ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಮತಿ ಪಡೆಯದೆ ಪೈಪ್‌ಲೈನ್‌ ಕಾಮಗಾರಿ

Last Updated 3 ಡಿಸೆಂಬರ್ 2017, 6:28 IST
ಅಕ್ಷರ ಗಾತ್ರ

ಚಿತ್ತಾಪುರ: ಸ್ಥಳೀಯವಾಗಿ ದೊರೆಯುವ ಅತ್ಯಂತ ಶ್ರೇಷ್ಠ ಗುಣಮಟ್ಟದ ಸುಣ್ಣದ ಕಲ್ಲು ಅರಸಿಕೊಂಡು ಬರುವ ಹೊರ ರಾಜ್ಯದ ಸಿಮೆಂಟ್ ಕಂಪೆನಿಗಳು ಕಾಯ್ದೆ ಉಲ್ಲಂಘನೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

ಸೇಡಂ ತಾಲ್ಲೂಕಿನ ಬೆನಕನಳ್ಳಿ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಶ್ರೀ ಸಿಮೆಂಟ್ ಕಂಪೆನಿಗೆ ಬೇಕಾಗಿರುವ ನೀರನ್ನು ಚಿತ್ತಾಪುರ ತಾಲ್ಲೂಕಿನ ದಂಡೋತಿ ಬಳಿಯ ಕಾಗಿಣಾ ನದಿಯಿಂದ ಪಡೆಯಲು ಉದ್ದೇಶಿಸಿದೆ. ಈಗಾಗಲೇ ಪೈಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಕಾಮಗಾರಿ ಮಾಡಲು ಅನುಸರಿಸಬೇಕಾದ ಮತ್ತು ಪಾಲಿಸಬೇಕಾದ ನಿಯಮಗಳನ್ನು ಸಿಮೆಂಟ್ ಕಂಪೆನಿ ಉಲ್ಲಂಘಿಸಿರುವ ಆರೋಪ ಕೇಳಿಬಂದಿದೆ.

ಕಾಮಗಾರಿ ಮಾಡುವ ಮಾರ್ಗದಲ್ಲಿನ ಸರ್ಕಾರಿ ಭೂಮಿ, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುವ ನದಿ ಮತ್ತು ನಾಲೆಗಳ ಕುರಿತು ಆಯಾ ಇಲಾಖೆಗಳಿಂದ ಪರವಾನಗಿ ಪಡೆಯಬೇಕು. ತಾಲ್ಲೂಕು ಕಂದಾಯ ಅಧಿಕಾರಿ (ತಹಶೀಲ್ದಾರ್), ಗ್ರಾಮ ಪಂಚಾಯಿತಿಯಿಂದ ಪರವಾನಗಿ ಪಡೆದು ಕಾಮಗಾರಿ ನಡೆಸಬೇಕು. ಇದನ್ನು ಮಾಡದೆ ಕಂಪೆನಿ ಆಡಳಿತ ಪೈಪುಲೈನ್ ಕಾಮಗಾರಿ ಮಾಡಿಸುತ್ತಿದೆ. ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಕಣ್ಣು ಮುಚ್ಚಿ ಕುಳಿತಿದೆ ಎನ್ನುವ ಗಂಭೀರ ಅರೋಪ ಸ್ಥಳೀಯರದು.

ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ವ್ಯಾಪ್ತಿಗೆ ಒಳಪಡುವ ರಸ್ತೆಗಳ ಬದಿಯಲ್ಲಿ, ಸೇತುವೆ ಕೆಳಗಡೆಯಿಂದ ಪೈಪು ಅಳವಡಿಸುವ ಕಾಮಗಾರಿ ಮಾಡಲಾಗಿದೆ. ರೈಲ್ವೆ ಸೇತುವೆ ಸ್ಥಳವನ್ನೂ ಬಳಸಿಕೊಳ್ಳಲಾಗಿದೆ. ದಿಗ್ಗಾಂವ, ಇಟಗಾ, ಮೊಗಲಾ ತಾಂಡಾ, ಮೊಗಲಾ, ಮರಗೋಳ ಬಳಿಯ ಸರ್ಕಾರಿ ಭೂಮಿ, ನಾಲಾಗಳ ಜಮೀನು ಬಳಸಲಾಗಿದೆ. ಈ ಕುರಿತು ಸಂಬಂಧಿಸಿದ ಪ್ರಾಧಿಕಾರದಿಂದ ಪರವಾನಗಿ ಪಡೆಯಲಾಗಿದೆಯೆ ಎಂಬ ಕುರಿತು ಆಯಾ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಬೇಕು ಎನ್ನುವುದು ಸ್ಥಳೀಯರ ಒತ್ತಾಯ.

‘ರಾಜಾರೋಷವಾಗಿ ನಡೆಯುತ್ತಿರುವ ಕಾಮಗಾರಿ ಗಮನಿಸಿದರೆ ಸರ್ಕಾರಿ ಅಧಿಕಾರಿಗಳೆ ಅನಧಿಕೃತ ಕಾಮಗಾರಿಗೆ ಬೆಂಬಲಿಸಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿದ ಶ್ರೀ ಸಿಮೆಂಟ್ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಅನಧಿಕೃತ ಕಾಮಗಾರಿ ತಡೆಯಬೇಕು’ ಎಂದು ತಮ್ಮಣ್ಣ ಡಿಗ್ಗಿ ಅವರು ಸೆಪ್ಟೆಂಬರ್ 26 ರಂದು ಸೇಡಂ ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಿದ್ದಾರೆ.

‘ಯಾವ ನಿಯಮಗಳನ್ನು ಕಂಪೆನಿ ಆಡಳಿತ ಪಾಲಿಸುತ್ತಿಲ್ಲ. ಪರವಾನಗಿ ಪಡೆಯದೆ ಕೆಲಸ ಮಾಡಿಸುತ್ತಿದೆ. ಸಾಮಾನ್ಯರ ಮೇಲೆ ಕಾನೂನು ದಂಡ ಪ್ರಯೋಗಿಸುವ ಕಂದಾಯ ಇಲಾಖೆಯ ಅಧಿಕಾರಿಗಳು ಸರ್ಕಾರಿ ಭೂಮಿ ಅಕ್ರಮ, ದುರ್ಬಳಕೆ ನಡೆದರೂ ಜಾಣ ಕುರುಡು ನೀತಿಗೆ ಶರಣಾಗಿದ್ದಾರೆ’ ಎನ್ನುವ ಆರೋಪ ಅವರದು.

‘ಇಟಗಾ, ಮೊಗಲಾ ಬಳಿ ನಡೆಯುತ್ತಿದ್ದ ಕಾಮಗಾರಿ ತಡೆಯಲಾಗಿತ್ತು. ಪರವಾನಗಿ ಇಲ್ಲದೆ ಕೆಲಸ ಮಾಡಬೇಡಿ ಎಂದು ಗುತ್ತಿಗೆದಾರರಿಗೆ ಸೂಚಿಸಲಾಗಿತ್ತು. ಅಲ್ಲಿ ಕೆಲಸ ಬಂದ್ ಮಾಡಿ ಮರಗೋಳ ಗ್ರಾಮದ ಬಳಿ ಕೆಲಸ ಮಾಡಿಸುತ್ತಿದ್ದಾರೆ. ಅವರಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಶ್ರೀ ಸಿಮೆಂಟ್ ಕಂಪೆನಿಯ ಕಾಮಗಾರಿಯ ಕುರಿತು ಸಾರ್ವಜನಿಕರಿಂದ ದೂರು ಬಂದಿವೆ. ಕಂಪೆನಿಗೆ ಕಂದಾಯ ಇಲಾಖೆಯಿಂದ ಅನುಮತಿ ನೀಡಿಲ್ಲ’ ಎಂದು ತಹಶೀಲ್ದಾರ್ ಮಲ್ಲೇಶಾ ತಂಗಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

* * 

ಕಾಗಿಣಾ ನದಿಯಿಂದ ನೀರು ಪಡೆಯಲು ಕೈಗೊಂಡಿರುವ ಕಾಮಗಾರಿಗೆ ಅನುಸರಿಸಬೇಕಾದ ನಿಯಮಗಳ ಕುರಿತು ಸಮಗ್ರ ಪರಿಶೀಲಿಸಿ ಕಾನೂನು ಕ್ರಮ ಜರುಗಿಸುತ್ತೇವೆ.
ಮಲ್ಲೇಶಾ ತಂಗಾ, ತಹಶೀಲ್ದಾರ್ ಚಿತ್ತಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT