ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಉತ್ಪನ್ನದ ಪೊಟ್ಟಣಗಳ ಮೇಲೂ ಸಹಾಯವಾಣಿ?

Last Updated 3 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ಎಲ್ಲಾ ಬಗೆಯ ತಂಬಾಕು ಉತ್ಪನ್ನಗಳ ಪೊಟ್ಟಣಗಳ ಮೇಲೆ ಶುಲ್ಕರಹಿತ ಸಹಾಯವಾಣಿ ಸಂಖ್ಯೆಯನ್ನು ಮುದ್ರಿಸುವಂತೆ ಸೂಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ತಂಬಾಕು ಚಟ ಬಿಡಲು ರಾಷ್ಟ್ರೀಯ ಸಹಾಯವಾಣಿ 1800 227787 ಸಂಖ್ಯೆಯು ಸಹಕಾರಿಯಾಗಲಿದೆ. ತಂಬಾಕು ಬಳಕೆದಾರರು ಈ ಸಂಖ್ಯೆಗೆ ಕರೆ ಮಾಡಿ ಉಚಿತ ಸಲಹೆ, ಮಾರ್ಗದರ್ಶನ ಪಡೆಯಬಹುದಾಗಿದೆ.

ತಂಬಾಕು ಬಳಕೆದಾರರಿಗೆ ಸರಳವಾಗಿ ಅರ್ಥವಾಗುವಂತೆ ವಿನೂತನ ಚಿತ್ರ ಮತ್ತು ಅಕ್ಷರಗಳ ಮೂಲಕ ಎಚ್ಚರಿಕೆಯ ಸಂದೇಶ ನೀಡುವ ಹೊಸ ಮಾರ್ಗಸೂಚಿ ರೂಪಿಸಲು ಸರ್ಕಾರ ಸಿದ್ಧತೆ ನಡೆಸಿದೆ.‌ ಇದಕ‌್ಕೆ ಗ್ರಾಹಕರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಅರಿಯುವ ನಿಟ್ಟಿನಲ್ಲಿ ಪ್ರಯೋಗಕ್ಕೆ ಮುಂದಾಗಿದೆ.

‘ಹೊಸ ಮಾರ್ಗಸೂಚಿಯು ಪರಿಣಾಮಕಾರಿ ಆಗಬಹುದೇ ಅಥವಾ ಇಲ್ಲವೇ ಎಂದು ಅರಿಯುವುದು ಈ ಪ್ರಯೋಗದ ಉದ್ದೇಶ. ನಮ್ಮ ತಂಡವು ಜನರ ಬಳಿ ತೆರಳಿ ಸಲಹೆಗಳನ್ನು ಪಡೆದುಕೊಳ್ಳುತ್ತಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2016ರ ಏಪ್ರಿಲ್ 1ರಿಂದ ತಂಬಾಕು ಉತ್ಪನ್ನಗಳ ಪೊಟ್ಟಣಗಳ ಶೇ 85 ಭಾಗದಲ್ಲಿ ಎಚ್ಚರಿಕೆ ಸಂದೇಶ ಪ್ರಕಟಿಸುವಂತೆ ಸಚಿವಾಲಯ ಆದೇಶಿಸಿತ್ತು.

ಜಾಗತಿಕ ವಯಸ್ಕ ತಂಬಾಕು ಗ್ರಾಹಕರ ಸಮೀಕ್ಷೆಯ ಎರಡನೇ ಆವೃತ್ತಿಯು (ಜಿಎಟಿಎಸ್– 2) ಜೂನ್‌ ತಿಂಗಳಲ್ಲಿ ಪ್ರಕಟವಾಗಿದೆ. ಸಮೀಕ್ಷೆ ವರದಿಯ ಪ್ರಕಾರ, ಒಟ್ಟಾರೆ ತಂಬಾಕು ಸೇವನೆ ಪ್ರಮಾಣ ಶೇ 28.6ಕ್ಕೆ ಕುಸಿದಿದೆ. 2009–10ರಲ್ಲಿ ಇದು ಶೇ 34.6ರಷ್ಟಿತ್ತು.

**

ಜಿಎಟಿಎಸ್– 2ರ ಮುಖ್ಯ ಅಂಶಗಳು

* ಭಾರತದಲ್ಲಿ ತಂಬಾಕು ಬಳಕೆದಾರರ ಸಂಖ್ಯೆ 81 ಲಕ್ಷ ಕಡಿಮೆ ಆಗಿದೆ.

* 15ರಿಂದ 24 ವರ್ಷದೊಳಗಿನ ತಂಬಾಕು ಬಳಕೆದಾರರ ಪ್ರಮಾಣ ಶೇ 12.4ಕ್ಕೆ ಇಳಿದಿದೆ (ಜಿಎಟಿಎಸ್– 1ರಲ್ಲಿ ಇದು 18.4ರಷ್ಟು ಇತ್ತು)

* ತಂಬಾಕು ಸೇವಿಸಲು ಪ್ರಾರಂಭಿಸುವ ವಯಸ್ಸಿನಲ್ಲಿ ಒಂದು ವರ್ಷ (18.9 ವರ್ಷ) ಏರಿಕೆ ಕಂಡಿದೆ. (2009–10ರಲ್ಲಿ ಇದು 17.9 ವರ್ಷ ಇತ್ತು)

* ಶೇ 19ರಷ್ಟು ಪುರುಷರು, ಶೇ 2ರಷ್ಟು ಮಹಿಳೆಯರು ಮತ್ತು ಒಟ್ಟಾರೆ ವಯಸ್ಕರಲ್ಲಿ ಶೇ 10.7ರಷ್ಟು ಜನರು ಧೂಮಪಾನ (ಹೊಗೆ ಸೂಸುವ) ಸ್ವರೂಪದಲ್ಲಿ ತಂಬಾಕು ಬಳಸುತ್ತಾರೆ. ಶೇ 29.6ರಷ್ಟು ಪುರುಷರು, ಶೇ 12.8ರಷ್ಟು ಮಹಿಳೆಯರು ಮತ್ತು ಒಟ್ಟಾರೆ ವಯಸ್ಕರಲ್ಲಿ ಶೇ 21.4ರಷ್ಟು ಮಂದಿ ಧೂಮಪಾನ ಸ್ವರೂಪದ ಹೊರತಾಗಿ ತಂಬಾಕು ಬಳಸುತ್ತಾರೆ.

* ಒಟ್ಟಾರೆ ವಯಸ್ಕರಲ್ಲಿ ಶೇ 28.6ರಷ್ಟು, ಅಂದರೆ ದೇಶದ 26.7 ಕೋಟಿ ಜನರು ತಂಬಾಕು ಸೇವನೆ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT