ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯೊಳಗೆ ಧುಮುಕುವ ಜಲಪಾತ

Last Updated 2 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೈಕ್ ಒಂದರ ಕರ್ಕಶ ಸದ್ದು ಯಾವುದೇ ಕನಿಕರವಿಲ್ಲದೆ ಮನಸ್ಸಿನ ಆತನ ಆಹ್ಲಾದವನ್ನು ನಿರ್ನಾಮ ಮಾಡಿ ಥಟ್ಟನೆ ಕರಗಿಹೋಯ್ತು. ಸದ್ದು ಹೋದ ಹಾದಿಯನ್ನೇ ನೋಡಿ, ಚಣ ಕಳೆದು ಮತ್ತೆ ಹೂವ ನೋಡಿದಾಗ ಈ ಮುಂಚೆ ಇದ್ದ ಆ ಖುಷಿ, ಅಚ್ಚರಿಗಳಿರಲಿಲ್ಲ. ಖೇದವೆನಿಸಿ ಹೆಜ್ಜೆ ಹಾಕತೊಡಗಿದ. ಯಾಕೊ ಎದೆ ಬಡಿದುಕೊಳ್ಳಲಾರಂಭಿಸಿತು. ಚಣ ಕಣ್ಣ ಮುಚ್ಚಿ ನಿಂತ; ಪಾದಗಳು ಸರಿಯುತ್ತಿರುವಂತೆ, ತನ್ನ ದೇಹವನ್ನು ಯಾರೋ ಎಳೆಯುತ್ತಿರುವಂತೆ ತೋಚಿತು. ಭಯಬಿದ್ದು ಕಣ್ಣ ತೆರೆಯಬೇಕೆಂದು ಎಷ್ಟು ಪ್ರಯತ್ನಿಸಿದರೂ ಆಗುತ್ತಿಲ್ಲ. ಮೈಮನದ ತುಂಬೆಲ್ಲಾ ಆ ಬೈಕ್‌ನ ಕರ್ಕಶ ಸದ್ದೇ ತುಂಬಿತ್ತು. ಎಷ್ಟು ನೆನಪಿಸಿಕೊಂಡರೂ ಆ ಸುಂದರ ಹೂವು ಕಣ್ಣಿನ ಗುಂಡಿಯೊಳಗೆ ಬೀಳುತ್ತಲೇ ಇಲ್ಲ! ತಿಣುಕಾಡಿ ಮೆಲ್ಲಗೆ ಕಣ್ಣ ತೆರೆದು ನೋಡಿದ! ಗಾಳಿಗೆ ಆ ಹೂವು ಲಾಸ್ಯವಾಡುತ್ತಿರುವಂತೆ ಕಾಣಿಸಿತು; ತಿರುಗಿ ಹೋಗಿ ಆ ಹೂವನ್ನೇ ನೋಡುತ್ತಾ ನಿಂತುಬಿಡಲೇ? ಅರೆ! ಆ ಹೂವಿನ ಸಮೀಪ, ಅತಿ ಸಮೀಪ ನಿಂತಿದ್ದೇನೆಯೇ?! ವಾಹ್! ಎಷ್ಟು ಚೆಂದ ಈ ಹೂವು! ಈ ಹೂವಿನೊಂದಿಗೇ ಇದ್ದುಬಿಡಲೇ!? ಆ ಹಾಳಾದ ಸಮಾಜ ಬೇಡವೇ ಬೇಡ... ಮಕ್ಕಳ ಅನಾಗರಿಕ ಮಾತುಗಳು, ಅಸಹ್ಯ ನಗುಗಳು, ಕೊಳಕು ಕಾಳಜಿಗಳು... ಇವುಗಳಿಂದ ತಾನು ದೂರವಾಗಬೇಕು.

ಪ್ರಹ್ಲಾದ್ ನಡೆಯುತ್ತಿದ್ದ. ಹೂವ ಹೊತ್ತ ಹೆಜ್ಜೆಗಳು ಸರಾಗವಾಗಿ ಅರಳುತ್ತಿದ್ದವು. ಮನಸ್ಸು ಆ ಬೈಕ್‌ನ ಕರ್ಕಶ ಸರಹದ್ದಿನಿಂದ ದೂರವಾಗಿ ಎಷ್ಟೋ ಹೊತ್ತಾಗಿತ್ತು. ಆಕಾಶವ ನೋಡುತ್ತಾ ನಡೆಯುತ್ತಿದ್ದವನನ್ನು ಯಾರೋ ಕೂಗಿದಂತಾಗಿ ತಿರುಗಿ ನೋಡಿದ, ಯಾರೂ ಇಲ್ಲ; ಮನಸ್ಸು ಬಿಕೊ ಎನ್ನಿಸಿ ಹೆಜ್ಜೆಯ ಮುಂದಡಿ ಇಡಲ್ಹೋದವನು ಹಾಗೇ ನಿಂತ. ಹಾಗೆ ನಿಲ್ಲಲು ಕಾರಣವಾದುದು ಒಂದು ಯಕಶ್ಚಿತ್ ಮಗು! ಮಕ್ಕಳೆಂದರೆ ಅಲರ್ಜಿ ಎನಿಸುವ ಪ್ರಹ್ಲಾದ್ ಇಂದು ಮಗುವೊಂದರ ಅಳುವಿಗೆ ನಿಂತಿರುವುದು ಆಶ್ಚರ್ಯವೇ ಸರಿ. ಆಟೊ ಒಂದರ ಒಳಗೆ ಮಗು ಅಳುತ್ತಾ ಕೂತಿರುವುದ ನೋಡಿ ಆತನ ಮನಸ್ಸು ಇದೇ ಮೊದಲ ಬಾರಿಗೆ ತೇವಗೊಂಡು ಇಣುಕಿ ನೋಡಿತು; ಯಾಕ್ ಪುಟ್ಟಾ ಅಳ್ತಿದ್ದೀ ಕೇಳುತ್ತಾ ಆ ಮಗುವ ಕೆನ್ನೆಯ ಸವರಿತು. ಆ ಹೂವಿನ ದಳಗಳು ಈ ಮಗುವಿನ ಕೆನ್ನೆಯಂತೆ ನವಿರಾಗಿದ್ದಿರಬಹುದು ಎನ್ನಿಸಿತು. ನಾಲ್ಕು ವರ್ಷದ ಮಗುವೇನೊ! ಅದು ಕೈಯ ಅತ್ತೆತ್ತಲೊ ತೋರಿಸುತ್ತಾ ಅಳುತ್ತಿತ್ತು. ಪ್ರಹ್ಲಾದ್ ತಲೆ ಎತ್ತಿ ಆ ಮಗು ಕೈ ತೋರಿಸಿದ ಕಡೆ ನೋಡಿದ. ಅಲ್ಲಿ ಯಾರೂ ಇರಲಿಲ್ಲ. ಹೆಣ್ಣು ಮಗು! ಅದನ್ನು ಎತ್ತಿಕೊಂಡು ಸಮಾಧಾನಿಸಲೇ? ಯಾರದೊ ಮಗು... ಹಾಗೆ ಎತ್ತಿಕೊಂಡರೆ ಅದರ ಹೆತ್ತವರು ಏನಂದುಕೊಂಡಾರು? ಮುಖ ಪರಿಚಯವೂ ಇಲ್ಲದ ವ್ಯಕ್ತಿಯೊಬ್ಬ ಹೀಗೆ ಮಗುವ ಎತ್ತಿಕೊಂಡರೆ, ಯಾವ ಪೋಷಕರು ತಾನೆ ಬಿಟ್ಟಾರು? ಬೇಡ, ಯಾವ ಮಗು ಅತ್ತರೆ ತನಗೇನು? ಕನಿಕರ ತೋರಿಸಿದ ಗಳಿಗೆಗಳೆಲ್ಲ ತನಗೇ ಮುಳುವಾಗಿವೆ ಎಂದುಕೊಂಡು ಹೆಜ್ಜೆ ಇಡಲು ಪ್ರಯತ್ನಿಸಿದ. ಕಾಲುಗಳು ಭಾರವಾದಂತಿದ್ದವು, ತೋಳುಗಳು ನೋಯತೊಡಗಿದ್ದವು, ಕೈಗಳು ಏನನ್ನೋ ಹೊತ್ತುಕೊಂಡಂತೆ ವಜ್ಜೆಯಾಗಿದ್ದವು. ಯಾಕೆ ಹೀಗೆ ಎಂದುಕೊಳ್ಳುವುದರ ಒಳಗೆ ಯಾರೊ ಇಬ್ಬರು ತನ್ನತ್ತ ಓಡುತ್ತಾ ಬರುತ್ತಿರುವುದು ಕಾಣಿಸಿತು. ಈ ಮಗುವಿನ ತಂದೆ ತಾಯಿಗಳೇ ಇರಬೇಕೇನೊ! ಅವರುಗಳು ಬಂದದ್ದೇ ತನ್ನ ಕೈಗಳ ಬಿಡಿಸಿಕೊಂಡು ಏನನ್ನೋ ತಮ್ಮತ್ತ ಎಳೆದುಕೊಂಡರು. ಅರೆ! ಮಗು! ಅದೇ ಮಗು... ಆಟೊದಲ್ಲಿ ಅಳುತ್ತಾ ಕೂತಿದ್ದ ಆ ಹೆಣ್ಣುಮಗು! ತನ್ನ ಕೈಗಳೊಳಗೆ ಹೇಗೆ ಬಂತು ಎಂದು ಪ್ರಹ್ಲಾದ ಯೋಚಿಸುವುದರೊಳಗೆ ಆತನ ಕೆನ್ನೆಗೆ ಪಟಾರ್ ಎಂದು ಹೊಡೆದ ಸದ್ದು! ಅನಿರೀಕ್ಷಿತವಾಗಿ ಎರಗಿದ ಈ ಹೊಡೆತದಿಂದ ಆಘಾತಗೊಳ್ಳುವುದರೊಳಗೆಯೇ ಆ ಕೇಸರಿ ಬಣ್ಣದ ಶರ್ಟ್ ಹಾಕಿದ್ದ ವ್ಯಕ್ತಿ ಪ್ರಹ್ಲಾದನ ಕೆನ್ನೆಗೆ ಮತ್ತೊಮ್ಮೆ ಹೊಡೆದ! ತಬ್ಬಿಬ್ಬುಗೊಂಡು ಸುಧಾರಿಸಿಕೊಳ್ಳುವುದರೊಳಗೆ ಆ ಆಟೊ ಕರ್ಕಶ ಸದ್ದು ಮಾಡುತ್ತಾ ಹೊರಟುಹೋಯ್ತು. ಆತ ಅಷ್ಟಕ್ಕೂ ತನ್ನ ಪರಿಚಯಸ್ಥನೇ!... ಏನು ಎತ್ತ ಎಂದು ಕೇಳದೆ ಏಕಾಏಕಿ ಕೈ ಮಾಡುವುದೇ?...!

ಎಡವುತ್ತಾ ನಡೆಯುತ್ತಿದ್ದವನನ್ನು ಯಾರೋ ಮತ್ತೆ ಕೂಗಿದಂತಾಗಿ ತಿರುಗಿ ನೋಡಿದ. ಯಾರೂ ಇಲ್ಲ. ಮನಸ್ಸಿಗೆ ಹತ್ತಿದ್ದ ಭಯ, ಮಂಕು ತಟಕ್ಕನೆ ತಿಳಿಗೊಂಡು ಚಿತ್ತ ಇದ್ದಕ್ಕಿದ್ದ ಹಾಗೆ ಖುಷಿಆಯಿತು. ಹೂವಿನ ಆ ಸುಂದರ ದಳಗಳು ಅವನ ಎದೆಯನ್ನು ನೇವರಿಸಿದಂತೆ ತೋಚಿ, ತುಸು ಅಸಹಜ ಎನ್ನಿಸುವಷ್ಟು ಸದ್ದ ಹೊರಡಿಸುತ್ತಾ ವಿಲಕ್ಷಣವಾಗಿ ನಕ್ಕ. ತನ್ನ ಷರ್ಟ್ ಜೇಬಿನಿಂದ ಏನೋ ಸುವಾಸನೆ ಬರುತ್ತಿತ್ತು. ಮನಸ್ಸು ನವಿರೆದ್ದು ಬಲಗೈಯನ್ನು ಜೇಬಿನೊಳಗೆ ಕಳುಹಿಸಿ ಒಳಗಿದ್ದ ಆ ಸುಮಧರ ವಾಸನೆಯ ವಸ್ತುವನ್ನು ಹೊರತೆಗೆಸಿತು. ಅದೊಂದು ಹೂವು! ಅದೇ ಹೂವೇ! ಈ ಮುಂಚೆ ತಾ ನೋಡಿದ, ಇಷ್ಟಪಟ್ಟ ಹೂವೇ! ಅದರ ಬಳಿಯೂ ತಾನು ಹೋಗಲಿಲ್ಲ, ಅದು ಹೇಗೆ ತನ್ನ ಜೇಬಿನೊಳಗೆ ಬಂದಿತು! ಎಪ್ಪತ್ತರ ಅರಳು ಮರುಳೇ!?

ಮನೆಗೆ ಹೋಗುತ್ತಿರುವಾಗ ಬೀದಿಯಲ್ಲಿ ಮಕ್ಕಳು ಆಟವಾಡುತ್ತಿದ್ದರು. ಎಲ್ಲರೂ ಇವನ ನೋಡಿದ್ದೇ ಭಯಗೊಂಡು ಓಡಿಹೋದರು; ಏರಿಯಾದ ಜನರೂ ಕಣ್ಣುಗಳ ಕೆಂಪಾಗಿಸಿಕೊಂಡರು. ಪ್ರಹ್ಲಾದನಿಗೆ ಖೇದವೆನಿಸಿತು! ಮತ್ತೆ ಮನಸ್ಸು ಮೆಲ್ಲನೆ ಭಯದಿಂದ ಅಲುಗಾಡತೊಡಗಿತು. ಯಾಕೆ ಹೀಗೆ ಎಲ್ಲರೂ ವರ್ತಿಸುತ್ತಿದ್ದಾರೆ? ತನ್ನಿಂದ ಏನಾದರೂ ಅಚಾತುರ್ಯ ಸಂಭವಿಸಿತೆ? ಇಲ್ಲವಲ್ಲ... ಆ ಮಕ್ಕಳನ್ನು ಕೇಳಿಬಿಡಲೆ?! ಮಕ್ಕಳು ಸುಳ್ಳು ಹೇಳುವುದಿಲ್ಲವಂತೆ! ತಾನು ಅಷ್ಟಾಗಿ ಮಕ್ಕಳ ಜೊತೆ ಆಡಿದವನಲ್ಲ... ತನ್ನ ಮಕ್ಕಳ ಜೊತೆಯೂ... ಮಕ್ಕಳ ಸಮಾಚಾರಗಳೆಲ್ಲವೂ ತನ್ನ ಧರ್ಮಪತ್ನಿಯದೇ... ಅವಳು ಸತ್ತು ನಿನ್ನೆಗೆ ವರ್ಷವಾಯ್ತು... ಅವಳ ನೆನಪು ಆಗಾಗ ಬಂದು ಹೋಗುತ್ತದೆ. ಕಾಳ ರಾತ್ರಿಗಳ ಕತ್ತಲಲ್ಲಿ ಅವಳ ಸೀರೆಯ ಸದ್ದು ಮನಸ್ಸ ಕೆಡಿಸಿ ಪ್ರಪಾತಕ್ಕೆ ತಳ್ಳುತ್ತಿರುತ್ತದೆ. ಅವಳಿಲ್ಲದೆ ತನ್ನ ಮೈಮನ ಈಚೀಚೆಗೆ ಸದಾ ಕುದಿಯುತ್ತಿರುತ್ತದೆ!

ಮಕ್ಕಳಾ... ಮಕ್ಕಳಾ... ನನ್ನ ನೋಡಿ ಯಾಕೆ ಹಾಗೆ ಓಡುವಿರಿ? ಕೇಳಬೇಕೆಂದುಕೊಂಡು ಹುಡುಕಾಡಿದರೆ ಯಾವ ಮಕ್ಕಳೂ ಕಾಣಿಸುತ್ತಿಲ್ಲ. ಒಟ್ಟು ಐದು ಮಕ್ಕಳು ಆಟವಾಡುತ್ತಿದ್ದರು. ಕುಂಟಾಬಿಲ್ಲೆಯೇ ಇರಬೇಕು... ಈ ಕಾಲದಲ್ಲೂ ಆ ಆಟವನ್ನಾಡುತ್ತಾರೆಯೇ? ಅರೆ! ಒಟ್ಟು ಆರು ಮಕ್ಕಳಲ್ಲವೇ ದಿನಂಪ್ರತಿ ಇಲ್ಲಿ ಆಟವಾಡುವುದು... ಆ ಹುಡುಗಿ, ದುಂಡಗೆ ಕೆಂಪಗೆ ಒಳ್ಳೆ ಟೊಮೊಟೊ ಹಣ್ಣು ಇದ್ದ ಹಾಗಿದ್ದ ಆ ಬಾಲೆ ಎಲ್ಲಿ ಕಾಣಿಸುತ್ತಿಲ್ಲವಲ್ಲ!? ಆಗಾಗ ಆಕೆ ತನ್ನ ಮನೆಯ ಬಳಿ ಸುಳಿದಾಡುವುದ ಕಂಡಿದ್ದೇನೆ! ಕಿಟಕಿಯಲ್ಲಿ ಇಣುಕಿ ‘ವೋವ್’ ಎಂದು ಹೆದರಿಸುತ್ತಿದ್ದಳು! ಎಲ್ಲಿ ಹೋದಳಾ ಹೊಳೆವ ಕಂಠದ ಬಾಲೆ! ಒಳ್ಳೆಯ ಚೂಟಿ ಹುಡುಗಿ... ಎಪ್ಪತ್ತರ ನನ್ನನ್ನೂ ಅಂಕಲ್ ಎಂದು ಕರೆದು ಚಕ್ಕುಳಗುಲ್ಲಿ ಇಡುತ್ತಿದ್ದವಳು! ಅಕ್ಕರೆಯಿಂದ ಮಾತಾಡಿಸುತ್ತಿದ್ದವಳು...

ಪ್ರಹ್ಲಾದ ಮನೆಯೊಳಗೆ ಕಾಲಿಟ್ಟಾಗ ನೆಲ ಜುಮ್ಮೆಂದಿತು.

ಮನೆಯೊಳಗೆ ಎಲ್ಲರೂ ಇದ್ದರು; ಗಂಡು ಮಕ್ಕಳು, ಸೊಸೆಯಂದಿರು, ಅಚ್ಚರಿಯೆಂಬಂತೆ ಹೆಣ್ಣು ಮಕ್ಕಳು, ಅಳಿಯಂದಿರು ಕೂಡ ಇದ್ದರು! ಓಹ್! ತನ್ನ ಹೆಂಡತಿಯ ತಿಥಿ ನಿನ್ನೆ ತಾನೆ ಮುಗಿದಿದ್ದು! ಅದಕ್ಕೆಂದೇ ಬಂದಿದ್ದಾರೆ! ಮರೆತುಬಿಟ್ಟೆ. ಮೊಮ್ಮಕಳ ಕಿಲಕಿಲ ನಗು ತನ್ನ ನೋಡಿದ್ದೇ ಗಪ್ ಚುಪ್ಪಾಯ್ತು! ಎಲ್ಲರೂ ತನ್ನನ್ನು ನುಂಗುವಂತೆ ನೋಡುತ್ತಿರುವುದ ಗಮನಿಸಿದ. ಇದ್ಯಾವ ಹೊಸ ಸಮಸ್ಯೆ! ಬೀದಿಯಲ್ಲಿ ಮಾತ್ರವಲ್ಲದೆ ಮನೆಯೊಳಗೂ ಅರ್ಥವಾಗದ ಅಸಹ್ಯವೊಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಧ್ವನಿಯ ಹೊರಡಿಸಿ ಏನ್ ಸಮಾಚಾರ? ಎಂದು ಕೇಳಬೇಕೆನಿಸಿ ಅವನು ಬಾಯಿ ತೆಗೆದರೆ ಹಿರೀಮಗಳು ಅವನೆದುರು ನಿಂತು ಅವನನ್ನೇ ನೋಡಿದಳು. ಪ್ರಹ್ಲಾದನೂ ಅವಳ ನೋಡಿ ಏನು ಎನ್ನುವಂತೆ ಹುಬ್ಬು ಕುಣಿಸಿದ. ಆಕೆ ಈ ಸಂಜ್ಞೆಗೆ ಕಾಯುತ್ತಿದ್ದವಳಂತೆ ಅವನ ಕಣ್ಣುಗಳನ್ನೇ ನೋಡುತ್ತಾ ಗಂಟಲಿನಿಂದ ವಿಚಿತ್ರ ಸದ್ದೊಂದ ಬರಿಸಿಕೊಂಡು ಕ್ಯಾಕರಿಸಿ ಅವನ ಮುಖಕ್ಕೆ ಉಗಿದಳು. ಪ್ರಹ್ಲಾದ ಬೆಚ್ಚಿಬಿದ್ದು ಎಲ್ಲರ ನೋಡಿದ; ಅಲ್ಲಿದ್ದ ಕಂಗಳೆಲ್ಲವೂ ಸಂತೋಷದ ಹೂಮಳೆಯಲ್ಲಿ ತೇಲುತ್ತಿರುವಂತೆ ಕಂಡವು. ಎದುರು ನಿಂತಿರುವ ಮಗಳ ಕೆನ್ನೆಗೆ ಜೋರಾಗಿ ಬಾರಿಸುವ ಉಮೇದಿನಲ್ಲಿ ಕೈ ಎತ್ತಿದಾಗ ಮೊಮ್ಮಕ್ಕಳು ಓಡಿ ಬಂದರು. ಎಂಟು ಮೊಮ್ಮಕ್ಕಳು, ಮುದ್ದಾದ ಮೊಮ್ಮಕ್ಕಳು- ತಾನೆಂದೂ ಎತ್ತಿಕೊಂಡು ಮುದ್ದಾಡದ ಮೊಮ್ಮಕ್ಕಳು. ಅವರುಗಳೆಲ್ಲರ ಕೈಗಳಲ್ಲೂ ಚಪ್ಪಲಿ, ಶೂಗಳು!

ನೋಡನೋಡುತ್ತಿದ್ದಂತೆ ಆ ಪುಟಾಣಿಗಳು ತನ್ನನ್ನು ಬಗೆಬಗೆಯ ಪಾದರಕ್ಷೆಗಳಿಂದ ಬಾರಿಸುತ್ತಿರುವುದ ಕಲ್ಪಿಸಿಕೊಳ್ಳಲೂ ಸಾಧ್ಯವಾಗಲಿಲ್ಲ ಪ್ರಹ್ಲಾದನಿಗೆ. ಕುಸಿದು ಬಿದ್ದ. ಹಣೆಯಲ್ಲಿ ಸಣ್ಣ ಗಾಯವಾಯ್ತು. ಬಾಗಿಲ ಹೊರಗೆ ಜನ ನಿಂತು ನೋಡುತ್ತಿದ್ದಾರೆ. ಜೋರಾಗಿ ಕೂಗಬೇಕೆನ್ನಿಸಿ ಪ್ರಹ್ಲಾದ ತಲೆ ಎತ್ತಿದಾಗ ಸೊಸೆಯಂದಿರು ಅವನನ್ನು ಪೊರಕೆಯಲ್ಲಿ ಹೊಡೆಯುತ್ತಿದ್ದರು. ಕಣ್ಣು ಕಿವಿಗಳೊಳಗೆ ಪೊರಕೆ ಕಡ್ಡಿಗಳು ತೂರಿಕೊಳ್ಳುತ್ತಾ ಅಗಾಧ ನೋವು ಕೊಡುತ್ತಿದ್ದವು. ಎರಡನೆಯ ಸೊಸೆ ಕಾಲಲ್ಲಿ ಜಾಡಿಸಿ ಹೊಡೆದಳು, ಮೂರನೆಯವಳು ಚಪ್ಪಲಿಯಲ್ಲಿ ಹೊಡೆಯುತ್ತಿದ್ದಳು. ನಡೆಯುತ್ತಿರುವುದು ಕನಸೇ ನಿಜವೇ ಎನ್ನುವುದು ಅರ್ಥವಾಗದೆ ಗೊಂದಲಗೊಂಡು ಕಣ್ಣ ಅಗಲಿಸಲು ಪ್ರಯತ್ನಿಸುವಾಗ ಅವನ ಮುಖಕ್ಕೆ ಜೋರಾಗಿ ಯಾರೋ ಗುದ್ದಿದರು; ಉಸಿರ ಎಳೆಯುತ್ತಾ ನೋಡಿದ, ಅದು ತನ್ನ ಕೊನೆಯ ಮಗ! ಮುಖ ಮೂತಿ ಕಿತ್ತು ಹೋಗುವಂತೆ ಹೊಡೆದ. ಮೂಗಿನಿಂದ ರಕ್ತ ಸೋರುತ್ತಿತ್ತು.

ಪ್ರಹ್ಲಾದ ಸುಸ್ತಾಗಿ ಒಂಚೂರೂ ತ್ರಾಣವಿಲ್ಲದೆ ಮುರುಟಿಕೊಂಡು ಬಿದ್ದಿದ್ದ. ತನ್ನನ್ನು ಹೊಡೆಯಲು ಕಾರಣಗಳೇನು ಎಂದು ಕೇಳುವ ಸ್ಥಿತಿಯಲ್ಲೂ ಇರಲಿಲ್ಲ. ದೇಹ ಅಲುಗಾಡಲೂ ಶಕ್ತಿಯಿಲ್ಲದೆ ಕೊರಗುತ್ತಿತ್ತು. ಅವನ ಕೈಗಳ ಹಿಡಿದು ಎಳೆಯುತ್ತಾ ಹೊರಗೆ ಎಸೆಯಲಾಯಿತು. ಎಸೆದದ್ದು ಹಿರೀಮಗ, ನಾರಾಯಣ! ಕರುಳು ಕಿತ್ತು ಬರುವಂತಾಯ್ತು. ಮೂಗಿನಿಂದ ಸುರಿಯುತ್ತಿದ್ದ ರಕ್ತವನ್ನು ಒರೆಸಿಕೊಂಡು ಹೊರಳೆಗಳ ಹಿಗ್ಗಿಸಿ ಉಸಿರೆಳೆದುಕೊಂಡ. ಎದೆಯ ನೆಲಕ್ಕೆ ಉಜ್ಜುತ್ತಾ ಏಳಲು ಪ್ರಯತ್ನಿಸಿ ತಲೆ ಎತ್ತಿದ. ಬಿಳಿಯ ಆಕಾಶದ ಕೆಳಗೆ ಬಿದ್ದಿರುವ ತನ್ನ ದೇಹದ ಸುತ್ತ ಜನರ ಒಂದು ದೊಡ್ಡ ಗುಂಪೇ ನಿಂತಿರುವುದ ನೋಡಿ ದಿಗಿಲ್ಗೊಂಡ. ಅವರ ಕಣ್ಣುಗಳಲ್ಲಿ ತಿರಸ್ಕಾರ, ಸಿಟ್ಟು, ಬೆಂಕಿಯ ಕಿಡಿಗಳು ಕಾಣಿಸುತ್ತಿವೆ.

ಪೊಲೀಸ್ರಿಗಾದ್ರೂ ಹಿಡಿದುಕೊಡಿ, ಅಥವ ನೀವೇ ಏನ್ ಬೇಕಾದ್ರೂ ಮಾಡಿಕೊಳ್ಳಿ ಎಂದಿದ್ದು ನಾರಾಯಣ, ತನ್ನ ಹಿರೀಮಗ!

ಜನ ಏನೊಂದೂ ಉತ್ತರಿಸಲಿಲ್ಲ. ಕತ್ತ ಬಲಕ್ಕೆ ಹಾಕಿ ಮಲಗಿದ್ದ ಪ್ರಹ್ಲಾದ ಮೆಲ್ಲಗೆ ಕಣ್ಣ ತೆರೆದು ನೋಡಿದ; ಆಶ್ಚರ್ಯವೆಂಬಂತೆ ಅಲ್ಲಿ ನೆರೆದಿದ್ದ ಎಲ್ಲರೂ ಚದುರಿಹೋಗುತ್ತಿದ್ದರು. ಎದ್ದು ಕೂತ. ಯಾರೋ ಒಂದಿಬ್ಬರು ಕನಿಕರದಿಂದ ನೋಡಿದ್ದು ಆತನಿಗೆ ಗೊತ್ತಾಯ್ತು. ಅವರನ್ನು ಕೇಳಲೇ? ಏನು ನಡೆಯುತ್ತಿದೆ ಇಲ್ಲಿ? ಯಾಕಾಗಿ ಹೀಗೆ ಎಲ್ಲರೂ ತನ್ನನ್ನು ದ್ವೇಷಿಸುತ್ತಿದ್ದೀರಿ? ತಾ ಹೆತ್ತ ಮಕ್ಕಳು, ತನ್ನ ಸೊಸೆ, ಮೊಮ್ಮಕ್ಕಳೇ ತನ್ನನ್ನು ಪೊರಕೆ, ಚಪ್ಪಲಿಗಳಲ್ಲಿ ಹೊಡೆಯಲು ಕಾರಣವಾದರೂ ಏನು? ಬೆಂಕಿಯುಗುಳುತ್ತಿರುವ ನಿಮ್ಮ ನೋಟಗಳ ಅರ್ಥವಾದರೂ ಏನು? ಇವೆಲ್ಲವುಗಳ ಕೊಂಡಿ ಎಲ್ಲಿದೆ?

ಅವನು ಕಟ್ಟಿದ್ದ ಮನೆಯ ಬಾಗಿಲುಗಳು ಈಗ ಮುಚ್ಚಿಕೊಂಡಿವೆ! ಇನ್ನೆಂದೂ ಅವನಿಗೆ ತೆರೆಯಲಾರವೇನೊ ಎಂಬಂತೆ! ಮನೆ ತನ್ನ ಹೆಸರಿನಲ್ಲಲ್ಲವೇ ಇರುವುದು! ಓಹ್! ಇಲ್ಲ, ಈ ಜಾಗ ಇದ್ದುದು ತನ್ನ ಹೆಂಡತಿ ಹೆಸರಲ್ಲಿ! ಅದನ್ನು ಬದಲಾಯಿಸಲು ಮೊನ್ನೆ ತಾನೆ ಅರ್ಜಿ ಹಾಕಿದ್ದು... ಹೌದು, ಮೊನ್ನೆಯೇ! ತನ್ನ ಹೆಸರಿಗೆ ಬದಲಾಯಿಸುವಂತಲ್ಲವೇ ತಾನು ಅರ್ಜಿ ಹಾಕಿದ್ದು?! ಈ ಮನೆ ತನ್ನ ಹೆಸರಿಗೆ ಆಗುವುದು ಖರೆ! ಇದು ಗೊತ್ತಿದ್ದರೂ ತನ್ನ ಮಕ್ಕಳು ಹೀಗೆ ನಡೆದುಕೊಳ್ಳಲು ಕಾರಣಗಳೇನು?

ಪ್ರಹ್ಲಾದ ಏಳಲು ಪ್ರಯತ್ನಿಸಿದ. ಬೆನ್ನು, ಸೊಂಟ ಕೀಕ್ ಎನ್ನುತ್ತಾ ಕಿರುಚಿಕೊಂಡವು. ಕೂತಲ್ಲೇ ಉಚ್ಚೆ ಹೊಯ್ದುಕೊಂಡಿರುವುದು ಗೊತ್ತಾಗಿ ನಾಚಿಕೆಯಾದಂತಾಗಿ ಸುತ್ತಲೂ ನೋಡಿದ. ರಸ್ತೆ ಖಾಲಿಖಾಲಿಯಾಗಿತ್ತು! ತನ್ನ ಸುತ್ತ ನಡೆಯುತ್ತಿರುವ ಘಟನೆಗಳು ದುಃಸ್ವಪ್ನವೇ ಇರಬೇಕೇನೊ ಎಂದೆನಿಸಿತು. ಆದರೆ ಇದು ನಿಜ! ತನ್ನ ನೋಡಿದ್ದೇ ಓಡಿದ್ದ ಮಕ್ಕಳು, ಮಗುವ ಕಿತ್ತುಕೊಂಡು ತನ್ನ ಕೆನ್ನೆಗೆ ಬಾರಿಸಿದ ಆ ಆಟೊ ವ್ಯಕ್ತಿ, ಹಿಗ್ಗಾಮುಗ್ಗಾ ಥಳಿಸಿದ ತನ್ನ ಮನೆಯವರು, ಹೊಡೆಯಲು ಸನ್ನದ್ಧರಾಗಿದ್ದ ಜನ... ಎಲ್ಲವೂ ನಿಜ! ನಿನ್ನೆ ಮೊನ್ನೆ ನಡೆದ ಯಾವುದಾದರೂ ಕೆಟ್ಟ ಗಳಿಗೆಯೊಂದನ್ನು ಮರೆತುಬಿಟ್ಟೆನೆ? ಎಷ್ಟು ಯೋಚಿಸಿದರೂ ಯಾವುದೇ ಅಂತಹ ಅಹಿತಕಾರಿ ಘಟನೆ ನಡೆದ ನೆನಪು ಬರುತ್ತಿಲ್ಲ... ಇಪ್ಪತ್ತೈದು ವರ್ಷಗಳ ಸರ್ಕಾರಿ ನೌಕರಿಯಲ್ಲಿ ಎಂದೂ ಹೀಗೆ ಸಂಭವಿಸಿದ್ದೇ ಇಲ್ಲ! ಒಂದು ದಿನವೂ ತನ್ನ ಮೇಲಧಿಕಾರಿಗಳ ಕೋಪಕ್ಕೆ ತುತ್ತಾದವನಲ್ಲ. ಮರೆತು ಕೆಲಸವ ತಪ್ಪಿಸಿಕೊಂಡವನೂ ಅಲ್ಲ. ಮರೆಯುವುದು ತನ್ನ ಸ್ವಭಾವದಲ್ಲೇ ಇಲ್ಲ... ಬೆಳಿಗ್ಗೆಯಿಂದ ಸಂಭವಿಸುತ್ತಿರುವ ಈ ಬಿಡಿ ಬಿಡಿ ಘಟನೆಗಳೆಲ್ಲವೂ ಯಾವುದೋ ಒಂದು ಮೂಲತಂತುವಿನಲ್ಲಿ ಬೆಸುಗೆಗೊಂಡಿವೆ! ಯಾವುದಾ ಮೂಲತಂತು?!

ಅವನ ಮನೆಯ ಬಾಗಿಲುಗಳು ಈಗ ತೆರೆದುಕೊಂಡವು. ಪ್ರಹ್ಲಾದ ಉಸಿರ ಜೋರಾಗಿ ತಳ್ಳುತ್ತಾ ಅತ್ತ ನೋಡಿದ. ತನ್ನ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳೆಲ್ಲರೂ ಒಬ್ಬೊಬ್ಬರಾಗಿ ಹೊರಬಂದು ತನ್ನ ಕೆಕ್ಕರಿಸುತ್ತಾ ಹೊರಟು ಹೋಗುತ್ತಿದ್ದಾರೆ. ಅವರ ಕೈಗಳಲ್ಲಿ ಸೂಟ್‌ಕೇಸ್, ಬ್ಯಾಗ್‌ಗಳು... ಮನೆಯನ್ನು ತೊರೆದು ಹೋಗುತ್ತಿರುವರೇನೊ!

ಹಿರೀಮಗ ನಾರಾಯಣನ ಜೊತೆ ತನ್ನ ಉಳಿದ ಗಂಡುಮಕ್ಕಳು ಅನತಿ ದೂರದಲ್ಲಿ ನಿಂತು ತನ್ನ ದಿಟ್ಟಿಸುತ್ತಿದ್ದರು. ಪ್ರಹ್ಲಾದ ನೋಟವ ತಪ್ಪಿಸಿಕೊಂಡ. ಮನಸ್ಸು ಸಿಡಿದು ಹೋಗುವಷ್ಟು ನೋವಾಯ್ತು. ಎದೆ ಬಡಿತ ಕಿವಿಯನ್ನು ಕಿತ್ತುಹಾಕುತ್ತಿತ್ತು. ಕಣ್ಣಿನ ಪೊರೆಗಳು ನೀರಿನಲ್ಲಿ ತೇಲುತ್ತಿದ್ದವು. ಗಂಟಲು ಬಿಗಿಯಾಗಿ ಉಸಿರಾಡಲು ತಿಣುಕಾಡುವಂತಾಯ್ತು. ಹೀಗೇ ಪ್ರಾಣ ಹೋಗಿಬಿಡಲಿ ಎಂದುಕೊಂಡು ನೆಲವ ಬಲಗೈಯಿಂದ ಜೋರಾಗಿ ಹೊಡೆದ. ಉತ್ಕಟ ನೋವಿನಿಂದ ಕಿರುಚುತ್ತಾ ಕಣ್ಣೀರ ಸುರಿಸಿ ಅಳುತ್ತಿದ್ದ.

‘ಈಗ ಅತ್ತು ಏನು ಪ್ರಯೋಜನ? ನಿನ್ ಜನ್ಮಕ್ಕೆ... ಥೂ’

‘ನಮ್ ಸುದ್ದೀಗೆ ಬರ‍್ಬೇಡ, ನೀನ್ ಸತ್ರೂ ನಾವು ಕೊಳ್ಳಿ ಇಡಲ್ಲ’

ಮಕ್ಕಳು ಹೊರಟು ಹೋಗಿದ್ದರು. ಕಣ್ಣಿನ ಗುಂಡಿಗಳಲ್ಲಿ ನೀರು ಬತ್ತಿ ಹೋಗಿತ್ತು. ಪ್ರಹ್ಲಾದನ ಎದೆ ಈಗ ಹಗುರೆನಿಸಿತು; ಮೆಲ್ಲಗೆ ಎದ್ದ. ಬೀದಿಯಲ್ಲಿ ಯಾರೂ ಇಲ್ಲ... ತನ್ನ ಮಕ್ಕಳು ತಮ್ಮತಮ್ಮ ಸಂಸಾರಗಳೊಂದಿಗೆ ಹೊರಟು ಹೋಗಿದ್ದರು. ಏರಿಯಾದ ಜನ ಸರ್ಕಸ್ ನೋಡುವಂತೆ ನೋಡಿ ತಮ್ಮ ಗೂಡ ಸೇರಿಕೊಂಡಿದ್ದರು.

ಪ್ರಹ್ಲಾದ ಮನೆಯ ಒಳಗೆ ಹೋದವನೇ ಬಾಗಿಲಿಗೆ ಭದ್ರವಾಗಿ ಚಿಲಕ ಹಾಕಿ ಸುತ್ತಲೂ ನೋಡಿದ. ಮಕ್ಕಳು ಮೊಮ್ಮಕ್ಕಳಿಂದ ತುಂಬಿ ತುಳುಕುತ್ತಿದ್ದ ಮನೆ! ಈಗ ಬಿಕೊ ಎನ್ನಿಸಿತು. ಭಾರ ಮೌನ! ಅಡುಗೆ ಕೋಣೆಯೊಳಗೆ ಹೋಗಿ ಚೊಂಬ ಹುಡುಕಿ ನೀರು ಬಗ್ಗಿಸಿ, ಗಂಟಲಿಗೆ ಸುರಿದುಕೊಂಡು ಮುಖ, ತಲೆಗಳಿಗೆ ಎರಚಿಕೊಂಡ. ಮೆಲ್ಲಗೆ ತೆವಳುತ್ತಾ ಕನ್ನಡಿಯ ಮುಂದೆ ನಿಂತು ಹಣೆಯ ನೋಡಿಕೊಂಡ, ಬಲಭಾಗದಲ್ಲಿ ಊದಿಕೊಂಡಿತ್ತು. ಮೈಯನ್ನೆಲ್ಲ ನೋಡಿಕೊಂಡ. ಅಲ್ಲಲ್ಲಿ ಗಾಯಗಳು, ರಕ್ತದ ಕಲೆಗಳು! ತನ್ನ ಕೋಣೆಗೆ ಹೋಗಿ ಮಂಚದ ಮೇಲೆ ದೇಹವ ಚೆಲ್ಲಿದ. ಗುಮ್ಮೆನ್ನುವ ಮೌನ. ಮೈಮನಗಳಿಗೆ ತಗುಲಿರುವ ಈ ನೋವಿನಿಂದ ಹೊರಬರಲು ತಿಂಗಳುಗಳೇ ಬೇಕಾಗುತ್ತವೆಯೇನೊ!

ಕಿಟಕಿಯಲ್ಲಿ ಯಾರೋ ಕಿಲಕಿಲ ನಗುತ್ತಿರುವ ಸದ್ದಿಗೆ ಬೆಚ್ಚಿಬಿದ್ದು ಅತ್ತ ಮೆಲ್ಲನೆ ಕಣ್ಣ ಹೊರಳಿಸಿದ. ಎದೆ ಢವಗುಟ್ಟುತ್ತಿತ್ತು. ಅರೆ! ಆ ಬಾಲೆ! ಟೊಮೊಟೊ ಹಣ್ಣಿನಂತಿರುವ ಚೂಟಿ ಹುಡುಗಿ! ತುಟಿಯರಳಿಸಿದ. ಆಕೆ ಮತ್ತೆ ಕಿಲಕಿಲ ನಕ್ಕಳು! ಅವಳ ಸುಂದರ ದಂತಪಂಕ್ತಿಗಳು ಮಿರಮಿರ ಹೊಳೆಯುತ್ತಿದ್ದವು. ಎಲ್ಲಿ ಹೋಗಿದ್ದಳು ಆಗ? ಮಕ್ಕಳೊಂದಿಗೆ ಆಟವಾಡುತ್ತಿರಲಿಲ್ಲ!

ಪ್ರಹ್ಲಾದ ತಿಣುಕಾಡಿ ಬಲಗೈಯ ಎತ್ತಿ ಬಾ ಎನ್ನುವಂತೆ ಸಂಜ್ಞೆ ಮಾಡಿದ. ಆಕೆ ಬರುವುದಿಲ್ಲ ಎನ್ನುವಂತೆ ತಲೆಯಾಡಿಸಿದಳು. ಪ್ರಹ್ಲಾದ ‘ಬಾ ಕಂದ’ ಎನ್ನುತ್ತಾ ನಕ್ಕ. ಇಂದಾದರೂ ಆಕೆಯ ಜೊತೆ ಮಾತಾಡಬೇಕು! ತನ್ನ ನೋವು ತುಸುವಾದರೂ ಕರಗುತ್ತದೆ. ಆಕೆ ಏನನ್ನೊ ಕೇಳಿದಳು... ಇವನು ‘ಕೊಡುವೆ ಬಾ ಮರಿ’ ಎಂದ. ಅವಳು ಕೇಳಿದ್ದೇನೆಂದು ಪ್ರಹ್ಲಾದನಿಗೇ ಸರಿಯಾಗಿ ಕೇಳಿಸಲಿಲ್ಲ!

ಆ ದುಂಡನೆಯ ಹುಡುಗಿ ಈಗ ಕಣ್ಣ ಮುಂದೆ! ಮನಸ್ಸಿಗೆ ಆಹ್ಲಾದವೆನಿಸಿ ಆಕೆಯನ್ನೇ ನೋಡುತ್ತಿರಬೇಕೆನ್ನಿಸಿತು: ಗುಂಗುರು ಕೂದಲು, ಹಾಲುಗೆನ್ನೆ, ಬೆಣ್ಣೆಯಂತಹ ಚರ್ಮ, ಜಿಂಕೆಯ ಕಣ್ಣುಗಳು, ಚೂಪಾದ ಮೂಗು, ಕೆಂದುಟಿ... ಅಪ್ರತಿಮ ಬಾಲೆ! ಹೆಸರೇನಿರಬಹುದು ಈ ಬಾಲೆಗೆ!? ಆ ಹೂವಿನಂತಹ ಮೃದುವಾದ, ಚಿತ್ತಕ್ಕೆ ಭ್ರಮೆ ಹಿಡಿಸುವ ಬಾಲೆ!

ಪ್ರಹ್ಲಾದ ಆ ಬಾಲೆಯ ಕಣ್ಣುಗಳನ್ನೇ ನೋಡುತ್ತಿದ್ದ; ಮಿಂಚುವ ಕಣ್ಣುಗಳು! ಕಳೆದು ಹೋದ ತನ್ನ ಬಹು ಇಷ್ಟದ ಕೈಗಡಿಯಾರವೊಂದು ಅವಳ ಕಂಗಳಲ್ಲಿ ಕಾಣಿಸುತ್ತಿದ್ದಂತೆ ತೋಚಿ ಅವಳನ್ನು ದಿಟ್ಟಿಸುತ್ತಲೇ ಇದ್ದ.

ಆಕೆ ಅವನ ಮಡಿಲಲ್ಲಿ ಕೂತಿದ್ದಳು. ‘ಐಸ್ ಕ್ರೀಮೂ ಇಲ್ಲ, ಏನೂ ಇಲ್ಲ, ಹೋಗಿ ಅಂಕಲ್... ಸುಳ್ ಹೇಳ್ತಾ ಇದೀರಿ...’ ಎನ್ನುತ್ತಾ ಐಸ್ ಕ್ರೀಂಗಾಗಿ ತಡಕಾಡುತ್ತಾ ಅವನು ಹೇಳಿದ್ದ ಕೇಳುತ್ತಿದ್ದಳು: ಎದ್ದು ನಿಂತಳು... ತಿರುಗಿದಳು... ಮುಖವ ಅಂಗೈಗಳಲ್ಲಿ ಮುಚ್ಚಿಕೊಂಡು ನಕ್ಕಳು. ಗಾಳಿಪಟದ ಬಾಲಂಗೋಚಿಯ ಹಿಡಿದು ಹಾರುತ್ತಿರುವಂತೆ, ಹಿಮದ ದಿಬ್ಬದಲ್ಲಿ ಆಟವಾಡುತ್ತಿರುವಂತೆ ಪುಲಕಗೊಂಡಳು.

ತನ್ನ ಕೈಗಡಿಯಾರ ಸಿಕ್ಕಿದ ಖುಷಿಯಲ್ಲಿ ತೇಲುತ್ತಿದ್ದ ಪ್ರಹ್ಲಾದ ಗಳಿಗೆ ಕಳೆದು ನಿಟ್ಟುಸಿರಿಟ್ಟ.

ಗೋಡೆಯಲ್ಲಿ ತೂಗುತ್ತಿದ್ದ ಗಡಿಯಾರವ ನೋಡಿದ. ಯಾವ ಮುಳ್ಳುಗಳೂ ಸರಿಯಾಗಿ ಕಾಣಿಸುತ್ತಿಲ್ಲ! ಕಣ್ಣ ಉಜ್ಜಿಕೊಂಡು ಗಡಿಯಾರವನ್ನೇ ದಿಟ್ಟಿಸಿದ! ಸಣ್ಣ ಮುಳ್ಳು ನಿಲ್ಲದೆ ಓಡುತ್ತಿದೆ, ದೊಡ್ಡ ಮುಳ್ಳು ನಿಂತೇ ಇದೆ! ಗಡಿಯಾರವನ್ನು ಸರಿಯಾಗಿ ನೋಡಲು ಹೆಜ್ಜೆ ಮುಂದಿಡಲು ಯತ್ನಿಸಿ ತ್ರಾಣವಿಲ್ಲದೆ ದೊಪ್ಪೆಂದು ಕೆಳಗೆ ಬಿದ್ದ. ಅವನ ಕಣ್ಣುಗಳೆದುರು ಕಳೆದು ಹೋಗಿದ್ದ ಅವನ ಕೈಗಡಿಯಾರದ ಮುಳ್ಳುಗಳು ಮುರಿದು ಮುದುಡಿ ಬಿದ್ದಿದ್ದವು.

ಒಮ್ಮೆಗೆ ವಿದ್ಯುತ್ ತಗುಲಿದಂತಾಗಿ ಭಯಬಿದ್ದು ಜೋರಾಗಿ ಕೂಗಿಕೊಂಡ; ಬೆಳಗ್ಗಿನಿಂದ ನಡೆದ ಘಟನೆಗಳೆಲ್ಲವೂ ಈ ಗಳಿಗೆಯನ್ನೇ ಕಾಯುತ್ತಿದ್ದುವೇನೊ ಎಂದೆನಿಸಿ ಗಲಿಬಿಲಿಗೊಂಡು ಎದ್ದುನಿಂತ. ಸಾವರಿಸಿಕೊಂಡು ಸುತ್ತಲೂ ನೋಡಿದ. ಎಲ್ಲವೂ ಈಗ ಸ್ಪಷ್ಟವಾಗಿ ಅರ್ಥವಾಯಿತು.

ಜನರ ಸಿಟ್ಟು, ಬೆಂಕಿಯುಂಡೆಗಳ ಸ್ಫೋಟಕ್ಕೆ ಕಾರಣವಾದ ಆ ನಿಗೂಢ ಮೂಲತಂತು ಈಗತಾನೇ ಸಂಭವಿಸಿದೆ! ನಡೆಯಲಿರುವುದನ್ನು ಮುಂಚೆಯೇ ಊಹಿಸುವಷ್ಟು ಕಾಲಜ್ಞಾನಿಗಳಾದರೆ, ಈ ಜನ?! ಅಥವಾ ಹೀಗೇ ನಡೆಯಬೇಕೆಂದು ಮೂಲತಂತುವನ್ನು ಅಣಿಗೊಳಿಸಿದರೆ? ಮೈ ಬೆವರುತ್ತಿತ್ತು. ಕಾಲುಗಳು ಜೋಮು ಹಿಡಿದಿದ್ದವು.

ತಣ್ಣಗೆ ಕೊರೆಯುತ್ತಿದ್ದ ಪಾದಗಳ ಕೆಳಗೆ ನೀರು ಹರಿಯುತ್ತಿರುವಂತೆ ತೋಚಿ ಪ್ರಹ್ಲಾದ ಕೆಳಗೆ ನೋಡಿದ. ವಿಚಲಿತಗೊಂಡು ಮುಂದಡಿಯಿಡಲು ಕಾಲುಗಳ ಎತ್ತಿದ, ಸಾಧ್ಯವಾಗಲಿಲ್ಲ; ಝಲ್ ಎನ್ನುವ ಸದ್ದು ಕೇಳಿಸುತ್ತಿದೆಯೇ ಹೊರತು ಕಾಲುಗಳ ಎತ್ತಿ ಒಂದಡಿಯೂ ಇಡಲಾಗುತ್ತಿಲ್ಲ; ತನ್ನ ಕಾಲುಗಳನ್ನ ಯಾರೊ ಹಿಂದೆ ಹಿಂದೆ ಎಳೆದಂತೆ ಅನ್ನಿಸಿ ಹಿಂದೆ ತಿರುಗಿದ. ಏನೊಂದೂ ಸ್ಪಷ್ಟವಾಗಿ ಕಾಣುತ್ತಿಲ್ಲ. ಕಿಟಕಿಯಿಂದ ತೂರುತ್ತಿದ್ದ ಬಿಸಿಲುಕೋಲು ಆ ಕೋಣೆಯ ತುಂಬಾ ಆಳುದ್ದದ ನೆರಳುಗಳನ್ನು, ಕಾಮನಬಿಲ್ಲುಗಳನ್ನು ಸೃಷ್ಟಿಮಾಡುತ್ತಿತ್ತು.

ಜಲಪಾತವೊಂದು ನಿಲ್ಲದೆ ಧುಮ್ಮಿಕ್ಕುತ್ತಿರುವ, ಅದರೊಳಗೆ ಆ ಸುಂದರ ಬಾಲೆ ಕುಣಿದು ಕುಪ್ಪಳಿಸುತ್ತಿರುವ ನೆರಳು ಅವನ ಮೇಲೆ ಸುಳಿದಾಡುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT