ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾರ್ಥನಾ ಸಾವು ಪೋಷಕರಿಗೆ ಪಾಠವಾಗಲಿ

Last Updated 2 ಡಿಸೆಂಬರ್ 2017, 9:13 IST
ಅಕ್ಷರ ಗಾತ್ರ

ದಾವಣಗೆರೆ: ಈಚೆಗೆ ಧಾರಾವಾಹಿಯ ಪಾತ್ರ ಅನುಕರಣೆ ಮಾಡಲುಹೋದ ಮುಗ್ಧ ಜೀವವೊಂದು ಬೆಂಕಿಗೆ ಆಹುತಿಯಾಗಿದೆ. ಹರಿಹರ ತಾಲ್ಲೂಕಿನ ಆಶ್ರಯ ಬಡಾವಣೆಯ ಬಾಲಕಿ ಪ್ರಾರ್ಥನಾ ಸಾವಿನ ಪ್ರಕರಣ ಸಮಾಜಕ್ಕೊಂದು ಎಚ್ಚರಿಕೆಯ ಗಂಟೆಯಾಗಿದೆ. ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ಜವಾಬ್ದಾರಿಗಳು ಏನು? ಟಿ.ವಿ ವೀಕ್ಷಿಸುವುದು ಒಳಿತೋ, ಕೆಡಕೋ? ಮಕ್ಕಳ ಪಾಲನೆ–ಪೋಷಣೆ ಹೇಗಿರಬೇಕು?–ಇಂಥ ಹಲವು ಪ್ರಶ್ನೆಗಳಿಗೆ ಜಿಲ್ಲಾ ಮನೋವೈದ್ಯರಾದ ಡಾ.ದಯಾನಂದ ಸಾಗರ್ ಉತ್ತರಿಸಿದ್ದಾರೆ.

ಅನುಕರಣೆ ಸಹಜ; ಆದರೆ, ವಿಷಯ ವಸ್ತು ಮುಖ್ಯ: ಮಕ್ಕಳಲ್ಲಿ ಅನುಕರಣೆಯ ಗುಣ ಸಹಜ. ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುವ ಸನ್ನಿವೇಶಗಳನ್ನು ಅನುಕರಿಸಲು ಯತ್ನಿಸುತ್ತಾರೆ. ಗಾಯನ, ಅಭಿನಯ, ವೇಷಭೂಷಣ... ಹೀಗೆ ಹಲವು ಬಗೆಗಳಿವೆ. ಆದರೆ, ಕ್ರೌರ್ಯ, ಹಿಂಸೆಯನ್ನು ಅನುಕರಣೆ ಮಾಡುವುದು ಅಪಾಯಕಾರಿ. ಪ್ರಾರ್ಥನಾ ವಿಷಯದಲ್ಲಿ ಸಣ್ಣ ನಿರ್ಲಕ್ಷ್ಯದಿಂದ ಜೀವ ತೆರಬೇಕಾಯಿತು.

‘ಶಕ್ತಿಮಾನ್‌’ ಕೂಡ ಆಪತ್ತು ತಂದಿತ್ತು! ಹಿಂದೆ, ‘ಶಕ್ತಿಮಾನ್‌’ ಎಂಬ ಹಿಂದಿ ಧಾರಾವಾಹಿ ಮಕ್ಕಳನ್ನು ಸೆಳೆದಿತ್ತು. ಆತನಂತೆ ಸಾಹಸ ಮಾಡಲು ಹೋಗಿ ಹಲವರು ಗಂಭೀರವಾಗಿ ಪೆಟ್ಟು ಮಾಡಿಕೊಂಡಿದ್ದರು. ಇಂದಿಗೂ ಮಕ್ಕಳ ಕೇಂದ್ರಿತ ಧಾರಾವಾಹಿಗಳು ಹೆಚ್ಚಾಗಿ ಬರುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಮಕ್ಕಳು ಯಾವ ಕಾರ್ಯಕ್ರಮಗಳನ್ನು ನೋಡಬೇಕು; ನೋಡಬಾರದು ಎಂಬ ನಿರ್ಧಾರವನ್ನು ಪೋಷಕರೇ ತೆಗೆದುಕೊಳ್ಳಬೇಕು.

ವಯಸ್ಸಿಗೆ ಅನುಗುಣವಾಗಿ ಕಾರ್ಯಕ್ರಮಗಳ ವೀಕ್ಷಣೆ ಅಗತ್ಯ: ಪೋಷಕರ ನಡವಳಿಕೆಗಳ ಮೇಲೆ ಮಕ್ಕಳ ಬೆಳವಣಿಗೆ ಅವಲಂಬಿತವಾಗಿರುತ್ತದೆ. ಕುಟಂಬದ ಸದಸ್ಯರು ಹೆಚ್ಚು
ಹೆಚ್ಚು ಧಾರಾವಾಹಿಗಳನ್ನು ವೀಕ್ಷಿಸುತ್ತಿದ್ದರೆ, ಸಹಜವಾಗಿ ಮಕ್ಕಳೂ ಅದನ್ನೇ ಮಾಡುತ್ತಾರೆ. ಟಿವಿ ನೋಡುವುದು ತಪ್ಪಲ್ಲ; ವಯಸ್ಸಿಗೆ ಅನುಗುಣವಾದ ಕಾರ್ಯಕ್ರಮ ನೋಡಬೇಕಷ್ಟೆ. ಶಿಕ್ಷಣ ಆಧಾರಿತ ಕಾರ್ಯಕ್ರಮಗಳು ಮಕ್ಕಳ ಬೌದ್ಧಿಕ ವಿಕಸನಕ್ಕೂ ಸಹಕಾರಿ.

ಎಚ್ಚರಿಕೆ ಸಂದೇಶಗಳ ಪ್ರದರ್ಶನ ಕಡ್ಡಾಯ: ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುವಂತಹ ದೃಶ್ಯಗಳಿದ್ದರೆ, ಕಾರ್ಯಕ್ರಮ ಪ್ರಸಾರಕ್ಕೂ ಮುನ್ನ ಕಡ್ಡಾಯವಾಗಿ ಎಚ್ಚರಿಕೆಯ ಸಂದೇಶಗಳನ್ನು ಪ್ರದರ್ಶಿಸಬೇಕು. ಇದರಿಂದ ಚಾನೆಲ್‌ ಬದಲಿಸಲು ಅವಕಾಶವಿರುತ್ತದೆ. ಇಲ್ಲವೇ ಟಿ.ವಿ. ಬಂದ್‌ ಕೂಡ ಮಾಡಬಹುದು.

ಸಮಯ ಮೀಸಲಿಡಿ: ಕ್ಷೀಣವಾಗುತ್ತಿರುವ ಅವಿಭಕ್ತ ಕುಟುಂಬಗಳು ಹಾಗೂ ವೃತ್ತಿ ಒತ್ತಡದ ಕಾರಣದಿಂದಾಗಿ ಮಕ್ಕಳಿಗೆ ಹೆಚ್ಚು ಸಮಯ ಮೀಸಲಿಡಲು ಸಾಧ್ಯವಾಗುತ್ತಿಲ್ಲ. ಪರಿಣಾಮ, ಒಂಟಿತನ ಕಳೆಯಲು ಟಿವಿ ವೀಕ್ಷಣೆಯ ಗೀಳು ಹೆಚ್ಚಾಗುತ್ತಿದೆ. ಪೋಷಕರು ಮಕ್ಕಳಿಗೆ ನಿರ್ದಿಷ್ಟ ಸಮಯ ಮೀಸಲಿಡಲೇಬೇಕು. ಅವರ ಜತೆಗಿದ್ದರೆ ಸಾಲದು; ಮುಖತಃ ಸಂವಹನ ನಡೆಸಬೇಕು. ಬೇಕು–ಬೇಡಗಳಿಗೆ ಸ್ಪಂದಿಸಬೇಕು.

ಎಲ್ಲರೆದುರು ಜಗಳ ಬೇಡ: ಮಗುವಿಗೆ ಏನೂ ಗೊತ್ತಾಗುವುದಿಲ್ಲ ಎಂಬುದು ತಪ್ಪುಕಲ್ಪನೆ. ಮಕ್ಕಳು ಕುಟುಂಬದ ಎಲ್ಲ ಆಗು–ಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತವೆ. ಕೌಟುಂಬಿಕ ಕಲಹಗಳು ಓದು, ಏಕಾಗ್ರತೆ ಹಾಗೂ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುವ ಧಾರಾವಾಹಿ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಸಂಶೋಧನೆಗಳ ಪ್ರಕಾರ ಕೌಟುಂಬಿಕ ಕಲಹ, ಆತ್ಮಹತ್ಯೆ ಘಟನೆ, ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸುತ್ತವೆ.

ಆಡಲು, ಮುಕ್ತವಾಗಿ ಬೆರೆಯಲು ಬಿಡಿ: ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧಿಸಬೇಡಿ. ಆಟವಾಡಲು ಸಮಯ ನೀಡಿ. ಸ್ನೇಹಿತರ ಜತೆ ಮುಕ್ತವಾಗಿ ಬೆರೆಯಲು ಬಿಡಿ. ಒಂಟಿತನದಿಂದ ಕೀಳರಿಮೆ ಹೆಚ್ಚಾಗಿ ಆತ್ಮವಿಶ್ವಾಸ ಕುಗ್ಗುತ್ತದೆ. ಮುಂದೆ ಭವಿಷ್ಯ ಕಟ್ಟಿಕೊಳ್ಳಲೂ ಕಷ್ಟವಾಗುತ್ತದೆ. ಅತ್ಯುತ್ತಮ ಶಾಲೆಗೆ ಸೇರಿಸಿದ ಮಾತ್ರಕ್ಕೆ ಪೋಷಕರ ಕರ್ತವ್ಯ ಮುಗಿಯುವುದಿಲ್ಲ. ಮಕ್ಕಳಿಗೆ ಸಮಯ ಮೀಸಲಿಡುವುದೇ ದೊಡ್ಡ ಬಂಡವಾಳ.

‘ಮುಕ್ತವಾಗಿ ಮಾತನಾಡಿ’
ಆಯಾ ವಯಸ್ಸಿಗೆ ಅನುಗುಣವಾಗಿ ಪೋಷಕರು ಮಕ್ಕಳ ಜತೆ ಬೆರೆಯಬೇಕು. ಮೂರು ವರ್ಷದೊಳಗಿನ ಮಕ್ಕಳ ಬೌದ್ಧಿಕ ವಿಕಸನಕ್ಕೆ ಆದ್ಯತೆ ನೀಡಬೇಕು. ಶಾಲೆಗೆ ಹೋಗುವಮಕ್ಕಳ ಜತೆ, ಓದು, ಕ್ರೀಡೆ, ಶಾಲೆಯ ವಾತಾವರಣಗಳ ಬಗ್ಗೆ ಚರ್ಚಿಸಬೇಕು. ಹದಿಹರೆಯದವರ ಜತೆ ಲೈಂಗಿಕ ಬದಲಾವಣೆಗಳ ಕುರಿತು ಮುಕ್ತವಾಗಿ ಸ್ನೇಹಿತನಂತೆ ಮಾತನಾಡಬೇಕು ಎನ್ನುತ್ತಾರೆ ಮನೋವೈದ್ಯ ಡಾ.ದಯಾನಂದ ಸಾಗರ್‌.

ಸಣ್ಣ ನಿರ್ಲಕ್ಷ್ಯಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ದೈಹಿಕ ಆರೋಗ್ಯದಷ್ಟೇ, ಮಾನಸಿಕ ಆರೋಗ್ಯವೂ ಮುಖ್ಯ. ಈಚೆಗೆ ಮಕ್ಕಳೂ ಖಿನ್ನತೆಗೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚಿದ್ದು, ಈ ಬಗ್ಗೆ ಎಚ್ಚರವಹಿಸಬೇಕು. ಮಕ್ಕಳಲ್ಲಿ ನಕಾರಾತ್ಮಕ ಬೆಳವಣಿಗೆಗಳು ಕಂಡುಬಂದರೆ ಕೂಡಲೇ ಚಿಕಿತ್ಸೆ ಕೊಡಿಸಬೇಕು. 104 ಹಾಗೂ 1092 ಮಕ್ಕಳ ಸಹಾಯವಾಣಿಯ ಸದುಪಯೋಗ ಪಡೆದುಕೊಳ್ಳಬಹುದು ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT