ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣನ ಆಶಯ ಈಡೇರಿಸಿದ ಬ್ಯಾಂಕ್

ಬಸವೇಶ್ವರ ಬ್ಯಾಂಕ್ ಶತಮಾನೋತ್ಸವ ಸಮಾರಂಭ: ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಮೆಚ್ಚುಗೆ
Last Updated 3 ಡಿಸೆಂಬರ್ 2017, 5:10 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಲಿಂಗಾಯತ ಧರ್ಮದಲ್ಲಿ ವ್ಯವಹಾರ, ಸಂಸಾರಿಕ ಬದುಕಿಗೆ ಬಹಳಷ್ಟು ಮಹತ್ವವಿದೆ. ಹಾಗಾಗಿ ಸಮಾಜದ ಹಿರಿಯರು 100 ವರ್ಷಗಳ ಹಿಂದೆಯೇ ಬಸವೇಶ್ವರ ಸಹಕಾರಿ ಬ್ಯಾಂಕ್ ಆರಂಭಿಸಿ ಸಾವಿರಾರು ಕುಟುಂಬಗಳ ಶ್ರೇಯಸ್ಸಿಗೆ ಕೆಲಸ ಮಾಡಿದ್ದಾರೆ’ ಎಂದು ಗದಗ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಬಸವೇಶ್ವರ ಸಹಕಾರಿ ಬ್ಯಾಂಕಿನ ಶತಮಾನೋತ್ಸವ ಸಮಾರಂಭದ ಎರಡನೇ ದಿನವಾದ ಶನಿವಾರ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಲಗ್ನ ಮಾಡುವುದು ಇಂದಿನ ದಿನಗಳಲ್ಲಿ ಬಹಳ ಕಷ್ಟದ ಕೆಲಸ. ಚಿನ್ನ ತೊಲಕ್ಕೆ ₹ 30 ಸಾವಿರ ಇರುವ ಕಾರಣ ಬಡವರು ಮಕ್ಕಳ ಮದುವೆ ಮಾಡುವುದು ಕನಸಿನ ಮಾತು. ಬಡವರು, ಬಲಿತರು, ದಲಿತರು, ಕಲಿತವರು ಎಲ್ಲರೂ ಒಂದೇ ವೇದಿಕೆಯಲ್ಲಿ ಕಲೆಯುವ ಇಂತಹ ಸಾಮೂಹಿಕ ವಿವಾಹಗಳು ಅಭೂತಪೂರ್ವ ಸಂಗತಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಆರ್ಥಿಕ ಸಂಸ್ಥೆಗಳು ಬೆಳೆದರೆ ನಾಡು, ದೇಶ ಬೆಳೆದವರು. ಅದಕ್ಕೆ ಉಡುಪಿ ಜಿಲ್ಲೆಯ ಮಣಿಪಾಲ ದೊಡ್ಡ ಉದಾಹರಣೆ. ಬಾಗಲಕೋಟೆಯ ಆರ್ಥಿಕ ವ್ಯವಸ್ಥೆಯಲ್ಲಿ ತನ್ನದೇ ಪ್ರಭಾವ ಹೊಂದಿರುವ ಬಸವೇಶ್ವರ ಬ್ಯಾಂಕ್ ಇನ್ನಷ್ಟು ಅತಿಶಯವಾಗಿ ಅಭಿವೃದ್ಧಿ ಹೊಂದಲಿ’ ಎಂದು ಆಶಿಸಿದರು.

ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಬ್ಯಾಂಕಿನ ಶತಮಾನೋತ್ಸವ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಿದೆ. ಹಲವಾರು ಜನೋಪಯೋಗಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಇತರೆ ಬ್ಯಾಂಕ್‌ಗಳಿಗೆ ಮಾದರಿಯಾಗಿದೆ’ ಎಂದರು.

‘ಅನೇಕ ಬ್ಯಾಂಕ್‌ಗಳು ತೀವ್ರ ಆರ್ಥಿಕ ಮುಗ್ಗಟ್ಟಿನಿಂದಾಗಿ ದಿವಾಳಿಯಾಗಿವೆ. ಆದರೆ ಉತ್ತಮ ಕಾರ್ಯನಿರ್ವಹಣೆ ಬಸವೇಶ್ವರ ಬ್ಯಾಂಕ್‌ ಗ್ರಾಹಕರು ಹಾಗೂ ಸಿಬ್ಬಂದಿಯ ಹಿತ ಮಾತ್ರ ಕಾಪಾಡದೇ ಸಾಮಾಜಿಕ ಕಾರ್ಯನಿರ್ವಹಣೆಯ ಮೂಲಕ ಬಸವಣ್ಣನ ಆದರ್ಶ ಪಾಲಿಸಿಕೊಂಡು ಬಂದಿದೆ’ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇಳಕಲ್ ಚಿತ್ತರಗಿ ಸಂಸ್ಥಾನಪೀಠದ ಡಾ.ಮಹಾಂತ ಸ್ವಾಮೀಜಿ ಮಾತನಾಡಿ, ‘ಜೀವನದಲ್ಲಿ ಪ್ರತಿಯೊಬ್ಬರು ಸಚ್ಚಾರಿತ್ರ್ಯ ಹೊಂದುವ ಮೂಲಕ ಎಚ್ಚರದಿಂದ ತಮ್ಮ ಕಾರ್ಯ ಮಾಡುತ್ತಾ ಹೋದರೆ, ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಮೂಲಕ ಬ್ಯಾಂಕ್‌ ಉತ್ತರೋತ್ತರವಾಗಿ ಬೆಳೆದು ನಾಡಿನ ಸೇವೆ ಮಾಡಲಿ’ ಎಂದು ಹಾರೈಸಿದರು.

ನವನಗರ ಸೇಂಟ್‌ ಮೇರಿ ಚರ್ಚ್‌ನ ಫಾದರ್‌ ಪೀಟರ್ ಆಶೀರ್ವಾದ್‌, ‘ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಎಂಬ ಮಾತಿದೆ. ಜೀವನದಲ್ಲಿ ಸತಿ–ಪತಿಗಳಿಬ್ಬರು, ಕಷ್ಟ–ಸುಖವನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಪರಸ್ಪರ ಅರ್ಥೈಸಿಕೊಂಡು ಜೀವನ ನಡೆಸಬೇಕು’ ಎಂದು ನೂತನ ವಧು–ವರರಿಗೆ ಕಿವಿಮಾತು ಹೇಳಿದರು.

ಬಾಗಲಕೋಟೆ ಚರಂತಿಮಠದ ಪ್ರಭು ಸ್ವಾಮೀಜಿ, ‘ಸಂಸ್ಥೆಯನ್ನು ಮುನ್ನಡೆ ಸುವವರು ಮುಖ್ಯವಾಗಿ ಹೃದಯ, ತಲೆ ಹಾಗೂ ಕೈಗಳು ಶುದ್ಧವಾಗಿರಬೇಕು. ಅಂದಾಗ ಸಂಸ್ಥೆಯ ಪ್ರಗತಿ ಸಾಧ್ಯ. ಇಲ್ಲದಿದ್ದರೆ ಸಂಸ್ಥೆ ಉಳಿಯುವುದಿಲ್ಲ’ ಎಂದರು.

ಎರೆಹೊಸಳ್ಳಿ ರಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ, ಮಹಾ ಲಿಂಗಪುರದ ರಾಜೇಂದ್ರ ಸ್ವಾಮೀಜಿ, ಬೀಳೂರಿನ ಮುರುಘೇಂದ್ರ ಸ್ವಾಮೀಜಿ, ಇಳಕಲ್ ಚಿತ್ತರಗಿ ಮಠದ ಗುರುಮಹಾಂತ ಸ್ವಾಮೀಜಿ, ಮನಗುಂಡಿ ಮಹಾಮನೆಯ ಬಸ ವಾನಂದ ಸ್ವಾಮೀಜಿ, ಕೊಲ್ಹಾರ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಜಂಬಗಿ ಹಿರೇಮಠದ ರುದ್ರ ಮುನಿ ಶಿವಾ ಚಾರ್ಯು, ಕೆರೂರ ಚರಂತಿಮಠದ ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಮುರುನಾಳ ಮಠದ ಮಳೆರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT