ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತ ಜಯಂತಿ: ಭವ್ಯ ಶೋಭಾಯಾತ್ರೆ

Last Updated 3 ಡಿಸೆಂಬರ್ 2017, 9:14 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಬಜರಂಗದಳ ಮತ್ತು ವಿಶ್ವಹಿಂದೂ ಪರಿಷತ್‌ ನೇತೃತ್ವದಲ್ಲಿ ನಡೆಯುತ್ತಿರುವ ದತ್ತ ಜಯಂತಿ ಉತ್ಸವದ ಅಂಗವಾಗಿ ದತ್ತಭಕ್ತರು ನಗರದಲ್ಲಿ ಶನಿವಾರ ಭವ್ಯ ಶೋಭಾಯಾತ್ರೆ ನಡೆಸಿದರು.

ನಗರದ ಕಾಮಧೇನು ಗಣಪತಿ ದೇಗುಲ ಬಳಿಯಿಂದ ಮಧ್ಯಾಹ್ನ 3.15ಕ್ಕೆ ಶೋಭಾಯಾತ್ರೆ ಹೊರಟಿತು. ಅಲಂಕೃತ ವಾಹನದಲ್ಲಿ ಪ್ರತಿಷ್ಠಾಪಿಸಿದ್ದ ದತ್ತಾತ್ರೇಯರ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ದತ್ತಮಾಲಾಧಾರಿಗಳು ದತ್ತಾತ್ರೇಯರ ಅಡ್ಡೆಯನ್ನು ಹೊತ್ತು ಸಾಗಿದರು. ಮಾರ್ಗದುದ್ದಕ್ಕೂ ಜನರು ಉತ್ಸವ ಮೂರ್ತಿಗೆ ಭಕ್ತಿ ಸಮರ್ಪಿಸಿದರು. ಪೊಲೀಸರ ಸರ್ಪಗಾವಲಿನಲ್ಲಿ ಶೋಭಾಯಾತ್ರೆ ಸಾಗಿತು.

ಕೇಸರಿ ಪಂಚೆ ಮತ್ತು ಶಲ್ಯ ಧರಿಸಿ, ಕೈಯಲ್ಲಿ ಕೇಸರಿ ಭಗವಾಧ್ವಜ ಹಿಡಿದು ದತ್ತಮಾಲಾಧಾರಿಗಳು ಮೆರವಣಿಗೆಯಲ್ಲಿ ಸಾಗಿದರು. ಯಾತ್ರೆಯುದ್ದಕ್ಕೂ ಭಜನೆ ಮಾಡಿ ಗುರುದತ್ತಾತ್ರೇಯರ ನಾಮಸ್ಮರಣೆ ಮಾಡಿದರು. ಮಹಿಳೆಯರು ಭಕ್ತಿಗೀತೆಗಳನ್ನು ಹಾಡಿದರು. ‘ನಮ್ಮದು ನಮ್ಮದು ದತ್ತ ಪೀಠ ನಮ್ಮದು’, ‘ನಮ್ಮ ನಿಮ್ಮ ಪೀಠ ದತ್ತ ಪೀಠ’ ಘೋಷಣೆಗಳು ಮೊಳಗಿದವು.

ವೀರಗಾಸೆ, ಗೊಂಬೆಯಾಟ, ಡೋಲು ಕಲಾತಂಡಗಳ ಸಾಂಸ್ಕೃತಿಕ ವೈಭೋಗವು ಮೆರವಣಿಗೆಗೆ ಮೆರುಗು ನೀಡಿತು. ಶೋಭಾಯಾತ್ರೆಯು ಹನುಮಂತಪ್ಪ ವೃತ್ತದಲ್ಲಿ ನಿಧಾನವಾಗಿ ಸಾಗಿತು. ಸಾರ್ವಜನಿಕರು ಕಟ್ಟಡಗಳ ಮಹಡಿಗಳಲ್ಲಿ ನಿಂತು ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಇಡೀ ವೃತ್ತ ಕೇಸರಿ ಮಯವಾಗಿತ್ತು. ಬಹಳಷ್ಟು ಮಂದಿ ಕೇಸರಿ ಟೀ ಶರ್ಟ್‌ಗಳನ್ನು ಧರಿಸಿದ್ದರು. ದತ್ತಮಾಲಾಧಾರಿಗಳು ಅಂಡೇ ಛತ್ರದ ಬಳಿ ಕರ್ಪೂರ ಹೊತ್ತಿಸಿ ಸಂಭ್ರಮಿಸಿದರು. ಯಾತ್ರೆಯುದ್ದಕ್ಕೂ ಯುವಪಡೆ ಶಿಳ್ಳೆ ಹಾಕಿ, ಕುಣಿದು ಕುಪ್ಪಳಿಸಿತು.

ಚಕಮಕಿ: ಎಂ.ಜಿ.ರಸ್ತೆಯ ಶಾಪಿಂಗ್‌ ಕಾಂಫ್ಲೆಕ್ಸ್‌ ಬಳಿ ಹಿಂದೂ ಮತ್ತು ಮುಸ್ಲಿಂ ಗುಂಪುಗಳ ನಡುವೆ ಚಕಮಕಿ ನಡೆಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ ಮಧ್ಯಪ್ರವೇಶಿಸಿ ಉದ್ರಿಕ್ತರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಬಸವನಹಳ್ಳಿ ಮುಖ್ಯ ರಸ್ತೆ , ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ, ಮೂಲಕ ಹಾದು ಆಜಾದ್‌ ಪಾರ್ಕ್‌ ವೃತ್ತದಲ್ಲಿ ಶೋಭಾಯಾತ್ರೆಯು ಸಂಪನ್ನಗೊಂಡಿತು. ಶೋಭಾಯಾತ್ರೆ ಮಾರ್ಗ, ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್‌ ಬಿಗಿ ಭದ್ರತೆ ಇತ್ತು. ಎಂ.ಜಿ.ರಸ್ತೆಯಲ್ಲಿ ಬೆಳಿಗ್ಗೆಯಿಂದಲೂ ಅಂಗಡಿ–ಮುಂಗಟ್ಟುಗಳನ್ನು ಮುಚ್ಚಿಸಿ, ವಾಹನ ಸಂಚಾರ ನಿಷೇಧಿಸಲಾಗಿತ್ತು.

ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಶಿವಶಂಕರ್‌, ಜಿಲ್ಲಾ ಕಾರ್ಯದರ್ಶಿ ಯೋಗೀಶ್‌ ರಾಜ್‌ ಅರಸ್‌, ಬಜರಂಗದಳ ವಿಭಾಗೀಯ ಸಂಚಾಲಕ ಶರಣ್‌ ಪಂಪ್‌ವೆಲ್‌, ಶಾಸಕರಾದ ವಿ.ಸುನೀಲ್‌ಕುಮಾರ್‌, ಎಂ.ಕೆ.ಪ್ರಾಣೇಶ್ ಇದ್ದರು. ಜಿಲ್ಲೆ, ಹೊರ ಜಿಲ್ಲೆಗಳಿಂದ ಸಹಸ್ರಾರು ದತ್ತಮಾಲಾಧಾರಿಗಳು ಪಾಲ್ಗೊಂಡಿದ್ದರು. ಭಾನುವಾರ ದತ್ತ ಜಯಂತಿ ನಡೆಯಲಿದೆ. ದತ್ತ ಭಕ್ತರು ದತ್ತಪೀಠಕ್ಕೆ ತೆರಳಿ ಪಾದುಕೆ ದರ್ಶನ ಮಾಡುವರು. ನಗರದಲ್ಲಿ ಶನಿವಾರ ಬಳಿಗ್ಗೆ ಈದ್‌ ಮಿಲಾದ್‌ ಮೆರವಣಿಗೆ ಶಾಂತಿಯುತವಾಗಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT