡುವೆ ಉಸಿರು ಬಿಗಿ ಹಿಡಿದುಕೊಂಡೇ ಈ ಬಾರಿ ಮುಂಗಾರು ಹಂಗಾಮಿನಲ್ಲಿ ರಾಗಿ ಬಿತ್ತನೆ ಮಾಡಿದ ಅನ್ನದಾತರು ಆತಂಕದ ನಡುವೆ ಸಕಾಲದಲ್ಲಿ ವರುಣ ತೋರಿದ ಕೃಪೆಯಿಂದ ಭರ್ಜರಿ ಫಸಲು ನಿರೀಕ್ಷೆ ಇಟ್ಟುಕೊಂಡಿದ್ದರು. ನಿರೀಕ್ಷೆಗಿಂತ ಹೆಚ್ಚು ಇಳುವರಿಯಾಗಲಿದೆ ಎಂದು ಸಂತಸದಿಂದ ಇರುವಾಗಲೇ ಚಂಡಮಾರುತದ ಪ್ರಭಾವದಿಂದ ಗುರುವಾರ ಮಧ್ಯಾಹ್ನ ಜಡಿ ಮಳೆ ಸುರಿಯುತ್ತಿದೆ. ಇದರಿಂದ ಕಟಾವು ಮಾಡಿದ, ಕಟಾವು ಹಂತದಲ್ಲಿರುವ ರಾಗಿ ಬೆಳೆ ಮಳೆಗೆ ನೆನೆಯುತ್ತಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಬಯಲು ಪ್ರದೇಶದ ಜನರಿಗೆ ದಿನದ ಪ್ರಮುಖ ಆಹಾರಧಾನ್ಯವಾಗಿರುವ ರಾಗಿ ಬೆಳೆಯನ್ನೇ ಸ್ಥಳೀಯ ರೈತರು ಅವಲಂಬಿಸಿದ್ದಾರೆ. ಜಡಿ ಮಳೆ ಬೀಳುತ್ತಿರುವುದರಿಂದ ಲೆಕ್ಕಾಚಾರ ತಲೆಕೆಳಗಾಗಿದ್ದು, ದಿಕ್ಕು ತೋಚದ ರೈತರು ಕಂಗಾಲಾಗಿದ್ದಾರೆ.

ಕೃಷಿ ಇಲಾಖೆ ಮಾಹಿತಿಯಂತೆ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 80,160 ಹೆಕ್ಟೇರ್ ನಲ್ಲಿ ರಾಗಿ ಬೆಳೆ ಬಿತ್ತನೆ ಮಾಡಲಾಗಿತ್ತು. ಮುಂಗಾರು ಮಳೆಗೆ ಪೂರಕವಾಗಿ ಬಿತ್ತನೆ ಮಾಡಲಾದ ಶೇ 85ರಷ್ಟು ರಾಗಿ ಕಟಾವಿಗೆ ಬಂದಿದೆ. ಕೆಲವು ಕಡೆ ಕೊಯ್ಲು ಆಗಿದೆ. ಶೇ 15ರಷ್ಟು ರಾಗಿಬೆಳೆ ವಿಳಂಬವಾಗಿ ಬಿತ್ತನೆ ಮಾಡಿರುವ ಬೆಳೆ ಸದ್ಯಕ್ಕೆ ಈ ಜಡಿ ಮಳೆಯಿಂದ ತೊಂದರೆ ಇಲ್ಲ ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಎಂ.ಎನ್. ಮಂಜುಳಾ.

ರಾಗಿ ಮತ್ತು ಹುರುಳಿ ಬಿತ್ತಿದ ಮೂರು ದಿನಕ್ಕೆ ಮೊಳಕೆಯಾಗಿ ಹೊರಬರುತ್ತದೆ. ಅತ್ಯಂತ ವೇಗವಾಗಿ ಬೆಳೆಯುವ ಬೆಳೆಗಳು ತೆನೆಯಾಗಲಿ ಮತ್ತು ಹೊಲದಲ್ಲಿ ಕಟಾವು ಮಾಡಿರುವ ರಾಗಿಯಾಗಲಿ ಮಳೆಯಿಂದ ನೆನೆದರೆ 48 ತಾಸಿನೊಳಗೆ ಮೊಳಕೆ ಬರುತ್ತದೆ. ಮೊಳಕೆ ಬಂದ ರಾಗಿ ಸೇವನೆಗೆ ಯೋಗ್ಯವಲ್ಲ. ರಾಗಿ ಹುಲ್ಲು ಮಳೆಯಲ್ಲಿ ನೆನೆದರೆ ಬೂಸ್ಟ್ ಹಿಡಿದು ಮೇವು ಕಪ್ಪಾಗಿ ಕೊಳೆಯುತ್ತದೆ. ಇದನ್ನು ಪಶುಗಳಿಗೂ ನೀಡುವಂತಿಲ್ಲ. ಮೊಳಕೆಯಾದ ರಾಗಿ ಮತ್ತು ಕೊಳೆತ ಹುಲ್ಲು ಎರಡನ್ನು ತಿಪ್ಪೆ ಗುಂಡಿಗೆ ಎಸೆಯಬೇಕು. 2009ರಲ್ಲಿ ಇದೇ ಪರಿಸ್ಥಿತಿಯಾಗಿತ್ತು ಎನ್ನುತ್ತಾರೆ ಕಾರಹಳ್ಳಿ ಗ್ರಾಮದ ರೈತ ಮುನಿಕೃಷ್ಣಪ್ಪ.

ಕೈಗೆ ಬಂದ ತುತ್ತು ಬಾಯಿಗೆ ಬರತ್ತೊ ಇಲ್ಲವೋ
ಮಳೆ ಬಂದರೂ ಕಷ್ಟ ಬರದಿದ್ದರೂ ಸಂಕಷ್ಟ ಎಂಬ ಸ್ಥಿತಿ ರೈತರಿಗಾಗಿದೆ. ರಾಗಿ ಬೆಳೆ ಫಸಲು ಬಹುತೇಕ 100ರಷ್ಟು ಖಚಿತವಾದ ಮೇಲೆ ಮನೆಯಲ್ಲಿ ದಾಸ್ತಾನು ಮಾಡಲಾಗಿದ್ದ ಐದು ಕ್ವಿಂಟಲ್ ರಾಗಿ ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ. ಮಾರಾಟ ಮಾಡಿ ಮೂರು ದಿನದಲ್ಲಿಯೇ ಜಡಿ ಮಳೆ ಆರಂಭವಾಗಿದೆ. ಮಾರಾಟ ಮಾಡಿ ಎಡವಟ್ಟು ಮಾಡಿ ಕೊಂಡೆ ಅನಿಸಿದೆ ಎಂದು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ ಚಪ್ಪರದ ಕಲ್ಲು ರೈತ ಆಂಜಿನಪ್ಪ.

ಎಷ್ಟು ದಿನ ಜಡಿ ಮಳೆ ಎಂಬುದು ಗೊತ್ತಿಲ್ಲ. ಮೂರು ಎಕರೆಯಲ್ಲಿ ರಾಗಿ ಬೆಳೆ ಭರ್ಜರಿಯಾಗಿದೆ. ಜಡಿ ಮಳೆ ಬಿಟ್ಟರೆ ಸಾಕು ಎಂದು ದೇವರಿಗೆ ಕೈಮುಗಿಯುತ್ತಿದ್ದಾನೆ. ಕೈಗೆ ಬಂದ ತುತ್ತು ಬಾಯಿಗೆ ಬರತ್ತೋ ಇಲ್ಲವೋ ಗೊತ್ತಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT