ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಗಂಬರ್‌ ಪರಿವರ್ತನೆಯ ಹರಿಕಾ­ರ: ಮಾಲಕರಡ್ಡಿ

Last Updated 3 ಡಿಸೆಂಬರ್ 2017, 5:45 IST
ಅಕ್ಷರ ಗಾತ್ರ

ಯಾದಗಿರಿ: ‘ಕೆಡುಕಿನ ವಿರುದ್ಧ ಹೋರಾಟ ನಡೆಸುವ ಮೂಲಕ ಸಮಾಜಕ್ಕೆ ಮಾನವೀಯ ಮೌಲ್ಯಗ­ಳನ್ನು ಬೋಧಿಸಿದ ಪ್ರವಾದಿ ಮಹ­ಮ್ಮದ್ ಪೈಗಂಬರ್‌ ಒಬ್ಬ ಸಾಮಾಜಿಕ ಪರಿವರ್ತನೆಯ ಹರಿಕಾ­ರರಾಗಿದ್ದರು’ ಎಂದು ಶಾಸಕ ಡಾ.ಎ.ಬಿ.ಮಾಲಕರಡ್ಡಿ ಹೇಳಿದರು.

ನಗರದ ಮೈಲಾಪುರ ಅಗಸಿಯಲ್ಲಿ ಶನಿವಾರ ತಂಜೀಮುಲ್ ಮುಸ್ಲಿಮಿನ್ ಹಾಗೂ ಬೈತುಲ್ ಮಾಲ್ ವತಿಯಿಂದ ಈದ್ ಮಿಲಾದ್‌ ಹಬ್ಬದ ಅಂಗವಾಗಿ ಎಲ್ಲ ಸಮಾಜದ ಮುಖಂಡರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರವಾದಿ ಮಹಮ್ಮದ್ ಪೈಗಂಬರ್‌ ಎಲ್ಲರಿಗೂ ಸಮಾನತೆ ಸಿಗಬೇಕು ಎಂದು ಹೋರಾಟ ನಡೆಸಿದ್ದರು. ಅವರ ತತ್ವಾದರ್ಶ ಅಳವಡಿಸಿಕೊಂಡು ಎಲ್ಲ ಧರ್ಮದವರು ಶಾಂತಿ, ಸಹಬಾಳ್ವೆ ಮತ್ತು ಸೌಹಾರ್ದತೆಯಿಂದ ಕೂಡಿ ಬಾಳುವ ಪರಂಪರೆ ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು.

‘ಜಾತಿ, ಧರ್ಮ ಇಂದು ನಿನ್ನೆ ಹುಟ್ಟಿಲ್ಲ. ಮಾನವನ ನಾಗರಿಕತೆ ಹುಟ್ಟಿನಿಂದಲೂ ಇವೆ. ಆದರೆ, ಸಮಾಜದಲ್ಲಿ ಜಾತಿ, ಧರ್ಮಗಳು ಪ್ರಾಧಾನ್ಯತೆ ಪಡೆಯುತ್ತಿವೆ. ಸರ್ವ ಧರ್ಮಗಳಡಿ ವೈವಿಧ್ಯ ಆಚರಣೆಗಳನ್ನು ಹಮ್ಮಿಕೊಳ್ಳುತ್ತಾ ಸಾಮರಸ್ಯದಿಂದ ಬದುಕಿದ್ದ ಸಮಾಜಕ್ಕೆ ಇಂದು ಏನಾಗಿದೆ? ಯಾವ ಧರ್ಮಗುರುಗಳೂ ಅಶಾಂತಿ, ಅರಾಜಕತೆ ಸೃಷ್ಟಿಸಿ ಅಂತ ಬೋಧಿಸಿಲ್ಲ. ಸರ್ವ ಧರ್ಮಗಳನ್ನು ಗೌರವಿಸುವುದನ್ನು ಬಿಟ್ಟಿರುವ ಪರಿಣಾಮ ಇಂದು ಅಶಾಂತಿ ಹೆಚ್ಚುತ್ತಿದೆ. ಸರ್ವರನ್ನು, ಸಮಸ್ತ ಧರ್ಮ, ಆಚರಣೆಗಳನ್ನು ನಾವು ಗೌರವಿಸುವುದನ್ನು ಕಲಿಯಬೇಕು’ ಎಂದರು.

ಮುಸ್ಲಿಂ ಧರ್ಮಗುರು ಮೋಲಾನಾ ನಿಜಾಮೋದಿನ್ ಮಾತನಾಡಿ, ‘ಮಾನವರಲ್ಲಿ ಸಮಾನತೆ ಮತ್ತು ಜೀವನದಲ್ಲಿ ಪ್ರಮಾಣಿಕತೆ ಕುರಿತು ಪ್ರವಾದಿ ಮಹಮ್ಮದ್ ಪೈಗಂಬರ್‌ ಜಗತ್ತಿಗೆ ಸಾರಿದ ಸಂದೇಶ ಸರ್ವ ಕಾಲಕ್ಕೂ ಪ್ರಸ್ತುತ. ಆ ಸನ್ಮಾರ್ಗದಲ್ಲಿ ನಾವುಗಳು ಹೆಜ್ಜೆ ಹಾಕಬೇಕಿದೆ’ ಎಂದು ಹೇಳಿದರು.

ಪ್ರತಿ ವರ್ಷದಂತೆ ಈ ಸಲವೂ ವೀರಬಸವಂತರೆಡ್ಡಿ ಮುದ್ನಾಳ, ನಾಗಣ್ಣಗೌಡ ಕಂದಕೂರ, ಚನ್ನಾರೆಡ್ಡಿ ಪಾಟೀಲ ತುನ್ನೂರು, ಮರಿಗೌಡ ಹುಲಕಲ್, ಲಲಿತಾ ಅನಪೂರ, ಬಸವರಾಜ ಜೈನ್, ಸಿದ್ದಪ್ಪ ಹೊಟ್ಟಿ, ಸುರ್ದಶನ ನಾಯಕ, ಮರೆಪ್ಪ ಚಟ್ಟರಕರ್, ಮರೆಪ್ಪ ಈಟೆ, ಮಲ್ಲಣ್ಣ ದಾಸನಕೇರಿ, ಎಂ.ಕೆ.ಬಿರನೂರ, ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ಶ್ರೀನಿವಾಸರೆಡ್ಡಿ ಕಂದಕೂರ ಅವರನ್ನು ಸನ್ಮಾನಿಸಲಾಯಿತು.

ಭವ್ಯ ಮೆರವಣಿಗೆ: ಈದ್‌ಮಿಲಾದ್ ಅಂಗವಾಗಿ ಹಮ್ಮಿಕೊಂಡಿದ್ದ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೈಲಾಪುರ ಅಗಸಿಯಿಂದ ಚಕ್ರಕಟ್ಟಾ, ಗಾಂಧಿವೃತ್ತ, ಹತ್ತಿಕುಣಿ ಕ್ರಾಸ್‌, ಯಾಕೂಬ್ ಬುಖಾರಿ ದರ್ಗಾ ಕ್ರಾಸ್‌, ವೀರಶೈವ ಕಲ್ಯಾಣ ಮಂಟಪದ ಮಾರ್ಗವಾಗಿ ಬೈತುಲ್ ಮಾಲ್‌ಗೆ ಮೆರವಣಿಗೆ ತಲುಪಿತು.

ಇಸ್ಲಾಂ ಧರ್ಮದ ಪುಣ್ಯ ಕ್ಷೇತ್ರಗಳಾದ ‘ಮೆಕ್ಕಾ ಮತ್ತು ಮದೀನಾ’ ದಲ್ಲಿನ ಮಂದಿರಗಳ ಮಾದರಿಗಳನ್ನು ತಯಾರಿಸಿ, ನಗರದ ವಿವಿಧೆಡೆ ಮೆರವಣಿಗೆ ನಡೆಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮೆರವಣಿಗೆಯುದ್ದಕ್ಕೂ ಧರ್ಮ ಗುರುಗಳಿಂದ ಧಾರ್ಮಿಕ ಪಠಣ ಗಮನ ಸೆಳೆಯಿತು. ಮುಸ್ಲಿಂ ಸಮಾಜದ ಮುಖಂಡರಾದ ಲಾಯಕ್ ಬಾದಲ್ ಹುಸೇನ್, ಜಿನಾಲಿ ಆಫಘಾನಿ, ಮನಸೂರ್ ಆಫಖಾನ್, ಮಹಮ್ಮದ್ ಇಸಾಖ್, ಶೇಖಜಕಿಯೋದಿನ್, ಸಾಜೀದ್ ಹಯಾತೆ ಭಾಗವಹಿಸಿದ್ದರು.

* * 

ಕೂಡಿಬಾಳುವ ಪರಂರೆಯೇ ಕಣ್ಮರೆಯಾಗುತ್ತಿದೆ. ಜಾತಿ, ಧರ್ಮದ ವಿಚಾರದಲ್ಲಿ ಸಮಾಜ ಸಾಮರಸ್ಯ ಕಳೆದುಕೊಂಡರೆ ವಿನಾಶ ಖಂಡಿತ.
ಡಾ.ಎ.ಬಿ.ಮಾಲಕರಡ್ಡಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT