ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿವೃತ್ತ ಅಧಿಕಾರಿಗಳ ಗಂಜಿ ಕೇಂದ್ರವಾದ ಮಾನವ ಹಕ್ಕು ಆಯೋಗ '

Last Updated 3 ಡಿಸೆಂಬರ್ 2017, 7:25 IST
ಅಕ್ಷರ ಗಾತ್ರ

ಧಾರವಾಡ: ‘ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಸೂಚನೆ, ಆದೇಶಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೀಗಾಗಿ ಆಯೋಗ ನಿವೃತ್ತ ಅಧಿಕಾರಿಗಳ ಗಂಜಿ ಕೇಂದ್ರದಂತಾಗಿದೆ’ ಎಂದು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶಾನಭಾಗ್ ಹೇಳಿದರು.

ರಾಜೀವ್‌ ದೀಕ್ಷಿತ್ ವಿಚಾರ ವೇದಿಕೆ, ಗಾಂಧಿ ಶಾಂತಿ ಪ್ರತಿಷ್ಠಾನ ಕೇಂದ್ರ, ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಶನಿವಾರದಿಂದ ಪ್ರಾರಂಭವಾದ ಎರಡು ದಿನಗಳ ರಾಜ್ಯಮಟ್ಟದ ಸ್ವದೇಶಿ ಸಮ್ಮೇಳನದಲ್ಲಿ ನಡೆದ ‘ಪ್ರಸ್ತುತ ವ್ಯವಸ್ಥೆಯಲ್ಲಿ ಗ್ರಾಹಕ ಚಳವಳಿ ಏಕೆ? ಮತ್ತು ಹೇಗೆ?’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

‘ಇಂದು ಅನೇಕರು ನ್ಯಾಯ ಅರಸಿ ನ್ಯಾಯಾಲಯಗಳಿಗೆ ಅಲೆದರೂ ಸರಿಯಾದ ನ್ಯಾಯ ಸಿಗುತ್ತಿಲ್ಲ.ರಾಜ್ಯದಲ್ಲಿ ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ. ಸಾಮಾನ್ಯ ಜನರು ಯಾವುದಕ್ಕಾಗಿ ಹೋರಾಟ ನಡೆಸುತ್ತಿದ್ದಾರೋ ಅದಕ್ಕೆ ಸರಿಯಾದ ನ್ಯಾಯ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹಿರಿಯ ನಾಗರಿಕರು ಆದೇಶ ಪತ್ರ ಹಿಡಿದುಕೊಂಡು ಅನುಷ್ಠಾನಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಅಧಿಕಾರಿಗಳಿಗೆ ಹಾಗೂ ಮಂತ್ರಿಗಳಿಗೆ ನಮ್ಮ  ಕಾಳಜಿ ಅರ್ಥವಾಗುತ್ತಿಲ್ಲ. ಇದೇ ಕಾರಣದಿಂದ ನ. 1ರಂದು ನೀಡಿದ್ದ ರಾಜ್ಯೋತ್ಸವ ಪ್ರಶಸ್ತಿಯನ್ನು ತಿರಸ್ಕರಿಸಿದ್ದೇನೆ’ ಎಂದರು.

‘ನನಗೆ ಹಣ, ಪ್ರಶಸ್ತಿ ಪತ್ರ ಬೇಡ. ನನಗೆ ಸ್ವರ್ಗ ಕೊಟ್ಟರೂ ಬೇಡ. ನೊಂದು ಕಣ್ಣೀರು ಸುರಿಸುತ್ತಿರುವವರಿಗೆ ನ್ಯಾಯ ದೊರಕಬೇಕು. ಇದು ನನ್ನ ಉದ್ಧಟತನದ ನಿರ್ಧಾರವಲ್ಲ. ಪ್ರಶಸ್ತಿ ಸ್ವೀಕರಿಸುವ ಎಲ್ಲರ ಮೇಲೆ ನನಗೆ ಗೌರವವಿದೆ. ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿ. ಆದರೆ, ನಾವು ಮಾಡಿದ ಸಾಧನೆಗೆ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರಕದ ಕಾರಣ ಪ್ರಶಸ್ತಿಯನ್ನು ಸ್ವೀಕರಿಸಿಲ್ಲ’ ಎಂದರು.

ಇದೇ ಸಂದರ್ಭದಲ್ಲಿ ತಮ್ಮ ಸಂಸ್ಥೆಗೆ ನ್ಯಾಯ ಕೇಳಿ ಬಂದ ಅನೇಕ ಸಂತ್ರಸ್ತ ಜನರಿಗೆ ನ್ಯಾಯ ಒದಗಿಸಿಕೊಟ್ಟ ಬಗೆಯನ್ನು ಸವಿಸ್ತಾರವಾಗಿ ವಿವರಿಸಿದರು.

ವಕೀಲರ ಸಂಘದ ಅಧ್ಯಕ್ಷ ರಾಜಶೇಖರ ಬೆಳ್ಳಕ್ಕಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಉದಯ ಚಿಪ್ರೆ, ಬಸವಪ್ರಭು ಹೊಸಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT