ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ ಬದುಕು ಕಟ್ಟಿಕೊಂಡ ಮೆಕ್ಯಾನಿಕ್ ಕೃಷ್ಣ

Last Updated 3 ಡಿಸೆಂಬರ್ 2017, 6:39 IST
ಅಕ್ಷರ ಗಾತ್ರ

ಸೇಡಂ: ಸಾಧನೆ ಮಾಡಬೇಕು, ಗುರಿ ತಲುಪಬೇಕು ಎಂಬ ಛಲ ಹಾಗೂ ನಿರಂತರ ಪ್ರಯತ್ನ ಇದ್ದರೆ ಯಾವುದೇ ಸಮಸ್ಯೆಗಳು ಅಡ್ಡಿಯಾಗದು ಎಂಬುದಕ್ಕೆ ಇಲ್ಲಿನ ಮೆಕ್ಯಾನಿಕ್ ಕೃಷ್ಣ ಅವರ ಬದುಕು ಸಾಕ್ಷಿ. ಸೇಡಂ ನಿವಾಸಿ ಕೃಷ್ಣ ಅವರು ಅಂಗವಿಕಲರು. ಆದರೆ, ಮೆಕ್ಯಾನಿಕ್ ಕೆಲಸ ಮಾಡಿ ಸುಂದರ ಬದುಕನ್ನು ಕಟ್ಟಿಕೊಂಡಿದ್ದಾರೆ. 21 ವರ್ಷದಿಂದ ಗ್ಯಾರೇಜ್‌ನಲ್ಲಿ ಕೆಲಸ ಮಾಡಿ ಬದುಕು ಭದ್ರಗೊಳಿಸಿಕೊಂಡಿದ್ದಾರೆ.

10ನೇ ತರಗತಿ ವರೆಗೆ ಶಾಲೆ ಕಲಿತ ಇವರಿಗೆ, ಶಿಕ್ಷಣ ಮುಂದುವರಿಸಲು ಮನೆಯ ಪರಿಸ್ಥಿತಿ ಅನುಕೂಲಕರ ಆಗಿರಲಿಲ್ಲ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಕೃಷ್ಣ ಅವರಿಗೆ ಸಂಸಾರದ ಕಷ್ಟಗಳು ತಲೆ ಸೇರಿದವು. ಆದರೆ, ತಾಯಿಯ ಆಸರೆ ಮತ್ತು ಸಹೋದರರ ಸಹಕಾರ ನೆರವಿಗೆ ಬಂದಿತು. ಶಿಕ್ಷಣ ಮೊಟಕುಗೊಳಿಸಿ ವೆಲ್ಡಿಂಗ್ ಶಾಪ್‌ನಲ್ಲಿ ಕೆಲಸಕ್ಕೆ ಸೇರಿದರು. ತಿಂಗಳಿಗೆ ₹5 ಸಂಬಳ ಪಡೆದು ಎರಡು ವರ್ಷ ಕೆಲಸ ಮಾಡಿದರು.

ನಂತರ ಪಂಕ್ಚರ್ ಹಾಕುವ ಅಂಗಡಿಯಲ್ಲಿ ಸೇರಿ ಗ್ಯಾರೇಜ್‌ನಲ್ಲಿನ ಎಲ್ಲ ಕೆಲಸಗಳನ್ನು ಕಲಿತರು. ಅಲ್ಲಿ ನೀಡುತ್ತಿದ್ದ ₹20 ಬದುಕಿಗೆ ಸಾಕಾಗುತ್ತಿರಲಿಲ್ಲ.ತನ್ನದೇ ಆದ ಒಂದು ಹೊಸ ಗ್ಯಾರೇಜ್ ತೆರೆಯಬೇಕು. ಇದರಿಂದ ತನಗೂ ಕೊಂಚ ಲಾಭವಾಗುತ್ತದೆ. ಮನೆಯ ಕುಟುಂಬಕ್ಕೆ ಆಸರೆಯಾಗುತ್ತದೆ ಎಂಬ ಮಹಾದಾಸೆಯನ್ನು ಹೊಂದಿದ್ದರು ಕೃಷ್ಣ . 2008ರಲ್ಲಿ ₹50 ಸಾವಿರ ಸಾಲ ಪಡೆದು ಹೊಸ ಗ್ಯಾರೇಜ್ ತೆರೆದರು. ಬೈಕ್ ರಿಪೇರಿ, ವೆಲ್ಡಿಂಗ್, ಆಟೊ ಮೆಕ್ಯಾನಿಕ್, ಆಯಿಲ್ ಎಂಜಿನ್, ಪಂಕ್ಚರ್ ಹಾಕುವುದು, ಅಂಗಡಿಗಳಿಗೆ ಷೆಟರ್ ಅಳವಡಿಕೆ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿದರು. ಬಂದ ಹಣದಲ್ಲಿ ಮನೆ ದುರಸ್ತಿ ಮಾಡಿದರು. ಸ್ವಂತ ಮನೆಯೂ ಕಟ್ಟಿಸಿದರು.

‘ಸ್ವಂತ ಗ್ಯಾರೇಜ್ ಆರಂಭಿಸಿದ್ದರಿಂದ ನನಗೆ ಒಳ್ಳೆಯದಾಗಿದೆ. ಇದರಿಂದ ಲಾಭ ಬರುತ್ತಿದೆ. ಇಬ್ಬರು ಸಹಾಯಕರು ಇದ್ದಾರೆ. ಪತ್ನಿ ಶಶಿಕಲಾ ಅವರ ಸಹಕಾರವೂ ಇದೆ. ಇಬ್ಬರು ಹೆಣ್ಣು ಮಕ್ಕಳಿದ್ದು, ಒಬ್ಬಳನ್ನು ಶಾಲೆಗೆ ಸೇರಿಸಿದ್ದೇನೆ. ಇನ್ನೊಬ್ಬಳು ಚಿಕ್ಕವಳು’ ಎಂದು ಕೃಷ್ಣ ವಿವರಿಸಿದರು.

ಹಣ ಗಳಿಸಿದರೆ ಸಾಲದು. ಸಮಾಜ ಸೇವೆ ಮಾಡಬೇಕು ಎಂಬ ಮಹಾದಾಸೆಯ ಅವರು ಹಿರೇಡೇಶ್ವರದ ಬಳಿ ಪ್ರತಿ ಶ್ರಾವಣಮಾಸದಂದು ದಾಸೋಹ ಮಾಡುತ್ತಿದ್ದಾರೆ. ದಲಿತ ಸೇನೆಯ ಅಂಗವಿಕಲರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಅಂಗವಿಕಲರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದಾರೆ. 8 ಯುವಕರು ಇವರ ಬಳಿ ಕೆಲಸ ಕಲಿತು ವಿವಿಧೆಡೆ ಕಾಯಕದಲ್ಲಿ ತೊಡಗಿದ್ದಾರೆ.

ಕಾಲು ಬಲಹೀನತೆ ಇರುವುದರಿಂದ ಕೆಲಸ ಮಾಡಲು ತೊಂದರೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇನೆ. ಆದರೆ, ಸ್ವಂತ ಗ್ಯಾರೇಜ್ ತೆಗೆದ ನಂತರ ನನಗೆ ಅಂಗವಿಕಲತೆಯ ಸಮಸ್ಯೆ ಎದುರಾಗಿಲ್ಲ. ಈಗ ನಾನು ಸಂತೋಷವಾಗಿದ್ದೇನೆ’ ಎಂದು ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು. ಕೃಷ್ಣ ಅವರ ಸಂಪರ್ಕ ಸಂಖ್ಯೆ 88618 65675

* * 

ಹುಟ್ಟಿನಿಂದ ಕಾಲಿನ ಸಮಸ್ಯೆ ಇರಲಿಲ್ಲ. ನಾಲ್ಕು ವರ್ಷದವನಿದ್ದಾಗ ಜ್ವರದಿಂದ ಬಳಲಿದೆ. ಪೋಲಿಯೊ ಹನಿ ಹಾಕಿಸದ ಕಾರಣ ಕಾಲು ಸ್ವಾಧೀನ ಕಳೆದುಕೊಂಡಿತು
ಕೃಷ್ಣ, ಮೆಕ್ಯಾನಿಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT