ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರದ ‘ಚಿನ್ನ’ ಮೀರಾ

Last Updated 2 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ಅಂದು ಪದಕ ಗೆದ್ದ ನಂತರ ಅಮ್ಮನಿಗೆ ಕರೆ ಮಾಡಿದೆ. ಸುದ್ದಿ ತಿಳಿದ ಆಕೆಯಿಂದ ಮಾತುಗಳೇ ಬರಲಿಲ್ಲ. ಆದರೆ ಆಕೆ ಅಳುತ್ತಿರುವ ಸದ್ದು ಕೇಳಿತ್ತು. ನಾನು ಬಹಳ ದಿನಗಳಿಂದ ಮನೆಯಿಂದ ದೂರವಿದ್ದೇನೆ. ಅಕ್ಕನ ಮದುವೆಗೂ ಹೋಗಿರಲಿಲ್ಲ. ಇಷ್ಟೆಲ್ಲ ತ್ಯಾಗದಿಂದ ಚಿನ್ನದ ಪದಕ ಗೆದ್ದಿದ್ದು ಅಮ್ಮನ ಖುಷಿಯನ್ನು ಹೆಚ್ಚಿಸಿತ್ತು...’

ಮೂರು ದಿನಗಳ ಹಿಂದೆ ಅಮೆರಿಕದ ಅನಿಹಿಮ್ ನಲ್ಲಿ ನಡೆದ ವಿಶ್ವ ವೇಟ್ ಲಿಫ್ಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಸಾಯಿಕೋಮ್ ಮೀರಾಬಾಯಿ ಚಾನು ಅವರ ಮಾತುಗಳಿವು.

ಇಪ್ಪತ್ತೊಂದು ವರ್ಷಗಳ ನಂತರ ವಿಶ್ವ ಚಾಂಪಿಯನ್‌ಷಿಪ್ ಅಂಗಳದಲ್ಲಿ ಭಾರತದ ತ್ರಿವರ್ಣ ಧ್ವಜ ನಲಿದಾಡುವಂತೆ ಮಾಡಿದವರು ಮೀರಾಬಾಯಿ. 1996ರಲ್ಲಿ ಕರ್ಣಂ ಮಲ್ಲೇಶ್ವರಿ ಕೂಡ ಇಂತಹದ್ದೇ ಸಾಧನೆಯನ್ನು ಮಾಡಿದ್ದರು. 1994 ಮತ್ತು 1995ರಲ್ಲಿ ಕರ್ಣಂ ಮಲ್ಲೇಶ್ವರಿ ಅವರು 54 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. 1993 ಮತ್ತು 1996ರಲ್ಲಿ ಕಂಚಿನ ಪದಕ ಗಳಿಸಿದ್ದರು. ಅವರ ನಂತರ ಚಿನ್ನದ ಸಾಧನೆ ಮಾಡಿದ ಮಹಿಳಾ ವೇಟ್ ಲಿಫ್ಟರ್ ಮೀರಾಬಾಯಿ.

ಮಣಿಪುರದ ಇಂಫಾಲದಲ್ಲಿ 1994ರಲ್ಲಿ ಜನಿಸಿದರು. ಅಲ್ಲಿಯವರೇ ಆದ ಕುಂಜುರಾಣಿ ದೇವಿ ಅವರ  ವೇಟ್ ಲಿಫ್ಟಿಂಗ್ ಸಾಧನೆಯನ್ನು ಕಂಡು ಪ್ರೇರಿತಗೊಂಡ ಮೀರಾಬಾಯಿ ತಾವೂ ಅದೇ ಹಾದಿಯಲ್ಲಿ ನಡೆಯಲು ನಿರ್ಧರಿಸಿದರು. ಆದರೆ ಆಗ ಇಂಫಾಲದಲ್ಲಿ ವೇಟ್ ಲಿಫ್ಟಿಂಗ್ ತರಬೇತಿ ಸೌಲಭ್ಯವೇ ಇರಲಿಲ್ಲ. 2007ರಲ್ಲಿ ಅವರು ತಮ್ಮ ಮನೆಯಿಂದ 60 ಕಿ.ಮೀ ದೂರದಲ್ಲಿದ್ದ ಕುಮಾನ್ ಲಂಪಕ್ ಕ್ರೀಡಾ ಸಂಕೀರ್ಣದಲ್ಲಿ ತರಬೇತಿಗೆ ಸೇರಿದರು. ಪ್ರತಿದಿನವೂ ಅಲ್ಲಿಗೆ ಪ್ರಯಾಣ ಮಾಡುತ್ತಿದ್ದರು. ಮಣಿಪುರದಲ್ಲಿ ಪ್ರಸಿದ್ಧವಾಗಿರುವ ಫುಟ್ ಬಾಲ್, ಸೆಪಕ್ ಟಕ್ರಾ, ಹಾಕಿ ಕ್ರೀಡೆಗಳಲ್ಲಿ ಸೇರಿಕೊಳ್ಳುವ ಎಲ್ಲ ಅವಕಾಶಗಳೂ ಅವರಿಗೆ ಇದ್ದವು. ಆದರೆ, ಕಠಿಣ ತಾಲೀಮು ಮತ್ತು ಪರಿಶ್ರಮ ಬೇಡುವ ವೇಟ್ ಲಿಫ್ಟಿಂಗ್ ಕ್ರೀಡೆಯನ್ನೇ ಆಯ್ಕೆ ಮಾಡಿಕೊಂಡಿದ್ದು ಅವರ ಛಲದ ಮನೋಭಾವಕ್ಕೆ ಸಾಕ್ಷಿ.

‘ನನ್ನ ಬಾಲ್ಯದಲ್ಲಿ ಕುಂಜುರಾಣಿದೇವಿಯವರು ಭಾರ ಎತ್ತುವುದನ್ನು ನೋಡಿ ಬೆರಗಾಗಿದ್ದೆ. ವೇಟ್ ಲಿಫ್ಟಿಂಗ್ ಕ್ರೀಡೆಯು ಅಪಾರವಾಗಿ ಆಕರ್ಷಿಸಿತ್ತು. ಅದರಲ್ಲಿ ತರಬೇತಿಗೆ ಸೇರುತ್ತೇನೆಂದು ಅಪ್ಪ–ಅಮ್ಮನಿಗೆ ಹೇಳಿದೆ. ಆದರೆ,  ಆರಂಭದಲ್ಲಿ ಅವರು ಒಪ್ಪಲಿಲ್ಲ. ಅದು ಕಠಿಣವಾದ ಕ್ರೀಡೆ ಎಂದರು. ಆದರೆ ನನ್ನ ಹಟಕ್ಕೆ ಮಣಿದರು. ನಮ್ಮ ರಾಜ್ಯದಲ್ಲಿ ಕುಂಜುರಾಣಿ ಅವರೆಂದರೆ ದೊಡ್ಡ ತಾರೆ. ಅವರಿಂದ ಪ್ರೇರಿತರಾದ ಬಹಳಷ್ಟು ಹೆಣ್ಣುಮಕ್ಕಳು ವೇಟ್ ಲಿಫ್ಟಿಂಗ್ ಕ್ರೀಡೆಯಲ್ಲಿ ಸಾಧನೆ ಮಾಡುತ್ತಿದ್ದಾರೆ’ ಎಂದು ಮೀರಾಬಾಯಿ ಕಳೆದ ವರ್ಷ ಕ್ರೀಡಾ ವೆಬ್‌ಸೈಟ್ ಸಂದರ್ಶನದಲ್ಲಿ ಹೇಳಿದ್ದರು.

ಸತತ ಐದು ವರ್ಷಗಳ ತಾಲೀಮಿನ ನಂತರ ಅವರ ಯಶಸ್ಸಿನ ಯಾತ್ರೆ ಆರಂಭವಾಯಿತು. ಜೂನಿಯರ್ ವಿಭಾಗದಲ್ಲಿ ಮಿಂಚಿದರು. 2011ರಲ್ಲಿ ಅಂತರರಾಷ್ಟ್ರೀಯ ಯೂತ್ ಚಾಂಪಿಯನ್ ಷಿಪ್  ಮತ್ತು ದಕ್ಷಿಣ ಏಷ್ಯಾ ಜೂನಿಯರ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕಗಳನ್ನು ಗೆದ್ದರು. 2013ರಲ್ಲಿ ಗುವಾಹಟಿಯಲ್ಲಿ ನಡೆದಿದ್ದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ‘ಬೆಸ್ಟ್ ಲಿಫ್ಟರ್’ ಗೌರವಕ್ಕೆ ಪಾತ್ರರಾದರು. ಇದು ಅವರ  ಕ್ರೀಡಾಜೀವನಕ್ಕೆ ಲಭಿಸಿದ ಮಹತ್ವದ ತಿರುವು.  2014ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮಹಿಳೆಯರ 48ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದರು. 2014ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 11ನೇ   ಹಾಗೂ 2015ರಲ್ಲಿ ಒಂಬತ್ತನೇ ಸ್ಥಾನ ಪಡೆದಿದ್ದರು.

ಕುಂಜುರಾಣಿ ಅವರ ದಾಖಲೆಯನ್ನು ಮೀರಿ ನಿಲ್ಲುವ ಸಾಧನೆಯನ್ನೂ ಮೀರಾ ಮಾಡಿದ್ದರು.  ರಾಷ್ಟ್ರೀಯ ಚಾಂಪಿಯನ್ ಷಿಪ್ ನಲ್ಲಿ 192 ಕೆ.ಜಿ. (ಸ್ನ್ಯಾಚ್ ನಲ್ಲಿ 82 ಕೆ.ಜಿ., ಕ್ಲೀನ್ ಹಾಗೂ ಜರ್ಕ್ ನಲ್ಲಿ 107 ಕೆ.ಜಿ.) ಭಾರ ಎತ್ತಿದ ಸಾಧನೆ ಮಾಡಿದರು. ಕುಂಜುರಾಣಿ ಅವರು 2004ರಲ್ಲಿ ನಡೆದಿದ್ದ ಆಥೆನ್ಸ್ ಒಲಿಂಪಿಕ್ಸ್‌ ನಲ್ಲಿ 190 ಕೆ.ಜಿ. ಭಾರ ಎತ್ತಿದ್ದ ಸಾಧನೆಯನ್ನು ಹಿಂದಿಕ್ಕಿದರು.

ಒಲಿಂಪಿಕ್ಸ್ ಅವಕಾಶ
ಮೀರಾಬಾಯಿ ಅವರು ರಿಯೊ ಡಿ ಜನೈರೊದಲ್ಲಿ 2016ರಲ್ಲಿ ನಡೆದಿದ್ದ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದ್ದರು. ಭಾರತದಿಂದ ಮಹಿಳೆಯರ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಏಕೈಕ ಕ್ರೀಡಾಪಟು ಅವರಾಗಿದ್ದರು. ಆದರೆ ಅಲ್ಲಿ ಅವರಿಗೆ ಪದಕ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಪುರುಷರ ವಿಭಾಗದಲ್ಲಿ ಸತೀಶ್ ಶಿವಲಿಂಗಮ್ (77ಕೆ.ಜಿ.) ಭಾಗವಹಿಸಿದ್ದರು.  ಅವರು 11ನೇ ಸ್ಥಾನ ಪಡೆದಿದ್ದರು.

ಒಲಿಂಪಿಕ್ಸ್ ಹಿನ್ನಡೆಯಿಂದ ಸಾಕಷ್ಟು ಪಾಠ ಕಲಿತಿದ್ದ ಮೀರಾಬಾಯಿ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಪದಕದ ಮೇಲೆ ಕಣ್ಣಿಟ್ಟು ಅಭ್ಯಾಸ ಮುಂದುವರಿಸಿದ್ದರು. ಮುಖ್ಯ ಕೋಚ್ ವಿಜಯ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ತಾಲೀಮು ನಡೆಸಿದರು. ಅವರ ಪರಿಶ್ರಮಕ್ಕೆ ತಕ್ಕ ಗೌರವ ಲಭಿಸಿದೆ.

ಟೋಕಿಯೊದತ್ತ ದೃಷ್ಟಿ: ಮೀರಾಬಾಯಿ ಅವರ ಜೀವನದ ಮಹತ್ವದ ಸಾಧನೆ ಇದು. ಆದರೆ ಕರ್ಣಂ ಮಲ್ಲೇಶ್ವರಿ ಅವರ ಸಾಧನೆಯನ್ನು ಮೀರಿಸುವ ಗುರಿ ಅವರ ಮುಂದೆ ಇದೆ. ಅಲ್ಲದೇ 2020ರಲ್ಲಿ ಟೊಕಿಯೊದಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿಯೂ ಪದಕ ಗೆಲ್ಲುವ ಛಲ ಅವರಲ್ಲಿದೆ.

ಮಲ್ಲೇಶ್ವರಿ ಅವರು 2000ನೇ ಇಸವಿಯಲ್ಲಿ ನಡೆದಿದ್ದ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಜಯಿಸಿದ್ದರು. ಅದರ ನಂತರ ಭಾರತದ ಯಾರೂ ವೇಟ್ ಲಿಫ್ಟಿಂಗ್ ನಲ್ಲಿ ಪದಕ ಗೆದ್ದಿಲ್ಲ.

‘ರಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಸಾಧ್ಯವಾಗದೇ ಇರುವುದು ಬೇಸರ ಮೂಡಿಸಿತ್ತು. ಈ ಪದಕ ನೋವು ಮರೆಸಿದೆ. ಮುಂದಿನ ದಿನಗಳಲ್ಲಿ ನನ್ನ ದೌರ್ಬಲ್ಯಗಳನ್ನು ಸರಿಪಡಿಸಿಕೊಂಡು ಅಭ್ಯಾಸ ಮಾಡಲಿದ್ದೇನೆ. ಮುಂಬರುವ ಕಾಮನ್‌ವೆಲ್ತ್‌, ಏಷ್ಯನ್ ಕ್ರೀಡಾಕೂಟ ಹಾಗೂ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕದ ಸಾಧನೆ ಮಾಡುವ ಗುರಿ ಇದೆ’ ಎಂದು ಮೀರಾ ಹೇಳಿದ್ದಾರೆ.

ಮುಂದಿನ ಮೂರು ವರ್ಷಗಳಲ್ಲಿ ತಮ್ಮ ಸಾಮರ್ಥ್ಯ ಕಾಪಾಡಿಕೊಂಡು ಬೆಳೆಯಬೇಕಾದ ಸವಾಲು ಕೂಡ ಅವರ ಮುಂದಿದೆ. ಅಲ್ಲದೇ ವೇಟ್ ಲಿಫ್ಟಿಂಗ್ ನಂತಹ ಕ್ರೀಡೆಯಲ್ಲಿ ಉದ್ದೀಪನ ಮದ್ದಿನ ಹಾವಳಿಯೂ ಸಾಕಷ್ಟಿದೆ. ಆ ವಿಚಾರದಲ್ಲಿಯೂ ಮೀರಾಬಾಯಿ ಬಹಳಷ್ಟು ಎಚ್ಚರ ವಹಿಸಬೇಕಾದ ಅಗತ್ಯವೂ ಇದೆ. ಶುದ್ಧಹಸ್ತರಾಗಿ ಉಳಿದುಕೊಂಡು ದೇಶದ ಗೌರವವನ್ನು ಹೆಚ್ಚಿಸುವ ಹೊಣೆಯೂ ಅವರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT