ಶಹಾಪುರ

ನಿರ್ಲಕ್ಷ್ಯಕ್ಕೆ ತುತ್ತಾದ ಅಂಕುಶಖಾನ್ ಸಮಾಧಿ

‘ಬಹಮನಿ ಸಾಮ್ರಾಜ್ಯದ ಕೊನೆ ದಿನಗಳಲ್ಲಿ ಯೂಸೂಫ್ ಆದಿಲಶಾಹ ವಿಜಯಪುರಕ್ಕೆ ಮುಖ ಮಾಡಿ ಆಳ್ವಿಕೆಯನ್ನು ವಿಸ್ತರಿಸುತ್ತಾ ಸಾಗುತ್ತಾರೆ. ಅದರಲ್ಲಿ ತಾಲ್ಲೂಕಿನ ಸಗರ ಗ್ರಾಮ ಸೈನ್ಯ ತರಬೇತಿ ಕೇಂದ್ರವಾಗಿತ್ತು

ಶಹಾಪುರ ತಾಲ್ಲೂಕಿನ ಮಹಲರೋಜಾ ಗ್ರಾಮದಲ್ಲಿರುವ ಸೇನಾಧಿಪತಿ ಅಂಕುಶಖಾನ್ ಸಮಾಧಿಯ ಗುಂಬಜ್‌

ಶಹಾಪುರ: ಸಗರನಾಡಿಗೆ ವಿಜಯಪುರ ಆದಿಲ ಶಾಹ ಅರಸರ ಕೊಡುಗೆ ಅನನ್ಯವಾಗಿದೆ. ಆದರೆ, ತಾಲ್ಲೂಕಿನ ಮಹಲ ರೋಜಾ ಗ್ರಾಮದ ಅಂಕುಶಖಾನ್ ಸಮಾಧಿ (ಗುಂಬಜ್‌) ನಿರ್ಲಕ್ಷ್ಯಕ್ಕೆ ತುತ್ತಾಗಿದೆ.

ವಿಜಯಪುರ ಆದಿಲಶಾಹ ಅರಸರು ಸುಮಾರು 200 ವರ್ಷಗಳ ಆಳ್ವಿಕೆ (ಕ್ರಿ.ಶ 1489ರಿಂದ 1686ರವರೆಗೆ) ಸಮಯದಲ್ಲಿ ಕಲೆ, ಸಾಹಿತ್ಯ ಹಾಗೂ ವಾಸ್ತು ಶಿಲ್ಪಕ್ಕೆ ಹೆಚ್ಚಿನ ಮನ್ನಣೆ ನೀಡಿದ್ದರು. ಹಿಂದೂ– ಮುಸ್ಲಿಮರ ಭಾವೈಕ್ಯತೆಯ ತಾಣ ಗೋಗಿ ಚಂದಾಹುಸೇನಿ ದರ್ಗಾ ಜತೆಯಲ್ಲಿ ಸಗರ ಗ್ರಾಮ ಆದಿಲಶಾಹ ಕಾಲದಲ್ಲಿ ಬಹುದೊಡ್ಡ ಸೈನ್ಯ ತರಬೇತಿ ಕೇಂದ್ರವಾಗಿದ್ದು ವಿಶೇಷ.

‘ಬಹಮನಿ ಸಾಮ್ರಾಜ್ಯದ ಕೊನೆ ದಿನಗಳಲ್ಲಿ ಯೂಸೂಫ್ ಆದಿಲಶಾಹ ವಿಜಯಪುರಕ್ಕೆ ಮುಖ ಮಾಡಿ ಆಳ್ವಿಕೆಯನ್ನು ವಿಸ್ತರಿಸುತ್ತಾ ಸಾಗುತ್ತಾರೆ. ಅದರಲ್ಲಿ ತಾಲ್ಲೂಕಿನ ಸಗರ ಗ್ರಾಮ ಸೈನ್ಯ ತರಬೇತಿ ಕೇಂದ್ರವಾಗಿತ್ತು. ಪಕ್ಕದ ಮಹಲ ರೋಜಾ ಗ್ರಾಮದಲ್ಲಿ ಇತಿಹಾಸ ಪ್ರಜ್ಞೆಯ ಕೊರತೆ, ಸ್ಥಳೀಯರ ನಿರಾಸಕ್ತಿ, ವಿವಿಧ ಮಗ್ಗಲುಗಳಿಂದ ಸಂಶೋಧನೆ ನಡೆಯದೆ ಇರುವುದರಿಂದ ಭವ್ಯ ಸ್ಮಾರಕಗಳು ನಿರ್ಲಕ್ಷ್ಕಕ್ಕೆ ಇಡಾಗಿವೆ’ ಎನ್ನುತ್ತಾರೆ ಸಂಶೋಧಕ ರಿಯಾಜ ಅಹ್ಮದ್‌ ಬೊಡೆ ತಿಮ್ಮಾಪುರಿ.

‘ಗೋಗಿ ಚಂದಾಹುಸೇನಿ ಸಮಾಧಿ ಪಕ್ಕದಲ್ಲಿಯೇ ಯೂಸೂಫ್ ಆದಿಲಶಾಹ (1489ರಿಂದ 1510), ಇಸ್ಮಾಯಿಲ್‌ ಆದಿಲಶಾಹ (1510ರಿಂದ 1534), ಇಬ್ರಾಹೀಂ ಆದಿಲಶಾಹ (1534ರಿಂದ 1557) ಮೂವರು ರಾಜರ ಸಮಾಧಿ ಇವೆ.

ಇನ್ನೊಂದು ಕೌತುಕದ ಸಂಗತಿ ಯೆಂದರೆ ವಿಜಯನಗರ ಸಾಮ್ರಾಜ್ಯ ವನ್ನು ಪತನಗೊಳಿಸಲು ಮುನ್ನುಡಿ ಬರೆದ ಅಲಿ ಆದಿಲಶಾಹ (1557ರಿಂದ 1580) ಆಳ್ವಿಕೆಯಲ್ಲಿ ಬಹುದೊಡ್ಡ ಸೇನಾಧಿಪತಿ ಅಂಕುಶಖಾನ್ ಆಗಿದ್ದರು. ಅಂಕುಶಖಾನ್ ಅಕಾಲಿಕವಾಗಿ ಮರಣ ಹೊಂದಿದಾಗ ತಾಲ್ಲೂಕಿನ ಮಹಲ ರೋಜಾ ಗ್ರಾಮದಲ್ಲಿ ಸಮಾಧಿ ಮಾಡಿದರು. ಸ್ಥಳೀಯ ಕಲ್ಲುಗಳನ್ನು ಬಳಸಿ ಆಕರ್ಷಕವಾಗಿ ನಿರ್ಮಿಸಿದ ಗುಂಬಜ್ ಇಂದಿಗೂ ಮಜಬೂತಾಗಿದೆ. ಸೇನಾಧಿಪತಿ ಅಂಕುಶಖಾನ್ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸುವುದು ಅಗತ್ಯವಾಗಿದೆ’ ಎನ್ನುತ್ತಾರೆ ಭೀಮರಾಯನಗುಡಿ ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ನಿರ್ದೇಶಕ ಭಾಸ್ಕರರಾವ ಮುಡಬೂಳ.

‘ಸಮಾಧಿಯ ಪಕ್ಕದಲ್ಲಿಯೇ ಕಲ್ಲಿನಿಂದ ನಿರ್ಮಿಸಿದ ಹೊಕ್ಕುತುಂಬುವ ಬಾವಿ (ಬಾವಿಯಲ್ಲಿ ಇಳಿದು ನೀರು ತುಂಬಿಕೊಳ್ಳುವುದು)ಯಲ್ಲಿ ಇಂದಿಗೂ ಸಾಕಷ್ಟು ನೀರು ಇದೆ. ಆದರೆ, ನಿರ್ವಹಣೆ ಹಾಗೂ ನೀರು ಬಳಕೆ ಮಾಡದ ಕಾರಣ ಕಲುಷಿತವಾಗಿದೆ. ಬಾವಿಯ ಸುತ್ತಲೂ ಜಾಲಿಗಿಡ ಬೆಳೆದಿವೆ. ಅದನ್ನು ಸ್ವಚ್ಛಗೊಳಿಸಿದರೆ ಕುಡಿಯಲು ಮತ್ತು ಬೇಸಿಗೆ ಸಂದರ್ಭದಲ್ಲಿ ಮಕ್ಕಳು ಈಜಾಡಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ರೈತ ಮುಖಂಡ ವಾಲ್ಮೀಕಿ ಹನುಮಂತಪ್ಪ.

‘ಸಮಾಧಿ ಬಳಿ ತೆರಳಲು ಸರಿಯಾದ ರಸ್ತೆ ಇಲ್ಲ. ಕೆಲ ವ್ಯಕ್ತಿಗಳು ಬಹಿರ್ದೆಸೆಯ ತಾಣವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಸುತ್ತ ಕಸಕಡ್ಡಿ ತುಂಬಿಕೊಂಡಿದೆ. ಯುವಕರು ಶ್ರಮದಾನದ ಮೂಲಕ ಸ್ವಚ್ಛತೆ ಮಾಡಿ, ಅದರ ಸುತ್ತಲು ರಕ್ಷಣಾ ಗೋಡೆ ನಿರ್ಮಿಸಿ, ಇತಿಹಾಸದ ಕಥೆ ಹೇಳುವ ನಾಮಫಲಕ ಅಳವಡಿಸಬೇಕು. ಸಾಹಿತ್ಯಾಸಕ್ತರು ಹಾಗೂ ಇತಿಹಾಸ ಸಂಶೋಧಕರು ಗಮನಹರಿಸಬೇಕು’ ಎಂಬುದು ಪ್ರಜ್ಞಾವಂತರ ಮನವಿ.

ಅಂಕುಶಖಾನ್ ಸಮಾಧಿ ಮಾರ್ಗ
ಬೀದರ್‌–ಶ್ರೀರಂಗಪಟ್ಟಣದ ರಾಜ್ಯ ಹೆದ್ದಾರಿ ರಸ್ತಾಪುರ ಕ್ರಾಸ್‌ನಿಂದ 10 ಕಿ.ಮೀ ಕ್ರಮಿಸಿದರೆ ಮಹಲ ರೋಜಾ ಗ್ರಾಮದ ಅಂಕುಶಖಾನ್ ಸಮಾಧಿ ಇದೆ. ಇನ್ನೊಂದು ರಸ್ತೆ ಶಹಾಪುರದಿಂದ 15 ಕಿ.ಮೀ ದೂರದಲ್ಲಿದ್ದು ದಿಗ್ಗಿ, ಉಮರದೊಡ್ಡಿ ಗ್ರಾಮದ ಮೂಲಕ ತೆರಳಿದರೆ ಸಮಾಧಿ ಕಾಣಸಿಗುತ್ತದೆ.

 

Comments
ಈ ವಿಭಾಗದಿಂದ ಇನ್ನಷ್ಟು
ಸುರಪುರ: ಪ್ರಜ್ವಲಿಸಿದ ಸಹಸ್ರ ದೀಪೋತ್ಸವ

ಸುರಪುರ
ಸುರಪುರ: ಪ್ರಜ್ವಲಿಸಿದ ಸಹಸ್ರ ದೀಪೋತ್ಸವ

17 Jan, 2018

ಯಾದಗಿರಿ
‘ಜಾಗೃತಿಯಿಂದ ಸಮಾಜ ಅಭಿವೃದ್ಧಿ’

‘ಶಿಕ್ಷಣದಿಂದ ದೂರ ಉಳಿದಿರುವುದರಿಂದ ಕಬ್ಬಲಿಗ ಸಮಾಜ ಶೈಕ್ಷಣಿಕ ಸದೃಢತೆಯ ಕೊರತೆ ಅನುಭವಿಸುತ್ತಿದೆ. ಇದರಿಂದ ಸಮಾಜದಲ್ಲೂ ಅಷ್ಟಾಗಿ ಜಾಗೃತಿ ಉಂಟಾಗುತ್ತಿಲ್ಲ.

17 Jan, 2018

ಹುಣಸಗಿ
ತೊಗರಿ ಖರೀದಿ ಕೇಂದ್ರ ಉದ್ಘಾಟನೆ

‘ಈ ಭಾಗದ ರೈತರು ತೊಗರಿ ಮಾರಾಟಕ್ಕಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದರು. ತೊಗರಿ ಮಾರಾಟಕ್ಕಾಗಿ ಹುಣಸಗಿ, ಸುರಪುರ ಇಲ್ಲವೇ ಬೇರೆ ಪಟ್ಟಣಗಳತ್ತ ಹೋಗುವ ಅನಿವಾರ್ಯ ಇತ್ತು. ...

17 Jan, 2018
ಮಲ್ಲಯ್ಯನ ಜಾತ್ರೆಯಲ್ಲಿ ಖರೀದಿ ಜೋರು

ಯಾದಗಿರಿ
ಮಲ್ಲಯ್ಯನ ಜಾತ್ರೆಯಲ್ಲಿ ಖರೀದಿ ಜೋರು

16 Jan, 2018
ರೈತರಿಗೆ ವರದಾನ ಸಮಗ್ರ ಕೃಷಿ ಪದ್ಧತಿ

ಶಹಾಪುರ
ರೈತರಿಗೆ ವರದಾನ ಸಮಗ್ರ ಕೃಷಿ ಪದ್ಧತಿ

16 Jan, 2018