ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೇಷ್ಠತೆ, ಅಸಮಾನತೆ ವಿವಾದ ತಣಿಸಿದ ತಂತ್ರಜ್ಞಾನ

Last Updated 3 ಡಿಸೆಂಬರ್ 2017, 6:10 IST
ಅಕ್ಷರ ಗಾತ್ರ

ಶಿವಮೊಗ್ಗ: ಶ್ರೇಷ್ಠತೆ ಮತ್ತು ಸಮಾನತೆ ನಡುವಿನ ವಿವಾದ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಮೂಲಕ ನಿವಾರಣೆಯಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಪ್ರತಿಪಾದಿಸಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯದ ನೂತನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 28ನೇ ಘಟಿಕೋತ್ಸವದಲ್ಲಿ ಕಲಾ ನಿಕಾಯದ ಡೀನ್ ರಾಜಾರಾಮ ಹೆಗಡೆ ಅವರು ಜಾವಡೇಕರ್ ಅವರ ಘಟಿಕೋತ್ಸವದ ಭಾಷಣದ ಮುದ್ರಿತ ಪ್ರತಿಯನ್ನು ಓದಿದರು.

ವಿಶ್ವವಿದ್ಯಾಲಯಗಳು ಈಗಿರುವ ಶಿಕ್ಷಣ ಮಾದರಿ ಮರು ಪರಿಷ್ಕರಣೆ ಮಾಡುವ ಅಗತ್ಯವಿದೆ. ಕಲೆ, ವಿಜ್ಞಾನ, ವಾಣಿಜ್ಯ ಸೇರಿದಂತೆ ವಿವಿಧ ಪದವಿಗಳ ಮಧ್ಯೆ ಗೋಡೆಗಳಿವೆ. ಇಂತಹ ಮಾದರಿ ಶಿಕ್ಷಣ ವ್ಯವಸ್ಥೆ ಬದಲಾಯಿಸಿ ಹೊಸ ಸ್ವರೂಪ ನೀಡಬೇಕಿದೆ. ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸುವುದು. ಮೂಲ ಸೌಕರ್ಯ ಉನ್ನತೀಕರಿಸಲು ನಿರಂತರ ಪ್ರಯತ್ನ ನಡೆಸಬೇಕು. ಬೋಧಕ ವೃತ್ತಿ ಆಕರ್ಷಕವಾಗಿಸಬೇಕು. ಸಂಶೋಧನಾ ವಿದ್ಯಾರ್ಥಿಗಳ ಪ್ರವೇಶ ಹೆಚ್ಚಿಸಬೇಕು ಎಂದು ಸಲಹೆ ನೀಡಿದ್ದಾರೆ.

ಜಾಗತೀಕರಣಗೊಂಡ ಜಗತ್ತಿನಲ್ಲಿ ಕೇವಲ ಶಿಕ್ಷಣ ಪಡೆದರೆ, ಕೌಶಲ ರೂಢಿಸಿಕೊಂಡರೆ ಸಾಲದು. ಇರುವ ಮಾಹಿತಿ ಸಂಸ್ಕರಿಸಿ, ಪ್ರಸ್ತುತ ಸ್ಥಿತಿಗೆ ಹೊಂದಿಕೊಳ್ಳುವ ವಿಚಾರ ಮತ್ತು ಕ್ರಿಯೆಗಳ ಸಂಯೋಜನೆಯ ಹೊಸ ರೂಪ ನೀಡುವ ಮನಸ್ಸುಗಳ ಸಂಖ್ಯೆ ಹೆಚ್ಚಾಗಬೇಕು. ಎರಡು ವರ್ಷಗಳಲ್ಲಿ ಭಾರತದ ಉನ್ನತ ಶಿಕ್ಷಣದ ಸ್ವರೂಪ ಸಾಕಷ್ಟು ಬದಲಾಗಿದೆ. ಇನ್ನಷ್ಟು ಬದಲಾವಣೆ ತರಲು ಕೇಂದ್ರ ಸರ್ಕಾರ ಪಂಡಿತ್ ಮದನ್ ಮೋಹನ ಮಾಲವೀಯ ರಾಷ್ಟ್ರೀಯ ಶಿಕ್ಷಣ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ.
ಸಮುದಾಯದ ಸಹಭಾಗಿತ್ವಕ್ಕೆ ಈ ಯೋಜನೆ ಹೆಚ್ಚು ಒತ್ತು ನೀಡುತ್ತದೆ ಎಂದು ವಿವರ ನೀಡಿದ್ದಾರೆ.

ದೇಶದ 14 ಕೋಟಿ ಯುವ ಜನರು ಇಂದು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಇದೇ ಹಾದಿಯಲ್ಲಿ ಸಾಗಿದರೆ ಭವಿಷ್ಯದಲ್ಲಿ ವಿಶ್ವದ ಪ್ರತಿ ನಾಲ್ವರು ಪದವೀಧರರಲ್ಲಿ ಒಬ್ಬ ಭಾರತೀಯ ಇರುತ್ತಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

10 ವಿವಿಗಳಿಗೆ ಸಂಪೂರ್ಣ ಸ್ವಾಯತ್ತತೆ: ವಿಶ್ವವಿದ್ಯಾಲಯಗಳ ರಾಷ್ಟ್ರೀಯ ಮೌಲ್ಯಾಂಕನ ವ್ಯವಸ್ಥೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಇದು ವಿಶ್ವವಿದ್ಯಾಲಯಗಳು ಆರೋಗ್ಯಕರ ಸ್ಪರ್ಧೆಯ ಮೂಲಕ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಉತ್ತೇಜನ ನೀಡುತ್ತದೆ. ಈ ವಿಧಾನದ ಮೂಲಕ ಭಾರತದ 10 ವಿಶ್ವವಿದ್ಯಾಲಯಗಳನ್ನು ಗುರುತಿಸಿ,
ಅವುಗಳಿಗೆ ಶೇ 100 ಆಡಳಿತಾತ್ಮಕ, ಶೈಕ್ಷಣಿಕ ಸ್ವಾಯತ್ತತೆ ನೀಡಲು ನಿರ್ಧಿಸಿದ್ದೇವೆ. ಆ ಮೂಲಕ ಉನ್ನತ ಸಾಧನೆಗೆ ಮುಕ್ತ ಅವಕಾಶ ನೀಡಲಿದ್ದೇವೆ ಎಂದು ಜಾವಡೇಕರ್ ಮಾಹಿತಿ ನೀಡಿದ್ದಾರೆ.

ಚಿನ್ನದ ಪದಕ, ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳು ತಮ್ಮ ಸಾಧನೆಯ ಹಾದಿಗೆ ಸಹಕಾರ ನೀಡಿದ ಶಿಕ್ಷಕರ ಮಾರ್ಗದರ್ಶನ, ಪೋಷಕರ ಶ್ರಮ, ಹಿತೈಷಿಗಳ ಹಾರೈಕೆ, ಶಿಕ್ಷಣ ಸಂಸ್ಥೆಗಳ ನೆಲೆ ಸದಾ ಸ್ಮರಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ. ಘಟಿಕೋತ್ಸವದಲ್ಲಿ 11 ಪುರುಷರು, 57 ಮಹಿಳೆಯರು ಸೇರಿದಂತೆ ಒಟ್ಟು 63 ವಿದ್ಯಾರ್ಥಿಗಳಿಗೆ 112 ಸ್ವರ್ಣ ಪದಕ ನೀಡಿ ಗೌರವಿಸಲಾಯಿತು.

ಜ್ಞಾನಸಹ್ಯಾದ್ರಿ ಕನ್ನಡ ಭಾರತಿ ವಿಭಾಗದ ಎಸ್.ಶಿಲ್ಪಾ ಅತಿಹೆಚ್ಚು ಚಿನ್ನದ ಪದಕ (6) ಹಾಗೂ ಒಂದು ನಗದು ಬಹುಮಾನ ಪಡೆದರು. ಜ್ಞಾನ ಸಹ್ಯಾದ್ರಿ ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದ ಎಸ್.ಅಶ್ವಿನಿ ಹಾಗೂ ಶಿವಮೊಗ್ಗ ಎಟಿಎನ್‌ಸಿಸಿಯ ಎನ್‌.ಹರ್ಷಿತಾ ತಲಾ ಐದು ಸ್ವರ್ಣ ಪದಕ ಪಡೆದರು.

ಸಿ.ಸುಶ್ಮಿತಾ, ಎ.ಎಂ.ಸಪ್ತಮಿ, ವಿ.ಎಲ್.ಸ್ವಾತಿ, ಎಚ್‌.ಜೆ.ಮಾಧುರಿ ತಲಾ ನಾಲ್ಕು ಸ್ಪರ್ಣ ಪದಕ, ಟಿ.ಅನುಷಾ ಮೂರು ಸ್ವರ್ಣಪದಕ ಹಾಗೂ ನಾಲ್ಕು ನಗದು ಬಹುಮಾನ ಪಡೆದರು. ಡಯಾನಾ ಅಬೆರ್ಟ, ಇ.ಕಲ್ಲೇಶಿ, ಎ.ಪಿ.ಮೇಘನಾ, ವಿ.ಆರ್.ತೇಜಸ್ವಿನಿ ತಲಾ ಮೂರು ಸ್ಪರ್ಣಪದಕ ಪಡೆದರು. 114 ಅಭ್ಯರ್ಥಿಗಳಿಗೆ ಪಿಎಚ್.ಡಿ ಪದವಿ, 27,550 ವಿದ್ಯಾರ್ಥಿಗಳು ಪದವಿ ಪ್ರದಾನ ಮಾಡಲಾಯಿತು. ಕುಲಪತಿ ಪ್ರೊ.ಜೋಗನ್‌ ಶಂಕರ್, ಕುಲಸಚಿವ ಪ್ರೊ.ಭೋಜ್ಯಾನಾಯ್ಕ, ಪರೀಕ್ಷಾಂಗ ಕುಲಸಚಿವ ರಾಜಾನಾಯ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT