ಧಾರವಾಡ

ಆರ್ಥಿಕ ಗುಲಾಮಗಿರಿಯತ್ತ ದೇಶ

‘ದೇಶದ ಜನರನ್ನು ಆರ್ಥಿಕ ಗುಲಾಮರನ್ನಾಗಿಸಿ ವಿದೇಶಿ ಬಂಡವಾಳಶಾಹಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಹಾಗೂ ಸ್ವದೇಶಿ ಕರಕುಶಲ ಉತ್ಪಾದಕರನ್ನು ಬಿಕ್ಷುಕರನ್ನಾಗಿಸುವ ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆ ಅಪ್ರಮಾಣಿಕ’

ಧಾರವಾಡ: ‘ದೇಶದ ಜನರನ್ನು ಆರ್ಥಿಕ ಗುಲಾಮರನ್ನಾಗಿಸಿ ವಿದೇಶಿ ಬಂಡವಾಳಶಾಹಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಹಾಗೂ ಸ್ವದೇಶಿ ಕರಕುಶಲ ಉತ್ಪಾದಕರನ್ನು ಬಿಕ್ಷುಕರನ್ನಾಗಿಸುವ ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆ ಅಪ್ರಮಾಣಿಕ’ ಎಂದು ರಂಗಕರ್ಮಿ ಪ್ರಸನ್ನ ಹೆಗ್ಗೋಡು ಹೇಳಿದರು.

ರಾಜೀವ್‌ ದೀಕ್ಷಿತ್ ವಿಚಾರ ವೇದಿಕೆ, ಗಾಂಧಿ ಶಾಂತಿ ಪ್ರತಿಷ್ಠಾನ ಕೇಂದ್ರ, ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಶನಿವಾರದಿಂದ ಪ್ರಾರಂಭವಾದ ಎರಡು ದಿನಗಳ ‘ರಾಜ್ಯಮಟ್ಟದ ಸ್ವದೇಶಿ ಸಮ್ಮೇಳನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಸಂದರ್ಭದಲ್ಲಿ ವಿದೇಶಿ
ಯರ ವಿರುದ್ಧ ಹೋರಾಡಲು ಹಾಗೂ ಬ್ರಿಟಿಷರು ಭಾರತಕ್ಕೆ ಬಂದ ಉದ್ದೇಶ ವನ್ನು ಜನರಿಗೆ ತಿಳಿಸಲು ರಾಜಕೀಯ ನಾಯಕರಿಗೆ ಸ್ವದೇಶಿ ಪದ ಪ್ರಮುಖ ಅಸ್ತ್ರವಾಗಿತ್ತು. ಆದರೆ ಇಂದು ವಿದೇಶಿ ಯರು ಆಳ್ವಿಕೆ ಮಾಡುತ್ತಿಲ್ಲ. ನಮ್ಮವರೇ ವಿದೇಶಿಯರಂತೆ ಆಳುತ್ತಿದ್ದು ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಹೀಗಾಗಿ ಈ ಸ್ವದೇಶಿ ಚಳವಳಿಯನ್ನು ಅನುಮಾನಾತೀತವಾಗಿ ಕೈ ಉತ್ಪಾದಕರ ಚಳವಳಿ ಎಂದು ಕರೆಯಲು ಇಚ್ಛಿಸುತ್ತೇನೆ’ ಎಂದರು.

‘ವಿದೇಶಿ ವಸ್ತುಗಳ ಬಳಕೆಯಿಂದ ಆರ್ಥಿಕ ಸ್ವಾತಂತ್ರ್ಯ ಕಳೆದುಕೊಂಡಿರುವ ಶೇ. 70ರಷ್ಟು ಕೃಷಿಕರು, ನೇಕಾರರು, ಮೀನುಗಾರರು, ಗುಡ್ಡಗಾಡು ಜನ, ಚಮ್ಮಾರರನ್ನು ಭಿಕ್ಷುಕರಂತೆ ಕಾಣಲಾಗುತ್ತಿದೆ. ಗುಡಿ ಕೈಗಾರಿಕೆಯಿಂದ ಕೇವಲ ಶೇ. 3.4ರಷ್ಟು ಜಿಡಿಪಿ ದೊರೆಯುತ್ತಿದೆ ಎಂದು ಸರ್ಕಾರವೇ ಹೇಳುತ್ತಿರುವುದು ಖೇದಕರ ಸಂಗತಿ. ಪ್ರಗತಿ ಹೆಸರಿನಡಿ ದೇಶದೊಳಗಿನ ಶೇ 80ರಷ್ಟು ಜನ ಮೋಜಿನ ವಸ್ತುಗಳ ಬಳಕೆಗೆ ಆದ್ಯತೆ ನೀಡುತ್ತಿದ್ದಾರೆ. ಈ ಮೂಲಕ ದೇಶಕ್ಕೆ ಬಟ್ಟೆ, ಅನ್ನ ನೀಡುವ ಕೈ ಉತ್ಪಾದಕರನ್ನು ಭಿಕ್ಷುಕರನ್ನಾಗಿ ಮಾಡುತ್ತಿರುವುದು ಸ್ವಾತಂತ್ರ್ಯ ಹರಣವಲ್ಲದೆ ಮೆತ್ತೇನು?’ ಎಂದು ಖಾರವಾಗಿ ಪ್ರಶ್ನಿಸಿದರು.

‘ದೇಶದ ಅಭಿವೃದ್ಧಿಯ ಸಂಕೇತವನ್ನಾಗಿ ಶೈಕ್ಷಣಿಕ, ನೈತಿಕ ಹಾಗೂ ಸಾಮಾಜಿಕ ಕ್ಷೇತ್ರವನ್ನು ಪರಿಗಣಿಸದೆ ಕೇವಲ ಆರ್ಥಿಕ ಪ್ರಗತಿಯನ್ನು ಆಧರಿಸಿ ಅಭಿವೃದ್ಧಿ ಲೆಕ್ಕಾಚಾರ ಹಾಕುವುದು ಸರಿಯಾದ ಕ್ರಮವಲ್ಲ. ಜಗತ್ತಿನಲ್ಲಿ ಕಾಯಕ ಹಾಗೂ ಧರ್ಮಕ್ಕೂ ಸಂಬಂಧ ಕಲ್ಪಿಸಿದ ಏಕೈಕ ದೇಶ ಭಾರತ. ಆದರೆ ಇಂದು ರಾಜಕೀಯಕ್ಕಾಗಿ ಧರ್ಮವನ್ನು ಕಲುಷಿತಗೊಳಿಸಲಾಗುತ್ತಿದೆ’ ಎಂದರು.

‘ಸ್ವದೇಶಿ ವಸ್ತು, ಸಂಸ್ಕೃತಿಗಳ ಬಗ್ಗೆ ಮಾತನಾಡಿದ ಕಾರಣಕ್ಕೆ ದೇಶದ ಜನತೆ ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲಿಸಿದ್ದಾರೆ. ಆದರೆ ಈಗ ಕೈ ಉತ್ಪನ್ನಗಳಿಗೆ ಜಿಎಸ್‌ಟಿ ಹೇರಿದ್ದು ಏಕೆ? ಮಿತಿಗಳನ್ನು ಹಾಕಬೇಕಿರುವುದು ಟಾಟಾ, ಅದಾನಿ, ಅಂಬಾನಿ ಅವರಿಗೆ. ಯಾವುದೇ ರಾಜಕೀಯ ಪಕ್ಷವನ್ನು ಸೋಲಿಸುವುದು ವೈಯಕ್ತಿಕ ಉದ್ದೇಶವಿಲ್ಲ. ಆದರೆ ಒಂದುವೇಳೆ ಉದ್ಯಮಿಗಳಿಗೆ ಮಿತಿ ಹಾಕದೇ ಇದ್ದರೆ ದೇಶದಲ್ಲಿರುವ ಶೇ 70ರಷ್ಟು ಕೈ ಉತ್ಪಾದಕರೆ ಇವರನ್ನು ಸೋಲಿಸುತ್ತಾರೆ’ ಎಂದು ಪ್ರಸನ್ನ ಎಚ್ಚರಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಮಾಜ ಪರಿವರ್ತನಾ ಸಮುದಾಯ ಮುಖ್ಯಸ್ಥ ಎಸ್.ಆರ್. ಹಿರೇಮಠ ಮಾತನಾಡಿ, ’ಬಂಗಾಳ ವಿಭಜನೆ ಅವಧಿಯಲ್ಲಿ ಸ್ವದೇಶಿ ಪರಿಕಲ್ಪನೆ ಹುಟ್ಟಿಕೊಂಡಿತು. ತದನಂತರ ಉಪ್ಪಿನ ಸತ್ಯಾಗ್ರಹದ ಮೂಲಕ ಸ್ವದೇಶಿ ಪದದ ವ್ಯಾಪ್ತಿ ಹೆಚ್ಚಾಯಿತು. ಸ್ವದೇಶಿ ಪರಿಕಲ್ಪನೆಯನ್ನು ಕೇವಲ ರಾಜಕೀಯಕ್ಕಾಗಿ ಸೀಮಿತಗೊಳಿಸಬಾರದು’ ಎಂದರು.

ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶಾನಭಾಗ್‌, ನೈಸರ್ಗಿಕ ಕೃಷಿಕ ಚಂದ್ರಶೇಖರ ನಾರಾಯಣಪುರ, ಹನಮಂತ ಟಕ್ಕಳಕಿ, ಚಾರುಲತಾ ಮೆಳವಂಕಿ, ಸಂಜೀವ ಕುಲಕರ್ಣಿ, ಉದಯ ಚಿಪ್ರೆ, ಎಂ.ಡಿ ಪಾಟೀಲ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಕೆಂಪಕೆರೆಗೆ ಕಾಯಕಲ್ಪ: ಪ್ರಸಾದ ಅಬ್ಬಯ್ಯ

ಹುಬ್ಬಳ್ಳಿ
ಕೆಂಪಕೆರೆಗೆ ಕಾಯಕಲ್ಪ: ಪ್ರಸಾದ ಅಬ್ಬಯ್ಯ

22 Mar, 2018

ಹುಬ್ಬಳ್ಳಿ
ಮಾನವೀಯತೆ ಇಲ್ಲದ ದೇಶಪ್ರೇಮ ಅಪಾಯಕಾರಿ

‘ದೇಶಪ್ರೇಮದ ಹೆಸರಿನಲ್ಲಿ ನಡೆಯುವಷ್ಟು ಕೊಲೆ, ಅತ್ಯಾಚಾರ ಹಾಗೂ ಘರ್ಷಣೆ ಬೇರಾವ ವಿಷಯದಲ್ಲೂ ನಡೆಯುವುದಿಲ್ಲ. ಮಾನವೀಯತೆ ಇಲ್ಲದ ದೇಶಪ್ರೇಮ ಅತ್ಯಂತ ಅಪಾಯಕಾರಿ’ ಎಂದು ಡಾ. ದ.ರಾ....

22 Mar, 2018
ಮಲೆನಾಡ ಭಾಗದಲ್ಲಿ ನೀರಿಗೆ ತತ್ವಾರ

ಧಾರವಾಡ
ಮಲೆನಾಡ ಭಾಗದಲ್ಲಿ ನೀರಿಗೆ ತತ್ವಾರ

22 Mar, 2018
ಧಾರವಾಡ: ಜಿಲ್ಲೆಯಲ್ಲಿ ಮುಂದುವರಿದ ಮಳೆ

ಹುಬ್ಬಳ್ಳಿ/ಧಾರವಾಡ
ಧಾರವಾಡ: ಜಿಲ್ಲೆಯಲ್ಲಿ ಮುಂದುವರಿದ ಮಳೆ

21 Mar, 2018

ಧಾರವಾಡ
‘ಕುಟುಂಬ ರಾಜಕಾರಣ ಮಾಡುವುದಿಲ್ಲ’

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮಾಡುತ್ತದೆ ಎಂದು ಕೇಂದ್ರದ ಪರಿಸರ ಮತ್ತು ಸಾಂಸ್ಕೃತಿಕ ಸಚಿವ ಡಾ. ಮಹೇಶ ಶರ್ಮಾ ಹೇಳಿದರು. ...

21 Mar, 2018