ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಸ್ಥೈರ್ಯವೇ ಸ್ವಾವಲಂಬನೆಗೆ ದಾರಿ

Last Updated 3 ಡಿಸೆಂಬರ್ 2017, 9:23 IST
ಅಕ್ಷರ ಗಾತ್ರ

ಚಿಂತಾಮಣಿ: ಜನಿಸುವಾಗ ಎಲ್ಲಾ ಮಕ್ಕಳಂತೆ ಅಂದವಾಗಿ, ಚೂಟಿಯಾಗಿದ್ದ ಆ ಪುಟ ಕಂದನ ಕಾಲುಗಳು ಏಕಾಏಕಿ ಸ್ವಾಧೀನ ಕಳೆದುಕೊಂಡಾಗ ಹೆತ್ತವರ ಒಡಲಿಗೆ ಬೆಂಕಿ ಬಿದ್ದಿತ್ತು. ಜಿಂಕೆಯಂತೆ ಜಿಗಿಯುತ್ತಿದ್ದ ಮಗಳು ಪೊಲಿಯೋದಿಂದಾಗಿ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡು ಎದ್ದು ನಿಲ್ಲಲಾಗದ ಸ್ಥಿತಿಗೆ ತಲುಪಿದ್ದು ಕಂಡು ಆ ಪೋಷಕರಿಗೆ ದಿಕ್ಕೆ ತೋಚದಾಗಿತ್ತು.

ಕಾಲುಗಳ ಸ್ವಾಧೀನ ಕಳೆದುಕೊಂಡರೂ ಕೈಗಳನ್ನೇ ನೆಲದ ಮೇಲೂರಿ ತನ್ನ ದೇಹವನ್ನು ಕಾಮನ ಬಿಲ್ಲಿನಂತೆ ಬಾಗಿಸಿ ಮುಂದೆ ಸಾಗುವ ಮಗಳನ್ನು ಕಂಡವರಿಂದ ‘ಅಯ್ಯೋ ಪಾಪ’ ಎಂದು ಹೊರಡುತ್ತಿದ್ದ ಉದ್ಗಾರ, ಹಡೆದವರನ್ನು ಮತ್ತಷ್ಟು ಘಾಸಿಗೊಳಿಸಿತ್ತು. ಇದರ ಮೇಲೆ ಬಡತನದ ಬರೆ ಬೇರೆ. ಎರಡೂ ಸೇರಿ ಆ ಹೆಣ್ಣು ಮಗು ಶಿಕ್ಷಣದಿಂದಲೇ ವಂಚಿತವಾಯಿತು.

ದಿನ ಕಳೆದಂತೆ ಪೋಷಕರ ನೋವನ್ನು ಮೌನದಲ್ಲೇ ಅರ್ಥೈಸಿ ಕೊಂಡ ಆ ಸೂಕ್ಷ್ಮಮತಿ ಯುವತಿ ಗಟ್ಟಿಯಾಗಿರುವ ಕೈಗಳಿಂದ ಕುಳಿತಲ್ಲೇ ಅಗರಬತ್ತಿ ಉಜ್ಜುವುದನ್ನು ಕಲಿತು ಹಣ ಸಂಪಾದನೆ ಹೊಸ ದಾರಿ ಕಂಡುಕೊಂಡಾಗ ಹೆತ್ತೊಡಲು ಕೊಂಚ ತಣ್ಣಗಾಗಿತ್ತು. ಆ ಗಟ್ಟಿಗಿತ್ತಿ ಇವತ್ತು ತನ್ನದೇ ಆದ ಒಂದು ಪುಟ್ಟ ಅಗರಬತ್ತಿ ತಯಾರಿಕೆ ಘಟಕ ಸ್ಥಾಪಿಸಿ ತನ್ನದೇ ಸ್ಥಿತಿಯಲ್ಲಿರುವ ಹತ್ತಾರು ಬಡ ಮಹಿಳೆಯರಿಗೆ ಉದ್ಯೋಗ ನೀಡಿ ‘ಕಾಲಿಲ್ಲದ ಮಾತ್ರಕ್ಕೆ ನಾ ಸೋಲುವವಳಲ್ಲ’ ಎನ್ನುವ ರೀತಿಯಲ್ಲಿ ಬದುಕನ್ನು ರೂಪಿಸಿಕೊಂಡಿದ್ದಾಳೆ.

ಕಾಲುಗಳು ಸ್ವಾಧೀನ ಕಳೆದುಕೊಂಡರೂ ಬಾಳಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಸ್ವಾವಲಂಬಿ ಬದುಕು ಕಟ್ಟಿಕೊಂಡಾಕೆ ಚಿಂತಾಮಣಿಯ ಹೈದರಾಲಿ ನಗರದ ಅಬ್ದುಲ್‌ ರಷೀದ್‌ ಮತ್ತು ಬೀಬಿಜಾನ್‌ ಅವರ ಪುತ್ರಿ ರಹಮತ್‌ ಬೀ. ತನ್ನ ನೆರೆಮನೆಯಲ್ಲಿ ನಡೆಯುತ್ತಿದ್ದ ಸಾಕ್ಷರತಾ ಕಲಿಕಾ ಕೇಂದ್ರದಲ್ಲಿ ನಾಲ್ಕಕ್ಷರ ಜ್ಞಾನ ಗಳಿಸಿಕೊಂಡವಳು ಇವತ್ತು ಚೈತನ್ಯದ ಚಿಲುಮೆಯಾಗಿ ಅಂಗವೈಕಲ್ಯ ಶಾಪವೆಂದು ಕೀಳರಿಮೆ ಬೆಳೆಸಿಕೊಂಡವರಿಗೆ ಮಾದರಿಯಾಗಿದ್ದಾರೆ.

ಕೆಲ ಹಿತೈಷಿಗಳ ಸಲಹೆಯಂತೆ ಅಂಗವಿಕಲ ಸಂಘದ ಸದಸ್ಯತ್ವ ಪಡೆದದ್ದು ತನ್ನ ಜೀವನದ ದಿಕ್ಕೇ ಬದಲಾಯಿಸಿತು ಎನ್ನುತ್ತಾರೆ ರಹಮತ್‌ಬೀ. ಬೆಂಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಆಯೋಜಿಸಿದ್ದ ಅಂಗವಿಕಲರ ತರಬೇತಿ ಕಾರ್ಯಾಗಾರಗಳಲ್ಲಿ ಭಾಗವಹಿಸಿ, ಅಂಗವಿಕಲತೆ ಶಾಪವಲ್ಲ ಎಂಬ ಪಾಠ ಮಾಡಿರುವ ಇವರು ಅದಕ್ಕೆ ತಮ್ಮದೇ ಉದಾಹರಣೆ ನೀಡಿ ಬೇಸರಗೊಂಡವರ ಬಾಳಲ್ಲಿ ಹೊಸ ಉತ್ಸಾಹ ತುಂಬಿದ್ದಾರೆ.

ಕಾಲು ದೃಢವಾಗಿಲ್ಲದಿದ್ದರೂ ನೀರಿನಲ್ಲಿ ಈಜುವುದನ್ನೂ ಕಲಿತ ಛಲಗಾತಿ ರಹಮತ್‌ಬೀ. ತನ್ನ ಸ್ವಂತ ಸಂಪಾದನೆಯಿಂದ ಹಳೆಯ ದ್ವಿಚಕ್ರ ವಾಹನವೊಂದನ್ನು ಖರೀದಿಸಿ, ಅದನ್ನು ತನ್ನ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿಕೊಂಡು ಚಲಾಯಿಸುವುದನ್ನು ಕಲಿತ ಇವರು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಅಂಗವಿಕಲರಿಗೆ ಉಚಿತ ಬಸ್‌ಪಾಸ್‌, ಪಿಂಚಣಿ ಮಾಡಿಸಿಕೊಡುವಂತಹ ಸಮಾಜಸೇವೆಯನ್ನು ಸಹ ಮಾಡುತ್ತಾರೆ.

ಅಗರಬತ್ತಿ ಘಟಕಕ್ಕಾಗಿ ಬಾಡಿಗೆ ಮನೆ ಹಿಡಿದಿರುವ ರಹಮತ್‌ಬೀ, ಸ್ಥಳೀಯ ಅಗರಬತ್ತಿ ಕಂಪೆನಿಗಳ ಮಾಲೀಕರಿಂದ ಕಚ್ಚಾ ಸಾಮಗ್ರಿಗಳನ್ನು ತಂದು, ಅಗರಬತ್ತಿಗಳನ್ನು ತಯಾರಿಸಿ ಅವರಿಗೆ ಮಾರಾಟ ಮಾಡುತ್ತಾರೆ. ಇಷ್ಟೇ ಅಲ್ಲದೆ ಇವರು ಹೆಣ್ಣುಮಕ್ಕಳ ಮೇಲೆ ನಡೆಯುವ ಅತ್ಯಾಚಾರ, ಕಿರುಕುಳ, ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಬಾಲ್ಯ ವಿವಾಹ ಘಟನೆಗಳ ವಿರುದ್ಧ ಸಂಘ ಸಂಸ್ಥೆಗಳು ನಡೆಸುವ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT