ಸಂಪಾದಕೀಯ

ಬೆಳವಣಿಗೆ ಹಾದಿಯಲ್ಲಿ ಜಿಡಿಪಿ: ವೇಗ ಹೆಚ್ಚಿಸಿ

ಆರ್ಥಿಕ ವೃದ್ಧಿ ದರವು 15 ತಿಂಗಳ ನಂತರ ಚೇತರಿಕೆ ಹಾದಿಗೆ ಮರಳಿದೆ. ಆದರೆ, ಪ್ರಗತಿಯ ವೇಗ ಹುರು‍ಪು ಮೂಡಿಸುವಂತಿಲ್ಲ. ಚೇತರಿಕೆ ಸುಸ್ಥಿರಗೊಳಿಸಿ ಮುಂದುವರಿಸಿಕೊಂಡು ಹೋಗುವುದು ಕಠಿಣ ಸವಾಲಿನ ಕೆಲಸ.

ಬೆಳವಣಿಗೆ ಹಾದಿಯಲ್ಲಿ ಜಿಡಿಪಿ: ವೇಗ ಹೆಚ್ಚಿಸಿ

ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶಿ ಅರ್ಥ ವ್ಯವಸ್ಥೆಯು ಸಾಧಾರಣ ಮಟ್ಟದ ಚೇತರಿಕೆ (ಶೇ 6.3) ಕಂಡಿದೆ. ಇದು ಸದ್ಯದ ಮಟ್ಟಿಗೆ ಕೊಂಚ ನೆಮ್ಮದಿ ನೀಡುವ ಉತ್ತೇಜನಕಾರಿ ಬೆಳವಣಿಗೆ. ಆರ್ಥಿಕತೆಯು ಚೇತರಿಕೆಯ ಹಾದಿಗೆ ಮರಳಿದ್ದರೂ ಬೆಳವಣಿಗೆ ದರದ ಚಿತ್ರಣ ಅಷ್ಟೇನೂ ಉತ್ಸಾಹದಾಯಕವಾಗಿಲ್ಲ. ಹಲವಾರು ಕಾರಣಗಳಿಂದ ಹದಿನೈದು ತಿಂಗಳಷ್ಟು ಸುದೀರ್ಘ ಸಮಯದವರೆಗೆ ಆರ್ಥಿಕ ವೃದ್ಧಿ ದರವು ನಿಧಾನಗೊಂಡಿತ್ತು. ಅದರಲ್ಲೂ ಮೊದಲ ತ್ರೈಮಾಸಿಕದಲ್ಲಿ  ಇದು ಮೂರು ವರ್ಷಗಳ ಕನಿಷ್ಠ ಮಟ್ಟಕ್ಕೆ (ಶೇ 5.7) ಇಳಿದಿತ್ತು. ಹೀಗಾಗಿ ಈಗಿನ ಚೇತರಿಕೆ ಆಶಾದಾಯಕ. ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ರೂಪದಲ್ಲಿ ಅಳೆಯುವ ಆರ್ಥಿಕ ಬೆಳವಣಿಗೆಯು ಕುಸಿತದಿಂದ ಚೇತರಿಸಿಕೊಂಡಿದ್ದರೂ ಅದಿನ್ನೂ ಸುಸ್ಥಿರಗೊಳ್ಳಬೇಕಾಗಿದೆ. ಈ ಪ್ರಕ್ರಿಯೆಯಲ್ಲಿ ತಯಾರಿಕಾ ವಲಯ ಮುನ್ನಡೆಯಲ್ಲಿರುವುದು ಇನ್ನೊಂದು ಮಹತ್ವದ ಬೆಳವಣಿಗೆಯಾಗಿದೆ. ಆದರೆ, ಇನ್ನೂ ಕೆಲವು ವಲಯಗಳ ಸಾಧನೆ ಬಗ್ಗೆ ಉತ್ತೇಜನಕಾರಿ ಚಿತ್ರಣ ಕಂಡು ಬಂದಿಲ್ಲ. ಅದರಲ್ಲೂ ವಿಶೇಷವಾಗಿ ಕೃಷಿ ವಲಯದ ಪ್ರಗತಿ ಕುಗ್ಗಿರುವುದು ಕಳವಳಕಾರಿ ಸಂಗತಿ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ಬೆಳವಣಿಗೆ ಕಾಣಿಸುತ್ತಿಲ್ಲ. ಉದ್ಯೋಗ ಕ್ಷೇತ್ರದ ಮೇಲೆ ಇದು ಬೀರುವ ಪರಿಣಾಮ ನೇರವಾದುದು. ಮುಂಗಾರು ಹಂಗಾಮಿನ ಕೃಷಿ ಉತ್ಪಾದನೆಯೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಸಲ ಕುಸಿಯುವ ಸಾಧ್ಯತೆ ಇದೆ.

ಆರ್ಥಿಕತೆಯನ್ನು ಮುನ್ನಡೆಸುವಲ್ಲಿ ಸರಕು ಮತ್ತು ಸೇವೆಗಳ ಖಾಸಗಿ ಬಳಕೆ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಗ್ರಾಮೀಣ ಆದಾಯ ಮತ್ತು ಉಪಭೋಗದ ಬೇಡಿಕೆ ಹೆಚ್ಚಳದಲ್ಲಿ ಕೃಷಿ ರಂಗದ ಕೊಡುಗೆಯೂ ಗಣನೀಯ. ಕೃಷಿ ಕ್ಷೇತ್ರದಲ್ಲಿನ ಹಿನ್ನಡೆಯು ದೇಶಿ ಆರ್ಥಿಕತೆ ಮೇಲೆ  ಬೀರುವ ಪ್ರತಿಕೂಲ ಪರಿಣಾಮಗಳನ್ನು ನಿರ್ಲಕ್ಷಿಸುವಂತಿಲ್ಲ. ಕೃಷಿ ಉತ್ಪನ್ನಗಳ ಪೂರೈಕೆ ಕಡಿಮೆಯಾದಲ್ಲಿ ಅದು ಹಣದುಬ್ಬರಕ್ಕೆ ಎಡೆಮಾಡಿಕೊಡಲಿದೆ. ಆರ್ಥಿಕತೆಗೆ ಉತ್ತೇಜನ ನೀಡುವ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿಗಳ ಪ್ರಭಾವವನ್ನೂ ಕುಗ್ಗಿಸಲಿದೆ. ಜಿಡಿಪಿ ಅಂಕಿಅಂಶಗಳು ದೊಡ್ಡ ಉದ್ದಿಮೆ ಸಂಸ್ಥೆಗಳ ಸಾಧನೆ ಆಧರಿಸಿದ ತಾತ್ಕಾಲಿಕ ಮಾಹಿತಿಯಾಗಿದೆ. ನೋಟು ರದ್ದತಿ ಮತ್ತು ಜಿಎಸ್‌ಟಿಯಿಂದ ಬಾಧಿತವಾಗಿರುವ ಸಣ್ಣ ಕಂಪೆನಿಗಳ ಸಾಧನೆ ಆಧರಿಸಿದ ಪರಿಷ್ಕೃತ ಸ್ಪಷ್ಟ ಚಿತ್ರಣ ಮುಂದಿನ ವರ್ಷವಷ್ಟೇ ಸಿಗಲಿದೆ. ಅಲ್ಪಾವಧಿಯ ಏರಿಳಿತಗಳಾಚೆ ಗಮನ ಕೇಂದ್ರೀಕರಿಸಿ ಮುನ್ನಡೆಯಬೇಕಾಗಿದೆ.

ಆರ್ಥಿಕತೆಯಲ್ಲಿ ಸದ್ಯಕ್ಕೆ ಕಂಡು ಬಂದಿರುವ ಈ ಚೇತರಿಕೆಯ ಚಲನಗತಿಯನ್ನು ಸುಸ್ಥಿರಗೊಳಿಸಿ ಮುಂದುವರೆಸಿಕೊಂಡು ಹೋಗುವುದು ಸವಾಲಿನ ಕೆಲಸ. ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು ಅಕ್ಟೋಬರ್‌ ಹೊತ್ತಿಗೇ ಪ್ರಸಕ್ತ ಹಣಕಾಸು ವರ್ಷದ ಬಜೆಟ್‌ ಅಂದಾಜಿನ ಶೇ 96ರಷ್ಟಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗುತ್ತಿದೆ. ಜಿಎಸ್‌ಟಿ ಕಾರಣಕ್ಕೆ ಪರೋಕ್ಷ ತೆರಿಗೆ ಸಂಗ್ರಹವೂ ಕಡಿಮೆಯಾಗುವ ಸಾಧ್ಯತೆ ಇದೆ. ಇಂತಹ ಪ್ರತಿಕೂಲ ಅಂಶಗಳನ್ನೆಲ್ಲಾ  ಮೆಟ್ಟಿ ನಿಲ್ಲುವುದು ಅವಶ್ಯಕ. ಅರ್ಥ ವ್ಯವಸ್ಥೆಯನ್ನು ಪ್ರಗತಿಯ ಹಳಿಗೆ ತರಲು ಅನಿವಾರ್ಯವಾಗಿರುವ ಹಲವಾರು ರಚನಾತ್ಮಕ ಕ್ರಮಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ. ಮೂಲ ಸೌಕರ್ಯಗಳಲ್ಲಿ ಹೂಡಿಕೆ ಹೆಚ್ಚಿಸಿದೆ. ಖಾಸಗಿ ಬಂಡವಾಳ ಹೂಡಿಕೆ ಉತ್ತೇಜಿಸಲು, ಸಾಲ ನೀಡಿಕೆ ಹೆಚ್ಚಿಸಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ₹ 2.11 ಲಕ್ಷ ಕೋಟಿಗಳ ಪುನರ್ಧನ ನೆರವು ಘೋಷಿಸಿದೆ. ಸಾಲ ವಸೂಲಿಗೆ ದಿವಾಳಿ ಸಂಹಿತೆಯಡಿ ಕಾಲಮಿತಿಗೆ ಒಳಪಟ್ಟ ಕಠಿಣ ಕ್ರಮ ಕೈಗೊಂಡಿದೆ. ಇವೆಲ್ಲವುಗಳ ಯಶಸ್ಸು ಆರ್ಥಿಕ ಪ್ರಗತಿಯ ಭವಿಷ್ಯ ನಿರ್ಧರಿಸಲಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಕಾವೇರಿ ನದಿ ನೀರು ಹಂಚಿಕೆ  ಸೌಹಾರ್ದ ಪರಿಹಾರ ಕಾಣಲಿ

ಸಂಪಾದಕೀಯ
ಕಾವೇರಿ ನದಿ ನೀರು ಹಂಚಿಕೆ ಸೌಹಾರ್ದ ಪರಿಹಾರ ಕಾಣಲಿ

16 Jan, 2018
ನ್ಯಾಯಾಂಗದ ಬಿಕ್ಕಟ್ಟು ಬೇಗ ಪರಿಹಾರವಾಗಲಿ

ವಿಶ್ವಾಸ ಭಂಗ
ನ್ಯಾಯಾಂಗದ ಬಿಕ್ಕಟ್ಟು ಬೇಗ ಪರಿಹಾರವಾಗಲಿ

15 Jan, 2018
ಎಫ್‌ಡಿಐ ಉದಾರೀಕರಣ ನೀತಿ ಸರಿಯಾದ ದಿಕ್ಕಿನಲ್ಲಿಟ್ಟ ಹೆಜ್ಜೆ

ಸಂಪಾದಕೀಯ
ಎಫ್‌ಡಿಐ ಉದಾರೀಕರಣ ನೀತಿ ಸರಿಯಾದ ದಿಕ್ಕಿನಲ್ಲಿಟ್ಟ ಹೆಜ್ಜೆ

13 Jan, 2018
ತೋರಿಕೆಯ ದೇಶಭಕ್ತಿ ಪ್ರದರ್ಶನಕ್ಕೆ ಅಂಕುಶ

ಸಂಪಾದಕೀಯ
ತೋರಿಕೆಯ ದೇಶಭಕ್ತಿ ಪ್ರದರ್ಶನಕ್ಕೆ ಅಂಕುಶ

12 Jan, 2018
ಸೆಕ್ಷನ್ 377 ಮರುಪರಿಶೀಲನೆ ಸುಪ್ರೀಂಕೋರ್ಟ್ ನಡೆ ಸ್ವಾಗತಾರ್ಹ

ಸಂಪಾದಕೀಯ
ಸೆಕ್ಷನ್ 377 ಮರುಪರಿಶೀಲನೆ ಸುಪ್ರೀಂಕೋರ್ಟ್ ನಡೆ ಸ್ವಾಗತಾರ್ಹ

11 Jan, 2018