ಶಿಗ್ಗಾವಿ

ಅಂಗವಿಕಲತೆ ಮರೆಸಿದ ನಿತ್ಯದ ಕಾಯಕ

ಅಂಗವಿಕಲರು ಎಂದಾಕ್ಷಣ ಅವರ ಬಗ್ಗೆ ಒಂದು ರೀತಿಯ ನಿರಾಕರಣೆ ಭಾವನೆ ಮೂಡುತ್ತದೆ. ಅವರು ಕೆಲಸಕ್ಕೆ ಬಾರದವರು ಎಂಬ ಮನೋಭಾವ ಇದಕ್ಕೆ ಕಾರಣ.

ಹಾಲಿನ ಪಾಕೆಟ್ ಮಾರಾಟ ನಿರತ ಮುತ್ತಣ್ಣ ದಳವಾಯಿ

ಶಿಗ್ಗಾವಿ: ಅಂಗವಿಕಲರು ಎಂದಾಕ್ಷಣ ಅವರ ಬಗ್ಗೆ ಒಂದು ರೀತಿಯ ನಿರಾಕರಣೆ ಭಾವನೆ ಮೂಡುತ್ತದೆ. ಅವರು ಕೆಲಸಕ್ಕೆ ಬಾರದವರು ಎಂಬ ಮನೋಭಾವ ಇದಕ್ಕೆ ಕಾರಣ. ಆದರೆ, ತಾಲ್ಲೂಕಿನ ಬಂಕಾಪುರದ ಅಂಗವಿಕಲ ಮುತ್ತಣ್ಣ ಮಹಾಲಿಂಗಪ್ಪ ದಳವಾಯಿ ಇದಕ್ಕೆ ಅಪವಾದ. ನಿತ್ಯ ವಿವಿಧ ಕಾಯಕಗಳಲ್ಲಿ ನಿರತರಾಗಿರುವ ಅವರು, ಇತರರಿಗೆ ಮಾದರಿಯಾಗಿದ್ದಾರೆ.

ಮುತ್ತಣ್ಣ ಅವರು ನಾಲ್ಕು ವರ್ಷವಿದ್ದಾಗ, ಪೊಲೀಯೋದಿಂದಾಗಿ ಅವರ ಬಲಗಾಲು ಸಂಪೂರ್ಣ ಸ್ವಾಧೀನ ಕಳೆದುಕೊಂಡಿತು. ಪಿ.ಯು.ಸಿ.ವರೆಗೆ ಓದಿದ ಅವರಿಗೆ, ಬಡತನದ ಕಾರಣದಿಂದಾಗಿ ಮುಂದೆ ವಿದ್ಯಾಭ್ಯಾಸ ಮುಂದುವರಿಸಲಾಗಲಿಲ್ಲ. ಕುಟುಂಬದ ಆರ್ಥಿಕ ಸ್ಥಿತಿ ಚನ್ನಾಗಿಲ್ಲದಿದ್ದರಿಂದ ಅನಿವಾರ್ಯವಾಗಿ ಉದ್ಯೋಗ ಆರಂಭಿಸಬೇಕಾಯಿತು.

‘ಆರಂಭದಲ್ಲಿ ಸೀಮೆಎಣ್ಣೆ ಅಂಗಡಿಯಲ್ಲಿ ಲೆಕ್ಕ ಬರೆಯಲು ಸೇರಿಕೊಂಡೆ. ನಂತರ ಮೊಬೈಲ್‌ ಅಂಗಡಿಗಳಲ್ಲಿ ಕೆಲ ವರ್ಷ ಕೆಲಸ ಮಾಡಿ, ತಂದೆ–ತಾಯಿಗೆ ನೆರವಾದೆ. ಈ ರೀತಿಯ ಕೆಲಸಗಳನ್ನು ಹೆಚ್ಚು ಕಾಲ ನಂಬಿಕೊಳ್ಳಲಾಗದು ಅಂದುಕೊಂಡು, ಸ್ವಂತ ಉದ್ಯೋಗ ಆರಂಭಿಸಲು ನಿರ್ಧರಿಸಿದೆ’ ಎಂದು ಆರಂಭದ ದಿನಗಳನ್ನು ಮುತ್ತಣ್ಣ ನೆನಪಿಸಿಕೊಂಡರು.

‘ಅದೇ ವೇಳೆ ಪುರಸಭೆಯ ಎಸ್‌.ಎಫ್‌.ಸಿ ಯೋಜನೆಯಡಿ ಅಂಗವಿಕಲ ಮೀಸಲಾತಿಯಲ್ಲಿ ಅವರಿಗೆ ತ್ರಿಚಕ್ರ ವಾಹನ ಸಿಕ್ಕಿತು. ಅದನ್ನೇ ಆಸರೆಯಾಗಿ ಮಾಡಿಕೊಂಡು ಮನೆ ಮನೆಗೆ ಹಾಲು ಹಾಕುವ ಕೆಲಸ ಆರಂಭಿಸಿದೆ. ಆರಂಭದಲ್ಲಿ ನಿತ್ಯ ಸುಮಾರ 150ರಿಂದ 200 ಲೀಟರ್‌ ಹಾಲು ಮಾರಾಟ ಮಾಡುತ್ತಿದ್ದೆ. ಪ್ರತಿ ಲೀಟರ್‌ಗೆ ₹1.50 ಪೈಸೆವರೆಗೆ ಲಾಭದಂತೆ, ದಿನಕ್ಕೆ ₹200ರಿಂದ ₹300 ಸಂಪಾದಿಸತೊಡಗಿದೆ. ಇದರಿಂದ ಕುಟುಂಬ ನಿರ್ವಹಣೆ ಸುಲಭವಾಯಿತು’ ಎಂದು ಅವರು ಹೇಳಿದರು.

‘ದಾವಣಗೆರೆಯಿಂದ ಸುಮಾರು  ಮಜ್ಜಿಗೆ ಪಾಕೆಟ್‌ಗಳನ್ನು ತರಿಸಿ ಸುಮಾರು 30 ಹಳ್ಳಿಗಳಿಗೆ ಹೋಗಿ ಮಾರಾಟ ಮಾಡಿ ಬರುತ್ತೇನೆ. ಜತೆಗೆ ತಂಪು ಪಾನೀಯಗಳನ್ನು ಮಾರಾಟ ಮಾಡುತ್ತೇನೆ. ತಿಂಗಳಿಗೆ ನನ್ನ ಖರ್ಚು ಕಳೆದು ₹ 15 ಸಾವಿರ ದುಡಿಯುತ್ತೇನೆ’ ಎಂದು ತಮ್ಮ ಸ್ವಂತ ಉದ್ಯೋಗದ ಬೆಳವಣಿಗೆಯನ್ನು ಬಿಚ್ಚಿಟ್ಟರು.

ಹೈನುಗಾರಿಕೆ: ‘ಪುರಸಭೆಯ ನೆರವಿನಿಂದ ರಿಯಾಯಿತಿ ದರದಲ್ಲಿ ಒಂದು ಹಸು ಖರೀದಿಸಿದೆ. ಅದರೊಂದಿಗೆ ಸ್ವಂತವಾಗಿ ಎರಡು ಹಸುಗಳನ್ನು ಸಾಕಿದ್ದೇನೆ. ಅವುಗಳಿಂದ ನಿತ್ಯ 5–6 ಲೀಟರ್‌ ಹಾಲನ್ನು ಡೇರಿಗೆ ಹಾಕುತ್ತೇನೆ. ನಮಗಿರುವ ಎರಡು ಎಕರೆ ಭೂಮಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಹಾಕಿಸಿ, ನೀರಾವರಿ ಭೂಮಿ ಮಾಡಿಕೊಂಡು ಕೃಷಿ ಕೂಡ ಮಾಡುತ್ತಿದ್ದೇನೆ’ ಎಂದು ಅವರು ಹೆಮ್ಮೆಯಿಂದ ಹೇಳಿದರು.

‘ಅಂಗವಿಕಲನಾಗಿದ್ದ ಮುತ್ತಣ್ಣ ಮುಂದೆ ಹೇಗೆ ಬದುಕು ಹೇಗೆ ಸಾಗಿಸಬಲ್ಲ ಎಂಬ ಆತಂಕ ಕಾಡುತ್ತಿತ್ತು. ಆದರೆ, ಇಂದು ಇಡೀ ಕುಟುಂಬವನ್ನು ಅವನೇ ಮುನ್ನಡೆಸುತ್ತಿರುವುದನ್ನು ಕಂಡು ಹೆಮ್ಮೆ ಎನಿಸುತ್ತಿದೆ’ ಎಂದು ಮುತ್ತಣ್ಣನ ತಂದೆ ಮಹಾಲಿಂಗಪ್ಪ ಅವರು ಹೇಳುವಾಗ ಅವರ ಕಣ್ಣುಗಳು ತುಂಬಿ ಬಂದವು.

* * 

ಅಂಗವಿಕಲತೆ ದೇಹಕ್ಕೇ ಹೊರತು, ಮನಸ್ಸಿಗಲ್ಲ ಅಂದುಕೊಂಡು ಬದುಕನ್ನು ಸವಾಲಾಗಿ ಸ್ವೀಕರಿಸಬೇಕು. ಜನ ಅಂಗವಿಕಲರಿಗೆ ಅನುಕಂಪ ತೋರಿಸುವ ಬದಲು, ಅವರು ಮಾಡುವ ಕೆಲಸಗಳನ್ನು ಪ್ರೋತ್ಸಾಹಿಸಬೇಕು
ಮುತ್ತಣ್ಣ ದಳವಾಯಿ

 

Comments
ಈ ವಿಭಾಗದಿಂದ ಇನ್ನಷ್ಟು

ಹಾನಗಲ್
ಹಾನಗಲ್‌ ಕಾಂಗ್ರೆಸ್‌ನ ಭದ್ರ ಕೋಟೆ: ಮಾನೆ

‘ಹಾನಗಲ್‌ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವ ಪಕ್ಷ ರಾಜ್ಯದ ಚುಕ್ಕಾಣಿ ಹಿಡಿಯುತ್ತದೆ, ಹಾನಗಲ್‌ ಕಾಂಗ್ರೆಸ್‌ನ ಭದ್ರ ನೆಲೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಹೇಳಿದರು. ...

23 Apr, 2018
ಹಂದಿಗಳ ಹಾವಳಿ: ರೋಸಿಹೋದ ಜನ

ಕುಮಾರಪಟ್ಟಣ
ಹಂದಿಗಳ ಹಾವಳಿ: ರೋಸಿಹೋದ ಜನ

23 Apr, 2018
ಒಣಗಿದ ಬೃಹತ್ ಬೇವಿನ ಮರ: ಆತಂಕದಲ್ಲಿ ವಾಹನ ಸವಾರರು

ಕುಮಾರಪಟ್ಟಣ
ಒಣಗಿದ ಬೃಹತ್ ಬೇವಿನ ಮರ: ಆತಂಕದಲ್ಲಿ ವಾಹನ ಸವಾರರು

23 Apr, 2018

ಸವಣೂರ
ಪುರಸಭೆಯಿಂದ ಮತದಾನ ಜಾಗೃತಿ ಜಾಥಾ

ಭಾರತದ ಪ್ರತಿಯೊಬ್ಬ ಪ್ರಜೆಗೆ ಮತದಾನ ಜನ್ಮಸಿದ್ಧಹಕ್ಕು. ಅದನ್ನು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ, ಹಕ್ಕನ್ನು ಮಾರಿಕೊಳ್ಳದೆ ಯೋಗ್ಯ ಅಭ್ಯರ್ಥಿಗೆ ಮತ ನೀಡಬೇಕು ಎಂದು ಜಿಲ್ಲಾ...

21 Apr, 2018

ಶಿಗ್ಗಾವಿ
ಸ್ಪರ್ಧೆ ಯಾರ ವಿರುದ್ಧವಲ್ಲ; ಜನಸೇವೆಗಾಗಿ

‘ನಾನು ಚುನಾವಣೆ ಕಣಕ್ಕಿಳಿದಿರುವುದು ಯಾರ ವಿರುದ್ಧವಲ್ಲ. ಯಾರನ್ನೂ ಸೋಲಿಸಲು ಅಲ್ಲ. ಜನ ಸೇವೆ, ಅಭಿವೃದ್ಧಿಗಾಗಿ ಎಂಬುವುದನ್ನು ಮರೆಯಬಾರದು’ ಎಂದು ವಿಧಾನ ಪರಿಷತ್ ಸದಸ್ಯ ಸೋಮಣ್ಣ...

21 Apr, 2018