ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಲ್ಲಿ ಕಣ್ಣೀರು ತರಿಸಿದ ಅಕಾಲಿಕ ಮಳೆ

Last Updated 2 ಡಿಸೆಂಬರ್ 2017, 9:40 IST
ಅಕ್ಷರ ಗಾತ್ರ

ಹಿರೀಸಾವೆ: ಹೋಬಳಿ ವ್ಯಾಪ್ತಿಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕೆ ಮಳೆಯಿಂದ ರೈತರು ಬೆಳೆದ ರಾಗಿ ಮತ್ತಿತರ ಬೆಳೆಗಳು ನೆನೆದಿದ್ದು, ರೈತರಲ್ಲಿ ಕಣ್ಣೀರು ತರಿಸಿದೆ.

ಕೃಷಿಕರು 10 ದಿನಗಳಿಂದ ರಾಗಿ ಪೈರು ಕಟಾವು ಮಾಡಿ, ಬಿಸಿಲಿನಲ್ಲಿ ಒಣಗಲು ಹೊಲದಲ್ಲಿ ಬಿಟ್ಟಿದ್ದರು. ಅಕಾಲಿಕ ಮಳೆ ಗುರುವಾರ ರಾತ್ರಿ ಮತ್ತು ಶುಕ್ರವಾರ ಇಡೀ ದಿನ ಸುರಿದಿದ್ದು, ಪೈರುಗಳು ನೆನೆದಿದೆ.

ಮಳೆಯಿಂದ ಪೈರಿನ ಕೆಳಭಾಗದಲ್ಲಿ ಗೆದ್ದಲು ಹತ್ತಲಿದೆ. ರಾಗಿ ಹಾಗೂ ಹುಲ್ಲು ನೆನೆದಿರುವುದರಿಂದ, ಮುಗ್ಗಲು ಬರಲಿದ್ದು ಜನ ಮತ್ತು ಜಾನುವಾರುಗಳ ಬಳಕೆಗೆ ಸೂಕ್ತವಾಗಿರುವುದಿಲ್ಲ ಎಂಬುದು ರೈತರ ಆತಂಕ.

‘ರಾಗಿ ಪೈರನ್ನು ಕಣಕ್ಕೆ ಸಾಗಿಸಲು ಸಾಧ್ಯವಿಲ್ಲ. ಬಿಸಿಲು ಬಂದಾಗ ಕಟಾವು ಮಾಡಿರುವ ಪೈರನ್ನು ಮಗುಚಿ ಹಾಕಿ, ಒಣಗಿಸಬೇಕು, ಒಂದಕ್ಕೆ ಎರಡಷ್ಟು ಕೂಲಿಯನ್ನು ಸಹ ನೀಡಬೇಕಿದೆ’ ಎನ್ನುತ್ತಾರೆ ರೈತರು.

ಹಿರೀಸಾವೆ ಹೋಬಳಿ ವ್ಯಾಪ್ತಿಯಲ್ಲಿ 5500 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ. ಬಹುತೇಕ ರಾಗಿ ಫಸಲು ಮಳೆಗೆ ಸಿಕ್ಕಿದೆ’ ಎನ್ನುತ್ತಾರೆ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ರಮೇಶ್ ಕುಮಾರ್.

ಎಕರೆ ಭೂಮಿಯಲ್ಲಿ ರಾಗಿ ಬೆಳೆಗೆ ₹12 ಸಾವಿರದಿಂದ ₹ 15 ಸಾವಿರ ಖರ್ಚಾಗುತ್ತದೆ, ಕಾರ್ಮಿಕರ ಸಮಸ್ಯೆ ಸಹ ಇದೆ. ಇಂಥ ಸಮಯದಲ್ಲಿ ಮಳೆ ಆಗಿರುವುದು ಸಮಸ್ಯೆ ಹೆಚ್ಚಿಸಿದೆ ಎನ್ನುತ್ತಾರೆ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಎಚ್‌.ಕೆ.ರಘು. ಕೆಲ ರೈತರು ಯಂತ್ರ ಬಳಸಿ ರಾಗಿ ಕಟಾವು ಮಾಡಿಸಿದ್ದಾರೆ. ಕಂತೆ ಕಟ್ಟಲಾಗಿಲ್ಲ. ಹೆಚ್ಚಿನವರು ಹಳೆ ಪದ್ಧತಿ ಯಲ್ಲಿ ರಾಗಿ ಬೆಳೆದಿದ್ದು, ಕಟಾವು ಆಗಿಲ್ಲ.

ಕೆಲ ವರ್ಷಗಳಿಂದ ಮಳೆಯಾಗದೆ ರೈತರು ಕಷ್ಟ ಅನುಭವಿಸಿದ್ದರು. ಕಳೆದ ವರ್ಷ ಮೇವು ಇಲ್ಲದೆ ಕೆಲವರು ಜಾನುವಾರು ಮಾರಿದ್ದರು. ಈ ವರ್ಷ ರಾಗಿ ಬಿತ್ತನೆ ಅವಧಿಯಲ್ಲಿ ಉತ್ತಮ ಮಳೆಯಾಗಿದ್ದು, ಫಸಲು ಕೈಹಿಡಿದಿತ್ತು.

ಈಗ ಎರಡು ದಿನಗಳಿಂದ ಬಿದ್ದ ಮಳೆ ರೈತರನ್ನು ಮತ್ತೆ ಕಷ್ಟಕ್ಕೆ ದೂಡಿದೆ. ಮಳೆ ಮುಂದುವರೆದರೆ ಅಲ್ಪಸ್ವಲ್ಪ ಇರುವ ಬೆಳೆಯೂ ಹಾಳಾಗುತ್ತದೆ. ಖರ್ಚು ಸಹ ಹೆಚ್ಚಾಗುತ್ತದೆ ಎಂಬುದ ರೈತರ ಆತಂಕ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT