ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಕೊನೆ ಅಸ್ತ್ರ: ದೇವೇಗೌಡ

Last Updated 2 ಡಿಸೆಂಬರ್ 2017, 9:32 IST
ಅಕ್ಷರ ಗಾತ್ರ

ಹಾಸನ: 'ಅಭಿವೃದ್ಧಿ ಮಂತ್ರ, ಘೋಷಣೆಗಳು ಗುಜರಾತ್ ಚುನಾವಣೆಯಲ್ಲಿ ಗೆಲುವು ತಂದು ಕೊಡುವುದು ಕಷ್ಟ ಎಂಬ ಸತ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆಯಾದ ನಂತರ ವಿವಾದಿತ ಗೋಹತ್ಯೆ ನಿಷೇಧ ಆದೇಶ ವಾಪಸ್ ಪಡೆಯಲು ಮುಂದಾಗಿರಬಹುದು' ಎಂದು ಸಂಸದ ಎಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಪ್ರಧಾನಿಯಾದ ನಂತರ ಹಿಂದುತ್ವ, ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದರು. ಈಗ ಅವೆಲ್ಲಾ ಸವಕಲು ನಾಣ್ಯ ಎಂಬುದು ಮನವರಿಕೆಯಾಗಿ, ಈ ನಿರ್ಧಾರಕ್ಕೆ ಬಂದಿರಬಹುದು. ಇದು ಗುಜರಾತ್ ಚುನಾವಣೆ ಗೆಲುವಿಗಾಗಿ ಕೊನೆಯ ಅಸ್ತ್ರ ಬಳಕೆ ಮಾಡಲು ಹೊರಟಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಗುಜರಾತ್ ಬಂದರಿನಿಂದ ಅತಿ ಹೆಚ್ಚು ಗೋಮಾಂಸ ರಫ್ತು ಆಗುತ್ತಿದೆ. ಇದಕ್ಕೆ ಅನುಮತಿ ಕೊಟ್ಟಿದ್ದು ಬಿಜೆಪಿ ಸರ್ಕಾರ. ಧರ್ಮ ಸಂಸತ್‌ ಸೇರಿ ವಿವಿಧೆಡೆ ಗೋ ರಕ್ಷಣೆ ಪರ ದನಿ ಎತ್ತಿದ್ದಾರೆ. ಆದರೂ ಚುನಾವಣೆ ಲಾಭಕ್ಕಾಗಿ ಆದೇಶ ವಾಪಸ್ ಪಡೆಯಲು ಮುಂದಾಗಿರಬಹುದು. ಮೋದಿ ವರ್ಚಸ್ಸು ಕುಗ್ಗಿದ್ದು, ಇದು ಅವರಿಗೆ ಸ್ಪಷ್ಟ ಹಿನ್ನಡೆ ಎಂದೇ ಭಾವಿಸಲಾಗುವುದು ಎಂದರು.

ರಾಹುಲ್‌ ಗಾಂಧಿ ದೇವಾಲಯಕ್ಕೆ ಭೇಟಿ ನೀಡಿದ್ದನ್ನು ವಿವಾದ ಮಾಡಲಾಗುತ್ತಿದೆ. ಇದು, ಚುನಾವಣಾ ತಂತ್ರಗಾರಿಕೆಯ ಭಾಗ ಇರಬಹುದು. ಆದರೆ ದೇವೇಗೌಡ ದೇವಸ್ಥಾನಕ್ಕೆ ಭೇಟಿ ನೀಡಿದರೆ ಯಾರು ಕೇಳುವುದಿಲ್ಲ ಎಂದರು.

ವಿಶ್ವದ ಕೆಲವೇ ದೇಶಗಳಲ್ಲಿ ಇರುವ ವಿದ್ಯುನ್ಮಾನ ಮತ ಯಂತ್ರಗಳಲ್ಲಿ ಸಾಕಷ್ಟು ಲೋಪದೋಷಗಳಿದ್ದು, ಅವುಗಳನ್ನು ನಿಷೇಧ ಮಾಡಿ, ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣಗೆ ಟಿಕೆಟ್‌ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ, ‘ಪ್ರಜ್ವಲ್ ಇನ್ನೂ 28 ವರ್ಷದ ಯುವಕ. ಆತನಲ್ಲೂ ಆಸೆ-ಆಕಾಂಕ್ಷೆಗಳು ಇರುವುದು ಸಹಜ. ಅದೇ ಕಾರಣಕ್ಕೆ ಪಕ್ಷ ಸಂಘಟನೆ ಮಾಡು, ಆಮೇಲೆ ಚುನಾವಣೆ ಅಂತ ನಾನು ಮತ್ತು ಕುಮಾರಸ್ವಾಮಿ ಜವಾಬ್ದಾರಿ ನೀಡಿದ್ದೇವೆ’ ಎಂದರು.

‘ಅನೇಕ ಕಡೆ ಪ್ರಜ್ವಲ್ ಚುನಾವಣೆಗೆ ನಿಲ್ಲಬೇಕು ಎಂಬ ಒತ್ತಡ ಇರುವುದು ಸಹಜ. ಮೊದಲು ನಿನ್ನ ತಂದೆ ಮತ್ತು ಚಿಕ್ಕಪ್ಪ ಅವರಿಂದ ಆಶೀರ್ವಾದ ಪಡೆದುಕೊಳ್ಳುವಂತೆ ಹೇಳಿದ್ದೇನೆ’ ಎಂದು ತಿಳಿಸಿದರು.

‘2019 ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಆಸಕ್ತಿ ಇಲ್ಲ. ಇದಕ್ಕೆ ವಯಸ್ಸು ಕಾರಣ’ ಎಂದ ಗೌಡರು, ‘ನಮ್ಮ ಪಕ್ಷದಿಂದ ಯಾವೊಬ್ಬ ಮುಖಂಡರೂ ಲೋಕಸಭೆ ಚುನಾವಣೆಗೆ ನಿಲ್ಲಲು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಪ್ರಜ್ವಲ್‌ನನ್ನೇ ಕಣಕ್ಕಿಳಿಸುವ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವೆ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT