ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಕಲಾವಿದರ ಪಾಲಿನ ಪವಿತ್ರ ಕ್ಷೇತ್ರ

Last Updated 3 ಡಿಸೆಂಬರ್ 2017, 9:48 IST
ಅಕ್ಷರ ಗಾತ್ರ

ಹುಮನಾಬಾದ್‌: ಧರ್ಮ ಸಮನ್ವಯತೆ ಖ್ಯಾತಿಯ ಬೀದರ್‌ ಜಿಲ್ಲೆಯ ಹುಮನಾಬಾದ್‌ ತಾಲ್ಲೂಕು ಮಾಣಿಕನಗರ ಮಾಣಿಕಪ್ರಭು ದೇವಸ್ಥಾನ ಸಂಗೀತ ಕಲಾವಿದರಿಗೆ ಪವಿತ್ರ ಕ್ಷೇತ್ರ . ಈ ಬಾರಿ ಹೆಚ್ಚು ಭಕ್ತರು ಭಾಗವಹಿಸಿರುವುದು ಮಾಣಿಕಪ್ರಭುಗಳ ಪವಾಡ ಶಕ್ತಿಗೆ ಸಾಕ್ಷಿ.

ಧಾರ್ಮಿಕ ಕ್ಷೇತ್ರ ಎಂಬ ಕಾರಣಕ್ಕೆ ಈ ಸಂಸ್ಥಾನ ತನ್ನನ್ನು ತಾನು ಕೇವಲ ಧಾರ್ಮಿಕ ಚಟುವಟಿಕೆಗೆ ಮಾತ್ರ ಸೀಮಿತವಾಗಿಸಿಕೊಳ್ಳದೇ ಸಾಹಿತ್ಯ, ಸಂಗೀತ, ನೃತ್ಯ ಮೊದಲಾದ ಕಲೆಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಕಳೆದ 5ದಶಕದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಈ ಸಂಸ್ಥಾನ ಹೈದರಾಬಾದ್ ಕರ್ನಾಟಕ ಪ್ರದೇಶದ ಯಾವುದೇ ಭಾಗದಲ್ಲೂ ನೀಡಲಾದ ಸಂಸ್ಕೃತ ವೇದಪಾಠ ಶಾಲೆ, ಅಂಧ ಮಕ್ಕಳಿಗೆ ಅವರದೇ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುವ ಮಹತ್ವದ ಕೆಲಸ ಮಾಡುತ್ತಿದೆ ಈ ಸಂಸ್ಥಾನ.

ನಿರ್ಗತಿಕ ಮಕ್ಕಳಿಗೋಸ್ಕರ ಅನಾಥಾಶ್ರಮ ನಡೆಸುತ್ತಿರುವ ಪ್ರಭು ಸಂಸ್ಥಾನ ಅಂಥವರನ್ನು ಮುಖ್ಯವಾಹಿನಿಗೆ ತರಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಇದರಲ್ಲಿ ತಮ್ಮನ್ನು ತಾವು ಪೂರ್ಣಾವಧಿ ತೊಡಗಿಸಿಕೊಳ್ಳುವ ಮೂಲಕ ಸಂಸ್ಥಾನ ಪೀಠಾಧಿಪತಿ ಡಾ.ಜ್ಞಾನರಾಜ ಮಾಣಿಕಪ್ರಭು ಅವರ ಮಾರ್ಗದರ್ಶನದಲ್ಲಿ ಕಾರ್ಯದರ್ಶಿ ಆನಂದರಾಜ ಪ್ರಭು, ಸಹ ಕಾರ್ಯದರ್ಶಿ ಚೇತನರಾಜ ಪ್ರಭು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ದೇವಸ್ಥಾನ ಮಹಾದ್ವಾರ ಈಗ ಭಕ್ತರನ್ನು ಕೈಬೀಸಿ ಕರೆಯುತ್ತಿದೆ.

ದರ್ಬಾರ್‌ಗೆ 15 ವರ್ಷಗಳ ಇತಿಹಾಸ: ದತ್ತ ಜಯಂತಿ ಉತ್ಸವ ಸಂದಭರ್ದಲ್ಲಿ ಪ್ರಭು ಮಹಾರಾಜರ ಪೀಠ ಸನ್ನಿಧಿಯಲ್ಲಿ 15 ವರ್ಷಗಳಿಂದ ಅಧಿಕ ಅವಧಿಯಿಂದ ಸಂಗೀತ ದರ್ಬಾರ್‌ ಭಕ್ತಿಯಲ್ಲಿ ತಲ್ಲಿನರಾಗಿಸುವುದರ ಜೊತೆಗೆ ವೈವಿಧ್ಯಮಯ ಕಲಾಸಕ್ತರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.

ಸಂಘ ಸಂಸ್ಥೆಗಳು ಕೈಯಲ್ಲಿ ಲಕ್ಷಾಂತರ ಹಣ ಇಟ್ಟುಕೊಂಡು ಸರದಿಯಲ್ಲಿ ಕಾದು ಕುಳಿತರು ಸಮಯ ನೀಡಲು ಕಲಾವಿದರು ಹಿಂದೇಟು ಹಾಕುತ್ತಾರೆ. ಆದರೇ, ಮಾಣಿಕನಗರದ ಮಾಣಿಕಪ್ರಭು ಸಂಸ್ಥಾನದ ವಿಷಯದಲ್ಲಿ ಕಲಾವಿದರ ವಿಚಾರಧಾರೆ ಬದಲಾಗಿ, ಮಾಣಿಕಪ್ರಭು ಉತ್ಸವದಲ್ಲಿ ಒಂದು ಬಾರಿ ಸಂಗೀತ ಸೇವೆ ಸಲ್ಲಿಸುವುದಕ್ಕೆ ಅವಕಾಶ ಸಿಕ್ಕರೇ ತಾವು ಸುದೈವಿಗಳು ಎಂದು ಭಾವಿಸುತ್ತಾರೆ.

ಸಂಗೀತ ಸೇವೆ ಸಲ್ಲಿಸಿದ ಖ್ಯಾತನಾಮರು: ಹಲವು ದಶಕ ಹಿಂದೆ ಸಂಸ್ಥಾನ ಪೀಠಾಧಿಪತಿ ಅವರ ದಿವ್ಯ ಸನ್ನಿಧಿಯಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಸಂಗೀತ ಕಲಾವಿದರಾದ ಭೀಮಸೇನ ಜೋಷಿ, ಖ್ಯಾತ ತಬಲಾ ವಾದನ ಉಸ್ತಾದ ಜಾಕೀರ ಹುಸೇನ್‌, ಖ್ಯಾತ ಶಹನಾಯ್‌ ವಾದಕ ದಿ.ಉಸ್ತಾದ್‌ ಬಿಸ್ಮಿಲ್ಲಾ ಖಾನ್‌, ಮಾಲಿನಿ ರಾಜುರಕರ್‌, ರಾಜನ್‌– ಸಾಜನ್‌ ಮಿಶ್ರಾ, ವಿದ್ಯಾ ಮೋಹನ ಭಟ್‌, ಸಂಗೀತಾ ಕುಲಕರ್ಣಿ(ಕಟ್ಟಿ), ಅಶ್ವಿನಿ ಭೀಡೆ, ವೀಣಾ ಸಹಸ್ರ ಬುದ್ದೆ, ಗುಂಡೇಚಾ ಸಹೋದರರ ಸೋಲೋ, ಪ್ರವೀಣ ಗೋಳ್ಖಿಂಡಿ ಕೊಳಲು, ಅಜಯ್‌ ಚಕ್ರವರ್ತಿ, ಕೌಶಿಕ್‌ ಚಕ್ರವರ್ತಿ, ಅಸಾವರಿ ಪಾಠಣಕರ್‌ ಅವರ ಕಥಕ್‌ ನೃತ್ಯ ಕಲಾಸಕ್ತರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ.

ಈ ಬಾರಿ ಮಾಣಿಕಪ್ರಭುಗಳ ದ್ವಿಶತಾಬ್ದಿ ಮಹೋತ್ಸವ ಹಿನ್ನೆಲೆಯಲ್ಲಿ ಸಂತ ಸಮಾಗಮ, ಸೂಫಿ ಸಮ್ಮೇಳನ, ಅಖಿಲ ಭಾರತೀಯ ವೇದ ಸಮ್ಮೇಳನ, ಖ್ಯಾತ ಸಂಗೀತ ಕಲಾವಿದರಾದ ಹಳೆಯ ಕಲಾವಿದರ ಜೊತೆಗೆ ಹೊಸದಾಗಿ ಅನುಪ್‌ ಜಲೋಟಾ, ಪಂ.ವೆಂಕಟೇಶಕುಮಾರ, ಪಂ.ಸಂಜೀವ ಅಭ್ಯಂಕರ, ಖ್ಯಾತ ಕವ್ವಾಲಿ ಕಲಾವಿದರ ಉಸ್ತಾದ್ ಅಹ್ಮದ್‌ಖಾನ್, ಸರೋದ ವಾದಕ ಉಸ್ತಾದ್ ಅಮ್ಜದ್‌ಲಿ ಖಾನ್, ಪಂ.ರೋನು ಮುಜಮಂದಾರ್‌ ಸಂಗೀತ ರಸದೌತಣ ಉಣಬಡಿಸಿದ್ದಾರೆ.

ಮಾಣಿಕ ಚರಿತ್ರ ಪಠಣ, ದಂಪತಿ ಸಮೇತ ಕುಂಬಾಭೀಷೇಕ ಸೇರಿ ನ.14ರಿಂದ ಡಿ.29ರವರೆಗೆ ಪ್ರತಿನಿತ್ಯ ಬೆಳಿಗ್ಗೆ, ಮದ್ಯಾಹ್ನ ಮತ್ತು ರಾತ್ರಿ ವೈವಿಧ್ಯಮಯ ಕಾರ್ಯಕ್ರಮ ಈ ಎಲ್ಲದರ ಜತೆಗೆ ಉಚಿತ ಚಿಕಿತ್ಸಾ ಶಿಬಿರ ಇನ್ನೂ ಹತ್ತು ಹಲವು ಕಾರ್ಯಕ್ರಮ ನಿಜಕ್ಕೂ ಐತಿಹಾಸಿಕ. ಇಂದು ಡಿ. 3ರಂದು ಪ್ರಭುಗಳ 200ನೇ ಜಯಂತಿ. ಉತ್ಸವ ಪ್ರಮುಖ ಆಕರ್ಷಣೆಯಾದ ಪ್ರಭು ಮಹಾರಾಜರ ದರ್ಬಾರ್‌ ಡಿ.4ರಂದು ನೆರವೇರಲಿವೆ.

* *

ಈ ಬಾರಿ ಮಾಣಿಕಪ್ರಭುಗಳ ದ್ವಿಶತಾಬ್ದಿ ಮಹೋತ್ಸವ ಐತಿಹಾಸಿಕ. ಕ್ಷೇತ್ರದ ಶಾಸಕ ರಾಜಶೇಖರ ಬಿ.ಪಾಟೀಲ ಒಳಗೊಂಡು ವಿವಿಧ ವಿಭಾಗಗಳಲ್ಲಿ ಭಕ್ತರು ಸಲ್ಲಿಸಿದ ಸೇವೆಯಿಂದ ಉತ್ಸವ ಯಶಸ್ಸಿಯಾಗಿದೆ.
 ಆನಂದರಾಜ ಪ್ರಭು
ಸಂಸ್ಥಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT